ಬೆಂಗಳೂರು-ಮಂಗಳೂರು ರೈಲು ಮುರುಡೇಶ್ವರದವರೆಗೂ ವಿಸ್ತರಣೆ, ಮಾರ್ಗಗಳು & ಸಮಯಗಳ ವಿವರ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್, 06: ಮೂರು ವರ್ಷಗಳ ನಂತರ ರೈಲಿನ ಮೂಲಕ ಮೈಸೂರು ಕರಾವಳಿ ಕರ್ನಾಟಕಕ್ಕೆ ಮರುಸಂಪರ್ಕಗೊಳ್ಳಲಿದೆ. ರೈಲ್ವೇ ಸಚಿವಾಲಯವು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿ)-ಮಂಗಳೂರು ಎಕ್ಸ್‌ಪ್ರೆಸ್ ಅನ್ನು ಮೈಸೂರು ಮೂಲಕ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ ಅಂತಾ ದಿ ಹಿಂದೂ ವರದಿ ಮಾಡಿದೆ.
ಈ ಮಾರ್ಗದಲ್ಲಿ ವಾರದಲ್ಲಿ ಆರು ದಿನಗಳ ಬದಲಿಗೆ ಪ್ರತಿದಿನ ರೈಲು ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬೆಂಗಳೂರು-ಮೈಸೂರು-ಮಂಗಳು ರೈಲನ್ನು ಕಾರವಾರದವರೆಗೂ ವಿಸ್ತರಣೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆಗ ಮನವಿ ಸ್ವೀಕರಿಸಿದ್ದ ರೈಲ್ವೆ ಸಚಿವ ಈ ಬಗ್ಗೆ ಗಮನ ನೀಡುವುದಾಗಿ ತಿಳಿಸಿದ್ದರು. ಇಲ್ಲಿಯವರೆಗೂ ಈ ರೈಲು ಮಂಗಳೂರುಗೆ ಕೊನೆಯಾಗುತ್ತಿತ್ತು.

ಮೊದಲ ಹಂತವಾಗಿ ಈ ರೈಲನ್ನು ಉತ್ತರ ಕನ್ನಡದ ಮುರ್ಡೇಶ್ವರದವರೆಗೆ ವಿಸ್ತರಣೆ ಮಾಡಿದೆ. ಇಲ್ಲಿಯವರೆಗೂ ಬೆಂಗಳೂರು-ಮುರ್ಡೇಶ್ವರ ನಡುವೆ ವಾರಕ್ಕೆ ಒಮ್ಮೆ ರೈಲು ಸಂಚಾರ ಮಾಡುತ್ತಿತ್ತು. ಆದರೆ ಇದೀಗ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ರೈಲು (ರೈಲು ನಂಬರ್ 16585/86) ಮುರ್ಡೇಶ್ವರದವರೆಗೆ ಪ್ರತಿನಿತ್ಯ ಸಂಚಾರ ಮಾಡಲಿದೆ ಎಂದು ತಿಳಿಸಿದೆ. ಈಗ ಬೆಂಗಳೂರಿನಿಂದ ಕಾರವಾರದವರೆಗೆ ಪಂಚಗಂಗಾ ಎಕ್ಸ್‌ಪ್ರೆಸ್ ಮಾತ್ರವೇ ಪ್ರತಿದಿನ ಸಂಚಾರ ಮಾಡುತ್ತಿದ್ದು, ಈ ಸಾಲಿಗೆ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ಕೂಡ ಸೇರ್ಪಡೆಯಾಗಲಿದೆ.
ಹೀಗೆ ಮೂರು ವರ್ಷಗಳ ನಂತರ ರೈಲಿನ ಮೂಲಕ ಸಾಂಸ್ಕ್ರತಿಕ ನಗರಿ ಮೈಸೂರನ್ನು ಕರಾವಳಿ ಕರ್ನಾಟಕಕ್ಕೆ ಮರುಸಂಪರ್ಕಗೊಳ್ಳಲಿದೆ. ರೈಲ್ವೇ ಸಚಿವಾಲಯವು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿ)-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು ಮೈಸೂರು ಮೂಲಕ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ. ವಾರದಲ್ಲಿ ಆರು ದಿನಗಳ ಬದಲಿಗೆ ಪ್ರತಿದಿನ ರೈಲು ಓಡಿಸಲು ಸಚಿವಾಲಯವು ಅನುಮೋದನೆ ನೀಡಿದೆ. ರೈಲಿನ ಮಾಲೀಕತ್ವ ಹೊಂದಿರುವ ನೈಋತ್ಯ ರೈಲ್ವೆಯು ಬದಲಾವಣೆಗಳ ಅನುಷ್ಠಾನದ ಕುರಿತು ಔಪಚಾರಿಕ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ.

