Srikalahasti: ರಾವಣನ ತಲೆ ತೆಗೆದ ಆಡಳಿತಾಧಿಕಾರಿಗಳು! ತಿರುಪತಿಯ ಶ್ರೀಕಾಳಹಸ್ತಿಯಲ್ಲಿ ನಡೆಯಬಾರದ ಘಟನೆ ನಡೆದೇ ಹೋಯ್ತು...
ತಿರುಪತಿಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ತಿರುಪತಿ ತಿರುಮಲದಲ್ಲಿ ಈಗ ಮಹಾಶಿವರಾತ್ರಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಈ ನಡುವೆ ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಅನಾಹುತವೊಂದು ನಡೆದಿದೆ. ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಅಧಿಕಾರಿಗಳು ಪೇಚಾಡುವಂತಾಗಿದೆ.
ಹೌದು... ದಶಕಂಠನಾದ ರಾವಣ ನವಕಾಂತನಾಗಿ ಮಾರ್ಪಾಡಾಗಿದ್ದಾನೆ. ಹತ್ತು ತಲೆಯ ರಾವಣ ಒಂಬತ್ತು ತಲೆಯ ರಾವಣಾಸುರನಾಗಿ ದೇವಸ್ಥಾನಕ್ಕೆ ಬಂದಿದ್ದಾನೆ. ಇದೀಗ ಈ ವಿಚಾರವಾಗಿ ಭಕ್ತರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಆಗಿದ್ದೇನು ಅಂದರೆ-

ಶ್ರೀಕಾಳಹಸ್ತಿಯಲ್ಲಿ ಮಹಾಶಿವರಾತ್ರಿ ಬ್ರಹ್ಮೋತ್ಸವಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಬ್ರಹ್ಮೋತ್ಸವದ ಅಂಗವಾಗಿ ಮಾ.6ರಂದು ರಾವಣಾಸುರನ ವಾಹನ ಸೇವೆ ನಡೆಯಲಿದೆ. ಈ ವಾಹನ ಸೇವೆಗೆ ರಾವಣಾಸುರನ ವಾಹನವನ್ನು ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ ನೆಲ್ಲೂರಿನಿಂದ ಬಂದಿದ್ದ ಭಕ್ತರು ರಾವಣಾಸುರನ ಮೂರ್ತಿಯನ್ನು ದೇವಸ್ಥಾನಕ್ಕೆ ಅರ್ಪಿಸಿದರು. ಆದರೆ ವಿಗ್ರಹವನ್ನು ತಯಾರಿಸುವಾಗ ಅದನ್ನು 10 ತಲೆಗಳಿಂದ ಮಾಡಬೇಕಾಗಿತ್ತು. ಆದರೆ ಇದರ ತಯಾರಕರು ಒಂಬತ್ತು ತಲೆಯಿಂದ ರಾವಣನ ಮೂರ್ತಿ ತಯಾರಿಸಿದ್ದಾರೆ. ಇದನ್ನು ಗಮನಿಸದ ಆಡಳಿತ ಮಂಡಳಿ ಆ ಮೂರ್ತಿಯನ್ನು ತಂದಿದೆ.
ಈ ದೇವಸ್ಥಾನ ತಲುಪುವವರೆಗೂ ವಿನ್ಯಾಸಕಾರರು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿಗೆ ತಪ್ಪಿನ ಅರಿವಾಗಲಿಲ್ಲ. ದೇವಸ್ಥಾನದಲ್ಲಿರುವ ಈ ವಿಗ್ರಹವನ್ನು ಗಮನಿಸಿದ ಭಕ್ತರು ಆಡಳಿತ ಮಂಡಳಿ ನಡೆದುಕೊಂಡ ರೀತಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾವಣಾಸುರನಿಗೆ ಎಷ್ಟು ತಲೆಗಳಿವೆ ಎಂಬ ಕನಿಷ್ಠ ತಿಳುವಳಿಕೆ ಆಡಳಿತ ಮಂಡಳಿಗೆ ಇಲ್ಲ ಎಂದು ಭಕ್ತರು ಟೀಕಿಸುತ್ತಿದ್ದಾರೆ.
ಪುರಾಣ, ಐತಿಹ್ಯಗಳ ಬಗ್ಗೆ ಅಧಿಕಾರಿಗಳಿಗೆ ತಿಳಿವಳಿಕೆ ಇಲ್ಲದಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ತಪ್ಪನ್ನು ಅರಿತು ತಕ್ಷಣ ಮೂರ್ತಿಯನ್ನು ಅಲ್ಲಿಂದ ತೆಗೆದಿದ್ದಾರೆ. ಸದ್ಯ ಮೂರ್ತಿ ತಯಾರಕರಿಗೆ ಈ ವಿಗ್ರಹಕ್ಕೆ ಮತ್ತೊಂದು ತಲೆ ಜೋಡಿಸುವಂತೆ ಕೇಳಲಾಗಿದ್ದು ರಾವಣಾಸುರನ ಹತ್ತನೆಯ ತಲೆಯನ್ನು ಜೋಡಿಸಲಾಗಿದೆ.

