ಹನೂರು: ಇತಿಹಾಸ ಪ್ರಸಿದ್ಧ ಶಿವನಂಕಾರೇಶ್ವರ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?, ಇಲ್ಲಿದೆ ವಿವರ
ಚಾಮರಾಜನಗರ, ಸೆಪ್ಟೆಂಬರ್, 29: ಜಿಲ್ಲೆಯಲ್ಲಿ ಅಡ್ಡಾಡಿ ಬಂದರೆ ಪ್ರಸಿದ್ಧ ಮಲೆಮಹದೇಶ್ವರ ದೇಗುಲ, ಬಿಳಿಗಿರಿರಂಗನಬೆಟ್ಟದ ರಂಗನಾಥ ದೇವಾಲಯ, ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಸೇರಿದಂತೆ ಹತ್ತಾರು ದೇಗುಲಗಳು ನಮ್ಮನ್ನು ಸೆಳೆಯುತ್ತವೆ. ಇಷ್ಟೇ ಅಲ್ಲದೆ ಇಲ್ಲಿನ ಪುಟ್ಟ ದೇಗುಲಗಳು ಕೂಡ ಇತಿಹಾಸದ ಕಥೆ ಹೇಳುತ್ತವೆ. ಇಂತಹ ದೇಗುಲಗಳ ಪೈಕಿ ಹನೂರು ತಾಲೂಕಿನ ವೈಶಂಪಾಳ್ಯ ಗ್ರಾಮದ ಬಳಿಯಿರುವ ಶಿವನಂಕಾರೇಶ್ವರ ದೇಗುಲವೂ ಒಂದಾಗಿದೆ.
ಮೇಲ್ನೋಟಕ್ಕೆ ಇದೊಂದು ಪುಟ್ಟ ದೇಗುಲವಾಗಿದ್ದರೂ ಇದರ ಇತಿಹಾಸ ಹಿರಿದಾಗಿದೆ. ಅಷ್ಟೇ ಅಲ್ಲದೆ ಶಿವನ ದೇಗುಲವಾಗಿಯೂ ಗಮನಸೆಳೆಯುವ ದೇಗುಲ ಹಲವು ಮಹತ್ವವನ್ನು ಹೊಂದಿರುವುದು ಗೋಚರಿಸುತ್ತದೆ. ಜೊತೆಗೆ ಚೋಳರ ಕಾಲದ ರಾಜವೈಭವಕ್ಕೆ ಇದು ಸಾಕ್ಷಿಯಾಗಿ ಉಳಿದಿದೆ.

ಹೆಚ್ಚಿನವರಿಗೆ ವೈಶಂಪಾಳ್ಯ ಗ್ರಾಮದ ಶಿವನಂಕಾರೇಶ್ವರ ದೇಗುಲದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ ಚಾಮರಾಜನಗರ ಜಿಲ್ಲೆಯ ಜನಕ್ಕೆ ಅದರಲ್ಲೂ ಹನೂರು ಭಾಗದ ಹೆಚ್ಚಿನ ಜನ ಈ ದೇಗುಲದ ಮಹತ್ವ ಅರಿತಿರುವುದರಿಂದ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡು ಹೋಗುತ್ತಾರೆ. ವಿಶೇಷ ದಿನಗಳಲ್ಲಿ ಶಿವನ ದರ್ಶನಕ್ಕೆ ಹಾತೊರೆಯುತ್ತಾರೆ.
ರಾಜರಾಜಚೋಳನು ನಿರ್ಮಿಸಿದ ದೇಗುಲ
ರಾಜ ಚೋಳನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಸೈನ್ಯದೊಂದಿಗೆ ದಂಡೆತ್ತಿ ಹೋಗುತ್ತಿದ್ದನಲ್ಲದೆ, ಯುದ್ಧದ ಗೆಲುವಿನ ನೆನಪಿಗಾಗಿ ಅಲ್ಲಲ್ಲಿ ದೇಗುಲಗಳನ್ನು ನಿರ್ಮಿಸುತ್ತಿದ್ದನೆಂದೂ ಅದರಂತೆ ಹನೂರಿನ ವೈಶಂಪಾಳ್ಯದ ಬಳಿ ಶಿವಲಂಕಾರೇಶ್ವರ ದೇಗುಲವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಇನ್ನು ಇಲ್ಲಿರುವ ಶಿವಲಿಂಗವನ್ನು ಅಗಸ್ತ್ಯಮುನಿಗಳೇ ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿಯೂ ಇದೆ.

