ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಳ'ನೀರುದಾರಿ'ಗಳ ಹಾಡು!

By Staff
|
Google Oneindia Kannada News

Water ways of Alleppeyಪ್ರವಾಸದ ಹವ್ಯಾಸ ಇಟ್ಟುಕೊಂಡವರ ಸಂತೋಷ ಮತ್ತು ಅನುಕೂಲಕ್ಕಾಗಿ ದೇವರು ದರ್ಜಿಗೆ ಹೇಳಿ ಮಾಡಿಸಿದ ರಾಜ್ಯ ಕೇರಳ. ನಮ್ಮ ಕರ್ನಾಟಕದಂತಲ್ಲ. ತಲೆದೂಗುವ ತೆಂಗಿನ ನೆರಳಲ್ಲಿ ತೇಲುತ್ತಾ ಸಾಗಿದ ಲೇಖಕಿಯ ಅಲೆಪ್ಪಿ ಅನುಭವಗಳು.

ಲೇಖನ : ಶಾಂತಾ ನಾಗರಾಜ್, ಬೆಂಗಳೂರು

ಒಂದಾನೊಂದು ಕಾಲದಲ್ಲಿ ಭಗವಂತ ತನಗಾಗಿಯೇ ಒಂದು ತುಂಡು ಭೂಮಿಯನ್ನು ಸೃಷ್ಟಿಸಿಕೊಂಡನಂತೆ. ಅಲ್ಲಿ ಬಂಗಾರದ ಬಣ್ಣದ ಸೂರ್ಯನ ಕಿರಣಗಳು ಹೊಳೆಯುತ್ತಿದ್ದವು. ಮಳೆ ಪುಷ್ಪವೃಷ್ಟಿಯಂತೆ ಸುರಿಯುತ್ತಿತ್ತು. ತಂಗಾಳಿ ತಣ್ಣಗೆ ಬೀಸುತ್ತಿತ್ತು. ಸುತ್ತಲೂ ದಟ್ಟವಾದ ಮನಮೋಹಕ ಹಸುರಿತ್ತು. ಅದೇ ಕೇರಳದ 'ಅಲೆಪ್ಪಿ' ಎನ್ನುವ ಹೆಸರಿನ ನಗರ. ಇಂದಿಗೂ ಅದನ್ನು 'ಗಾಡ್ಸ್ ಓನ್ ಕಂಟ್ರಿ' ಎನ್ನುವ ಅಭಿದಾನದಿಂದಲೆ ಕರೆಯುತ್ತಾರೆ. ಕೇರಳೀಯರು ಇದನ್ನು 'ಒಲವಿಪಿ' ಎಂದೂ ಕರೆಯುತ್ತಿದ್ದರಂತೆ. ಮಲೆಯಾಳೀಭಾಷೆಯಲ್ಲಿ 'ಒಲವಿಪಿ' ಎಂದರೆ ಸಮುದ್ರದ 'ಅಲೆಗಳ ಉಡುಗೊರೆ' ಎಂದು ಅರ್ಥ.

