Bengaluru–Mysuru Expressway: ಸರ್ವಿಸ್ ರಸ್ತೆ ಮೂಲಕ ಎಂಟ್ರಿ-ಎಕ್ಸಿಟ್ ಬಂದ್ ಮಾಡಲು ಮುಂದಾದ NHAI; ಈ ನಿರ್ಧಾರ ಏಕೆ?
ಮಂಡ್ಯ, ನವೆಂಬರ್, 16: ಬೆಂಗಳೂರು-ಮೈಸೂರು ಹೆದ್ದಾರಿ ಆದಾಗಿನಿಂದ ವಾಹನ ಸವಾರರು ಟೋಲ್ ಸಿಬ್ಬಂದಿಯ ನಡುವೆ ಒಂದಲ್ಲ ಒಂದು ಗಲಾಟೆಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ಈ ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮೂಲಕ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಇರುವ ನಿರ್ಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್ ಮಾಡಲು ಮುಂದಾಗಿದ್ದು, ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ಕೆಂಡಕಾರುತ್ತಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರು ಸೇರಿದಂತೆ ಇತರ ವಾಹನಗಳ ಪ್ರಯಾಣಿಕರು ಟೋಲ್ ವಂಚಿಸಿ ಹೋಗುತ್ತಾರೆ ಎನ್ನುವ ಕಾರಣದುಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಇರುವ ನಿರ್ಗಮನ ಮತ್ತು ಪ್ರವೇಶ ಮಾರ್ಗಗಳು ಬಂದ್ ಮಾಡಲು ಮುಂದಾಗಿದ್ದು, ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಡ್ಯದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ಹೆದ್ದಾರಿಯಿಂದ ಮಂಡ್ಯ ನಗರಕ್ಕೆ ಬರಲು ಅನುಕೂಲ ಆಗುವಂತೆ ಇಂಡುವಾಳು ಗ್ರಾಮದ ಬಳಿ ಆಗಮನ, ನಿರ್ಗಮನ ಮಾರ್ಗಗಳನ್ನು ನೀಡಲಾಗಿದೆ. ಇನ್ನು ಶ್ರೀರಂಗಪಟ್ಟಣ, ಮೈಸೂರಿಗೆ ಹೋಗುವವರು ಹೆದ್ದಾರಿ ಪ್ರವೇಶಿಸಿದರೆ ಗಣಂಗೂರು ಬಳಿಯಲ್ಲಿನ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿಸಬೇಕು. ಇಲ್ಲದಿದ್ದರೆ ಸರ್ವಿಸ್ ರಸ್ತೆಯನ್ನೇ ಬಳಸಬೇಕಿದೆ.
ಇಲ್ಲಿವರೆಗೆ ಮಂಡ್ಯದಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿಇಂಡುವಾಳು, ಕಾಳೇನಹಳ್ಳಿ, ತೂಬಿನಕೆರೆ, ಗರುಡನ ಉಕ್ಕಡ ಬಳಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಆಗಮನ, ನಿರ್ಮನ ನೀಡಲಾಗಿದೆ. ಅಲ್ಲದೆ ಮೈಸೂರಿನಿಂದ ಮಂಡ್ಯಕ್ಕೆ ಬರುವ ಮಾರ್ಗದಲ್ಲಿ ನಾಗನಹಳ್ಳಿ ಗೇಟ್, ಗರುಡನ ಉಕ್ಕಡ, ಬ್ಯಾಡರಹಳ್ಳಿ ಗೇಟ್, ತೂಬಿನಕೆರೆ, ಕಾಳೇನಹಳ್ಳಿ, ಸುಂಡಹಳ್ಳಿ, ಇಂಡುವಾಳು ಬಳಿ ಈ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದರೆ ಈಗ ಆಗಮನ ಮತ್ತು ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಮಂಡ್ಯದಿಂದ ಶ್ರೀರಂಗಪಟ್ಟಣ, ಮೈಸೂರಿಗೆ ಕಾರು ಮತ್ತು ಇತರ ವಾಹನಗಳಲ್ಲಿ ಸಂಚಾರ ಮಾಡುವವರು ಟೋಲ್ ಪಾವತಿಸಿಯೇ ಹೆದ್ದಾರಿಯಲ್ಲಿ ಹೋಗುವಂತೆ ಮಾಡಿದ್ದಾರೆ. ಮಂಡ್ಯದಿಂದ ಮೈಸೂರಿಗೆ ಹೋಗುವವರು ಇಂಡುವಾಳು ಬಳಿ ಹೆದ್ದಾರಿ ಪ್ರವೇಶಿಸಿದರೆ ಟೋಲ್ ಪಾವತಿಸುವುದು ಅನಿವಾರ್ಯ ಆಗಿದೆ.
