ಭಾರತ್ ಗೌರವ್ ರೈಲು: ಬೆಂಗಳೂರು-ಉತ್ತರಾಖಂಡ ಯಾತ್ರೆ, ಪ್ಯಾಕೇಜ್ ವಿವರ
ಬೆಂಗಳೂರು, ಜುಲೈ 28: ಭಾರತೀಯ ರೈಲ್ವೆಯ 'ಭಾರತ್ ಗೌರವ್ ರೈಲು'ಗಳ ಮತ್ತೊಂದು ಪ್ಯಾಕೇಜ್ ಘೋಷಣೆಯಾಗಿದೆ. ಈ ರೈಲಿನ ಮೂಲಕ ಕರ್ನಾಟಕದ ವಿವಿಧ ಜಿಲ್ಲೆಗಳ ಜನರು ಉತ್ತರಾಖಂಡ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ.
ಆಗಸ್ಟ್‌ನಲ್ಲಿ ಪ್ರವಾಸ ಹೋಗುವ ಆಲೋಚನೆಯಲ್ಲಿದ್ದರೆ ದೇವಭೂಮಿ ಉತ್ತರಾಖಂಡ ಯಾತ್ರೆಗೆ ಯೋಜನೆ ರೂಪಿಸಬಹುದು. 'ಮಾನಸಖಂಡ ಎಕ್ಸ್‌ಪ್ರೆಸ್' ಹೆಸರಿನ ಭಾರತ್ ಗೌರವ್ ರೈಲು ಮೂಲಕ ಈ ಯಾತ್ರೆಯನ್ನು ನಡೆಸಬಹುದು.

ಭಾರತೀಯ ರೈಲ್ವೆ ಈ ಪ್ಯಾಕೇಜ್ ಘೋಷಣೆ ಮಾಡಿದ್ದು ಪ್ಯಾಕೇಜ್ ಕೋಡ್ SZUBG09 ಆಗಿದೆ. 22ನೇ ಆಗಸ್ಟ್ 2024ರಂದು ಬೆಂಗಳೂರು ನಗರದಿಂದ ಈ ಯಾತ್ರೆ ಆರಂಭವಾಗಲಿದೆ ಎಂದು ಮಾಹಿತಿ ನೀಡಲಾಗಿದೆ.
ಪ್ಯಾಕೇಜ್ ದರ, ವಿಶೇಷತೆಗಳು: ರೈಲ್ವೆ ಸಚಿವಾಲಯವು ದೇಶದ ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳನ್ನು ರೈಲಿನ ಮೂಲಕ ಸಂಪರ್ಕಿಸುವ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು 'ಭಾರತ್ ಗೌರವ್ ರೈಲು'ಗಳನ್ನು ಘೋಷಣೆ ಮಾಡಿದೆ.
ಈ ರೈಲಿನ ಮೂಲಕವೇ 'ದೇವಭೂಮಿ ಉತ್ತರಾಖಂಡ ಯಾತ್ರೆ' ಘೋಷಣೆ ಮಾಡಲಾಗಿದೆ. ಇದರ ಬೋರ್ಡಿಂಗ್ ಪಾಯಿಂಟ್‌ಗಳು ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕಲ್ಯಾಣ್ (ಮುಂಬೈ), ಪುಣೆ, ಸೂರತ್ ಮತ್ತು ವಡೋದರ.
ಟೂರ್ ಪ್ಯಾಕೇಜ್ 2 ರಾತ್ರಿಗಳು ಭೀಮ್‌ತಾಲ್, 2 ರಾತ್ರಿಗಳು ಅಲ್ಮೋರಾ, 2 ರಾತ್ರಿಗಳು ಕೌಸಾನಿಯನ್ನು ಒಳಗೊಂಡಿದೆ. ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 28,020 ರೂ.ಗಳು ಎಂದು ಮಾಹಿತಿ ನೀಡಲಾಗಿದೆ.
ಈ ಪ್ಯಾಕೇಜ್‌ನ ಆಕರ್ಷಣೆಗಳಲ್ಲಿ ನೈನಾದೇವಿ ದೇವಾಲಯ ಹಾಗೂ ಕೈಂಚಿ ಧಾಮ ದೇವಾಲಯ, ನಂದಾ ದೇವಿ ದೇವಾಲಯ, ಕಾಸರ್ ದೇವಿ ದೇವಾಲಯ, ಜಾಗೇಶ್ವರ್ ಧಾಮ, ಗೋಲು ಚಿಟೈ ದೇವಾಲಯ ಹಾಗೂ ಕತರ್ಮಲ್ ದೇವಾಲಯ. ಕೌಸಾನಿಯಲ್ಲಿ ಬೈಜನಾಥ ದೇವಾಲಯ, ಬಾಗೇಶ್ವರ ದೇವಾಲಯವಾಗಿದೆ.
