ಮಾಂತ್ರಿಕ ಕೊಳ.... ಈ ನೀರಿನಲ್ಲಿ ಬಿಲ್ವಪತ್ರೆ ಮುಳುಗುತ್ತೆ ಬೇರೆ ಎಲೆ ತೇಲುತ್ತೆ!
ಮನೆಯಲ್ಲಿ ಕಿರಿಕಿರಿ, ಅಶಾಂತಿ, ನೆಮ್ಮದಿ ಕೊರತೆ ಹೀಗೆ ನಾನಾ ಸಮಸ್ಯೆಗಳಿಂದ ಮನಸ್ಸಿಗೆ ಬೇಸರವಾಗಿದ್ದರೆ ಈ ಒಂದು ಸ್ಥಳಕ್ಕೆ ಭೇಟಿ ನೀಡಿ. ಶಿವಮೊಗ್ಗದಲ್ಲಿರುವ ಈ ಅದ್ಬುತವಾದ ಸ್ಥಳ ಮಾನಸಿಕವಾಗಿ ನೆಮ್ಮದಿ ನೀಡುವುದಲ್ಲದೆ ನಿಮ್ಮಲ್ಲಿ ಭಕ್ತಿ ಭಾವವನ್ನು ಹೆಚ್ಚಿಸುತ್ತದೆ. ಈ ಸ್ಥಳದಿಂದ ಹೊರಬರುವಾಗ ನಿಮಗಿದ್ದ ಒತ್ತಡ ಸಮಸ್ಯೆಗಳು ದೂರವಾದ ಅನುಭವ ನಿಮಗಾಗುವುದರಲ್ಲಿ ಅನುಮಾನವೇ ಇಲ್ಲ.
ಅಷ್ಟಕ್ಕೂ ಇದೊಂದು ಮಾಂತ್ರಿಕ ಕೊಳ. ಈ ಕೊಳದ ನೀರಿನಲ್ಲಿ ಓಂ ನಮ: ಶಿವಾಯ: ಎಂದು ಹೇಳುತ್ತಾ ಎಲೆಯನ್ನು ಬಿಟ್ಟರೆ ಆ ಎಲೆ ತೇಲುತ್ತದೆ. ಆದರೆ ಓಂ ನಮ: ಶಿವಾಯ: ಎಂದು ಹೇಳುತ್ತಾ ಬಿಲ್ವಪತ್ರೆ ಎಲೆಯನ್ನು ಬಿಟ್ಟರೆ ಆ ಎಲೆ ಮುಳುಗಿ ಹೋಗುತ್ತದೆ. ಯಾಕೆಂದರೆ ಈ ಕೊಳದಲ್ಲಿ ಹಲವು ವರ್ಷಗಳ ಹಳೆಯ ಶಿವಲಿಂಗವಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗುಳಿಗುಳಿ ಶಂಕರ ದೇವಸ್ಥಾನದ ಕೊಳದಲ್ಲಿ ಇಂಥಹದೊಂದು ಪವಾಡ ನಡೆಯುತ್ತದೆ. ಸ್ವತ: ಶಿವನೇ ಇಲ್ಲಿ ಗಂಗೆಯನ್ನು ಸೃಷ್ಟಿ ಮಾಡಿದನೆಂದು ಹೇಳಲಾಗುತ್ತದೆ. ಇಲ್ಲಿನ ಚಿಕ್ಕ ಕೊಳದಿಂದ ಸುಮಾರು 40 ಎಕರೆ ಜಮೀನಿಗೆ ನೀರು ಸಿಗುತ್ತದೆ. ಹಾಗೇ ಇಲ್ಲಿ ಚಪ್ಪಾಳೆ ತಟ್ಟಿದರೆ ಗುಳಿಗಳು ಸಹ ಬರುತ್ತದೆ.
ಇದೊಂದು ವಿಜ್ಞಾನವೋ? ಗಂಗೆಯ ಪವಾಡವೋ? ಗೊತ್ತಿಲ್ಲ. ಇದನ್ನು ಕಣ್ತುಂಬಿಕೊಂಡು ಮನಪೂರ್ವಕವಾಗಿ ಭಕ್ತಿಯಿಂದ ಪೂಜಿಸಲು ನಿತ್ಯಾ ಹತ್ತಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ವಿಶೇಷ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ.

