ವಧು-ವರರೇ ಎಚ್ಚರ: ಮೈಸೂರಿನ ಇಂತಹ ಸ್ಥಳದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಜೀವಕ್ಕೆ ಆಪತ್ತು
ಮೈಸೂರು, ಫೆಬ್ರವರಿ 19: ಇತ್ತೀಚೆಗಿನ ದಿನಗಳಲ್ಲಿ ಪ್ರವಾಸಿ ತಾಣಗಳನ್ನು ಬರುವ ಪ್ರವಾಸಿಗರಿಗಿಂತ ಫೋಟೋ ಶೂಟ್‌ಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪ್ರವಾಸಿತಾಣಗಳ ಅಪಾಯಕಾರಿ ಸ್ಥಳಗಳಲ್ಲಿ ಅದರಲ್ಲೂ ಚುಂಚನಕಟ್ಟೆ ವ್ಯಾಪ್ತಿಯಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟಿಂಗ್ ಟ್ರೆಂಡ್ ಆಗಿದ್ದು, ಎಲ್ಲರಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರಬೇಕೆಂದು ಬಯಸುವ ಜೋಡಿಗಳು ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದು ದುರಂತವೇ ಸರಿ.
ಈಗಾಗಲೇ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿಗಾಗಿ ಜೀವ ಕಳೆದುಕೊಂಡ ಪ್ರಕರಣಗಳು ಬಹಳಷ್ಟು ನಡೆದಿವೆ. ಇದರ ಜತೆಗೆ ಪ್ರೀ-ವೆಡ್ಡಿಂಗ್ ಫೋಟೋ ಶೂಟಿಂಗ್ ಮಾಡಲು ಹೋಗಿ ಜೋಡಿಗಳು ಪ್ರಾಣತೆತ್ತ ಘಟನೆಗಳು ಅಲ್ಲಲ್ಲಿ ಕೇಳಿ ಬಂದಿವೆ. ಹೀಗಿದ್ದರೂ ಕೆಲವರು ಎಚ್ಚೆತ್ತುಕೊಳ್ಳದೆ ಹುಚ್ಚಾಟ ಮುಂದುವರೆಸುವುದು ಕಂಡು ಬರುತ್ತಲೇ ಇದೆ. ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಫೋಟೋ ಶೂಟಿಂಗ್ ನಡೆಸುವುದು ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಿದೆ.

ಮದುವೆಗೆ ಮುನ್ನ ಯುವ ಜೋಡಿಗಳು ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಮಾಡಲು ವಿವಿಧ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದು, ಇದಕ್ಕೋಸ್ಕರ ಸುಂದರ ಲೋಕೇಶನ್‌ಗಾಗಿ ಹುಡುಕಾಟ ನಡೆಸುವುದು ಮಾಮೂಲಿಯಾಗಿದೆ. ಅಷ್ಟೇ ಆಗಿದ್ದರೆ ಯಾವುದೇ ತೊಂದರೆಯಿಲ್ಲ. ಆದರೆ ಅದನ್ನು ಮೀರಿ ಪ್ರವಾಸಿ ತಾಣಗಳ ಅಪಾಯಕಾರಿ ಸ್ಥಳಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ನಡೆಸಲು ಮುಂದಾಗುತ್ತಿರುವುದು ಮಾತ್ರ ಆತಂಕಕಾರಿಯಾಗಿದೆ.
ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ
ಹೀಗಿರುವಾಗಲೇ ಮೈಸೂರಿನ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡು ಆಗಮಿಸುವುದು ಸಾಮಾನ್ಯವಾಗಿದ್ದು, ಹೀಗೆ ಬರುವ ಪ್ರವಾಸಿಗರು ಕೆಲವು ಪ್ರವಾಸಿ ತಾಣಗಳಲ್ಲಿ ಹುಚ್ಚಾಟವಾಡಿ ಪ್ರಾಣ ಕಳೆದುಕೊಂಡ ನಿದರ್ಶನವಿದೆ. ಅದರಲ್ಲೂ ಹೆಚ್ಚಿನವರು ಪ್ರಾಣಕಳೆದುಕೊಂಡ ಪ್ರವಾಸಿ ತಾಣ ಮೈಸೂರಿನಲ್ಲಿ ಯಾವುದಾದರು ಇದ್ದರೆ ಅದು ಕೆ.ಆರ್.ನಗರದ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಎಂದರೆ ತಪ್ಪಾಗಲಾರದು.

