ಬೆಂಗಳೂರು-ಹೊಸಪೇಟೆ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಇಲಾಖೆ
ಬೆಂಗಳೂರು, ಆಗಸ್ಟ್ 31; ನೈಋತ್ಯ ರೈಲ್ವೆ ಬೆಂಗಳೂರು-ಹೊಸಪೇಟೆ ನಿಲ್ದಾಣಗಳ ನಡುವೆ ಸಂಚಾರ ನಡೆಸುವ ವಿಶೇಷ ಪ್ಯಾಸೆಂಜರ್ ರೈಲು ಸೇವೆಯನ್ನು ಒಂದು ವರ್ಷಗಳ ಕಾಲ ವಿಸ್ತರಣೆ ಮಾಡಿದೆ. ರೈಲು ಸಂಚಾರದ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಬಳ್ಳಾರಿ ಬೈಪಾಸ್ ಮೂಲಕ ಕೆ. ಎಸ್. ಆರ್ ಬೆಂಗಳೂರು ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲು ಸಂಖ್ಯೆ 06243/ 06244 ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಪ್ರಸ್ತುತ ಇರುವ ಸಮಯ, ಸಂಯೋಜನೆಯ ಜೊತೆಗೆ ರೈಲು ಸೇವೆಯನ್ನು ಸೆಪ್ಟೆಂಬರ್ 13, 2024ರ ತನಕ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ರಾಜಧಾನಿ ಬೆಂಗಳೂರು ಮತ್ತು ಹೊಸ ಜಿಲ್ಲೆ ವಿಜಯನಗರಕ್ಕೆ ಸಂಚಾರ ನಡೆಸುವ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ.
ಒಂದು ವರ್ಷ ರೈಲು ಸೇವೆ ವಿಸ್ತರಣೆ; ರೈಲು ಸಂಖ್ಯೆ 06243 ಕೆ. ಎಸ್. ಆರ್ ಬೆಂಗಳೂರು-ಹೊಸಪೇಟೆ ಪ್ರತಿದಿನದ ಪ್ಯಾಸೆಂಜರ್ ವಿಶೇಷ ರೈಲನ್ನು ಸೆಪ್ಟೆಂಬರ್ 13, 2023ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಸದ್ಯ ಅದನ್ನು ಸೆಪ್ಟೆಂಬರ್ 13, 2024ರವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 06244 ಹೊಸಪೇಟೆ ಮತ್ತು ಕೆ. ಎಸ್. ಆರ್ ಬೆಂಗಳೂರು ಪ್ರತಿದಿನದ ಪ್ಯಾಸೆಂಜರ್ ವಿಶೇಷ ರೈಲನ್ನು ಸೆಪ್ಟೆಂಬರ್ 14, 2023ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಪ್ರಸ್ತುತ ಅದನ್ನು ಸೆಪ್ಟೆಂಬರ್ 14, 2024ರ ತನಕ ವಿಸ್ತರಿಸಲಾಗುತ್ತಿದೆ.
ಕೆ. ಎಸ್. ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ಬಣಾವರ, ತುಮಕೂರು, ಗುಬ್ಬಿ, ತರೀಕೆರೆ, ಅರಸೀಕೆರೆ ಮೂಲಕ ವಿಜಯನಗರ ಜಿಲ್ಲೆಯ ಹೊಸಪೇಟೆಯನ್ನು ತಲುಪಲಿದೆ.
ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲು ವಿಸ್ತರಣೆ; ನೈಋತ್ಯ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಯಂತೆ ರೈಲುಗಳ ಸಂಖ್ಯೆ 16535/ 16536 ಮೈಸೂರು-ಸೋಲಾಪುರ-ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲುಗಳನ್ನು ಪಂಢರಪುರ ನಿಲ್ದಾಣದವರೆಗೆ ವಿಸ್ತರಣೆ ಮಾಡಿದೆ.
ಈ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಹುಬ್ಬಳ್ಳಿ ನಿಲ್ದಾಣದಿಂದ ಮೈಸೂರು ನಿಲ್ದಾಣಗಳವರೆಗಿನ ಈ ರೈಲಿನ ವೇಳಾಪಟ್ಟಿ ಮತ್ತು ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸೆಪ್ಟೆಂಬರ್ 4ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಮೈಸೂರು ನಿಲ್ದಾಣದಿಂದ ಮಧ್ಯಾಹ್ನ 3.45 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12.25 ಗಂಟೆಗೆ ಪಂಢರಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ನಿಲುಗಡೆ/ ವೇಳಾಪಟ್ಟಿಯೂ ಬಸವನ ಬಾಗೇವಾಡಿ ರೋಡ್ ನಿಲ್ದಾಣದವರೆಗೆ ಯಾವುದೇ ಬದಲಾವಣೆ ಇರುವುದಿಲ್ಲ. ರೈಲು ವಿಜಯಪುರ 7.55/8 AM, ಇಂಡಿ ರೋಡ್ -8.41/ 8.42 AM, ಸೋಲಾಪುರ 10.15/ 10.20 AM ಮತ್ತು ಕುರ್ದುವಾಡಿ -11.25/ 11.27AM ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ಸೆಪ್ಟೆಂಬರ್ 5 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲು ಪಂಢರಪುರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 10.45 ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ.
ಈ ರೈಲು ಮಾರ್ಗದಲ್ಲಿ ಕುರ್ದುವಾಡಿ, ಸೋಲಾಪುರ, ಇಂಡಿ ರೋಡ್, ವಿಜಯಪುರ, ಬಸವನಬಾಗೇವಾಡಿ ರೋಡ್, ಆಲಮಟ್ಟಿ, ಬಾಗಲಕೋಟೆ, ಗುಳೇದಗುಡ್ಡ ರೋಡ್, ಬಾದಾಮಿ, ಹೊಳೆ ಆಲೂರು, ಗದಗ, ಅಣ್ಣಿಗೇರಿ, ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.












Click it and Unblock the Notifications