ಇದು ನಿಜಕ್ಕೂ ಸಮುದ್ರದ ಅಲೆಗಳ ಉಡುಗೊರೆಯೇ. ಇಡೀ ನಗರದಲ್ಲಿ ಟಾರು ರಸ್ತೆಗಳು ಎಷ್ಟಿವೆಯೋ ಅದಕ್ಕಿಂತಾ ಹೆಚ್ಚಾಗಿ 'ನೀರುದಾರಿ'ಗಳಿವೆ. ಅಲೆಪ್ಪಿಯ ಭೂಭಾಗವೇ ಒಂದುರೀತಿಯಲ್ಲಿ ವಿಚಿತ್ರ ಮತ್ತೊಂದು ರೀತಿಯಲ್ಲಿ ಅನುಕೂಲ ಹಾಗೂ ಸುಂದರ. ಒಂದು ಕಡೆ ವಿಶಾಲವಾದ ಅರಬ್ಬಿ ಸಮುದ್ರ. ಅದರಿಂದ ಉಕ್ಕಿಹರಿದ 'ಬ್ಯಾಕ್‌ವಾಟರ್' ಎಂದು ಕರೆಸಿಕೊಳ್ಳುವ ನೀರಿನ ನಾಲೆಗಳು ಊರಿನ ತುಂಬಾ. ಈ ಮಧ್ಯೆ ಅಲ್ಲಲ್ಲಿ ಹರಿಯುವ ಪುಟ್ಟನದಿ ಮತ್ತು ಚಿಕ್ಕಚಿಕ್ಕ ಸರೋವರಗಳು. ಎಲ್ಲದರ ಮಿಶ್ರಣವೇ ಸುಂದರ 'ನೀರುದಾರಿ'ಗಳು! 'ನೀರಿದಾರಿ'ಗಳ ಎರಡೂ ಬದಿಯಲ್ಲಿ ಸಾಲುಸಾಲು ಮನೆಗಳು. ಈ ನೀರುದಾರಿಗಳಲ್ಲಿ ಮುಖ್ಯರಸ್ತೆ, ಅಡ್ಡರಸ್ತೆ, ಸ್ವಲ್ಪ ದೊಡ್ಡರಸ್ತೆ, ಕಿರುಗಲ್ಲಿ, ಎಲ್ಲವೂ ನಿರ್ಮಾಣವಾಗಿದೆ. ಒಂದು ಬಡಾವಣೆಯ ತುಂಬಾ ನೀರುದಾರಿಗಳೇ ಎಂದರೆ, ಅದರಲ್ಲಿ ಬದುಕುವ ಸೊಬಗನ್ನೂ, ಕಷ್ಟವನ್ನೂ ಊಹಿಸಿಕೊಳ್ಳಿ.

ಅಲೆಪ್ಪಿಯನ್ನು ಭಾರತದ 'ವೆನಿಸ್' ಎಂದು ಕರೆಯುತ್ತಾರೆ. ಆದರೆ ವೆನಿಸ್‌ಗೂ ಅಲೆಪ್ಪಿಗೂ ಬಹುಮುಖ್ಯವಾದ ವ್ಯತ್ಯಾಸವೊಂದಿದೆ. ವೆನಿಸ್‌ನಲ್ಲಿ ಜೀವನ ಮಾಡುವ ಜನಕ್ಕೆ ತಮ್ಮತಮ್ಮ ಮನೆಗಳ ಒಳಗೇ ಮೂಲಭೂತ ಸೌಲಭ್ಯಗಳು ತಪ್ಪದೇ ಲಭಿಸಿವೆ. ಅವರು ತಮ್ಮ ಮನೆಯ ಮುಂದಿನ ನೀರಿನಲ್ಲಿ ದೋಣಿಯಲ್ಲಿ ಓಡಾಡುವುದಷ್ಟನ್ನೇ ಮಾಡುತ್ತಾರೆ. ಆದರೆ ನಮ್ಮ ಬಡರಾಷ್ಟ್ರವಾದ ಭಾರತಕ್ಕೆ ಅಷ್ಟೊಂದು ಸವಲತ್ತುಗಳು ಎಲ್ಲಿ ಸಾಧ್ಯ? ಅದಕ್ಕೇ ಅಲೆಪ್ಪಿಯ ಜನ ತಮ್ಮ ಮನೆಯ ಮುಂದಿನ ನೀರುದಾರಿಯನ್ನು ಎಲ್ಲಕ್ಕೂ ಉಪಯೋಗಿಸುತ್ತಾರೆ. ಸ್ನಾನ, ಪಾತ್ರೆ ಬಟ್ಟೆ, ಮಕ್ಕಳ ಸ್ನಾನ, ತರಕಾರಿ ಅಕ್ಕಿ ತೊಳೆಯುವುದು, ಇತ್ಯಾದಿ ಮನೆಯ ಅದರಲ್ಲೂ ಅಡುಗೆಮನೆಯ ಸಕಲವ್ಯಾಪಾರಗಳೂ ಮನೆಯಮುಂದಿನ ನೀರುದಾರಿಯಲ್ಲಿ.