ಇಲ್ಲಿ ನಡೆಯುತ್ತಿರುವ ದುರಂತಗಳನ್ನು ಗಮನಿಸಿ ಜಲಪಾತದ ಬಳಿಗೆ ಹೋಗದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಇದರ ಸುತ್ತಮುತ್ತ ಇರುವ ಶ್ರೀರಾಮ ಸಮುದ್ರ ಕಾವೇರಿ ಅಣೆಕಟ್ಟೆ ಮೇಲ್ಬಾಗ, ಅಣೆಕಟ್ಟೆಯ ಕೆಳ ಭಾಗದ ಅಪಾಯದ ಹಳ್ಳ ಕೊಳ್ಳಗಳು, ಅತ್ತಿಕಟ್ಟೆ ಅಣೆಕಟ್ಟೆ, ಸಕ್ಕರೆ ಗ್ರಾಮದ ಚಾಮರಾಜ ಅಣೆಕಟ್ಟೆ ಮೊದಲಾದ ಕಡೆಗಳಲ್ಲಿ ಫೋಟೋ ಶೂಟಿಂಗ್, ಸೆಲ್ಫಿ ಗೀಳು ಜೋರಾಗಿದೆ. ಈ ಸ್ಥಳಗಳು ಅಪಾಯಕಾರಿಯಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹುಚ್ಚಾಟಗಳಿಗೆ ಕಡಿವಾಣ ಹಾಕಬೇಕು
ಹಾಗೆನೋಡಿದರೆ ಕಾವೇರಿ ನದಿ ಹರಿಯುವ ಸುಂದರ ಪ್ರದೇಶವಾದ ಚುಂಚನಕಟ್ಟೆ ಸದಾ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಅಷ್ಟೇ ಅಲ್ಲದೆ ಕಾವೇರಿ ನದಿ ಹರಿದು ಹೋಗುವ ಸ್ಥಳಗಳಲ್ಲಿ ಜಲಪಾತವನ್ನು ಸೃಷ್ಟಿಸಿದ್ದು, ಇದು ಮಳೆಗಾಲದಲ್ಲಿ ಜಲವೈಭವವನ್ನು ಸೃಷ್ಟಿಸುತ್ತದೆ. ಬೇಸಿಗೆ ಬರುತ್ತಿದ್ದಂತೆಯೇ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನದಿಯೊಳಗೆ ಬಂಡೆಕಲ್ಲುಗಳು ಕಾಣಿಸುತ್ತವೆ. ಈ ಕಲ್ಲುಗಳ ಮೇಲೆ ಕೆಲವರು ಫೋಟೋ ತೆಗೆಯಲು ಮುಂದಾಗುತ್ತಿರುವುದು ಕಂಡು ಬರುತ್ತಿದೆ.