ಇಲ್ಲಿಯವರೆಗೆ ಕಾರು ಪ್ರಯಾಣಿಕರು ಇಂಡುವಾಳು ಬಳಿ ಹೆದ್ದಾರಿ ಪ್ರವೇಶಿಸಿ, ತೂಬಿನಕೆರೆ ಬಳಿ ಸರ್ವಿಸ್‌ಗೆ ಹೋಗುತ್ತಿದ್ದರು. ಮತ್ತೆ ಗರುಡನ ಉಕ್ಕಡ ಬಳಿ ಹೆದ್ದಾರಿ ಪ್ರವೇಶಿಸಿ ಮೈಸೂರಿಗೆ ಹೋಗುತ್ತಿದ್ದರು. ತೂಬಿನಕೆರೆ ಮತ್ತು ಗರುಡನ ಉಕ್ಕಡ ನಡುವೆ 8-10 ಕಿಲೋ ಮೀಟರ್ ದೂರವನ್ನು ಸರ್ವಿಸ್ ರಸ್ತೆಯಲ್ಲಿ ಕ್ರಮಿಸಿದರೆ ಮತ್ತೆ ಗರುಡನ ಉಕ್ಕಡದಿಂದ ಮೈಸೂರಿಗೆ ಸುಲಭವಾಗಿ ಹೋಗಬಹುದಿತ್ತು.
ಅಲ್ಲದೆ ಮತ್ತೊಂದೆಡೆ ಮೈಸೂರಿನಿಂದ ಮಂಡ್ಯಕ್ಕೆ ಬರುವವರು ನಗುವನಹಳ್ಳಿ ಗೇಟ್‌ವರೆಗೆ ಹೆದ್ದಾರಿಯಲ್ಲಿ ಬಂದು, ಸರ್ವಿಸ್ ರಸ್ತೆಗೆ ಹೋಗುತ್ತಿದ್ದರು. ಮತ್ತೆ ಶ್ರೀರಂಗಪಟ್ಟಣ ಮಾರ್ಗವಾಗಿ ಸಂಚರಿಸಿ ಬ್ಯಾಡರಹಳ್ಳಿ ಗೇಟ್ ಬಳಿ ಹೆದ್ದಾರಿ ಪ್ರವೇಶಿಸಿ ಇಂಡುವಾಳು ಬಳಿ ಸರ್ವಿಸ್ ರಸ್ತೆಗೆ ಬಂದು ಮಂಡ್ಯಗೆ ಆಗಮಿಸುತ್ತಿದ್ದರು. ಆದರೆ ಈಗ ನಗುವನಹಳ್ಳಿ ಗೇಟ್ ಬಳಿ ಮಾತ್ರವೇ ಆಗಮನ, ನಿರ್ಗಮನ ನೀಡಲಾಗಿತ್ತು.
