ಕೊಡಗು: ಮಳೆಗಾಲದಲ್ಲಿ ಚಿಕ್ಲಿಹೊಳೆ ಜಲಾಶಯಕ್ಕೆ ನೀವು ಒಮ್ಮೆ ಭೇಟಿ ನೀಡಲೇಬೇಕು, ವಿಶೇಷತೆ, ತಲುಪುವ ಮಾರ್ಗದ ವಿವರ

ಮಡಿಕೇರಿ, ಜುಲೈ, 29: ಚಿಕ್ಲಿಹೊಳೆ ಇದು ಜಲಪಾತವಲ್ಲ ಪುಟ್ಟ ಜಲಾಶಯ ಅಷ್ಟೇ. ಆದರೆ ಭಾರೀ ಮಳೆ ಸುರಿದ ಹಿನ್ನೆಲೆ ಜಲಾಶಯ ಭರ್ತಿಯಾಗಿದ್ದು, ಇಲ್ಲಿ ಮೇಲಿಂದ ನೀರು ಅರ್ಧ ಚಂದ್ರಾಕೃತಿಯಾಗಿ ಧುಮುಕುವಾಗ ಕಂಡು ಬರುವ ರುದ್ರರಮಣೀಯ ದೃಶ್ಯವಂತೂ ಯಾವ ಜಲಪಾತಕ್ಕೂ ಕಡಿಮೆಯಿಲ್ಲದಂತೆ ಇರುತ್ತದೆ. ಹೀಗಾಗಿ ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮಳೆಗಾಲದಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತದೆ.

ಸಾಮಾನ್ಯವಾಗಿ ಕೊಡಗಿನಲ್ಲಿರುವ ಪ್ರವಾಸಿ ತಾಣಗಳೆಲ್ಲವೂ ಸದಾ ಪ್ರಶಾಂತತೆಯನ್ನು ಹೊಂದಿರುತ್ತದೆ. ಅದರಂತೆಯೇ ಚಿಕ್ಲಿಹೊಳೆ ಜಲಾಶಯ ಕೂಡ ನಿಶಬ್ದದಿಂದ ಕೂಡಿದೆ. ಧುಮ್ಮಿಕ್ಕಿ ಹರಿಯುವ ನೀರಿನ ಸದ್ದು, ಪ್ರಾಣಿ ಪಕ್ಷಿಗಳ ಕೂಗಾಟವನ್ನು ಹೊರತು ಪಡಿಸಿದರೆ ಜನ ಜಂಗುಳಿಯ ಜಂಜಾಟವಿಲ್ಲದೆ ಗಮನಸೆಳೆಯುತ್ತದೆ. ಇಲ್ಲಿ ಅಭಿವೃದ್ಧಿ ಇಲ್ಲದಿದ್ದರೂ ಪ್ರಕೃತಿಯೇ ತನ್ನ ಅದ್ಭುತ ಚೆಲುವನ್ನು ಸೂಸುವುದರಿಂದ ಪ್ರವಾಸಿಗರು ಒಂದಷ್ಟು ಹೊತ್ತು ಇಲ್ಲೇ ಕಾಲ ಕಳೆಯಲು ಬಯಸುತ್ತಾರೆ. ಅಲ್ಲದೆ ತಮ್ಮ ಪ್ರವಾಸದ ಪಟ್ಟಿಯಲ್ಲಿ ಈ ಸ್ಥಳವನ್ನು ಸೇರಿಸಿಕೊಳ್ಳುತ್ತಾರೆ.