ಇನ್ನು ನದಿಯ ಆಳ ಅಗಲ ಅರಿಯದೆ ನೀರಿನೊಳಗೆ ಇಳಿದು ಫೋಟೋಗಳಿಗೆ ಫೋಸ್ ನೀಡುವುದು ಮಾಡುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ನೀರಿಗೆ ಬೀಳುವ ಪರಿಸ್ಥಿತಿಯಿದ್ದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕಾವೇರಿ ನದಿಗಿಳಿದು ಅಪಾಯದ ಸ್ಥಳಗಳಲ್ಲಿ ಪ್ರಾಣವನ್ನು ಲೆಕ್ಕಿಸದೆ ಫೋಟೋ ಶೂಟ್ ಮಾಡಿಸುವ ಅಗತ್ಯ ಏನಿದೆ? ಎಂದು ಪ್ರಶ್ನಿಸುವ ಸ್ಥಳೀಯರು ಇಂತಹ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಕಾಲು ಜಾರಿದರೆ ಪ್ರಾಣಕ್ಕೆ ಕುತ್ತು
ಇವತ್ತು ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಮುದ್ರ ಕಾವೇರಿ ಅಣೆಕಟ್ಟೆ ಮೇಲ್ಬಾಗ, ಅಣೆಕಟ್ಟೆಯ ಕೆಳ ಭಾಗ, ಅತ್ತಿಕಟ್ಟೆ ಅಣೆಕಟ್ಟೆ, ಸಕ್ಕರೆ ಗ್ರಾಮದ ಚಾಮರಾಜ ಅಣೆಕಟ್ಟೆ ಇವುಗಳೆಲ್ಲವೂ ನೋಡತಕ್ಕ ತಾಣಗಳೇ ಆಗಿದ್ದರೂ ಅಪಾಯಕಾರಿ ಸ್ಥಳಗಳಾಗಿವೆ. ಆದರೆ ಇಲ್ಲಿ ತಂತಿ ಬೇಲಿ, ನಿರ್ಬಂಧಿತ ಪ್ರದೇಶದ ಸೂಚನ ಫಲಕ, ಭದ್ರತಾ ಸಿಬ್ಬಂದಿ ಯಾವುದೂ ಇಲ್ಲದ ಕಾರಣದಿಂದ ದೂರದಿಂದ ಬರುವ ಜೋಡಿಗಳು ಇಲ್ಲಿ ಫೋಟೋ ಶೂಟ್ ಮಾಡುತ್ತಾರೆ.
ಶ್ರೀರಾಮ ಅಣೆಕಟ್ಟೆ, ಅತ್ತಿಕಟ್ಟೆ ಅಣೆಕಟ್ಟೆ ಮತ್ತು ಚಾಮರಾಜ ಅಣೆಕಟ್ಟೆ ಮೇಲೆ ಸದಾ ನೀರು ಹರಿಯುವುದರಿಂದ ಬಂಡೆ ಕಲ್ಲಿನಲ್ಲಿ ಪಾಚಿಕಟ್ಟಿ ಜಾರುತ್ತಿರುತ್ತವೆ. ಇಂತಹ ಕಲ್ಲುಗಳ ಮೇಲೆ ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಮಾಡುವಾಗ ವಿವಿಧ ಭಂಗಿಗಳ ಬದಲಾವಣೆ ವೇಳೆ ಕಾಲು ಜಾರಿದರೆ ಸುಮಾರು 20 ರಿಂದ 30 ಅಡಿಯಷ್ಟು ಕೆಳ ಭಾಗಕ್ಕೆ ಬೀಳುವ ಪರಿಸ್ಥಿುತಿಯಿದ್ದು, ಅಲ್ಲಿ ಹೆಬ್ಬಂಡೆಗಳಿದ್ದು ಪ್ರಾಣಕ್ಕೆ ಕುತ್ತು ತರುವ ಸಂಭವ ಜಾಸ್ತಿಯಿದೆ.
ಅಪಾಯಕಾರಿ ಸ್ಥಳಕ್ಕೆ ನಿರ್ಬಂಧ ಅಗತ್ಯ
ಇನ್ನಾದರೂ ಪ್ರೀ-ವೆಡ್ಡಿಂಗ್ ಫೋಟೋ ಶೂಟ್‌ಗಾಗಿ ಚುಂಚನಕಟ್ಟೆಯತ್ತ ತೆರಳುವ ಯುವ ಜೋಡಿಗಳು ಎಚ್ಚರವಾಗಿರಿ. ಅಪಾಯಕಾರಿ ಸ್ಥಳಗಳಲ್ಲಿ ಫೋಟೋ ಶೂಟ್ ಮಾಡುವ ಸಾಹಸ ಮಾಡದಿರಿ. ಹಾಗೆಯೇ ಸಂಬಂಧಿಸಿದವರು ಇತ್ತ ಗಮನಹರಿಸಿ ಅಪಾಯಕಾರಿ ಸ್ಥಳಗಳಿಗೆ ಪ್ರವಾಸಿಗರು ತೆರಳದಂತೆ ನಿರ್ಬಂಧ ಹೇರಬೇಕು. ಆಗ ಮುಂದೆ ಸಂಭವಿಸಬಹುದಾದ ದುರಂತವನ್ನು ತಪ್ಪಿಸಲು ಸಾಧ್ಯಾವಾಗಬಹುದೇನೋ?












Click it and Unblock the Notifications