ಎಸ್‌ಎಂವಿಟಿ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ನಡುವಿನ ಸಮಯದಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ರೈಲು ತನ್ನ ಅಸ್ತಿತ್ವದಲ್ಲಿರುವ ಮಾರ್ಗದಲ್ಲಿ ಚಲಿಸುವ ನಿರೀಕ್ಷೆಯಿದೆ. ರೈಲು ಸಂಖ್ಯೆ 16585 ಎಸ್‌ಎಂವಿಟಿ ಸ್ಟೇಷನ್‌ನಿಂದ ರಾತ್ರಿ 8.15ಕ್ಕೆ ಹೊರಡಲಿದ್ದು, ರಾತ್ರಿ 11.40ಕ್ಕೆ ಇದು ಮೈಸೂರು ತಲುಪಲಿದೆ. ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 8.55ಕ್ಕೆ ತಲುಪಲಿದೆ. ಇದಕ್ಕೂ ಮುನ್ನ ಮಂಗಳೂರಿಗೆ ಬೆಳಗ್ಗೆ 9.05 ನಿಮಿಷಕ್ಕೆ ತಲುಪುತ್ತಿತ್ತು. ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 9.20ಕ್ಕೆ ಹೊರಡುವ ರೈಲು ಮಧ್ಯಾಹ್ನ 1.20ಕ್ಕೆ ಮುರ್ಡೇಶ್ವರ ತಲುಪಲಿದೆ.
ವಿಶೇಷ ರೈಲು ಬಿಡುವಂತೆ ಒತ್ತಾಯ
ಇದೇ ಸೆಪ್ಟೆಂಬರ್ 18ರಂದು ಗಣೇಶ ಹಬ್ಬ ಇದ್ದು, ಈ ಹಿನ್ನೆಲೆ ನಗರ ಪ್ರದೇಶಗಳಿಂದ ತಮ್ಮ ಊರಿಗೆ ಬಸ್ಸುಗಳಿಗಿಂತ ರೈಲಿನಲ್ಲೆಯೇ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಇದನ್ನು ಎಚ್ಚೆತ್ತುಕೊಂಡು ಪ್ರಯಾಣಿಕರ ದಟ್ಟಣೆ ತಡೆಯಲು ಈಗಾಗಲೇ ಭಾರತೀಯ ರೈಲ್ವೆ ಹೆಚ್ಚುವರಿ ರೈಲುಗಳನ್ನು ಬಿಟ್ಟಿದೆ. ಅಲ್ಲದೆ ಈ ಭಾಗಗಳಲ್ಲಿ ಇನ್ನೂ ಹೆಚ್ಚಿನ ವಿಶೇಷ ರೈಲುಗಳನ್ನು ಬಿಡಲು ಒತ್ತಾಯಗಳು ಬರುತ್ತಿವೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಬಿಡಬೇಕೆಂದು ನೈರುತ್ಯ ರೈಲ್ವೆಯ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘವು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದೆ. ಆದ್ದರಿಂದ ಬೆಂಗಳೂರು-ಹುಬ್ಬಳ್ಳಿ- ಮೀರಜ್, ಹುಬ್ಬಳ್ಳಿ-ದಾವಣಗೆರೆ-ಅರಸೀಕೆರೆ-ಮೈಸೂರು, ಹುಬ್ಬಳ್ಳಿ-ಅರಸೀಕೆರೆ-ಬೆಂಗಳೂರು, ಬೆಂಗಳೂರು-ಅರಸೀಕೆರೆ-ಮಂಗಳೂರು, ಹುಬ್ಬಳ್ಳಿ ಯಶವಂತಪುರ-ಕೊಯಿಮತ್ತೂರು ಮಾರ್ಗದಲ್ಲಿ ವಿಶೇಷ ರೈಲು ಸಂಚಾರ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ನೈರುತ್ಯ ರೈಲ್ವೆಯ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಒತ್ತಾಯಿಸಿದ್ದಾರೆ.












Click it and Unblock the Notifications