Deepavali; ಮೈಸೂರು-ಬೆಂಗಳೂರು-ಮಂಗಳೂರು ವಿಶೇಷ ರೈಲು, ವೇಳಾಪಟ್ಟಿ
ಮೈಸೂರು, ನವೆಂಬರ್ 09; ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸಲು ನೈಋತ್ಯ ರೈಲ್ವೆ ಹಲವು ಮಾರ್ಗದಲ್ಲಿ ವಿಶೇಷ ರೈಲನ್ನು ಓಡಿಸುತ್ತಿದೆ. ಬೆಂಗಳೂರು-ಮಂಗಳೂರು ಮಾರ್ಗದಲ್ಲಿಯೂ ವಿಶೇಷ ರೈಲು ಘೋಷಣೆ ಮಾಡಿದ್ದು, ರೈಲಿನ ವೇಳಾಪಟ್ಟಿ ಬಿಡುಗಡೆಯಾಗಿದೆ.
ನೈಋತ್ಯ ರೈಲ್ವೆ ಮೈಸೂರು-ಬೆಂಗಳೂರು- ಮಂಗಳೂರು ನಡುವೆ 1 ಟ್ರಿಪ್ ಸಂಚಾರ ನಡೆಸುವ ದೀಪಾವಳಿ ವಿಶೇಷ ರೈಲು ಘೋಷಣೆ ಮಾಡಿದೆ. ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಜನರು ರೈಲು ಸೇವೆ ಉಪಯೋಗ ಪಡೆದುಕೊಳ್ಳಬಹುದು.

ಮೈಸೂರು-ಮಂಗಳೂರು ಜಂಕ್ಷನ್-ಮೈಸೂರು ನಡುವೆ ರೈಲು ನಂಬರ್ 07303/ 07304 ಸಂಚಾರ ನಡೆಸಲಿದೆ. ಮೈಸೂರಿನಿಂದ ಹೊರಡುವ ರೈಲು ಕೆಎಸ್ಆರ್ ಬೆಂಗಳೂರು, ಕುಣಿಗಲ್, ಹಾಸನ ಮಾರ್ಗವಾಗಿ ಸಂಚಾರ ನಡೆಸಲಿದೆ.
ವಿಶೇಷ ರೈಲು ವೇಳಾಪಟ್ಟಿ; ಮೈಸೂರು-ಮಂಗಳೂರು ಜಂಕ್ಷನ್ ನಡುವೆ ರೈಲು ನಂಬರ್ 07303 ಸಂಚಾರ ನಡೆಸಲಿದೆ. ಮೈಸೂರಿನಿಂದ ನವೆಂಬರ್ 10ರಂದು ರಾತ್ರಿ 8.30ಕ್ಕೆ ಹೊರಡುವ ರೈಲು ರಾತ್ರಿ 11:25ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ರಾತ್ರಿ 11.30ಕ್ಕೆ ಹೊರಟು ಮರುದಿನ ಬೆಳಗ್ಗೆ 9.40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಮಂಗಳೂರು ಜಂಕ್ಷನ್-ಮೈಸೂರು ನಡುವೆ ರೈಲು ನಂಬರ್ 07304 ಸಂಚಾರ ನಡೆಸಲಿದೆ. ಮಂಗಳೂರಿನಿಂದ ನವೆಂಬರ್ 14ರಂದು 5.15ಕ್ಕೆ ಹೊರಡುವ ರೈಲು, ಮರುದಿನ ಬೆಳಗ್ಗೆ 7.30ಕ್ಕೆ ಮೈಸೂರು ನಗರವನ್ನು ತಲುಪಲಿದೆ.
ದೀಪಾವಳಿ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್), ಯಶವಂತಪುರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣದಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ರೈಲು ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕ್ಯಾಬಿಪ್ ಕೋಚುಗಳನ್ನು ಹೊಂದಿರಲಿದೆ. ಇದು ವಿಶೇಷ ರೈಲು ಸೇವೆ ಆಗಿರುವುದರಿಂದ ರೈಲಿನಲ್ಲಿ ಬೆಡ್ ಶೀಟ್ ನೀಡಲಾಗುವುದಿಲ್ಲ.
ನೈಋತ್ಯ ರೈಲ್ವೆ ಈಗಾಗಲೇ ಬೆಂಗಳೂರು-ಹುಬ್ಬಳ್ಳಿ-ಬೀದರ್, ಬೆಂಗಳೂರು-ವಿಜಯಪುರ ನಡುವೆ ಸಹ ಒಂದು ಟ್ರಿಪ್ ಸಂಚಾರ ನಡೆಸುವ ವಿಶೇಷ ರೈಲುಗಳನ್ನು ಓಡಿಸುತ್ತಿದೆ.












Click it and Unblock the Notifications