ನಮ್ಮೆಲ್ಲಾ ಜಂಜಾಟ ಮರೆಸುವ ನಿಸರ್ಗದ ಸ್ವರ್ಗವೇ 'ಬಿಸಿಲೆಘಾಟ್'

By: ಬಿ.ಎಂ.ಲವಕುಮಾರ್, ಮೈಸೂರು
Subscribe to Oneindia Kannada

ಮುಗಿಲನ್ನು ಚುಂಬಿಸುವ ಬೆಟ್ಟ ಶ್ರೇಣಿಗಳು..ಅವುಗಳ ನಡುವೆ ಹಸಿರ ಕಾನನ..ನಡುವಿನ ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷ ಸಂಕುಲ..ನೂರಾರು ಅಡಿಯ ಪ್ರಪಾತದಲ್ಲಿ ಕರಿಬಂಡೆಗಳ ಮೇಲೆ ಹಾಲ್ನೊರೆಯುಕ್ಕಿಸುತ್ತಾ ಹರಿಯುವ ನದಿ..ಸುಯ್ಯೆಂದು ಬೀಸಿ ಬರುವ ತಂಗಾಳಿ..ನಿಶಬ್ದವನ್ನು ಸೀಳಿ ಬರುವ ಹಕ್ಕಿಗಳ ಚಿಲಿಪಿಲಿ ಇಂಚರ..ಜೇನು ಹುಳುಗಳ ಝೇಂಕಾರ..

ಇಂತಹ ನಿಸರ್ಗ ಸೌಂದರ್ಯವನ್ನು ಸವಿಯಬೇಕಾದರೆ ಬಿಸಿಲೆಘಾಟ್ ಗೆ ಹೋಗಬೇಕು. ದಕ್ಷಿಣ ಕನ್ನಡ, ಕೊಡಗು, ಹಾಸನಕ್ಕೆ ಒತ್ತಿಕೊಂಡಂತೆ ಬಿಸಿಲೆಘಾಟ್ ಇದೆ. ಕೊಡಗಿನ ಸೋಮವಾರಪೇಟೆ, ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯ, ಹಾಸನದ ಸಕಲೇಶಪುರದಿಂದ ಇಲ್ಲಿಗೆ ತೆರಳಬಹುದು.[ಮಡಿಕೇರಿಯ ಎರಡು ಶತಮಾನದ ನಾಲ್ಕುನಾಡು ಅರಮನೆ]

Bisle ghat is wonderful tourist place of Hassan, karnataka

ಬಿಸಿಲೆಘಾಟ್ ಗೆ ಪ್ರಯಣಿಸುವುದು ಹೇಗೆ?

ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರವಾಸಿಗರು ದೇವರ ದರ್ಶನ ಮಾಡಿಕೊಂಡು ಕೆಲವೇ ಕಿ.ಮೀ. ದೂರದಲ್ಲಿ ಇರುವುದರಿಂದ ಬಿಸಿಲೆಘಾಟ್ ಗೆ ಹೋಗಿ ಬರಬಹುದು. ಹಾಸನಕ್ಕೆ ತೆರಳುವ ಪ್ರವಾಸಿಗರು ಸಕಲೇಶಪುರಕ್ಕೆ ತೆರಳಿದರೆ ಅಲ್ಲಿಂದ 50 ಕಿ.ಮೀ. ದೂರವಷ್ಟೆ.

ದಕ್ಷಿಣಕನ್ನಡದ ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು 20 ಕಿ.ಮೀ.ಸಾಗಿದರೆ ಸಾಕು. ಕೊಡಗಿನ ಸೋಮವಾರಪೇಟೆಯಿಂದ 40ಕಿ.ಮೀ. ದೂರವನ್ನು ಶಾಂತಳ್ಳಿ, ಕುಂದಳ್ಳಿ ರಸ್ತೆಯಲ್ಲಿ ವಣಗೂರು ಮೂಲಕ ಸಾಗಿದರೆ ಕೂಡುರಸ್ತೆ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಬಿಸಿಲೆಘಾಟ್ ತಲುಪಬಹುದು.

ಬಿಸಿಲೆಘಾಟ್ ಪಶ್ಚಿಮ ಘಟ್ಟದ ಅರಣ್ಯದ ಸುಂದರ ನೋಟವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ಮಲೆನಾಡಿನಲ್ಲಿ ನೆಲೆನಿಂತಿರುವುದರಿಂದ ರಸ್ತೆಯ ಇಬ್ಭಾಗದಲ್ಲಿಯೂ ಬೆಳೆದು ನಿಂತ ಹೆಮ್ಮರಗಳು, ಬೆಟ್ಟಗುಡ್ಡಗಳ ನಡುವಿನ ಅಂಕುಡೊಂಕಾದ ರಸ್ತೆಯಲ್ಲಿ ಸಾಗಬೇಕು. ಇದೊಂದು ರೀತಿಯ ರೋಮಾಂಚನಕಾರಿ ಅನುಭವ ಎಂದರೆ ತಪ್ಪಾಗಲಾರದು.

