ತಡಿಯದೇ ಕಾಡುವ ತಡಿಯಂಡಮೋಲ್

Trekking to Tadiyandamol
ಮಳೆಗಾಲದ ನಂತರ ತರಗೆಲೆಗಳ ನಡುವೆ ಹೆಜ್ಜೆ ಹಾಕುತ್ತ ಚಾರಣ ಮಾಡುವ ಅನುಭವವೇ ಬೇರೆ. ಮಳೆಗಾಲದಲ್ಲಿ ರಕ್ತ ಹೀರಲು ಕಾಲನ್ನು ಮುತ್ತಿಕೊಳ್ಳುವ ಜಿಗಣೆಗಳ ಸಾಮ್ರಾಜ್ಯದಲ್ಲಿ ಚಾರಣಕ್ಕೆಂದು ಕಾಲಿಟ್ಟಾದ ಸಿಗುವ ಅನುಭವವೇ ಬೇರೆ. ಹೀಗೊಂದು ಮಳೆಗಾಲದ ಅಂಚಿನಲ್ಲಿ ಮಲೆನಾಡ ಮಡಿಲಲ್ಲಿ ಚಾರಣಕ್ಕೆಂದು ಹೋದಾಗ...

ಪ್ರಸಾದ ನಾಯಿಕ

ಮಳೆಗಾಲ ಮುಗಿದು ಆಗಿನ್ನೂ ಗಿಡಮರಗಳ ಎಲೆಗಳ ತುದಿಯಿಂದ ನೀರು ತೊಟ್ಟಿಕ್ಕುತ್ತಿದ್ದಂಥ ಸಮಯ. ಮಳೆಗಾಲ ಮುಗಿಯುವವರೆಗೂ ರಗ್ಗನ್ನು ಮುಸುಕು ಹಾಕಿ ಗಾಢವಾದ ನಿದ್ದೆಯನ್ನು ಮುಗಿಸಿದಾಗ ಕೈಕಾಲಲ್ಲೇನೋ ಒಂಥರ ಚಟಪಡಿಕೆ. ಎಲ್ಲಿಗಾದ್ರೂ ಹೋಗ್ಬೇಕಪ್ಪಾ ಅಂತ ಗೆಳಯರೂ ಎಳೆದ ರಾಗಕ್ಕೆ ನಾನೂ ತಾಳ ಹಾಕಿದ್ದೆ. ಅಪರೂಪಕ್ಕೆ ಹೆಂಡತಿಯ ಅನುಮತಿಯೂ ಸಿಕ್ಕಿತ್ತು. ಆದ್ರೆ ಹೋಗೋದಾದ್ರೂ ಎಲ್ಲಿಗೆ?

ಮೇಕೆದಾಟು, ಮುತ್ತತ್ತಿ ಹತ್ತು ಬಾರಿಯಾದರೂ ನೋಡಿಯಾಗಿದೆ. ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯ ದಾರಿಯಲ್ಲಿನ ರೈಲು ಹಳಿಗಳ ಮೇಲೆ ಎರಡು ಬಾರಿ ಹೆಜ್ಜೆ ಹಾಕಿದ್ದೂ ಆಗಿದೆ. ಯಾಣದ ಕಾಡಿನಲ್ಲಿ ಅಲೆದಾಡಿದ್ದೂ ಆಗಿದೆ. ಹಾಗಾದ್ರೆ... ತಡಿಯಂಡಮೋಲ್? ಅಲ್ಲಿಗೆ ಹೋಗುವ ಪ್ಲಾನ್‌ಗೆ ಎಲ್ಲರಿಂದ ಥಂಬ್ಸಪ್. ಯಾಕಂದ್ರೆ ನಾವ್ಯಾರೂ ಹೋಗಿರಲಿಲ್ಲ, ಕೇಳಿದ್ದೆವು. ಅದು ಥ್ರಿಲ್ಲಿಂಗಾಗಿರತ್ತೆ ಅಂದ್ಕೊಂಡು ಸಿದ್ಧತೆ ಶುರು ಮಾಡಿಕೊಂಡ್ವಿ.