ಅಲ್ಲಿನ ಹೋಟೆಲ್‌ನವರ ವ್ಯವಹಾರಕ್ಕೆ ಅನುಕೂಲ ಆಗುವಂತೆ ಹೋಟೆಲ್‌ಗಳ ಮುಂದೆಯೇ ಹೆದ್ದಾರಿಯಿಂದ ಆಗಮನ, ಪ್ರವೇಶ ಮಾರ್ಗಗಳನ್ನು ನಿರ್ಮಾಣ ಮಾಡಲಾಗಿತ್ತು. ಗರುಡನ ಉಕ್ಕಡ ಬಳಿ ಹೆದ್ದಾರಿ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದ್ದು, ನಿರ್ಗಮನ ದ್ವಾರವನ್ನು ರಸ್ತೆ ವಿಭಜಕ ಬ್ಲಾಕ್‌ಗಳಿಂದ ಬಂದ್ ಮಾಡಲಾಗಿದೆ. ಬ್ಯಾಡರಹಳ್ಳಿ ಗೇಟ್, ತೂಬಿನಕೆರೆ ಬಳಿಯ ಎಂಟ್ರಿಗಳನ್ನು ಇದೇ ರೀತಿ ಮುಚ್ಚಲಾಗಿದೆ. ಮಂಡ್ಯ ನಗರಕ್ಕೆ ಹತ್ತಿರದಲ್ಲಿರುವ ಕಾಳೇನಹಳ್ಳಿ-ಯಲಿಯೂರು ಗೇಟ್ ಬಳಿ ಆಗಮನ, ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ, ಹೆದ್ದಾರಿಗೆ ಕಲ್ಪಿಸಿದ ಆಗಮನ, ನಿರ್ಗಮನ ದ್ವಾರಗಳನ್ನು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಆಗಿದೆ. ತೂಬಿನಕೆರೆ, ಕಾಳೇನಹಳ್ಳಿ, ಇಂಡುವಾಳು ಸೇರಿದಂತೆ ಹಲವೆಡೆ ಚರಂಡಿ ಕಾಮಗಾರಿಗಳು ಪೂರ್ಣವಾಗಿಲ್ಲ. ಶ್ರೀರಂಗಪಟ್ಟಣದ ಬೈಪಾಸ್ ರಸ್ತೆಯಲ್ಲೂ ಚರಂಡಿ ಕಾಮಗಾರಿಗಳು ಅವೈಜ್ಞಾನಿಕ ಆಗಿವೆ.
ಸರ್ವೀಸ್ ರಸ್ತೆಯಲ್ಲಿ ಪ್ರತಿ ಗ್ರಾಮಗಳ ಬಳಿಯೂ ಅಂಡರ್‌ಪಾಸ್ ಸಮೀಪದಲ್ಲಿಅವೈಜ್ಞಾನಿಕವಾಗಿ ಎತ್ತರವಾದ ಹಂಫ್ಸ್‌ಗಳನ್ನು ಹಾಕಲಾಗಿದೆ. ಇವು ಅಪಘಾತಕ್ಕೆ ಕಾರಣವಾಗಿತ್ತು. ಆದರೂ ಆಗಮನ, ನಿರ್ಗಮನ ಪ್ರವೇಶ ದ್ವಾರಗಳನ್ನು ಬಂದ್ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಹೋಗಲು ನಿರ್ಗಮನ ದ್ವಾರ ಬಂದ್ ಮಾಡಿರುವ ಸ್ಥಳಗಳಲ್ಲಿ ಆಗಮನ ದ್ವಾರದ ಮೂಲಕವೇ ವಾಹನಗಳ ಚಾಲಕರು ಪ್ರಯತ್ನಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಆಗಿದೆ. ವೇಗವಾಗಿ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಸರ್ವಿಸ್ ರಸ್ತೆಗೆ ಹೋಗುವ ವಾಹನ ಏಕಮುಖ ಸಂಚಾರ ಮಾರ್ಗದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದು, ಇದು ಅಪಘಾತಕ್ಕೆ ಕಾರಣವಾಗುತ್ತಿದೆ.
ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಸ್ಥಳಗಳಲ್ಲಿ ಹೆದ್ದಾರಿಯಲ್ಲೇ ಸಂಚರಿಸಲು ಅನುಕೂಲ ಆಗುವಂತೆ ಎಂಟ್ರಿ, ಎಕ್ಸಿಟ್ ಕೊಡಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಟೋಲ್ ತಪ್ಪಿಸಿಕೊಳ್ಳುವ ಅಲೋಚನೆಯಿಂದ ಏಕಮುಖ ಸಂಚಾರ ಮಾರ್ಗದಲ್ಲಿ ವಾಹನಗಳು ಸಾಗುವುದು ಅತ್ಯಂತ ಅಪಾಯಕಾರಿಯಾಗಿದೆ. ಇದನ್ನು ಯಾರೂ ಮಾಡಬಾರದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ತಿಳಿಸಿದ್ದಾರೆ.












Click it and Unblock the Notifications