ಇತರ ಆಕರ್ಷಣೆಗಳಲ್ಲಿ ಭೀಮ್‌ತಾಲ್ ಸರೋವರ, ನೈತಿತಾಲ್ ಲೇಕ್, ಅಲ್ಮೋರಾ ಬಾಝಾರ್ ಕೌಸಾನಿ ಟೀ ಗಾರ್ಡನ್ ಹಾಗೂ ಗಾಂಧಿ ಆಶ್ರಮ ಸೇರಿದೆ.
ಈ ಯಾತ್ರೆಯು ಉತ್ತರಾಖಂಡ ಗಮನಾರ್ಹ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡಿದ್ದು, ದೇವಾಸ್ಥಾನಗಳು ಹಾಗೂ ಪ್ರಾಕೃತಿಕ ಸೌಂದರ್ಯದ ಮೇಲೆ ಕೇಂದ್ರಿಕರಿಸುತ್ತದೆ. ಸಮಗ್ರ ಆಧ್ಯಾತ್ಮಿಕ ಹಾಗೂ ವಿಜ್ಞಾನದ ಅನುಭವವನ್ನು ನೀಡುತ್ತದೆ.
ಪ್ರವಾಸಿಗರು ಹೆಚ್ಚಿನ ಮಾಹಿತಿಗಾಗಿ www.irctctourism.com/ bharatgaurav ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಭಾರತೀಯ ರೈಲ್ವೆಯ ಸಹಯೋಗದಲ್ಲಿ 'ಭಾರತ್ ಗೌರವ್ ರೈಲು'ಗಳಲ್ಲಿ ವಿವಿಧ ಪ್ಯಾಕೇಜ್ ಆರಂಭಿಸಿದೆ. ಈ ಪ್ರಯಾಣಿಕರಿಗೆ ಸರ್ಕಾರದಿಂದ 5 ಸಾವಿರ ರೂ. ಸಬ್ಸಿಡಿ ದೊರೆಯುತ್ತದೆ. ಆದರೆ 'ಮಾನಸಖಂಡ ಎಕ್ಸ್‌ಪ್ರೆಸ್' ರೈಲಿನ ಯಾತ್ರೆ ರಾಜ್ಯ ಸರ್ಕಾರ ಆಯೋಜನೆ ಮಾಡಿರುವುದಲ್ಲ. ಆದ್ದರಿಂದ ಸಬ್ಸಿಡಿ ಸಿಗುವುದಿಲ್ಲ.
ಭಾರತೀಯ ರೈಲ್ವೆ ಸಚಿವಾಲಯ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು 'ಭಾರತ್ ಗೌರವ್ ರೈಲುಗಳನ್ನು' ಪರಿಚಯಿಸಿದೆ. ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಮೂಲಕ ಇದನ್ನು ಜಾರಿಗೊಳಿಸಲಾಗುತ್ತಿದೆ.
ಈ ಟೂರ್ ಪ್ಯಾಕೇಜ್‌ಗಳು ಪ್ರಯಾಣಿಕರಿಗೆ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುವ ಸಮಗ್ರ ಸೇವೆ ಒದಗಿಸುತ್ತದೆ. ಪ್ರವಾಸದ ಪ್ಯಾಕೇಜ್‌ನಲ್ಲಿ ಎಲ್ಲಾ ಪ್ರಯಾಣ ಸೌಲಭ್ಯ (ರೈಲು ಮತ್ತು ರಸ್ತೆ ಸಾರಿಗೆ ಸೇರಿದಂತೆ), ವಸತಿ ಸೌಲಭ್ಯ, ಅಡುಗೆ ವ್ಯವಸ್ಥೆಗಳನ್ನು ಒಳಗೊಂಡಿದೆ.
ಪ್ರವಾಸದ ಸಂದರ್ಭದಲ್ಲಿ ವೃತ್ತಿಪರ ಗೈಡ್‌ಗಳು ಜೊತೆಗಿರುತ್ತಾರೆ. ರೈಲಿನಲ್ಲಿ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ಎಲ್ಲಾ ಬೋಗಿಯಲ್ಲೂ ಪ್ರಕಟಣೆ ಸೌಲಭ್ಯ, ಪ್ರಯಾಣ ವಿಮೆ ಮತ್ತು ಸಹಾಯಕ್ಕಾಗಿ ಪ್ರಯಾಣದ ಉದ್ದಕ್ಕೂ ಟೂರ್ ಮ್ಯಾನೇಜರ್ ಲಭ್ಯವಿರುತ್ತಾರೆ.












Click it and Unblock the Notifications