ಬೆಂಗಳೂರಿಂದ ವಿರಾಜಪೇಟೆಗೆ ಹೋಗಿ ಅಲ್ಲಿಂದ ಕಕ್ಕಾಬೆಗೆ ಹೋಗುವ ದಾರಿಯಲ್ಲಿರುವ ಕಬ್ಬಿನಕಾಡು ಎಂಬ ಹಳ್ಳಿಂದ ಮೂರು ಕಿ.ಮೀ. ದೂರದಲ್ಲಿರುವ ಹನಿವ್ಯಾಲಿ ರೆಸಾರ್ಟ್‌ಗೆ ಹೋಗುವುದಾಗಿ ನಿಶ್ಚಯಿಸಿದೆವು. ಎರಡು ಹೋಂಸ್ಟೇಯನ್ನು ಇಲ್ಲಿಂದಲೇ ಬುಕ್ ಮಾಡಿದ್ದಾಯಿತು. ಕಬ್ಬಿನಕಾಡಿನಿಂದ ಮೂರೇ ಕಿ.ಮೀ. ಅಲ್ವಾ? ಅಲ್ಲಿಂದಲೇ ರೆಸಾರ್ಟ್‌ಗೆ ಟ್ರೆಕ್ಕಿಂಗ್ ಶುರು ಮಾಡೋಣ ಅಂತ ಇಲ್ಲೇ ಪ್ಲಾನ್ ಹಾಕಿದ್ವಿ.

ಹೆಗಲಿಗೊಂದು ಬ್ಯಾಗು, ಎರಡು ಟೀಶರ್ಟ್, ಎರಡು ಚ್ವಣ್ಣ, ಒಂದು ಜೊತೆ ಶೂಸು, ಎಕ್ಸಟ್ರಾ ಕಾಲುಚೀಲ, ಜೊತೆಗೆ ಮನೆಯಲ್ಲಿ ಮಾಡಿದ ಚಪಾತಿ, ಭಕ್ಕರಿ, ಬ್ಯಾಡಿಗಿ ಮೆಣಸಿನಕಾಯಿ ಚಟ್ನಿ, ಒಂದಿಷ್ಟು ರೆಡಿಟುಈಟ್ ಅಷ್ಟೇ.

ಹಿಂದಿನ ದಿನ ಆಫೀಸಿನಲ್ಲಿ ರಕ್ತದಾನ ಶಿಬಿರದಲ್ಲಿ ಒಂದು ಬಾಟಲಿ ರಕ್ತ ನೀಡಿ ಬಂದಿದ್ದೆ. ಟ್ರೆಕ್ಕಿಂಗ್ ಮಾಡೋಕೆ ಆಗುತ್ತೋ ಇಲ್ವೊ ಎಂಬ ಭಯ ಮನೆಮಾಡಿತ್ತು. ಆದರೆ, ಮೈತುಂಬಿದ್ದ ಉತ್ಸಾಹ ನಿಶ್ಶಕ್ತಿಯನ್ನು ಒದ್ದೋಡಿಸಿತ್ತು.

ವಿರಾಜಪೇಟೆ ಬಸ್ಸು ಹತ್ತಿ ಅಲ್ಲಿ ಇಳಿದಾಗ ಬೆಳಗಿನ ಜಾವ ನಾಲ್ಕು ಗಂಟೆ. ಆರೂವರೆಯ ಮೊದಲ ಬಸ್ಸು ಹಿಡಿದು ಒಂದು ಗಂಟೆ ಪಯಣಿಸಿ ಕಬ್ಬಿನಕಾಡು ತಲುಪಿದೆವು.ಹೇಳಿಕೇಳಿ ಮಲೆನಾಡ ತವರು. ಆಗಲೆ ಹನಿಹನಿ ಪ್ರೇಮ್‌ಕಹಾನಿ ಶುರುವಾಗಿತ್ತು. ರೆಸಾರ್ಟ್‌ಗೆ ಟ್ರೆಕ್ಕಿಂಗ್ ಸಾವಾಸಾನೆ ಬ್ಯಾಡಪ್ಪೋ ಅಂದ್ಕೊಂಡ್ಬಿಟ್ಟಿ ಅಲ್ಲಿಗೆ ಹೋಗಲು ಜೀಪು ವ್ಯವಸ್ಥೆ ಇದ್ದಿದ್ದರಿಂದ ಅವರಿಗೇ ಬರಹೇಳಿದೆವು. ಒಂದು ಟ್ರಿಪ್‌ಗೆ 80 ರು. ಜೀಪು ಹೋಗುವ ದಾರಿ, ಅಲ್ಲಿನ ಕೆಸರು, ಮಧ್ಯದಲ್ಲಿ ಟೈರು ಮುಳುಗುವಷ್ಟು ತುಂಬಿಹರಿಯುವ ಝರಿಗಳು, ಕ್ಲಿಷ್ಟವಾದ ಏರುತಿರುವುಗಳು, ಅಸಾಧ್ಯ ಕಲ್ಲುಗಳಿರುವ ದಾರಿ. ಜೀಪಿನಲ್ಲಿ ಹೊರಟಿದ್ದು ಒಳ್ಳೆದೇ ಆಯ್ತು ಅಂದ್ಕೊಂಡ್ವಿ.