ಕ್ರಿ.ಶ. 9ನೇ ಶತಮಾನದ ನಂತರ ಪಲ್ಲವ ಸಾಮ್ರಾಜ್ಯ ಅಳಿದು ಹೋದ ಬಳಿಕ ದಕ್ಷಿಣ ಭಾರತದ ಬಹುತೇಕ ಪ್ರದೇಶಗಳು ತಂಜಾವೂರಿನ ಚೋಳರ ಆಳ್ವಿಕೆಗೆ ಒಳಪಟ್ಟಿದ್ದವು. ಅದರಲ್ಲಿ ಹನೂರು ಭೂ ಪ್ರದೇಶವೂ ಕೂಡ ಸೇರಿತ್ತು ಎನ್ನಲಾಗಿದೆ. ಇವರ ಆಳ್ವಿಕೆಯ ಕಾಲದಲ್ಲಿ ಈ ಭಾಗದಲ್ಲಿ ಬಹುತೇಕ ದೇಗುಲಗಳು ನಿರ್ಮಾಣವಾದವು ಎಂದು ಹೇಳಲಾಗಿದ್ದು, ಇದಕ್ಕೆ ವೈಶಂಪಾಳ್ಯದ ಶಿವಲಂಕಾರೇಶ್ವರ ಸಾಕ್ಷಿಯಾಗಿದೆ.
ಅಗಸ್ತ್ಯ ಮುನಿಗಳಿಂದ ಲಿಂಗ ಪ್ರತಿಷ್ಠಾಪನೆ
ಕ್ರಿ.ಶ. 989ರಲ್ಲಿ ಚೋಳರ ಪ್ರಸಿದ್ಧ ಅರಸ ರಾಜರಾಜಚೋಳನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಯಿತಂತೆ. ಚೋಳರ ಅರಸರು ವಿಷ್ಣು, ಶಿವ, ಗಣಪತಿ, ದುರ್ಗೆ ದೇವರನ್ನು ಪೂಜಿಸುತ್ತಿದ್ದರು. ಅದರಂತೆ ಇವರ ಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡವು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.
ಮಹಾಶೂರನೂ ದೈವಭಕ್ತನೂ ಆಗಿದ್ದ ಚೋಳರ ವಂಶದ ರಾಜರಾಜಚೋಳನು ಈಗಿನ ಹನೂರು ಭಾಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಹಳ್ಳ ತುಂಬಿ ಹರಿಯುತ್ತಿತ್ತಲ್ಲದೆ, ಇಡೀ ಪ್ರದೇಶ ಹಸಿರಿನಿಂದ ಕೂಡಿ ಸಂಪದ್ಭರಿತವಾಗಿತ್ತು. ಇಂತಹ ಸುಂದರ ಪ್ರಕೃತಿ ಮಡಿಲು ತಾನು ತಂಗಲು ಯೋಗ್ಯವಾದ ಸ್ಥಳ ಎಂದರಿತು ಇಲ್ಲಿಯೇ ವಾಸ್ತವ್ಯ ಹೂಡಿದ್ದನಲ್ಲದೆ, ಇಲ್ಲೊಂದು ದೇಗುಲ ನಿರ್ಮಿಸುವ ಸಂಕಲ್ಪ ಮಾಡಿ ಶಿವಲಂಕಾರೇಶ್ವರ ದೇವಾಲಯವನ್ನು ನಿರ್ಮಿಸಿ ಅಗಸ್ತ್ಯ ಮುನಿಗಳಿಂದ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಎನ್ನಲಾಗಿದೆ.
