• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಲುರು ಬಂಡೆಯ ಮೇಲೆ ಪ್ರಕೃತಿಯ ಓಕುಳಿಯಾಟ

By * ಸೀತಾ ಕೇಶವ, ಸಿಡ್ನಿ ಆಸ್ಟ್ರೇಲಿಯಾ
|

ಆಸ್ಟ್ರೇಲಿಯಾದಲ್ಲಿ ನಾವು ಕಂಡಂತೆ ಹಲವಾರು ಜಗತ್‌ಪ್ರಸಿದ್ಧ ಹಾಗೂ ಪ್ರಕೃತಿ ಪ್ರೇರಿತ ಅಧ್ಬುತ ಪ್ರದೇಶಗಳಿದ್ದು ಅದರಲ್ಲಿ ಉಲುರು ಬಂಡೆ ಅತಿ ಮುಖ್ಯವಾದುದು.

ಉಲುರು ಎನ್ನುವುದು ಆಸ್ಟ್ರೇಲಿಯಾ ದೇಶದಲ್ಲಿ ಏರ್ಸ್‌ರಾಕ್ ಹೆಸರಿನಿಂದ ಕರೆಸಿಕೊಳ್ಳುವ ಏಕಶಿಲಾ (Monolith) ಬಂಡೆ. ಈ ಬಂಡೆಯು ಭೂಮಿಯೊಳಗೆ ಎರಡು ಕಿ.ಮೀ.ನಷ್ಟು ಆಳಕ್ಕೆ ಹೋಗಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ದಕ್ಷಿಣ ಆಸ್ಟ್ರೇಲಿಯಾದ ಮುಖ್ಯ ಮಂತ್ರಿಯಾಗಿದ್ದ ಸರ್ ಹೆನ್ರಿ ಏರ್ಸ್‌ನ ನೆನಪಿಗಾಗಿ "ಏರ್ಸ್‌ರಾಕ್" ಎಂದು ಕರೆಯುತ್ತಾರೆ. ಆಸ್ಟ್ರೇಲಿಯಾದ ನಾರ್ದರ್ನ್ ಟೆರಿಟರಿಗೆ ಸೇರಿದೆ ಈ ಉಲುರು ಆಲೀಸ್ ಸ್ಪ್ರಿಂಗ್‌ನಿಂದ ಸುಮಾರು 450 ಕಿ.ಮೀ. ದೂರದಲ್ಲಿದೆ. ಈ ಸ್ಥೆಳಕ್ಕೆ ಪ್ರಮುಖ ಸ್ಥಳಗಳಾದ, ಸಿಡ್ನಿ, ಮೆಲ್ಬೊರ್ನ್, ಬ್ರಿಸ್ಬೇನ್, ಪರ್ಥ್, ಅಡಿಲೇಡ್ ನಿಂದ ಬಸ್ಸು, ಕಾರು, ಮತ್ತು ವಿಮಾನದಲ್ಲಿ ಹೋಗಬಹುದು. ಪ್ರವಾಸಿಗಳಿಗೆ ಹೆಚ್ಚಿನ ಮುತುವರ್ಜಿಯಿಂದ ವಾಹನ ಸಂಚಾರ, ವಸತಿ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ.

ಆಸ್ಟ್ರೇಲಿಯಾದ ಆದಿನಿವಾಸಿಗಳಾದ ಅಬೊರಿಜಿನಲ್ಸ್ ಜನಾಂಗಕ್ಕೆ ಇದೊಂದು ಪುಣ್ಯಕ್ಷೇತ್ರವಿದ್ದಹಾಗೆ. ಅನಂಗು ಮಾತೃಭಾಷೆಯ ಈ ಜನಾಂಗದ ಯನ್‌ಕುನ್ಯಟ್ ಜಟ್‌ಜಾ ಮತ್ತು ಪಿಟ್‌ಜಂಟ್‌ಜಟ್‌ಜರ ಎರಡು ಪಂಗಡಗಳು ಉಲುರು ಬಂಡೆಯನ್ನು ಜೋಪಾನ ಮಾಡುತ್ತಿವೆ. ಇದು ಕಟಾಜೂಟ ನ್ಯಾಷನಲ್ ಪಾರ್ಕ್ನಲ್ಲಿದೆ. ಕಟಾಜೂಟವೆಂದರೆ ಅನೇಕ ತಲೆಗಳು ಎಂದರ್ಥ.