ಬೆಳಗಿನ ಕಾರ್ಯಕ್ರಮ ಮುಗಿಸಿಕೊಂಡು ಸ್ನಾನ ಮಾಡಿ ರೆಸಾರ್ಟ್ ಮಾಲಿಕ ಸುರೇಶ್ ಅವರನ್ನೇ ತಡಿಯಂಡಮೋಲ್‌ಗೆ ಹೋಗುವುದು ಹೇಗೆ ಎಂದು ಕೇಳಿದೆವು. ಒಂದು ಮ್ಯಾಪು ಮತ್ತು ಸ್ಥಳಗಳ ವಿವರಣೆ ಇರುವ ಪುಸ್ತಕ ತಂದು ಕೊಟ್ಟರು. ಎರಡು ದಾರಿಗಳಲ್ಲಿ ಅಲ್ಲಿ ತಲುಪಬಹುದು ಎಂದು ಅಲ್ಲೇ ಇದ್ದ ಅವರ ಮಗ ಹೋಗುವ ದಾರಿ ತೋರಿಸಿಕೊಟ್ಟರು. ಹೋಗುವ ದಾರಿಯಲ್ಲಿ ಜಿಗಣೆಗಳಿವೆಯೋ ಅಂತ ಅಮಾಯಕವಾಗಿ ಕೇಳಿದೆವು. ಹೌದು, ಅವು ಇಲ್ಲಿ ಮಾಮೂಲಿ ಅಂತ ಮಡಿಕೇರಿ ಕನ್ನಡದ ಸ್ಟೈಲಲ್ಲಿ ಕೂಲಾಗಿ ಹೇಳಿ ನಮ್ಮ ಮೈಬಿಸಿಯಾಗುವಂತೆ ಮಾಡಿದರು. ಮಳೆಗಾಲ ಮುಗಿದಿದ್ದರಿಂದ ಜಿಗಣೆಗಳಿರಲಿಕ್ಕಿಲ್ಲ ಎಂಬುದು ನಮ್ಮ ಊಹೆಯಾಗಿತ್ತು.

ಬ್ರೆಡ್ಡು, ಬಗೆಬಗೆಯ ಜಾಮು, ಜೇನುತುಪ್ಪ, ಗುಂಡಗೆ ಇಡ್ಲಿಯಂತೆ ಕಾಣುವ ಗೋಲ್ಫ್ ಬಾಲ್ ಆಕಾರದ ಕಡಂಪುಟ್ಟುಗಳನ್ನು ಹೊಟ್ಟೆಗಿಳಿಸಿದೆವು. ಜಾಸ್ತಿ ತಿನ್ನೋದು ಬೇಡ ಚಾರಣ ಮಾಡಲಿಕ್ಕಾಗಲಿಕ್ಕಿಲ್ಲ ಅಂದ್ಕೊಂಡಿದ್ದರೂ ಅಲ್ಲಿನ ವೆರೈಟಿ ನೋಡಿ ತಡೆಯೋಕಾಗಲಿಲ್ಲ ಸರೀ ಇಳಿಸಿದೆವು. ರೆಡಿಟುಈಟ್ ಬೇಯಿಸಲಿಕ್ಕೊಂದು ಅಲ್ಯುಮಿನಿಯಂ ಬುಟ್ಟಿ ಇಸಿದುಕೊಂಡೆವು. ಅದನ್ನು ಬೇಯಿಸಲಿಕ್ಕೆ ಪುಟ್ಟ ಸ್ಟೋವ್, ಉರಿಸಲು ಕರ್ಪೂರದಂಥಯ ವಸ್ತುವನ್ನು ಕೊಂಡೊಯ್ದಿದ್ದೆವು.

ಯಾವ ದಾರಿಯಲ್ಲಿ ಹೋದ್ರೆ ಯಾವ ಗುಡ್ಡ ಸಿಗತ್ತೆ, ಅದನ್ನು ಇಳಿದು ಹೋದ್ರೆ ಎಲ್ಲಿ ಝರಿ ಸಿಗುತ್ತೆ, ಎಲ್ಲಿ ಮತ್ತೆ ದಟ್ಟ ಕಾನನ ಎದುರಾಗುತ್ತೆ, ರೆಸಾರ್ಟ್‌ನಿಂದ ತಡಿಯಂಡಮೋಲ್ ಎಷ್ಟು ದೂರ ಆಗುತ್ತೆ ಎಲ್ಲ ಹೇಳಿದ್ದ ಸುರೇಶ್ ಅವರು ಒಂದು ವಿಷಯ ಮಾತ್ರ ಹೇಳಿರಲಿಲ್ಲ! ನಮಗೆ ಅದರ ಕಲ್ಪನೆಯೂ ಇರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+