ಮಾಂದಲಪಟ್ಟಿಗೆ ಹೋಗುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್!
ಮಡಿಕೇರಿ, ಜನವರಿ 05: ಕೊಡಗಿನ ಪ್ರಾಕೃತಿಕ ಚೆಲುವಿನ ತಾಣವಾಗಿ ನಿಸರ್ಗ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಮಡಿಕೇರಿ ಸಮೀಪದ ಮಾಂದಾಲಪಟ್ಟಿಗೆ ತೆರಳುವವರಿಗೆ ಈಗ ಅರಣ್ಯ ಇಲಾಖೆ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಈ ತಾಣಕ್ಕೆ ಸಾಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಕಳೆದೊಂದು ವರ್ಷದಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಇದೀಗ ರಸ್ತೆ ಕಾಮಗಾರಿ ಮುಕ್ತಾಯ ಆಗಿರುವ ಹಿನ್ನಲೆಯಲ್ಲಿ ಬೆಟ್ಟದ ಮೇಲಿನ ವೀಕ್ಷಣಾ ಗೋಪುರಕ್ಕೆ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಪ್ರವಾಸಿಗರಲ್ಲಿ ಸಂತಸ ತಂದಿದೆ. ಮಾಂದಾಲಪಟ್ಟಿ ಗಾಳಿಪಟ ಸಿನಿಮಾದ ಬಳಿಕ ಹೆಚ್ಚಿನ ಪ್ರಚಾರಕ್ಕೆ ಬಂತು ಎಂದರೆ ತಪ್ಪಾಗಲಾರದು. ಸಿನಿಮಾದ ಮುಗಿಲಪೇಟೆಯೇ ಮಾಂದಾಲಪಟ್ಟಿಯಾಗಿದೆ.

ಇವತ್ತಿಗೂ ಹೆಚ್ಚಿನ ಜನರು ಮುಗಿಲಪೇಟೆ ಎಂದೇ ಕರೆಯುತ್ತಾರೆ. ಒಂದು ಕಾಲದಲ್ಲಿ ಇತ್ತ ಸುಳಿಯುವವರೇ ಇರಲಿಲ್ಲ. ಆದರೀಗ ಇದೊಂದು ಪ್ರವಾಸಿ ತಾಣವಾಗಿ ಆಕರ್ಷಿಸುತ್ತದೆ. ಹೀಗಾಗಿ ಈ ತಾಣವನ್ನು ನೋಡಲೆಂದೇ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಇದರ ಸುತ್ತಲೂ ವ್ಯಾಪಾರ ವಹಿವಾಟುಗಳು ಹುಟ್ಟಿಕೊಂಡಿವೆ.
ಮಾಂದಲಪಟ್ಟಿ ಬಗ್ಗೆ ಒಂದಿಷ್ಟು ಹೇಳ ಬೇಕೆಂದರೆ ಇದು ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸಾಗಬೇಕು. ಹೀಗೆ ಸಾಗುವಾಗ ಸುತ್ತ ಮುತ್ತ ಕಾಣಸಿಗುವ ನಿಸರ್ಗದ ನೋಟ ಮುದನೀಡುತ್ತದೆ. ಅದೇ ಖುಷಿಯಲ್ಲಿ ಮುನ್ನೆಡೆಯುತ್ತಾ ಹೋದರೆ ಬೆಟ್ಟಗುಡ್ಡಗಳ ಹಸಿರ ನೋಟ ಮಾಂದಾಲಪಟ್ಟಿಯತ್ತ ಎಳೆದೊಯ್ದು ಬಿಡುತ್ತದೆ.

ಸಮುದ್ರಮಟ್ಟದಿಂದ 4 ಸಾವಿರ ಅಡಿ ಎತ್ತರ
ಪ್ರವಾಸಿಗರೇ ಬಾರದ ಕಾಲದಲ್ಲಿ ಅಂದರೆ ಮೂರ್ನಾಲ್ಕು ದಶಕಗಳ ಹಿಂದೆ ಮಾಂದಲಪಟ್ಟಿಗೆ ದನಗಳನ್ನು ಮೇಯಿಸಲು ಅಥವಾ ಶಿಕಾರಿಗೆ ಗ್ರಾಮಸ್ಥರು ಹೋಗುತ್ತಿದ್ದರು. ಅಲ್ಲಿಗೆ ಯಾವುದೇ ರಸ್ತೆಗಳಿರಲಿಲ್ಲ. ಸಾಹಸಿಗಳು ಮಾತ್ರ ಗುಡ್ಡವನ್ನೇರುತ್ತಾ ಬೆಟ್ಟದ ತುತ್ತ ತುದಿಯೇರಿ ಅಲ್ಲಿಂದ ಕಾಣಸಿಗುವ ಸೌಂದರ್ಯವನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮಾಂದಲಪಟ್ಟಿ ಕೂಡ ಜಿಲ್ಲೆಯಲ್ಲಿರುವ ಇತರೆ ಪ್ರವಾಸಿ ತಾಣಗಳಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಿಸಲಾಗಿದೆ.
ಸಮುದ್ರ ಮಟ್ಟದಿಂದ ಸುಮಾರು 4ಸಾವಿರ ಅಡಿ ಎತ್ತರದಲ್ಲಿರುವ ಮಾಂದಲಪಟ್ಟಿಗೆ ಈ ಹಿಂದೆ ಆಗೊಮ್ಮೆ ಈಗೊಮ್ಮೆ ಪ್ರವಾಸಿಗರು ಬರುತ್ತಿದ್ದರು. ಉಳಿದಂತೆ ಅಲ್ಲಿ ನೀರವ ಮೌನ ನೆಲೆಸಿರುತ್ತಿತ್ತು. ಈಗ ಹಾಗಿಲ್ಲ ಪ್ರವಾಸಿಗರು ಲಗ್ಗೆ ಹಾಕುತ್ತಲೇ ಇರುತ್ತಾರೆ. ಇನ್ನು ಕೊಡವ ಭಾಷೆಯಲ್ಲಿ "ಮಾಂದಲ್ ಪಟ್ಟ" ಎಂದರೆ ಎತ್ತರದ ಜಾಗ ಎಂದರ್ಥ. ಬಹುಶಃ ಆಡು ಭಾಷೆಯಲ್ಲಿ ಅದು ಮಾಂದಲಪಟ್ಟಿ ಆಗಿರಬಹುದೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.

