ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗಕ್ಕೆ ₹265 ಕೋಟಿ ರೂಪಾಯಿ ಅನುದಾನ-ಪೂರ್ಣ ಯಾವಾಗ?-ಇಲ್ಲಿದೆ ಮಾಹಿತಿ
ಚಿತ್ರದುರ್ಗ, ಆಗಸ್ಟ್, 23: ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳು ಆಗುತ್ತಲೇ ಇವೆ. ಇನ್ನು ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಈ ಭಾಗದ ಅತ್ಯಂತ ಮಹತ್ವದ ಯೋಜನೆ ಆಗಿದೆ. ಇದೀಗ ಈ ಯೋಜನೆ ಯಾವ ಹಂತದಲ್ಲಿದೆ ಹಾಗೂ ಇದಕ್ಕೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ನೀಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಯೋಜನೆಯ ಭಾಗವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡದಿಂದ ಮಡಕಶಿರಾ ನಡುವಿನ 22 ಕಿಲೋ ಮೀಟರ್ ಉದ್ದದ ಹೊಸ ಬ್ರಾಡ್‍ಗೇಜ್ ರೈಲು ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 265.92 ಕೋಟಿ ಅನುದಾನ ಒದಗಿಸಿದೆ. ಈ ಮೂಲಕ ತುಮಕೂರು-ರಾಯದುರ್ಗ ಹೊಸ ಬ್ರಾಡ್‍ಗೇಜ್ ರೈಲು ಮಾರ್ಗಕ್ಕೆ ವೇಗ ನೀಡಿದೆ.

ಈಗಾಗಲೇ ಈ ಬಗ್ಗೆ ನೈರುತ್ಯ ರೈಲ್ವೆ ವಲಯದಿಂದ ಟೆಂಡರ್ ಕರೆಯಲಾಗಿದ್ದು, ದಿನಾಂಕ 11-09-2024ರಂದು ಈ ಕಾಮಗಾರಿಯ ಬಿಡ್ ತೆರೆಯಲಿದೆ. ಈ ಮೂಲಕ ಕಾಮಗಾರಿ ನಿರ್ವಹಿಸುವ ಏಜೆನ್ಸಿ ಅಂತಿಮಗೊಳ್ಳಲಿದೆ. ಒಟ್ಟಾರೆಯಾಗಿ ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.
ಈ ಯೋಜನೆಯಡಿ ಪಾವಗಡ-ಮಡಕಶಿರಾ ನಗರಗಳಲ್ಲಿ 510 ಚದುರ ಮೀಟರ್ ವಿಸ್ತೀರ್ಣದ ಸುಸಜ್ಜಿತ ರೈಲ್ವೆ ನಿಲ್ದಾಣಗಳು ನಿರ್ಮಾಣ ಆಗಲಿವೆ. ಹಾಗೂ ಈ ಮಾರ್ಗದಲ್ಲಿ ತಡೆರಹಿತ ರೈಲು ಸಂಚಾರಕ್ಕೆ 3 ಪ್ರಮುಖ ಸೇತುವೆಗಳು, 32 ಸಣ್ಣ ಸೇತುವೆಗಳು, 21 ಅಂಡರ್ ಬ್ರಿಡ್ಜ್‌ಗಳು ಹಾಗೂ 4 ಸೇತುವೆಗಳು ನಿರ್ಮಾಣ ಆಗಲಿವೆ.
ಒಟ್ಟಾರೆಯಾಗಿ ಯಾವುದೇ ಅಡೆತಡೆಯಿಲ್ಲದೇ ರೈಲುಗಳು ಪ್ರತಿಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸಲು ಯಾವ ಅಗತ್ಯ ಮೂಲಸೌಕರ್ಯಗಳು ಬೇಕೋ ಆ ಎಲ್ಲವನ್ನೂ ಈ ಯೋಜನೆ ಒಳಗೊಂಡಿದೆ. ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಪೂರ್ಣಗೊಂಡರೆ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ.
ಸುರಂಗ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ: ಬೆಂಗಳೂರಿನಲ್ಲಿ ಆಗಸ್ಟ್ 22ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ವೇಳೆ ನಗರದಲ್ಲಿ 12,690 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 18 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಹಾಗಾದರೆ ಎಲ್ಲಿಂದ ಎಲ್ಲಿಯವರೆಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರದ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 18 ಕಿಲೋ ಮೀಟರ್ ಉದ್ದದ 12,690 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಅಲ್ಲದೆ ನಗರದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೂ ಒಪ್ಪಿಗೆ ನೀಡಿದೆ. ಗುರುವಾರ (ಆಗಸ್ಟ್ 22) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಇನ್ನು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ನೀಡಿ, 12,690 ಕೋಟಿ ರೂಪಾಯಿ ಮೊತ್ತದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ ಆಗಿಲ್ಲ ಎಂದರು ಹೇಳಿದರು.












Click it and Unblock the Notifications