ಇಲ್ಲಿ ಶಂಕರ ಹಾಗೂ ಗಂಗೆ ಒಂದೇ ಕಡೆ ಇರುವುದರಿಂದ ಇಲ್ಲಿ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಇದು ಶಿವಮೊಗ್ಗದಿಂದ 34 ಕಿ.ಮೀ ದೂರದಲ್ಲಿದೆ. ಕಾಡಿನ ನಡುವೆ ಈ ದೇವಸ್ಥಾನವಿದ್ದು ತಂಪಾದ ವಾತಾವರಣದಿಂದ ಕೂಡಿದೆ. ಇಲ್ಲಿ ಎರಡು ದೇವಸ್ಥಾನವಿದ್ದು ಒಂದು ಗುಳಿಗುಳಿ ಶಂಕರ ದೇವಸ್ಥಾನ ಹಾಗೂ ಇನ್ನೊಂದು ಚೌಡೇಶ್ವರಿ ದೇವಸ್ಥಾನವಿದೆ.
ಜಟಾ ತೀರ್ಥ ಇತಿಹಾಸ
ಇಲ್ಲಿರುವ ಮಾಂತ್ರಿಕ ಕೊಳವನ್ನು ಜಟಾತೀರ್ಥ ಎಂದು ಕರೆಯಲಾಗುತ್ತದೆ. ಈ ಗುಳಿಗುಳಿ ದೇವಸ್ಥಾನದ ವಿಶೇಷತೆ ಏನು ಅಂದರೆ ಇಲ್ಲಿನ ಮಾಂತ್ರಿಕ ಕೊಳ ಅಂದರೆ ಜಟಾತೀರ್ಥ. ಇಲ್ಲಿ ನೀವು ಒಳಗೆ ಹೋಗುತ್ತಿದ್ದಂತೆ ಜಟಾತೀರ್ಥ ಸಿಗುತ್ತದೆ.

ಜಟಾತೀರ್ಥವನ್ನು ಗೌರಿ ಕೊಳ, ಶಂಕರ ಕೊಳ, ಗುಳಿಗುಳಿ ಕೊಳ ಹೀಗೆ ನಾನಾ ಹೆಸರಿನಿಂದ ಕರೆಯುತ್ತಾರೆ. ಇಲ್ಲಿನ ವಿಶೇಷತೆ ಏನಂದರೆ ಬೆಳಿಗ್ಗೆ ಮತ್ತು ಸಂಜೆ ಈ ಕೊಳದಲ್ಲಿನ ಪಾಚೆ ಚಿನ್ನದಂತೆ ಹೊಳೆಯುತ್ತದೆ. ಅಷ್ಟಕ್ಕೂ ಇದನ್ನು ಜಟಾತೀರ್ಥ ಎಂದು ಕರೆಯಲು ಒಂದು ಕಾರಣವಿದೆ.
ಇದು ಶಿವ ದೇವ ಮತ್ತು ಪಾರ್ವತಿ ದೇವಿ ವಿಶ್ರಾಂತಿಗೆ ಬರುವಂತಹ ಸ್ಥಳವಾಗಿತ್ತು ಎನ್ನಲಾಗುತ್ತದೆ. ಹೀಗೆ ಇಬ್ಬರು ವಿಶ್ರಾಂತಿ ಪಡೆಯುವಾಗ ತುಂಬಾ ಆಯಾಸವಾಗಿದ್ದ ಶಿವ ಪಾರ್ವತಿಗೆ ತನ್ನ ಜಟಾ(ಜಡೆ) ಮೂಲಕ ಗಂಗೆಯಾಗಿ ಬರುವಂತೆ ಹೇಳಿದನಂತೆ. ಆಗ ಪಾರ್ವತಿ ಗಂಗೆಯಾಗಿ ಶಿವನ ಜಡೆ ಮೂಲಕ ಹರಿದು ಶಿವನ ದಾಹ ತೀರಿಸಿದಳಂತೆ.
ಶಿವನ ದಾಹ ತೀರಿದ ಬಳಿಕ ಗಂಗೆಗೆ ನೀನು ಇಲ್ಲಿರುವ ಸಕಲ ಜೀವ ರಾಶಿಗೆ ನೀರು ನೀಡಲು ಇಲ್ಲೇ ಉಳಿಯಬೇಕು ಎಂದನಂತೆ. ಆಗ ಗಂಗೆ ನೀನು ಇಲ್ಲಿ ಉಳಿಯುವುದಾದರೆ ನಾನು ಇಲ್ಲಿರುತ್ತೇನೆ ಎಂದಳಂತೆ. ಆಗ ಖುಷಿಯಿಂದ ಶಿವ ಇಲ್ಲಿ ಉಳಿಯಲು ನಿರ್ಧರಿಸಿದ. ನಂತರ ಶಿವನೊಂದಿಗೆ ಗಂಗೆ ಕೂಡ ಇಲ್ಲಿ ಉಳಿಯುತ್ತಾಳೆ. ಹೀಗಾಗಿ ಇದನ್ನು ಜಟಾತೀರ್ಥ ಎಂದು ಕರೆಯಲಾಗುತ್ತದೆ.