ಶ್ರೀಕಾಳಹಸ್ತಿಯಲ್ಲಿ ಕಿಡಿಗೇಡಿಗಳು
ಮತ್ತೊಂದೆಡೆ ಇತ್ತೀಚೆಗೆ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಮಧ್ಯರಾತ್ರಿ ಗಲಾಟೆ ನಡೆದಿತ್ತು. ಮಧ್ಯರಾತ್ರಿ ಬಾಲಕನೊಬ್ಬ ದೇವಸ್ಥಾನ ಪ್ರವೇಶಿಸಿದ ಘಟನೆ ಸಂಚಲನ ಮೂಡಿಸಿದೆ. ಕಾಂಪೌಂಡ್ ಗೋಡೆಯಿಂದ ಏಣಿಯ ಮೂಲಕ ಬಾಲಕ ದೇವಾಲಯ ಪ್ರವೇಶಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಭದ್ರತಾ ಸಿಬ್ಬಂದಿಯ ಕಣ್ಗಾವಲು ವಿಫಲವಾಗಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದು ಸಂಭವಿಸಿ ಹತ್ತು ದಿನಗಳ ನಂತರ ಶ್ರೀಕಾಳಹಸ್ತಿ ದೇವಸ್ಥಾನದಿಂದ ಮತ್ತೊಮ್ಮೆ ಸುದ್ದಿ ಈಗ ಹೊರಬಂದಿದೆ.
ಶ್ರೀಕಾಳಹಸ್ತಿ ನಾಯಿಡುಪೇಟ-ತಿರುಪತಿ ರೈಲುಮಾರ್ಗದಲ್ಲಿ ನಾಯಿಡುಪೇಟೆದಿಂದ ಹದಿನೆಂಟು ಮೈಲಿಗಳ ದೂರದಲ್ಲಿದೆ. ರೇಣಿಗುಂಟ-ಗೂಡೂರು ರೈಲುದಾರಿಯ ನಿಲ್ದಾಣಗಳಲ್ಲಿ ಕಾಳಹಸ್ತಿಯೂ ಒಂದು. ಇಲ್ಲಿಯ ಕಾಳಹಸ್ತೀಶ್ವರ ಹಾಗೂ ಜ್ಞಾನ ಪ್ರಸನ್ನಾಂಬಿಕೆ ದೇವಾಲಯಗಳು ಪ್ರಾಚೀನ ಪ್ರಸಿದ್ಧವಾಗಿವೆ. ಇಲ್ಲಿರುವ ಪಂಚಲಿಂಗಗಳಲ್ಲಿ ಮುಖ್ಯವಾದ್ದು ವಾಯುಲಿಂಗ. ಸಹಸ್ರಾರು ಭಕ್ತರು ಶಿವರಾತ್ರಿಯ ಕಾಲದಲ್ಲಿ ಇಲ್ಲಿ ಸೇರಿ 10 ದಿನಗಳ ಕಾಲ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸುತ್ತಾರೆ. ಪಲ್ಲವ, ಚೋಳ ಮತ್ತು ವಿಜಯನಗರ ರಾಜರು ಈ ದೇವಾಲಯಕ್ಕೆ ಅನೇಕ ಸವಲತ್ತುಗಳನ್ನು ಒದಗಿಸಿದ್ದರು.












Click it and Unblock the Notifications