ಈ ನೀರು ಕುಡಿಯಲು ಯೋಗ್ಯವಲ್ಲವಾದ್ದರಿಂದ ದೋಣಿಯಲ್ಲಿ ಟ್ಯಾಂಕರ್ ಇಟ್ಟುಕೊಂಡು ತಮ್ಮ ತಮ್ಮ ಮನೆಯ ಕುಡಿಯುವ ನೀರಿನ ಪೂರೈಕೆ ಮಾಡಿಕೊಳ್ಳುತ್ತಾರೆ. ನಾವು ಬೆಳಿಗ್ಗೆ ಏಳುಗಂಟೆಯ ಒಳಗೇ ದೋಣಿಯೇರಿ ಎರಡುಗಂಟೆಗಳ ಕಾಲ ಈ ದಾರಿಯಲ್ಲಿ ಸುತ್ತಾಡಿದ್ದರಿಂದ ಎಲ್ಲ ಮನೆಗಳ ಬೆಳಗಿನ ಚಟುವಟಿಕೆಗಳನ್ನೂ ನೋಡುವ ಸುಯೋಗ. 'ದಾರಿ' ಎಂದಮೇಲೆ ಏನೇನಿರಬೇಕು ಎಲ್ಲವೂ ಅಲ್ಲಿದೆ. ನಮ್ಮ ರಸ್ತೆಗಳಲ್ಲಿ ಕೈಗಾಡಿಗಳಲ್ಲಿ ಮಾರುವ ತರಕಾರಿಗಳನ್ನು ಅಲ್ಲಿ ದೋಣಿಯಲ್ಲಿ ಮಾರುತ್ತಾರೆ. ನಮ್ಮ ಫುಟ್ಪಾತ್‌ಗಳ ಅಂಗಡಿಗಳಂತೇ ಅಲ್ಲಿ ತಮ್ಮ ಮನೆಯಮುಂದಿನ ಕಿರಿದಾದ ಸ್ಥಳದಲ್ಲೇ ಎಳನೀರು ಮಾರಾಟ ಮಾಡುತ್ತಾರೆ. ಇವರ ಗಿರಾಕಿಗಳೊ ದೋಣಿಯಲ್ಲಿ ಬರುವ ನಮ್ಮಂಥಾ ಪ್ರವಾಸಿಗರೇ.

ದಾರಿ ಎಂದರೆ ಅಲ್ಲಿ ಏನೇನಿರಬೇಕು? ಎನ್ನುವ ಪ್ರಶ್ನೆಗೆ ನಾವು ದೊಡ್ಡ ಪಟ್ಟಿಯನ್ನೇ ಕೊಡಬಹುದು. ಅಲ್ಲಿ ಅಂಗಡಿಯಿರಬೇಕು, ಸಾರ್ವಜನಿಕ ಸಾರಿಗೆ ಸೌಲಭ್ಯವಿರಬೇಕು, ಅಲ್ಲಲ್ಲಿ ಜಾಹೀರಾತುಗಳ ಫಲಕವಿರಬೇಕು, ಪುಟ್ಟ ಫುಟ್ಪಾತ್ ಇರಬೇಕು, ಸಾಧ್ಯವಾದರೆ ರಜಾದಿನಗಳಲ್ಲಿ ಮಕ್ಕಳು ರಸ್ತೆಯಲ್ಲೇ ಕ್ರಿಕೆಟ್ ಆಡಬೇಕು. ಹಾಂ ತಡೆಯಿರಿ.... ನೀವು ಊಹಿಸುವ ಮೊದಲ ಎಲ್ಲವೂ ಈ ನೀರುದಾರಿಯಲ್ಲಿದೆ, ಮಕ್ಕಳ ಕ್ರಿಕೆಟ್ ಒಂದನ್ನು ಹೊರೆತು ಪಡಿಸಿ! ಪಾಪ! ಈ ಮನೆಯ ಮಕ್ಕಳಿಗೆ ರಸ್ತೆಯಲ್ಲಿ ಕ್ರಿಕೆಟ್ ಆಡುವ ಸೌಭಾಗ್ಯವಿಲ್ಲ. ಅದಕ್ಕೇ ಅಲ್ಲಿನ ಮನೆಗಳ ಕಿಟಕಿಗಾಜುಗಳು ಸುಕ್ಷೇಮವಾಗಿವೆ ಎನ್ನಿ.