ಕಣ್ತುಂಬುವ ನಿಸರ್ಗ ಸುಂದರ ನೋಟ
ಮಾಂದಲಪಟ್ಟಿ ಪ್ರವಾಸಿಗರಿಗೆ ಸ್ವರ್ಗ ತಾಣವಾಗಿದ್ದು, ಬೆಟ್ಟದ ತುತ್ತ ತುದಿ (ವ್ಯೂಪಾಯಿಂಟ್) ತಲುಪಿದಾಗ ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುವ ಮುಗಿಲು... ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು... ಅಲೆಅಲೆಯಾಗಿ ತೇಲಿ ಬರುವ ಮಂಜು... ಸುಂದರ ನಿಸರ್ಗ ಸೌಂದರ್ಯ ನಿಮ್ಮ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತದೆ. ನಡುಬೇಸಿಗೆಯಲ್ಲೂ ತಂಪು ಹವೆ... ಮುಂಜಾನೆ ಇಬ್ಬನಿಯ ಸಿಂಚನ... ಸಂಜೆ ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ದೃಶ್ಯ ಮನಮೋಹಕವಾಗಿರುತ್ತದೆ.
ಮೊದಲೆಲ್ಲಾ ಮಾಂದಲಪಟ್ಟಿಯ ನಿಸರ್ಗ ಸೌಂದರ್ಯವನ್ನು ಸವಿಯಲು ತೆರಳುವವರಿಗೆ ಸರಿಯಾದ ರಸ್ತೆಯೇ ಇರಲಿಲ್ಲ ಈ ಸಂದರ್ಭ ಪ್ರವಾಸಿಗರ ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಒಂದೆರಡು ದಶಕಗಳ ಹಿಂದೆ ಸಚಿವರಾಗಿದ್ದ ಸಂದರ್ಭ ಎಂ.ಸಿ.ನಾಣಯ್ಯರವರು 1.60 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿದ್ದು, ಈ ರಸ್ತೆಯನ್ನು ಸುತ್ತಲಿನ ಗ್ರಾಮಸ್ಥರು ಇವತ್ತಿಗೂ 'ನಾಣಯ್ಯ ರಸ್ತೆ' ಎಂದೇ ಕರೆಯುತ್ತಾರೆ. ಆ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅಭಿವೃದ್ಧಿ ಕಾಣುವಂತಾಗಿದ್ದು, ಇದೀಗ ರಸ್ತೆ ಕಾಮಗಾರಿ ನಡೆದಿದೆ.
ಪ್ರವಾಸಿಗರೇ ಒಂದಷ್ಟು ಎಚ್ಚರಿಕೆ ವಹಿಸಿ
ಇನ್ನು ಮಾಂದಲಪಟ್ಟಿಗೆ ಬರುವ ಪ್ರವಾಸಿಗರು ಒಂದಷ್ಟು ಎಚ್ಚರಿಕೆ ವಹಿಸುವುದು ಒಳಿತು. ಇಲ್ಲಿಗೆ ಭೇಟಿ ನೀಡುವವರು ತಿಂಡಿ ತಿನಿಸುಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯುವುದು ಒಳ್ಳೆಯದು ಅಲ್ಲಿ ಏನೂ ಸಿಗಲಾರದು. ಆದರೆ ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗದಿದ್ದರೆ ಅದೇ ಮಾಂದಲಪಟ್ಟಿಯ ಸೌಂದರ್ಯದ ಉಳಿವಿಗೆ ಪ್ರವಾಸಿಗರು ನೀಡುವ ಕೊಡುಗೆಯಾಗುತ್ತದೆ. ಕೊನೆಯ ಎಚ್ಚರಿಕೆ ಏನೆಂದರೆ ಮೋಜು ಮಸ್ತಿಗಾಗಿ ಹೊತ್ತಲ್ಲದ ಹೊತ್ತಿನಲ್ಲಿ ಇಲ್ಲಿಗೆ ಭೇಟಿ ನೀಡುವ ಸಾಹಸ ಮಾಡಲೇ ಬೇಡಿ.












Click it and Unblock the Notifications