Vande Bharat Train; ಮಂಗಳೂರು-ಮಡಗಾಂವ್ ರೈಲಿನ ನಿಲುಗಡೆಗೆ ಬೇಡಿಕೆ
ಮಂಗಳೂರು, ಡಿಸೆಂಬರ್ 29; ಕರ್ನಾಟಕದ ಕರಾವಳಿ ನಗರಿ ಮಂಗಳೂರಿಗೆ ವಂದೇ ಭಾರತ್ ರೈಲು ಸಿಕ್ಕಿದೆ. ಮಂಗಳೂರು-ಮಡಗಾಂವ್ ನಡುವಿನ ರೈಲು ಸಂಚಾರಕ್ಕೆ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈಗಾಗಲೇ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ರೈಲ್ವೆ ಸಚಿವಾಲಯ ಕರ್ನಾಟಕದ ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಉಡುಪಿ ಮತ್ತು ಕಾರವಾರದ ಮೂಲಕ ಮಡಗಾಂವ್ ತಲುಪಲಿದೆ.

ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ನಿಲುಗಡೆ ನೀಡಲಾಗಿದೆ. ಆದರೆ ಇನ್ನೂ ಹೆಚ್ಚಿನ ನಿಲುಗಡೆ ಬೇಕು ಎಂದು ಬೇಡಿಕೆ ಇಡಲಾಗಿದೆ. ಈ ಕುರಿತು ವಿವೇಕ್ ನಾಯಕ (ರೈಲು ಪ್ರಯಾಣಿಕರ ಹಿತರಕ್ಷಾಣಾ ಸಮಿತಿ, ಕುಂದಾಪುರ) ಹಾಕಿರುವ ಫೇಸ್‌ಬುಕ್ ಪೋಸ್ಟ್ ಇಲ್ಲಿದೆ.
ರೈಲಿಗೆ ಹೆಚ್ಚಿನ ನಿಲುಗಡೆ ನೀಡಿ; ವಂದೇ ಭಾರತ್ ರೈಲು ಕರಾವಳಿಯಲ್ಲಿ ಪಾದಾರ್ಪಣೆ ಗೊಳ್ಳಲಿರುವುದು ಸ್ವಾಗತಾರ್ಹ. ಆದರೆ ಅದು ಕನಿಷ್ಠ ತಾಲೂಕು ಮುಖ್ಯ ಕೇಂದ್ರಗಳಲ್ಲಿ ನಿಲುಗಡೆ ಇರದಿರುವದು ಬೇಸರದ ಸಂಗತಿ.
ಈ ಕರಾವಳಿ ಭಾಗವನ್ನು ಯಾವುದೇ ಕೋಟಿಗಟ್ಟಲೆ ಇರುವ ಮೆಟ್ರೋ ನಗರಗಳಿಗೆ ಹೋಲಿಸಲು ಸಾಧ್ಯವಿಲ್ಲ. ಅಲ್ಲಿ ಹೆಚ್ಚಿನ ನಿಲುಗಡೆ ಇಲ್ಲದಿದ್ದರೂ ಸಹ ರೈಲು ಪ್ರಯಾಣಿಕರಿಂದ ತುಂಬಿ ಸಂಚರಿಸಿಬಹುದು.
ಆದರೆ ಕರಾವಳಿಯಲ್ಲಿ ಕುಂದಾಪುರ (ಉಪ ವಿಭಾಗ ), ಗೋಕರ್ಣ, ಕುಮಟಾ (ಉಪ ವಿಭಾಗ ) ಮುರುಡೇಶ್ವರದಲ್ಲಿ ಕನಿಷ್ಠ ನಿಲುಗಡೆಗೊಳಿಸಿದರೆ ಮುಂದಿನ ದಿನಗಳಲ್ಲಿ ಪ್ರಯಾಣಿಕರಿಲ್ಲದೆ ಸೊರಗಿ ರೈಲು ನಿಲ್ಲುವ ಅಪಾಯದಿಂದ ಪಾರು ಮಾಡಬಹುದು.
ಹಿಂದೆ CST, ಮಂಗಳಾ EXPRESS ಕುಂದಾಪುರ ನಿಲುಗಡೆ ಯತ್ನ ನಡೆಸಿದಾಗ ಸಹ ರೈಲ್ವೆ ಅಧಿಕಾರಿಗಳು 'ಸ್ಪೀಡ್ ಕಟ್' ಆಗುತ್ತದೆ ಎನ್ನುವ ರೆಡಿ ಮೇಡ್ ಉತ್ತರ ನೀಡಿದ್ದರು. ಆದರೆ ಕೊನೆಗೆ ಕುಂದಾಪುರ ನಿಲುಗಡೆ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು.
