Budget 2024; ಪ್ರವಾಸಿ ತಾಣಗಳ ಅಭಿವೃದ್ಧಿ, ರಾಜ್ಯಗಳಿಗೆ ಪ್ರೋತ್ಸಾಹ
ಬೆಂಗಳೂರು, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡಿಸಿದರು. ಪ್ರವಾಸಿ ತಾಣಗಳ ಅಭಿವೃದ್ಧಿಯ ಬಗ್ಗೆ ಬಜೆಟ್‌ನಲ್ಲಿ ಅವರು ಕೆಲವು ಘೋಷಣೆಗಳನ್ನು ಮಾಡಿದ್ದು, ರಾಜ್ಯಗಳಿಗೆ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ.
ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ಎದುರಾಗುವುದರಿಂದ ಮಧ್ಯಂತರ ಬಜೆಟ್ ಅನ್ನು ಗುರುವಾರ ಮಂಡನೆ ಮಾಡಲಾಗಿದೆ. ಬಜೆಟ್ ಭಾಷಣದಲ್ಲಿ ಸಚಿವರು ಜಿ 20 ಶೃಂಗಸಭೆ ಆಯೋಜನೆ ಮಾಡಿದ್ದನ್ನು ಉಲ್ಲೇಖ ಮಾಡಿ, ಪ್ರವಾಸೋದ್ಯಮ ಅಭಿವೃದ್ಧಿಯ ಘೋಷಣೆ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ, "ಜಗತ್ತಿನ ವಿವಿಧ ದೇಶಗಳ ಗಣ್ಯರು ಜಿ20 ಸಮಾವೇಶಕ್ಕೆ ಆಗಮಿಸಿದ್ದರು. ದೇಶದ 60 ಪ್ರದೇಶಗಳಲ್ಲಿ ಸಭೆಗಳನ್ನು ಆಯೋಜಿಸುವ ಮೂಲಕ ದೇಶದ ಪ್ರವಾಸೋದ್ಯಮದ ಚಿತ್ರಣವನ್ನು ಜಗತ್ತಿಗೆ ಪರಿಚಯಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರದ ಹೂಡಿಕೆಗೆ ಸಹ ಸಹಾಯಕವಾಗಿದೆ" ಎಂದರು.
"ದೇಶದ ಬಡ ಮತ್ತು ಮಧ್ಯಮ ವರ್ಗದ ಜನರು ಸಹ ಈಗ ಧಾರ್ಮಿಕ ಪ್ರವಾಸ ಕೈಗೊಳ್ಳಲು ಸಹಾಯಕವಾಗುವಂತೆ ಮಾಡಲಾಗಿದೆ. ಪ್ರವಾಸೋದ್ಯಮ ಸ್ಥಳೀಯ ಜನರ ಆರ್ಥಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಲಿದೆ" ಎಂದು ಹೇಳಿದರು.
ರಾಜ್ಯಗಳಿಗೆ ಪ್ರೋತ್ಸಾಹ; ಕೇಂದ್ರ ಸರ್ಕಾರ ರಾಜ್ಯಗಳಿಗೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಹಾಯ ಮಾಡಲಿದೆ. "ರಾಜ್ಯಗಳು ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ ಅದನ್ನು ಜಾಗತಿಕ ಬ್ರಾಂಡ್ ಮಾಡಲು ಮತ್ತು ಪ್ರವಾಸಿಗರಿಗೆ ಬೇಕಾದ ಉತ್ಕೃಷ್ಟ ದರ್ಜೆಯ ಸೌಲಭ್ಯಗಳನ್ನು ನೀಡಲು ಪ್ರೋತ್ಸಾಹ ನೀಡಲಾಗುತ್ತದೆ. ಇದಕ್ಕಾಗಿ ಬಡ್ಡಿ ರಹಿತ ಬಹು ವಾರ್ಷಿಕ ಸಾಲಗಳನ್ನು ನೀಡಲಾಗುತ್ತದೆ" ಎಂದು ಸಚಿವರು ತಿಳಿಸಿದರು.
"ಈ ಅಭಿವೃದ್ಧಿ ಮಾದರಿಯಲ್ಲಿ ಬಂದರುಗಳ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ದ್ವೀಪಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಲಕ್ಷದ್ವೀಪವನ್ನು ಸಹ ಇದೇ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ. ಇದು ಉದ್ಯೋಗ ಸೃಷ್ಟಿಗೆ ಸಹ ಸಹಾಯಕವಾಗಲಿದೆ" ಎಂದು ಸಚಿವರು ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದರು.
2023ರಲ್ಲಿ ಭಾರತದಲ್ಲಿ ಜಿ20 ಸಮಾವೇಶ ನಡೆದಿತ್ತು. ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯು ಜಮ್ಮು ಮತ್ತು ಕಾಶ್ಮೀರ, ಗೋವಾ, ಕರ್ನಾಟಕದ ಮೈಸೂರು, ಹಂಪಿ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ನಡೆದಿತ್ತು.
ಹಸಿರು ಪ್ರವಾಸೋದ್ಯಮಕ್ಕೆ ಉತ್ತೇಜನ, ಡಿಜಿಟಲೀಕರಣ, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯನ್ನು ಬೆಂಬಲಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದರಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೂಡಿಕೆಯನ್ನು ಆಕರ್ಷಣೆ ಮಾಡುವುದು ಪ್ರಮುಖ ಗುರಿಯಾಗಿತ್ತು.












Click it and Unblock the Notifications