Bidar-Bengaluru Economic Corridor: ಬೆಂಗಳೂರು-ಬೀದರ್ ಕಾರಿಡಾರ್, ಏನಿದು ಯೋಜನೆ?
ಬೀದರ್, ಸೆಪ್ಟೆಂಬರ್ 07: ಕರ್ನಾಟಕ ಸರ್ಕಾರ ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ನಡುವೆ ಸಂಪರ್ಕ ಉತ್ತಮಗೊಳಿಸಲು ಮುಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ 5 ಸೀಟು ಗೆಲ್ಲುವ ಮೂಲಕ ಪ್ರತಿಷ್ಠೆ ಉಳಿಸಿಕೊಂಡಿದ್ದ ಕಾಂಗ್ರೆಸ್ ಈಗ ಬೆಂಗಳೂರು-ಬೀದರ್ ಎಕಾನಿಮಿಕ್ ಕಾರಿಡಾರ್ ನಿರ್ಮಾಣ ಮಾಡಲಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಈ ಯೋಜನೆಗೆ ಹಣಕಾಸು ನೆರವು ನೀಡುವ ನಿರೀಕ್ಷೆ ಇದೆ.
ಸದ್ಯದ ಮಾಹಿತಿ ಪ್ರಕಾರ ಲೋಕೋಪಯೋಗಿ ಇಲಾಖೆ ಬೆಂಗಳೂರು-ಬೀದರ್ ನಡುವೆ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲಿದೆ. ಈ ಮೂಲಕ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪರ್ಕ ಉತ್ತಮಗೊಳಿಸುವುದು ಸರ್ಕಾರದ ಗುರಿಯಾಗಿದೆ. ಈ ಕುರಿತು ಕಾರ್ಯಸಾಧ್ಯತಾ ವರದಿ ತಯಾರು ಮಾಡಲು ಶೀಘ್ರವೇ ಅನುಮೋದನೆ ನೀಡಲಾಗುತ್ತದೆ.

ಬೆಂಗಳೂರು-ಬೀದರ್ ಎಕಾನಿಮಿಕ್ ಕಾರಿಡಾರ್ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿರಲಿದೆ. ಅಲ್ಲದೇ ಬೆಂಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾದು ಹೋಗಲಿದೆ. ಈ ಯೋಜನೆಯ ಕಾರ್ಯಸಾಧ್ಯತಾ ವರದಿ ತಯಾರು ಮಾಡಲು ಕಂಪನಿಯನ್ನು ಗುರುತಿಸಲು ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿದೆ.
ಯೋಜನೆಯ ವಿವರಗಳು: ಇದೇ ಮೊದಲ ಬಾರಿಗೆ ಲೋಕೋಪಯೋಗಿ ಇಲಾಖೆ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುತ್ತಿದೆ. ಕಾರ್ಯಾಸಾಧ್ಯತಾ ವರದಿಯು ಹತ್ತಿರದ ಮಾರ್ಗ, ರಸ್ತೆ ವಿನ್ಯಾಸ, ಎಷ್ಟು ಪಥಗಳು ಇರಬೇಕು, ಎಷ್ಟು ಭೂ ಸ್ವಾಧೀನ ಅಗತ್ಯವಿದೆ, ಎಷ್ಟು ಜನರಿಗೆ ಅನುಕೂಲವಾಗಲಿದೆ? ಮುಂತಾದ ವಿವಿರವಾದ ಮಾಹಿತಿಗಳನ್ನು ಒಳಗೊಂಡಿರಲಿದೆ.
ಸದ್ಯ ಬೆಂಗಳೂರು-ಬೀದರ್ ನಡುವಿನ ಪ್ರಯಾಣದ ಅವಧಿ ಎನ್‌ಹೆಚ್ 50 ಮೂಲಕ ಸುಮಾರು 12-14 ತಾಸು. ಈ ಹೆದ್ದಾರಿ ಮಹಾರಾಷ್ಟ್ರದ ನಾಂದೇಡ್, ಕರ್ನಾಟಕದ ಚಿತ್ರದುರ್ಗವನ್ನು ಸಂಪರ್ಕಿಸುತ್ತದೆ. ಆದರೆ ಈಗ ಯೋಜನೆ ರೂಪಿಸಲಾಗಿರುವ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ವೇ ಇದಕ್ಕಿಂತ ಭಿನ್ನವಾಗಿರಲಿದೆ.
ಈ ರಸ್ತೆ ಸುಮಾರು 600 ಕಿ. ಮೀ. ಉದ್ದ ಇರಲಿದೆ. ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳು, ಜಿಲ್ಲೆಗಳು, ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಜೊತೆಗೆ ರಸ್ತೆ ಜನರ ಸುಲಭ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ. ಈ ಯೋಜನೆ ಕುರಿತು ಕಾರ್ಯಾಸಾಧ್ಯತಾ ವರದಿ ತಯಾರು ಮಾಡಿದ ಬಳಿಕ ವೆಚ್ಚದ ಕುರಿತು ತೀರ್ಮಾನಿಸಲಾಗುತ್ತದೆ. ಬಳಿಕ ವಿನ್ಯಾಸ ಸೇರಿ ಇತರ ಅಂಶಗಳನ್ನು ಅಂತಿಮಗೊಳಿಸಲಾಗುತ್ತದೆ.
ಕಾರ್ಯಾಸಾಧ್ಯತಾ ವರದಿ ಟೆಂಡರ್ ಪಡೆಯುವವರು ಸದ್ಯ ಇರುವ ಬೆಂಗಳೂರು-ಬೀದರ್ ನಡುವಿನ ರಸ್ತೆಯ ಕುರಿತು ಸಹ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಅಂಕಿ ಅಂಶಗಳನ್ನು ಅಧ್ಯಯನ ಮಾಡಿ, ಎಕಾನಿಮಿಕ್ ಕಾರಿಡಾರ್ ಸ್ಥಾಪನೆಯ ಕುರಿತು ವರದಿ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವಿನ್ಯಾಸ ತಯಾರು ಮಾಡಲಾಗುತ್ತದೆ.
ಕಲ್ಯಾಣ ಕರ್ನಾಟಕ ಕಾಂಗ್ರೆಸ್‌ನ ಭದ್ರಕೋಟೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿ ಸಹ ಇದೇ ವ್ಯಾಪ್ತಿಯಲ್ಲಿ ಬರುತ್ತದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ 5 ಸೀಟುಗಳಲ್ಲಿ ಜಯಗಳಿಸಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಈ ಭಾಗದ ಅಭಿವೃದ್ಧಿಗಾಗಿ ಸುಮಾರು 5 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.












Click it and Unblock the Notifications