ರಸ್ತೆ ಬದಿಯ ಪ್ರವೇಶದ್ವಾರವನ್ನು ಹೊಕ್ಕಿ ಮುನ್ನಡೆದರೆ ನಿಸರ್ಗದ ರಮಣೀಯ ದೃಶ್ಯ ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿ ಬಿಡುತ್ತದೆ. ಗುಡ್ಡದ ಮೇಲಿನ ಕಡಿದಾದ ದಾರಿಯಲ್ಲಿ ಸಾಗುತ್ತಿದ್ದರೆ ಎಡಭಾಗದಲ್ಲಿ ಕಣ್ಣು ಹಾಯಿಸಿದುದ್ದಕ್ಕೂ ಕಾಣುವ ನೂರಾರು ಅಡಿಯ ಪ್ರಪಾತ ಎದೆ ಢವಢವ ಬಡಿದುಕೊಳ್ಳುವಂತೆ ಮಾಡುತ್ತದೆ.[ಕೊಡಗಿನಲ್ಲೊಂದು ಗುಡಿಗೋಪುರವಿಲ್ಲದ ದೇಗುಲ!]

Bisle ghat is wonderful tourist place of Hassan, karnataka

ಬಿಸಿಲೆ ಘಾಟಿನ ಕೆಲವು ವಿಶೇಷ:

ಅರಣ್ಯ ಇಲಾಖೆಯ ಅಧೀನದಲ್ಲಿ ಈ ತಾಣವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ. ದೂರದಲ್ಲಿ ಸಾಲುಗಟ್ಟಿ ನಿಂತ ಹಾಸನ, ಕೊಡಗು, ದಕ್ಷಿಣಕನ್ನಡ ಜಿಲ್ಲೆಗಳಿಗೆ ಸೇರಿದ ಬೆಟ್ಟಗಳು ಮುಗಿಲನ್ನು ಚುಂಬಿಸುತ್ತಿವೆಯೇನೋ ಎಂಬಂತೆ ಗೋಚರವಾಗುತ್ತದೆ.

ಬೆಟ್ಟಗಳ ಮೇಲೆ ಬೆಳೆದು ನಿಂತ ಹಸಿರು ಕಾನನಗಳು ಹಾಗೂ ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಗಿಡಮರಗಳು, ಹೆಬ್ಬಂಡೆಗಳ ಮೇಲೆ ನೀರು ಹರಿಯುವ ಸದ್ದು, ಸುಯ್ಯೆಂದು ಬೀಸಿ ಬರುವ ಗಾಳಿ, ವನ್ಯ ಪ್ರಾಣಿಗಳ ಘೀಳಿಡುವ ಸದ್ದು, ಹಕ್ಕಿಗಳ ಚಿಲಿಪಿಲಿಯೊಂದಿಗೆ ಜೇನಿನ ಝೇಂಕಾರವು ನಿಸರ್ಗದ ಚೆಲುವನ್ನು ಅನುಭವಿಸಲೆಂದು ಬರುವ ಪ್ರವಾಸಿಗರ ಮನವನ್ನು ಬಡಿದೆಬ್ಬಿಸಿ ಕುಪ್ಪಳಿಸಿ ಕುಣಿಯುವಂತೆ ಮಾಡಿಬಿಡುತ್ತದೆ.[ಮೈಸೂರಿನ ಸುತ್ತೂರು ಜಾತ್ರೆಗೆ ಕಳೆಗಟ್ಟಿದ ಜನಜಾತ್ರೆ]

ಅರಣ್ಯದ ನಡುವೆ ನಿರ್ಮಾಣವಾಗಿರುವ ತಾಣವಾದುದರಿಂದ ಇಲ್ಲಿ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದ್ದು, ರಾತ್ರಿ ವೇಳೆಯಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವುದು ಅಪಾಯ. ಏಕೆಂದರೆ ಅರಣ್ಯವಲಯವಾದುದರಿಂದ ಕಾಡಾನೆ ಸೇರಿದಂತೆ ವನ್ಯ ಮೃಗಗಳು ಸಂಚರಿಸುತ್ತಿರುತ್ತವೆ. ಇಲ್ಲಿಗೆ ಸಮೀಪದ ಗ್ರಾಮಗಳ ಮನೆಗಳಲ್ಲಿ ಪ್ರವಾಸಿಗರಿಗೆ ಊಟದ ವ್ಯವಸ್ಥೆಗಳಿವೆಯಾದರೂ ಆಹಾರ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಒಳ್ಳೆಯದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bisle ghat is wonderful tourist place of Hassan, karnataka. Bisle is a small village in the heart of south-western India's Western Ghats. The village is located in Hassan District's Sakleshpur(Sakaleshpura) Taluk.
Please Wait while comments are loading...