ಕಾಲಾಂತರದಲ್ಲಿ ದೇಗುಲ ಪಾಳು ಬಿದ್ದಿತು
ಆಗಿನ ಕಾಲದಲ್ಲಿ ರಾಜರಾಜಚೋಳನು ದಂಡೆತ್ತಿ ಹೋದ ಕಡೆಗಳಲ್ಲಿ ತಮ್ಮ ಸಾಮ್ರಾಜ್ಯದ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹಾಗೂ ಯುದ್ಧದಲ್ಲಿ ಜಯಗಳಿಸಿದ ಸ್ಮರಣಾರ್ಥ ಅಲ್ಲಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದನು ಅದರಂತೆ ಶಿವಲಂಕಾರೇಶ್ವರ ದೇಗುಲ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ದೇಗುಲದ ಗರ್ಭಗುಡಿಯಲ್ಲಿ ಶಿವ ಲಿಂಗವನ್ನು ಮತ್ತು ಮುಂಭಾಗದಲ್ಲಿ ಬಸವನಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಆಗಿನ ಕಾಲದಲ್ಲಿ ರಾಜಪರಿವಾರ ನಿಂತು ಪೂಜಾ ಕೈಂಕರ್ಯವನ್ನು ನೆರವೇರಿಸಲು ಅನುಕೂಲವಾಗುವಂತೆ ದೇವರನ್ನು ತೂಗುಯ್ಯಲೆಯಲ್ಲಿ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಲು ಅನುಕೂಲವಾಗುವಂತೆ ಮಂಟಪವನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿತ್ತು. ಈಗಲೂ ಆ ಮಂಟಪ ದೇವಸ್ಥಾನದ ಸಮೀಪದಲ್ಲಿಯೇ ಕಂಡು ಬರುತ್ತಿದೆ.
ಕಾಲಾಂತರದಲ್ಲಿ ಅಂದರೆ ಕ್ರಿ.ಶ.1050ರ ತರುವಾಯ ಚೋಳರ ಸಂತತಿ ಅವನತಿಯನ್ನು ಹೊಂದಿದ ನಂತರ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವವರು ಇಲ್ಲವಾದರು. ಹೀಗಾಗಿ ದೇಗುಲದ ಗರ್ಭಗುಡಿಯ ಗೋಪುರ ಶಿಥಿಲಗೊಂಡು ಕುಸಿದು ಬಿದ್ದು ನಾಶವಾಗಿತ್ತಲ್ಲದೆ, ನಂತರ ಪಾಳು ದೇವಾಲಯವಾಗಿ ಮಾರ್ಪಟ್ಟಿತ್ತು.
ದೇಗುಲವನ್ನು ಬಸವ ಕಾವಲು ಕಾಯುತ್ತಿತ್ತು
ದೇಗುಲದ ಸುತ್ತಲೂ ಗಿಡಗಂಟಿಗಳು ಬೆಳೆದವು. ಅದರತ್ತ ತೆರಳಲು ಜನಭಯಪಡುವಂತಾಯಿತು. ಜನರೇ ವಿರಳವಿದ್ದ ಕಾಲದಲ್ಲಿ ದೇಗುಲದ ರಕ್ಷಣೆಗಾಗಿ ಬಸವವೊಂದು ಪ್ರತಿನಿತ್ಯ ರಾತ್ರಿ ವೇಳೆ ಮೇವನ್ನು ಅರಿಸಿ ದೇವಾಲಯದ ಬಳಿ ಬಂದು ಮೇವು ತಿಂದು ಸಮೀಪದಲ್ಲಿಯೇ ಹಳ್ಳದಲ್ಲಿ ನೀರು ಕುಡಿದು ಹೋಗುತ್ತಿತ್ತಂತೆ ಇದಕ್ಕೆ ನಿದರ್ಶನ ಎನ್ನುವಂತೆ ಬಸವನ ಪಾದದ ಗುರುತುಗಳನ್ನು ಜನ ತೋರಿಸುತ್ತಾರೆ. ಈ ಕ್ಷೇತ್ರದಲ್ಲಿ ಬಸವನ ಮಹಿಮೆಯಿತ್ತು ಎಂಬುದು ದೇಗುಲದಲ್ಲಿರುವ ಕಲ್ಲಿನ ಬಸವಮೂರ್ತಿ ಸಾಕ್ಷಿಯಾಗಿದೆ.