ಜಟಾತೀರ್ಥದಲ್ಲಿ ಎಲ್ಲಿಂದ ನೀರು ಬರುತ್ತೆ?
ಈ ಕೊಳದಲ್ಲಿ ಎಲ್ಲಿಂದಲೋ ನೀರು ಬರುತ್ತಿಲ್ಲ. ಈ ಕೊಳದ ಆಳದಿಂದಲೇ ನೀರು ಬರುತ್ತದೆ. ಕೆಲವರ ಪ್ರಕಾರ ಕಾಶಿಯಿಂದ ಇಲ್ಲಿಗೆ ನೀರು ಬರುತ್ತದೆ ಎಂದು ಹೇಳಲಾಗುತ್ತದೆ. ಈ ಕೊಳದಲ್ಲಿ ಕಾಣಿಸುವ ಪಾಚೆಯನ್ನು ಶಿವನ ಜಡೆ ಎಂದು ಹೇಳಲಾಗುತ್ತದೆ. ಆ ಜಡೆಯಿಂದ ಗಂಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ.
ರೋಗನಿರೋಧಕ ಶಕ್ತಿ ಹೊಂದಿದ ಜಟಾತೀರ್ಥದ ನೀರು
ಜಟಾತೀರ್ಥ ನೀರು ಬಿಸಿಲೆರಿ ನೀರಿಗಿಂತ ಹತ್ತು ಪಟ್ಟು ಶುದ್ಧವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ನೀರಿನಲ್ಲಿ ನಾನಾ ರೀತಿಯ ರೋಗ ನಿರೋಧಕ ಶಕ್ತಿಗಳು ಇದಿಯಂತೆ. ಚರ್ಮ ರೋಗ ಸೇರಿದಂತೆ ನಾನಾ ರೋಗಗಳು ಈ ನೀರು ಕುಡಿಯುವುದರಿಂದ ವಾಸಿಯಾಗುತ್ತವೆ ಎನ್ನಲಾಗುತ್ತದೆ. ಅಲ್ಲದೆ ಈ ನೀರು ಕುಡಿದರೆ ಪುಣ್ಯ ಸಿಗಲಿದೆ.
ಅಲ್ಲದೆ ಈ ಕೋಳದಲ್ಲಿ ಯಾವುದೇ ಎಲೆ ಹಾಕಿದರೂ ಮುಳುಗುವುದಿಲ್ಲ. ಆದರೆ ಬಿಲ್ವಪತ್ರೆ ಎಲೆಯನ್ನು ಹಾಕಿದರೆ ಮಾತ್ರ ಮುಳುಗುತ್ತದೆ. ವಿಶೇಷವಾಗಿ ಹರಕೆ ಹೊತ್ತುಕೊಂಡು ಬಿಲ್ವಪತ್ರೆ ಬಿಡಲಾಗುತ್ತದೆ. 20 ನಿಮಿಷ ಬಿಟ್ಟ ಬಳಿಕ ಆ ಬಿಲ್ವಪತ್ರೆ ಎಲೆ ಕೋರಿಕೆ ಈಡೇರುತ್ತದೆ ಎನ್ನುವುದಾರೆ ಮೇಲೆ ಬರುತ್ತದೆ. ಇಲ್ಲವಾದಲ್ಲಿ ಅದು ಮೇಲೆ ಬರುವುದಿಲ್ಲ.
ಹೀಗೆ ಮೇಲೆ ತೇಲಿದ ಬಿಲ್ವಪತ್ರೆ ಎಲೆಯನ್ನು ಕೊಳದ ಪಕ್ಕದಲ್ಲಿರುವ ಶಿವಲಿಂಗದ ಮೇಲೆ ಇಟ್ಟು ಪೂಜೆ ಮಾಡಲಾಗುತ್ತದೆ. ವಿಶೇಷವಾಗಿ ಈ ಕೊಳದಲ್ಲಿ ಬಿಟ್ಟ ಬಿಲ್ವಪತ್ರೆ ಎಲೆ ಕೊಳದಲ್ಲಿರುವ ಶಿವ ಲಿಂಗ ಮುಟ್ಟಿ ಬಂದರೆ ಅಂಥವರ ಜೀವನ ಪಾವನವಾಗುತ್ತದೆ ಎಂದು ನಂಬಲಾಗುತ್ತದೆ. ನಿಮಗೂ ಏನಾದರೂ ಕೋರಿಕೆ ಇದ್ದರೆ ಇಲ್ಲಿಗೆ ಭೇಟಿ ನೀಡಿ ಶಂಕರನ ಆಶೀರ್ವಾದ ಪಡೆಯಬಹುದು.












Click it and Unblock the Notifications