ಈ ನೀರುದಾರಿಯಲ್ಲಿ ನಾವು ಒಂದು ದೊಡ್ಡ ಶಾಲೆಯನ್ನೂ ನೋಡಿದೆವು. ಆ ಶಾಲೆಯದೇ ಆದ ದೊಡ್ಡ ದೋಣಿಯೊಂದು ಮಕ್ಕಳನ್ನು ಶಾಲೆಗೆ ಕರೆತರುತ್ತಿತ್ತು. ಅಲ್ಲೇ ದೊಡ್ಡದೊಂದು ಸರ್ಕಾರೀ ಆಸ್ಪತ್ರೆ. ಅದಕ್ಕೆ ಸಾರ್ವಜನಿಕ ಫೆರ್ರಿಯಲ್ಲಿ ಹೊರರೋಗಿಗಳು ಬರುತ್ತಿದ್ದರು. ಫೆರ್ರಿಸ್ಟಾಂಡ್‌ಗಳಲ್ಲಿ ಜನ ಫೆರ್ರಿಗಾಗಿ ಕಾಯುತ್ತಲೂ ಇದ್ದರು. ನೀರುರಸ್ತೆಗೂ ಟಾರುರಸ್ತೆಗೂ ಏನೇನೂ ವ್ಯತ್ಯಾಸವೇ ಇಲ್ಲದಂತೆ ಇಲ್ಲಿಯ ಬದುಕು ಮುನ್ನಡೆಯುತ್ತಿರುವುದನ್ನು ಕಂಡಾಗ ಮನುಷ್ಯನ ಸಾಮರ್ಥ್ಯಗಳ ಬಗ್ಗೆ ಯಾರಿಗಾದರೂ ಮೆಚ್ಚುಗೆಯಾಗದೇ ಇರದು.

ಕೇರಳದ ಜನರು ಯಾವತ್ತೂ ವಾಣಿಜ್ಯವ್ಯವಹಾರದಲ್ಲಿ ಮುಂದು. ಈ ನೀರುದಾರಿಗಳನ್ನೂ ಅವರು ಪ್ರವಾಸಿಗರಿಗಾಗಿ ತೆರೆದೇ ಇಟ್ಟಿದ್ದಾರೆ. ಅನೇಕರು ವಿಧವಿಧವಾದ ದೋಣಿಗಳನ್ನೂ ಸುಸಜ್ಜಿತ ಹೌಸ್‌ಬೋಟ್‌ಗಳನ್ನು ಇಟ್ಟುಕೊಂಡು ತಮ್ಮ ಉಪಜೀವನವನ್ನು ಸುಗಮವಾಗಿ ನಡೆಸುತ್ತಿದ್ದಾರೆ. ಇದರಿಂದ ರಾಜ್ಯಸರ್ಕಾರದ ಬೊಕ್ಕಸವೂ ಟ್ಯಾಕ್ಸ್ ರೂಪದಲ್ಲಿ ಸ್ವಲ್ಪಸಮೃದ್ಧಿಯಾಗೇ ತುಂಬಿಕೊಳ್ಳುತ್ತಿದೆ. ಪಾಶ್ಚಾತ್ಯ ಪ್ರವಾಸಿಗರು ಕೇರಳದಲ್ಲಿ ಅಧಿಕ. ಹೀಗಾಗಿ ಹವಾನಿಯಂತ್ರಿತ ಹೌಸ್‌ಬೋಟ್‌ಗಳಿಗೆ ಸದಾ ಬೇಡಿಕೆ. ದಿನವೊಂದಕ್ಕೆ ಇಪ್ಪತ್ತುಸಾವಿರ ರೂಪಾಯಿತೆತ್ತರೆ ಏಳುಗಂಟೆಗಳಕಾಲ ಈ ಹೌಸ್‌ಬೋಟ್‌ನಲ್ಲಿ ಕೇರಳದ ಸಾಂಪ್ರದಾಯಿಕ ಮಾಂಸಾಹಾರ ಮತ್ತು ಸಸ್ಯಾಹಾರದ ಊಟದ ಸಹಿತ ಸುತ್ತಾಟ ಲಭ್ಯ.

