Congress Guarantee: ಬೆಂಗಳೂರಿನ ಬಿಎಂಟಿಸಿಯಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ, ವಿವರ ತಿಳಿಯಿರಿ
ಬೆಂಗಳೂರು, ಜೂನ್, 02: ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡುವುದಾಗಿ ಹೇಳಿದ್ದರು. ಅದರಂತೆಯೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಯೋಜನೆಯನ್ನು ಜಾರಿ ಮಾಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನ ಅಚ್ಚುಮೆಚ್ಚಿನ ಸಾರಿಗೆಯಾದ ಬಿಎಂಟಿಸಿಯಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಎಂದು ಘೋಷಣೆ ಮಾಡಿದ್ದಾರೆ.
ಇದೀಗ ಬೆಂಗಳೂರಿನ ಅಚ್ಚುಮೆಚ್ಚಿನ ಸಾರಿಗೆಯಾದ ಬಿಎಂಟಿಸಿಯಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಎಂದು ಘೋಷಿಸಿರುವುದು ಎಲ್ಲೋ ಒಂದು ಕಡೆಗೆ ಮೆಟ್ರೋಗೂ ಹೊಡೆತ ಬೀಳಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಇದು ಬಡ, ಕೂಲಿ ಕಾರ್ಮಿಕರಿಗೆ ಹೆಚ್ಚು ಉಪಯೋಗ ಆಗುತ್ತದೆ ಅನ್ನುವುದನ್ನು ಮರೆಯಬಾರದು.

ಹಾಗೆಯೆ ಜೂನ್ 11ರಿಂದ ಎಲ್ಲಾ ಮಹಿಳೆಯರು ರಾಜ್ಯದ ಸಾರಿಗೆಯಾದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ತಿಳಿಸಿದ್ದಾರೆ. ಅದರಲ್ಲೂ ಎಸಿ, ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಇನ್ನು ಉಳಿದ ಎಲ್ಲಾ ಬಸ್‌ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎನ್ನುವ ಮಾಹಿತಿಯನ್ನೂ ನೀಡಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಯ BMTC, KSRTC, NWKSRTC ಮತ್ತು KKRTC ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ರಾಜ್ಯದ ಒಳಗೆ ಮಾತ್ರ ಎಲ್ಲಿ ಬೇಕಾದರೂ ಪ್ರಯಾಣ ಮಾಡಬಹುದಾಗಿದೆ. ಎಸಿ ಮತ್ತು ನಾನ್ ಎಸಿ ಸ್ಲೀಪರ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಆದರೆ, ಟಿಕೆಟ್ ನೀಡುವ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ನವದೆಹಲಿ ಮಾದರಿಯಲ್ಲಿ ಪಿಂಕ್ ಟಿಕೆಟ್ ಅಥವಾ ಬಸ್ ಪಾಸ್ ವಿತರಿಸುತ್ತಾರೆಯೋ ಎಂಬುದರ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಬೇಕಿದೆ. ಆದರೆ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಎಲ್ಲ ಮಹಿಳೆಯರಿಗೂ ಬಸ್ ಪಾಸ್ ವಿತರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಐದು ಪ್ರಮುಖ ಯೋಜನೆಗಳು
1. ಗೃಹಜ್ಯೋತಿ: ಯಾರು ಎಷ್ಟು ವಿದ್ಯುತ್ ಬಳಸುತ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಆಧಾರದ ಮೇಲೆ ಶೇಕಡಾ 10ರಷ್ಟರ ವರೆಗಿನ ವಿದ್ಯುತ್ ಉಚಿತ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್‌ನಲ್ಲಿ ಬರಲಿದೆ. ಜುಲೈವರೆಗಿನ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ. ಅದನ್ನು ಅವರೇ ಕಟ್ಟಬೇಕು ಎಂದು ಕಟ್ಟುವುದಿಲ್ಲ. ಜುಲೈನಿಂದ ಮಾತ್ರ ಸರ್ಕಾರ ಕಟ್ಟಲಿದೆ ಎಂದು ಹೇಳಿದರು.
2. ಗೃಹಲಕ್ಷ್ಮೀ: ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಪ್ರಕ್ರಿಯೆ ಆಗಬೇಕಿದೆ. ಸಾಫ್ಟ್‌ವೇರ್ ಅಭಿವೃದ್ಧಿಪಡಿಸಬೇಕಿದ್ದು, ನಂತರ ಮನೆಯ ಒಡತಿ ಖಾತೆಗೆ ಮಾಸಿಕ 2 ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ. ಇದಕ್ಕೆ ಜೂನ್ 15 ರಿಂದ ಜುಲೈ 15 ರೊಳಗೆ ಆನ್‌ಲೈನ್‌ಅಲ್ಲಿ ಅರ್ಜಿ ಹಾಕಬೇಕು. ಬಿಪಿಎಲ್, ಎಪಿಎಲ್ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ.
