ಬೀದರ್-ಯಶವಂತಪುರ ರೈಲು ಪ್ರತಿದಿನ ಓಡಿಸಲು ಬೇಡಿಕೆ
ಬೀದರ್, ಜನವರಿ 05: ಕಲಬುರಗಿ ಮತ್ತು ಬೀದರ್‌ನಿಂದ ರಾಜಧಾನಿ ಬೆಂಗಳೂರು ಸಂಪರ್ಕಿಸಲು ಹೆಚ್ಚಿನ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಈಗ ಜನರು ಸಹ ಕೇಂದ್ರ ರೈಲ್ವೆ ಸಚಿವರ ಗಮನ ಸೆಳೆದಿದ್ದಾರೆ. ಪತ್ರವನ್ನು ಬರೆದು ರೈಲು ಓಡಿಸುವಂತೆ ಒತ್ತಾಯಿಸಿದ್ದಾರೆ.
ಕಲಬುರಗಿಯ ಸಂಸದ ಡಾ. ಉಮೇಶ್ ಜಾಧವ್ ಮೂಲಕ ಕಲಬುರಗಿ ನಗರ ಹಾಗೂ ಲೋಕಸಭಾ ವ್ಯಾಪ್ತಿಗೆ ಹೆಚ್ಚಿನ ರೈಲು ಸೌಲಭ್ಯಗಳು ಬೇಕು ಎಂದು ಸಾಯೀಂದ್ರ ದೇಶಪಾಂಡೆ ಹಾಗೂ ರಾಘವೇಂದ್ರ ರಾವ್ ಕುಲಕರ್ಣಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದಿದ್ದಾರೆ.

ಡಿಸೆಂಬರ್ 30ರಂದು ಬರೆದಿರುವ ಪತ್ರದಲ್ಲಿ ಕಲಬುರಗಿ ವ್ಯಾಪ್ತಿಯ ಹಲವು ಬೇಡಿಕೆಗಳನ್ನು ಸಲ್ಲಿಕೆ ಮಾಡಲಾಗಿದೆ. ಬೀದರ್-ಯಶವಂತಪುರ ನಡುವೆ ಭಾನುವಾರ ಸಂಚಾರ ನಡೆಸುವ ರೈಲನ್ನು ಪ್ರತಿದಿನ ಓಡಿಸಬೇಕು ಎಂದು ಮನವಿ ಮಾಡಲಾಗಿದೆ.
ಮನವಿಗಳು ಏನು?; ಕಲಬುರಗಿ ರೈಲ್ವೆ ವಿಭಾಗೀಯ ಕಛೇರಿ 10 ವರ್ಷಗಳ ಹಿಂದೆ ಮಂಜೂರಾಗಿದೆ. ಆದರೆ ಉಳಿದ ಯಾವ ಕೆಲಸಗಳು ಸಹ ಆಗಿಲ್ಲ. ಯಾದಗಿರಿಯ ಸೈದಾಪುರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಮಂಜೂರಾಗಿದೆ, ಆದರೆ ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಹಲಕರ್ಟಿ ನಿಲ್ದಾಣಕ್ಕೆ ತೆರಳುವ ರೈಲುಗಳು ವಾಡಿ ಜಂಕ್ಷನ್‌ಗೆ ಬರುವಂತೆ ಮಾಡಬೇಕು. ಕಲಬುರಗಿ-ಬೆಂಗಳೂರು ನಡುವೆ ಇನ್ನೊಂದು ಹೊಸ ರೈಲು ಓಡಿಸಬೇಕು ಎಂದು ರೈಲ್ವೆ ಸಚಿವರಿಗೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಅಲ್ಲದೇ ಈ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಹ ಕಳಿಸಲಾಗಿದೆ.
ಕಲಬುರಗಿ-ಹೈದರಾಬಾದ್ ಇಂಟರ್ ಸಿಟಿ ರೈಲು: ಮತ್ತೊಂದು ಕಡೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಕೋವಿಡ್ ಸಮಯದಲ್ಲಿ ರದ್ದುಗೊಂಡಿರುವ ಕಲಬುರಗಿ-ಹೈದರಾಬಾದ್ ರೈಲನ್ನು ಮರು ಆರಂಭಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದೆ.
ರೈಲು ನಂಬರ್ 11307/ 11308 ರೈಲುಗಳ ಸಂಚಾರದಿಂದ ಜನರಿಗೆ ಸಾಕಷ್ಟು ಅನುಕೂಲವಾಗಿತ್ತು. ಕಲಬುರಗಿ, ಶಹಬಾದ್, ವಾಡಿ, ಸೇಡಂ ಸೇರಿದಂತೆ ಅನೇಕ ಪಟ್ಟಣಗಳ ಜನರು, ವ್ಯಾಪಾರಿಗಳಿಗೆ ರೈಲು ಸಂಚಾರದಿಂದ ಉಪಯೋಗವಾಗಿತ್ತು, ಎಂದು ಇಲಾಖೆಗೆ ನೀಡಿರುವ ಮನವಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಈ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈಗ ಜನರಿಗೆ ಅನುಕೂಲವಾಗಲು ಮತ್ತೆ ಈ ರೈಲನ್ನು ಆರಂಭಿಸಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಮನವಿಯನ್ನು ಸಲ್ಲಿಸಿದೆ.












Click it and Unblock the Notifications