ಈ ಸ್ಪೀಡ್ ಕಟ್ ಅನ್ನುವ ಅಧಿಕಾರಿಗಳ ಧೋರಣೆಯನ್ನು ನಮ್ಮ ಪ್ರತಿನಿಧಿಗಳು ಪ್ರಶ್ನಿಸುವ ಅವಶ್ಯಕತೆ ಇದೆ. ಈ ಭಾಗದಲ್ಲಿ ಹಳಿ ಡಬಲಿಂಗ್ ಆಗದೇ ಇದ್ದುದಕ್ಕೆ ಯಾರನ್ನು ಹೊಣೆ ಮಾಡುವುದು?.
ನಮ್ಮ ಕರ್ನಾಟಕ ಕರಾವಳಿ ಬರೇ ಮಹಾರಾಷ್ಟ್ರ ಕೇರಳ ಸಂಪರ್ಕಕ್ಕೆ ಮಾತ್ರ ಸೀಮಿತ ಆಗದೇ ಈ ಕೆಳಗಿನ ಬೇಡಿಕೆ ಗಳನ್ನು ಪೂರೈಸುವತ್ತ ನಮ್ಮ ಪ್ರತಿನಿಧಿಗಳು ಗಮನ ಹರಿಸಬೇಕು.
* ಕರ್ನಾಟಕ ಕರಾವಳಿ ಹಳಿಯ ಡಬಲಿಂಗ್ ಕಾರ್ಯ ಕೂಡಲೇ ಪೂರ್ಣ ಆಗಬೇಕು.
* ಬೆಂಗಳೂರು ರೈಲ್‌ಗೆ ಟಿಕೆಟ್ ಸಿಗದೇ ತುಂಬಾ ತೊಂದರೆ ಇರುವುದರಿಂದ ಬೆಂಗಳೂರುಗೆ ಇನ್ನೊಂದು ರಾತ್ರಿ ವೇಗದ ರೈಲು ಬೇಕು.
* ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವೀಲಿನ ಆಗಬೇಕು.
* ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ-ಹೊನ್ನಾವರ ಟೈಮ್ ಬಾಂಡ್ ಯೋಜನೆಯಲ್ಲಿ ಪೂರ್ಣ ಗೊಳ್ಳಬೇಕು.
* ಕುಂದಾಪುರ, ಕುಮಟಾದಲ್ಲಿ ರೈಲುಗಳಿಗೆ ನೀರು, ಇಂಧನ ತುಂಬಿ ಬೋಗಿ ನಿರ್ವಹಣೆ ಮಾಡುವ ವ್ಯವಸ್ಥೆ ನೀಡಿ ಕರಾವಳಿ ನಿಲ್ದಾಣಗಳನ್ನು ಸಬಲೀಕರಣ ಗೊಳಿಸಬೇಕು. ಹೆಚ್ಚಿನ ಪ್ಲಾಟ್ ಫಾರಂ ನೀಡಬೇಕು.
ಇವೆಲ್ಲ ಮಾಡಲು ಜನ ಪ್ರತಿನಿಧಿಗಳ ಇಚ್ಚಾ ಶಕ್ತಿ ತುಂಬಾ ಬೇಕು. ಹೊಸ ವರ್ಷದಲ್ಲಿ ನಮ್ಮೆಲ್ಲರ ಆಸೆ ಪೂರೈಸುವುದೇ ಕಾದು ನೋಡಬೇಕು ಎಂದು ವಿವೇಕ್ ನಾಯಕ ಪೋಸ್ಟ್ ಹಾಕಿದ್ದಾರೆ.
ಸದ್ಯದ ವೇಳಾಪಟ್ಟಿಯಂತೆ ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸಲಿದೆ. ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 1.05ಕ್ಕೆ ಮಡಗಾಂವ್ ತಲುಪಲಿದೆ. ಮಡಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು, ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್‌ಗೆ ಆಗಮಿಸಲಿದೆ.
ರೈಲು ಉಡುಪಿಗೆ ಬೆಳಗ್ಗೆ 9.50/ ರಾತ್ರಿ 9.14 ಮತ್ತು ಕಾರವಾರಕ್ಕೆ ಮಧ್ಯಾಹ್ನ 12.10/ ಸಂಜೆ 6.57ಕ್ಕೆ ಆಗಮಿಸಲಿದೆ. ಭಾರತೀಯ ರೈಲ್ವೆ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ವೇಳಾಪಟ್ಟಿ ಪರಿಷ್ಕರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಿದೆ.












Click it and Unblock the Notifications