18 ವರ್ಷ ತುಂಬಿದವರು ಜುಲೈ 15 ರಿಂದ ಆಗಸ್ಟ್ 15ರವರೆಗೆ ಪ್ರಕ್ರಿಯೆ ನಡೆಸಿ, ಆಗಸ್ಟ್ 15ರಿಂದ ಇದು ಜಾರಿಗೆ ಬರಲಿದೆ. ಇದಕ್ಕೆ ಬೇರಾವುದೇ ಷರತ್ತುಗಳಿಲ್ಲ. ಸಾಮಾಜಿಕ ಭದ್ರತಾ ಸೇವೆಗಳಡಿ ಪಿಂಚಣಿಯ ಜೊತೆಗೆ ಇದೂ ಸಿಗಲಿದೆ. ಸರ್ಕಾರದ ನಿವೃತ್ತ ನೌಕರರ ಪಿಂಚಣಿ ಪಡೆಯುತ್ತಿರುವವರಿಗೆ ಇಲ್ಲ. ಮನೆಯ ಯಜಮಾನಿ ಯಾರು ಅನ್ನುವುದನ್ನು ಕುಟುಂಬ ನಿರ್ಧರಿಸಿ ಅರ್ಜಿ ಹಾಕಬೇಕಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಆಗಸ್ಟ್ 15 ರಿಂದ 2,000 ರೂ. ಜಮೆ ಆಗಲಿದೆ ಎಂದರು.
3. ಅನ್ನಭಾಗ್ಯ: ಕೇಂದ್ರ ಸರ್ಕಾರ ಅಕ್ಕಿಯನ್ನು 5 ಕೆ.ಜಿ.ಗೆ ಇಳಿಸಿದೆ. ಆದರೆ ನಾವು 10 ಕೆ.ಜಿ. ಆಹಾರಧಾನ್ಯ ಕೊಡುವುದಾಗಿ ಹೇಳಿದ್ದೆವು. ಈಗಾಗಲೇ ಆಹಾರಧಾನ್ಯ ಸರಬರಾಜು ಆಗಿದ್ದು, ದಾಸ್ತಾನು ಇಲ್ಲ. ಆದ್ದರಿಂದ ಜುಲೈ 1ರಿಂದ ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿ ಕೊಡುತ್ತೇವೆ. ಇದನ್ನು ನ್ಯಾಫೆಡ್, ಕೇಂದ್ರ, ಎನ್‌ಸಿಸಿಎಫ್ ಎಲ್ಲಿಂದಲಾದರೂ ತಂದು ಕೊಡುತ್ತೇವೆ ಎಂದು ಹೇಳಿದರು.
4. ಶಕ್ತಿ: ಸಮಾಜದಲ್ಲಿ ಶೇಕಡಾ 50ರಷ್ಟು ಮಹಿಳೆಯರು ಇದ್ದಾರೆ. ಸ್ಥಾನಮಾನ ಪರಿಗಣಿಸದೆ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ ರಾಜ್ಯದೊಳಗೆ ಎಸಿ, ನಾನ್ ಎಸಿ ಸ್ಲೀಪರ್, ಐಷಾರಾಮಿ ಬಸ್‌ಗಳನ್ನು ಬಿಟ್ಟು ಬೇರೇ ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ.
ಕೆಎಸ್‌ಆರ್‌ಟಿಸಿಯಲ್ಲಿ ಶೇಕಡಾ 50ರಷ್ಟು ಆಸನ ಮೀಸಲಾಗಿದ್ದು, ಹೆಣ್ಣು ಮಕ್ಕಳಿಲ್ಲದಿದ್ದರೆ, ಗಂಡಸರು ಕುಳಿತು ಹೋಗಬಹುದಾಗಿದೆ. ಬಿಎಂಟಿಸಿಯಲ್ಲೂ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ. ಆದರೆ ಇಲ್ಲಿ ರಿಸರ್ವೇಶನ್ ಇರುವುದಿಲ್ಲ ಎಂದು ಸಿದ್ದಾರಾಮಯ್ಯ ತಿಳಿಸಿದ್ದಾರೆ.
5. ಯುವನಿಧಿ: ಇನ್ನು 2022-23 ರಲ್ಲಿ ತೇರ್ಗಡೆ ಹೊಂದಿದ ವೃತ್ತಿಶಿಕ್ಷಣವೂ ಸೇರಿ ಎಲ್ಲ ಪದವೀಧರರು ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ., ನೀಡಲಾಗುತ್ತದೆ. ಯುವಕ, ಯುವತಿ, ತೃತೀಯಲಿಂಗಿಗಳಿಗೂ ಇದು ಅನ್ವಯ ಆಗತ್ತದರ. 2022-23ರಲ್ಲಿ ತೇರ್ಗಡೆ ಹೊಂದಿದವರು ಈ ಯೋಜನೆಯ ಲಾಭ ಪಡೆಯಲು ಅರ್ಜಿ ಹಾಕಬೇಕು. ನಿರುದ್ಯೋಗ ಯುವಕ, ಯವತಿಗೆ 2 ವರ್ಷ ಹಣ ಜಮೆ ಆಗಲಿದೆ. ಈ ಯೋಜನೆ ಲಾಭ ಪಡೆಯುವ ನಡುವೆ ಉದ್ಯೋಗ ಗಿಟ್ಟಿಸಿಕೊಂಡ ವ್ಯಕ್ತಿಗೆ ಈ ಯೋಜನೆ ಮುಂದುವರಿಯುವುದಿಲ್ಲ ಎಂದು ತಿಳಿಸಿದರು.












Click it and Unblock the Notifications