chiklihole-dam

ಕೊಡಗಿನಲ್ಲಿ ಮಳೆಯಾದಾಗ ಮೊದಲಿಗೆ ಭರ್ತಿಯಾಗುವ ಚಿಕ್ಲಿಹೊಳೆ ಜಲಾಶಯವು ಇತರೆ ಜಲಾಶಯದಂತೆ ದೊಡ್ಡದಾಗಿಲ್ಲ. ಸುಮಾರು 72.6 ಮೀಟರ್ ಎತ್ತರವಿದ್ದು, ಇದರಲ್ಲಿ 0.18 ಟಿಎಂಸಿಯಷ್ಟು ನೀರು ಸಂಗ್ರಹವಾಗುತ್ತದೆ. ಇದಕ್ಕೆ ಯಾವುದೇ ಕ್ರಸ್ಟ್‌ ಗೇಟ್‍ಗಳಿಲ್ಲ. ಜಲಾಶಯ ಭರ್ತಿಯಾಗುತ್ತಿದ್ದಂತೆಯೇ ಅರ್ಧ ಚಂದ್ರಾಕೃತಿಯಲ್ಲಿ ನಿರ್ಮಿಸಲಾಗಿರುವ ತೂಬ್‌ನ ಮೂಲಕ ನೀರು ಹರಿದು ಹೋಗುತ್ತದೆ. ಈ ವೇಳೆ ನೀರು ಅರ್ಧ ಚಂದ್ರಾಕೃತಿಯಲ್ಲಿ ಧುಮುಕುವ ದೃಶ್ಯ ಮೈನವಿರೇಳಿಸುವಂತಿರುತ್ತದೆ. ಇದೊಂದೇ ಇಲ್ಲಿನ ಆಕರ್ಷಣೆಯಾಗಿದ್ದು, ಇದನ್ನು ನೋಡಲೆಂದೇ ದೂರದ ಊರುಗಳಿಂದ ಪ್ರವಾಸಿಗರ ದಂಡೇ ಆಗಮಿಸುತ್ತದೆ.

ಜಲಾಶಯಕ್ಕೆ ತಲುಪುವುದೇಗೆ?

ಚಿಕ್ಲಿಹೊಳೆ ಜಲಾಶಯ ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರವಿದೆ. ಇಲ್ಲಿಗೆ ಯಾವುದೇ ಬಸ್ ಸೌಲಭ್ಯವಿಲ್ಲ. ಸ್ವಂತ ವಾಹನಗಳಲ್ಲಿ ಅಥವಾ ಮಡಿಕೇರಿಯಿಂದ ಸುಂಟಿಕೊಪ್ಪದವರೆಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ಕಂಬಿಬಾಣೆಗೆ ಆಟೋ ಅಥವಾ ಜೀಪಿನಲ್ಲಿ ತೆರಳಬಹುದು. ಮೀನುಕೊಲ್ಲಿ ಮೀಸಲು ಅರಣ್ಯದ ಮಧ‍್ಯೆ ಎರಡು ಗುಡ್ಡಕ್ಕೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಜಲಾಶಯವನ್ನು ನಿರ್ಮಿಸಲಾಗಿದೆ. ಇದು ಭರ್ತಿಯಾದರೆ ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶಕ್ಕೆ ನೀರು ದೊರೆಯುತ್ತದೆ.

ಚಿಕ್ಲಿಹೊಳೆ ಜಲಾಶಯದ ಇತಿಹಾಸ

ಕಾವೇರಿ ನದಿಯ ಉಪನದಿಯಾಗಿರುವ ಚಿಕ್ಲಿಹೊಳೆ ತನ್ನ ಪಾಡಿಗೆ ತಾನು ಹರಿದು ಕಾವೇರಿಯನ್ನು ಸೇರುತ್ತಿತ್ತು. ಆದರೆ ರೈತರ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದ 1982ರಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ಆದರೆ ಬ್ರಿಟೀಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತಂತೆ.

ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಿ 1982ರಲ್ಲಿ ಜಲಾಶಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತು. ಈ ಜಲಾಶಯದಿಂದ ಸುತ್ತಮುತ್ತಲಿನ ವಿರುಪಾಕ್ಷಪುರ, ರಸೂಲ್‌ ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರ ಸುಮಾರು ಎರಡು ಸಾವಿರ ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿಗೆ ನೀರನ್ನು ಒದಗಿಸಲಾಗುತ್ತಿತ್ತು.

