ಬೆಂಗಳೂರು-ಮುರುಡೇಶ್ವರ ರೈಲು; ಪ್ರಯಾಣಿಕರಿಗೆ ಮಹತ್ವದ ಮಾಹಿತಿ
ಬೆಂಗಳೂರು, ಮಾರ್ಚ್ 18: ಬೆಂಗಳೂರು-ಮುರುಡೇಶ್ವರ ರೈಲುನ್ನು ಕಾರವಾರದ ತನಕ ವಿಸ್ತರಣೆ ಮಾಡಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ಪ್ರಯಾಣಿಕರು, ವಿವಿಧ ರೈಲು ಹೋರಾಟ ಸಮಿತಿಗಳು ಸಹ ಈ ಕುರಿತು ರೈಲ್ವೆ ಇಲಾಖೆಗೆ ಮನವಿಗಳನ್ನು ಸಲ್ಲಿಸಿದ್ದವು. ಅಂತಿವಾಗಿ ಈ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ.
ಮಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಕೊಂಕಣ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರು-ಮುರುಡೇಶ್ವರ ರೈಲು ಕಾರವಾರದ ತನಕ ವಿಸ್ತರಣೆ ಮಾಡಬೇಕು ಎಂದು ಸಹ ಚರ್ಚೆ ನಡೆಯಿತು.

ಕರ್ನಾಟಕದ ಪ್ರತಿನಿಧಿಯಾಗಿ ಈ ಸಭೆಯಲ್ಲಿ ಶಾಸಕರು ಹಾಗೂ ಎಂಸಿಎ ಲಿಮಿಟೆಡ್ ಅಧ್ಯಕ್ಷ ಸತೀಶ್ ಸೈಲ್ ಪಾಲ್ಗೊಂಡಿದ್ದರು. ಸತೀಶ್ ಸೈಲ್ ಕೊಂಕಣ ರೈಲ್ವೆ ಅಧಿಕಾರಿಗಳ ಬಳಿ ಬೆಂಗಳೂರು-ಮುರುಡೇಶ್ವರ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟರು. ತಾತ್ಕಾಲಿಕ ವೇಳಾಪಟ್ಟಿಯನ್ನು ಮಂಡಿಸಿದರು.
ಅಧಿಕಾರಿಗಳ ಒಪ್ಪಿಗೆ: ತಾತ್ಕಾಲಿಕ ವೇಳಾಪಟ್ಟಿಯನ್ನು ನೋಡಿದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ನೈಋತ್ಯ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿ, ರೈಲು ವಿಸ್ತರಣೆ ಮಾಡುವ ವೇಳಾಪಟ್ಟಿಯನ್ನು ಅಂತಿಮಗೊಳಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಬೆಂಗಳೂರು-ಕರಾವಳಿ ಸಂಪರ್ಕಿಸಲು ಹೊಸ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆಯ ನಡುವೆಯೇ ಬೆಂಗಳೂರು-ಮುರುಡೇಶ್ವರ ರೈಲನ್ನು ಕಾರವಾರದ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಈಗಾಗಲೇ ಬೆಂಗಳೂರು-ಮೈಸೂರು-ಮಂಗಳೂರು ತನಕ ವಿಸ್ತರಣೆ ಮಾಡಲಾಗಿದೆ.
2023ರಲ್ಲಿಯೂ ಸತೀಶ್ ಸೈಲ್ ಕೊಂಕಣ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರವನ್ನು ಬರೆದು ಬೆಂಗಳೂರು-ಮುರುಡೇಶ್ವರ ರೈಲು ವಿಸ್ತರಣೆ ಮಾಡುವ ಕುರಿತು ಗಮನ ಸೆಳೆದಿದ್ದರು. ಈಗ ಸಭೆಯಲ್ಲಿಯೂ ಸಹ ಇದೇ ವಿಚಾರ ಪ್ರಸ್ತಾಪಿಸಿದ್ದಾರೆ.
ಕೊಂಕಣ ರೈಲು ಯೋಜನೆಗಾಗಿ ಉತ್ತರ ಕನ್ನಡದ ಜನರು ಭೂಮಿ ನೀಡಿದ್ದಾರೆ. ಅವರಿಗೆ ರಾಜಧಾನಿಗೆ ಸಂಪರ್ಕ ಕಲ್ಪಿಸಲು ಅನುಕೂಲ ಮಾಡಿಕೊಡಬೇಕು. ಅದಕ್ಕಾಗಿ ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು.
ಸದ್ಯ ಬೆಂಗಳೂರು-ಕಾರವಾರ ನಡುವೆ ಸಂಚಾರ ನಡೆಸುವ ರೈಲುಗಳು ತುಂಬಿ ತುಳುಕುತ್ತಿವೆ. ಆದ್ದರಿಂದ ಹೊಸ ರೈಲುಗಳು ಬೇಕು. ಅಲ್ಲದೇ ಬೆಂಗಳೂರು-ಮುರುಡೇಶ್ವರ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಲು ಅವಕಾಶವಿದೆ. ಆದ್ದರಿಂದ ವಿಸ್ತರಣೆ ಮಾಡಬೇಕು ಎಂದು ಕೊಂಕಣ ರೈಲ್ವೆ ಮುಂದೆ ಬೇಡಿಕೆ ಇಡಲಾಗಿತ್ತು.
ಸಭೆಯಲ್ಲಿ ಚರ್ಚಿಸಿದ ಇತರ ವಿಚಾರಗಳು
* ಕರಾವಳಿಯಿಂದ ಮುಂಜಾನೆ ಸಂಚಾರ ನಡೆಸುವ ಮಡಗಾಂವ್-ಮಂಗಳೂರು ಮೆಮೊ ರೈಲಿಗೆ ಹಾರವಾಡ, ಮಿರ್ಜಾನ್‌ನಲ್ಲಿ ನಿಲುಗಡೆ ನೀಡಬೇಕು ಎಂಬ ಪ್ರಸ್ತಾಪಕ್ಕೂ ಒಪ್ಪಿಗೆ ಸಿಕ್ಕಿದೆ.
* ಕೊಂಕಣ ರೈಲು ಯೋಜನೆಗೆ ಭೂಮಿ ನೀಡಿದ ಕೆಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬ ಚರ್ಚೆ ನಡೆಯಿತು. ಜಿಲ್ಲಾಧಿಕಾರಿಗಳು ಸಲ್ಲಿಸುವ ಪ್ರಸ್ತಾವನೆಯನ್ನು ಕೂಡಲವೇ ವಿಲೇವಾರಿ ಮಾಡಲು ಇಲಾಖೆ ಒಪ್ಪಿಗೆ ನೀಡಿದೆ.
* ಕಾರವಾರ ರೈಲು ನಿಲ್ದಾಣದಲ್ಲಿ ಮುಂದಿನ ಕಾಮಗಾರಿ ಕೈಗೊಳ್ಳುವುದು ಮತ್ತು ಪ್ಲಾಟ್ ಫಾರ್ಮ್‌ನಲ್ಲಿ ಲಿಫ್ಟ್ ಅವಳಡಿಕೆ ಮಾಡುವ ಬೇಡಿಕೆಗೆ ಸಹ ಇಲಾಖೆ ಒಪ್ಪಿದೆ.
* ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ರೈಲಿಗೆ ಗೋಕರ್ಣ, ಕುಂದಾಪುರದಲ್ಲಿ ನಿಲುಗಡೆ ನೀಡಲು ಸಹ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಲಾಗಿದೆ.












Click it and Unblock the Notifications