ಸುಮಾರು ಎರಡೂವರೆ ದಶಕಗಳ ಹಿಂದಿನವರೆಗೂ ಶಿವಲಂಕಾರೇಶ್ವರ ಪಾಳುದೇಗುಲವಾಗಿಯೇ ಉಳಿದು ಹೋಗಿತ್ತು. ಆ ನಂತರ ಜನರ ಮನದಲ್ಲಿ ಶಿವನ ಪೂಜಿಸುವ ಬಯಕೆ ಶುರುವಾಯಿತು. ಅದರಂತೆ ಎಲ್ಲರೂ ಸೇರಿ ದೇಗುಲದ ಪುನರುಜ್ಜೀವಕ್ಕೆ ಮುಂದಾದರು ದೇಗುಲವನ್ನು ಶುಚಿಗೊಳಿಸಿ ಅಲ್ಲಿರುವ ಶಿವಲಿಂಗಕ್ಕೆ ಪೂಜಾ ಕೈಂಕರ್ಯವನ್ನು ನೆರವೇರಿಸಲು ಅರ್ಚಕರನ್ನು ನೇಮಿಸಿದರು.
ದೇಗುಲ ಜೀರ್ಣೋದ್ಧಾರಗೊಳಿಸಿದ ಗ್ರಾಮಸ್ಥರು
ಆ ನಂತರ ದೇಗುಲವನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಮುಂದಾಗಿ ಆರೇಳು ವರ್ಷಗಳ ಹಿಂದೆ ಗ್ರಾಮಸ್ಥರು ಹಾಗೂ ಭಕ್ತರ ಸಹಾಯದಿಂದ ದೇಗುಲದ ಗೋಪುರವನ್ನು ನಿರ್ಮಿಸಿದ್ದು, ದೇಗುಲವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ಈ ದೇಗುಲವು ಕಲ್ಲಿನ ಚಪ್ಪಡಿಗಳಿಂದ ನಿರ್ಮಾಣವಾಗಿದ್ದು, ಉತ್ತಮ ಕೆತ್ತನೆ ಕುಸುರಿಗಳಿಂದ ಕೂಡಿದೆ. ಚೋಳರ ಕಾಲದ ಕಲಾ ವೈಭವ ಇರುವುದು ಗೋಚರಿಸುತ್ತದೆ. ಸದ್ಯ ದೇಗುಲದಲ್ಲಿ ದಿನನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಕಾರ್ತಿಕ ಸೋಮವಾರ, ಹುಣ್ಣಿಮೆ, ಅಮಾವಾಸ್ಯೆ, ಶಿವರಾತ್ರಿ ವೇಳೆ ವಿಶೇಷ ಪೂಜೆ ಪುನಸ್ಕಾರಗಳು ಜರುಗುತ್ತವೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಶಿವಲಂಕಾರರೇಶ್ವರ ದೇಗುಲ ಪುಟ್ಟದಾಗಿದ್ದರೂ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಚೋಳರ ಕಾಲದ ಇತಿಹಾಸವನ್ನು ಸಾರುತ್ತಾ ಅವತ್ತಿನ ಕಾಲದ ಕಲಾವೈಭವವನ್ನು ಭಕ್ತರಿಗೆ ನೆನಪು ಮಾಡಿಕೊಡುತ್ತಾ ತನ್ನ ಬಳಿಗೆ ಬರುವ ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಬರುತ್ತಿರುವುದು ವಿಶೇಷವಾಗಿದೆ.












Click it and Unblock the Notifications