ಮಳೆಗಾಲದಲ್ಲಿ ಪ್ರವಾಸಿಗೆ ದಂಡೇ ಆಗಮಿಸುತ್ತದೆ

ಈ ಜಲಾಶಯದಲ್ಲಿ ದೇವಾಲಯವೊಂದು ಮುಳುಗಡೆಯಾಗಿದ್ದು, ಬೇಸಿಗೆ ಬರುತ್ತಿದ್ದಂತೆಯೇ ನೀರು ಕಡಿಮೆಯಾದಾಗ ದೇವಾಲಯ ಕಾಣಿಸುತ್ತದೆ. ಈ ಜಲಾಶಯದಲ್ಲಿ ಇರುವುದು ಒಂದೇ ಕ್ರೆಸ್ಟ್‌ ಗೇಟ್. ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ನೀರು ತುಂಬಿದ ಸಂದರ್ಭದಲ್ಲಿ ಅದು ತಾನಾಗಿಯೇ ಹರಿದು ಹೋಗಲು ಅನುಕೂಲವಾಗುವಂತೆ ಜಲಾಶಯದ ಒಂದು ಬದಿಯಲ್ಲಿ ವೃತ್ತಾಕಾರದ ತೂಬನ್ನು ಮಾಡಿದ್ದಾರೆ.

ಮಳೆ ಸುರಿದು ಜಲಾಶಯ ತುಂಬಿದಾಗ ಹೆಚ್ಚಾದ ನೀರು ವೃತ್ತಾಕಾರವಾಗಿ ಧುಮುಕುತ್ತಾ ತೂಬಿನ ಮೂಲಕ ಹರಿದು ಹೋಗುವ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿ ಬಿಡುತ್ತದೆ. ಮಳೆಗಾಲದಲ್ಲಿ ಈ ಮನಮೋಹಕ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ತಂಡೋಪತಂಡವಾಗಿ ಇತ್ತ ಬರುತ್ತಿರುತ್ತಾರೆ. ಅಲ್ಲದೆ ಒಂದಷ್ಟು ಸಮಯವನ್ನುಇಲ್ಲಿನ ಪ್ರಕೃತಿಯ ಮಡಿಲಲ್ಲಿ ಕಳೆದು ಹೋಗುತ್ತಾರೆ.

ಜಲಾಶಯನ್ನು ಅಭಿವೃದ‍್ಧಿಗೊಳಿಸಿ ಉದ್ಯಾನ ನಿರ್ಮಿಸಿ ಒಂದು ಸುಂದರ ಪ್ರವಾಸಿ ತಾಣವನ್ನು ಮಾಡಬಹುದು. ಆದರೆ ಇಂತಹ ಒತ್ತಾಯಗಳನ್ನು ಹಲವು ದಶಕಗಳಿಂದ ಮಾಡುತ್ತಲೇ ಇದ್ದಾರೆ. ಆದರೂ ಯಾರೂ ಕೂಡ ಪ್ರವಾಸಿ ತಾಣವನ್ನಾಗಿ ಮಾಡುವ ಮನಸ್ಸು ಮಾಡಲಿಲ್ಲ. ಹೀಗಾಗಿ ಪ್ರಕೃತಿ ಮಡಿಲಲ್ಲಿ ಅಣೆಕಟ್ಟೆಗಳು ಹೇಗಿರುತ್ತವೆಯೋ ಹಾಗೆಯೇ ಈ ಜಲಾಶಯ ಉಳಿದು ಹೋಗಿದೆ.

ನಿಸರ್ಗ ಸೌಂದರ್ಯ ಮತ್ತು ಮಳೆಗಾಲದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಧುಮುಕುವ ಜಲಪಾತ ಚಿಕ್ಲಿಹೊಳೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ನೋಡಲೆಂದೇ ಪ್ರವಾಸಿಗರ ದಂಡೇ ಬರುತ್ತದೆ. ಈ ಸೊಬಗು ಮಳೆಗಾಲದಲ್ಲಿ ಮಾತ್ರ ಇರುತ್ತದೆ. ಮಳೆ ಕಡಿಮೆಯಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿದರೆ ಜಲನರ್ತನ ನಿಂತು ಹೋಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಈಕಡೆಗೆ ಪ್ರವಾಸ ಬೆಳೆಸಲು ಇಷ್ಟಪಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+