ಈ ಹೌಸ್‌ಬೋಟ್‌ನಲ್ಲಿ ಬೆಡ್‌ರೂಂ, ಬಾತ್‌ರೂಂ, ಟಿ.ವಿ.ಎಲ್ಲವೂ ಇವೆ. ಇದು ದುಬಾರಿಯೆನಿಸಿದರೆ ಸಣ್ಣಸಣ್ಣ ದೋಣಿಗಳು ಲಭ್ಯ. ಗಂಟೆಗೆ ಐದುನೂರು ರೂಪಾಯಿಗಳಂತೆ ಶುಲ್ಕ. ಆರಾಮವಾಗಿ ದೋಣಿಯಲ್ಲಿ ಕುಳಿತು, ಅಲ್ಲೇ ಸಿಗುವ ಎಳನೀರನ್ನು ಸವಿಯುತ್ತಾ, ಹತ್ತಾರು ದಾರಿಗಳಲ್ಲಿ ಸುತ್ತಾಡಬಹುದು. ಈ ನೀರುದಾರಿಗಳಲ್ಲಿ ಸುಮ್ಮನೇ ಸುತ್ತಾಡಿ ಏನು ಮಾಡಬೇಕು? ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೊಂದೇ ಉತ್ತರ.

ಧೂಳಿಲ್ಲದ, ಹಾರನ್‌ನ ಕರ್ಕಶ ಶಬ್ಧವಿಲ್ಲದ, ಏನೇನೂ ಕುಲುಷಿತ ವಾತಾವರಣವಿಲ್ಲದ, ಸುತ್ತಲೂ ಸಮೃದ್ಧಿಯಾದ ಹಸುರು ತುಂಬಿರುವ, ಸೂರ್ಯರಶ್ಮಿ ಹರಿಯುವ ನೀರಿನೊಂದಿಗೆ ಚಲ್ಲಾಟವಾಡುತ್ತಾ ಮುದಕೊಡುವ, ಈ ರಸ್ತೆಗಳಲ್ಲಿ ಸುತ್ತಾಡುವ ಸೊಬಗೇ ಬೇರೆ. ನಿಧಾನವಾಗಿ ಚಲಿಸುವ ಈ ವಾಹನದಲ್ಲಿ ಅದರ ಚಾಲಕ ಅದೆಷ್ಟು ಸುಕ್ಷೇಮವಾಗಿ ನಿಮ್ಮನ್ನು ಸುತ್ತಾಡಿಸುತ್ತಾನೆಂದರೆ, ಅಷ್ಟು ಆಳವಾದ ನೀರಿನಲ್ಲಿ ಮೈಲಿಗಟ್ಟಲೇ ಸುತ್ತಾಡಿದ ಆಯಾಸವೇ ಗೋಚರಿಸದು. ಇದೊಂದು ಅಪೂರ್ವ ಅನುಭವ. ನನ್ನ ಅನುಭವ ನಿಮ್ಮದೂ ಆಗಿಬರಲಿ.

ಅಲೆಪ್ಪಿ ನೀರ ಹಾದಿಯ ಮನಮೋಹಕ ಚಿತ್ರಗಳು
ಅಲೆಪ್ಪಿ ನಗರದ ಅಧಿಕೃತ ಮಾಹಿತಿಗೆ ವೆಬ್ ದಾರಿ
ಭಾಗಮಂಡಲದಲ್ಲಿ ಕಾವೇರಿ ತೀರ್ಥೋದ್ಭವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X