318 ಮೀಟರ್ ಎತ್ತರ, 9 ಕಿ.ಮೀ. ಸುತ್ತಳತೆಯ ಉಲುರು ಅಕ್ರೂಸ್ ಸ್ಯಾಂಡ್‌ಸ್ಟೋನ್‌ನಿಂದ ಮಾಡಲ್ಪಟ್ಟಿದೆ. ಓಕುಳಿಯ ನೀರು ಚೆಲ್ಲಿದಂತೆ ವಾತಾವರಣಕ್ಕೆ ಅನುಗಣವಾಗಿ ಬಂಡೆಯ ಬಣ್ಣವೂ ಬದಲಾಗುತ್ತಿರುತ್ತದೆ. ಬಣ್ಣ ಬದಲಾಗುವ ಈ ಅದ್ಭುತವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ವಿಶ್ವದೆಲ್ಲೆಡೆಯಿಂದ ಜನ ಬರುತ್ತಾರೆ. ವಿಶಾಲವಾದ ಮರುಭೂಮಿಯಲ್ಲಿ ಎದ್ದು ನಿಂತಿರುವ ಅಗಾಧವಾದ ಕಲ್ಲುಬಂಡೆ ಕೆಂಪು, ಹಳದಿ, ಕೇಸರಿ ಹಾಗೂ ಬೂದಿ ಬಣ್ಣಗಳಲ್ಲಿ ಬದಲಾಗುವ ಅದ್ಭುತವನ್ನು ಫೋಟೋ ಅಥವಾ ಪದಗಳಲ್ಲಿ ವರ್ಣಿಸಲು ಅಸಾಧ್ಯ, ಅದನ್ನು ನೋಡಿಯೇ ಸವಿಯಬೇಕು.

ಬೆಳಗಿನಜಾವ 5 ಗಂಟೆಗೆಲ್ಲಾ ಸೂರ್ಯನ ಪ್ರಥಮ ಕಿರಣಗಳು ಬೃಹತ್ ಬಂಡೆಯ ಮೇಲೆ ಬೀಳುತ್ತಿದ್ದಂತೆ, ಊಸರವಳ್ಳಿಯ ಕಸಿನ್‌ನಂತೆ ಉಲುರುವಿನ ಬಣ್ಣ ಬದಲಾಗುವುದು ಪ್ರಕೃತಿಯ ವೈಚಿತ್ರ್ಯವೇ ಸರಿ.

ಚಾರಣಿಗರಿಗೆ ಸವಾಲು : ಈ ಮೊದಲು ಕಡಿದಾದ ಬಂಡೆಯನ್ನು ಹತ್ತಲು ಅನುಮತಿ ಕೊಡುತ್ತಿರಲಿಲ್ಲ. ಆದರೆ ಇದೇ ಪ್ರವಾಸಿಗರ ಆಕರ್ಷಣೆಯಾಗಿರುವುದರಿಂದ ಇತ್ತೀಚೆಗೆ ಅನುಮತಿ ಕೊಟ್ಟಿದ್ದಾರೆ. ಸುಮಾರು ಬೆಳಿಗ್ಗೆ 6 ಗಂಟೆಗೆ ಉಲುರು ಹತ್ತಲು ಬಿಡುತ್ತಾರೆ. ಬಿಸಿಲು ಏರಿದಮೇಲೆ ಕಾದ ಬಂಡೆ ಹತ್ತುವುದು ಕಷ್ಟಸಾಧ್ಯ. ಸಾವಿರ ಅಡಿ ಎತ್ತರದ ಬಂಡೆಯ ಮೇಲೆ ಸುಮಾರು 1.5 ಕಿ.ಮೀ.ನಷ್ಟು ಹತ್ತುವುದು ಸಾಹಸಕಾರಿ ಅನುಭವ. ಹೃದಯ ಮತ್ತು ಶ್ವಾಸಕೋಶ ಖಾಯಿಲೆಯವರಿಗೆ ಚಾರಣ ಸೂಕ್ತವಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ. ಮೆಟ್ಟಲುಗಳೇ ಇಲ್ಲದ ಈ ಕಡಿದಾದ ಬಂಡೆಯನ್ನು ನೂರು ಅಡಿಗಳಷ್ಟು ಯಾವ ತರಹದ ಅನುಕೂಲವೂ ಇಲ್ಲದೆ ಹತ್ತಬಹುದು.

ಅರ್ಧ ಮಾರ್ಗದಿಂದ ಹಗ್ಗದ ಸಹಾಯ ಪಡೆದು ಒಬ್ಬರ ಹಿಂದೆ ಒಬ್ಬರಾಗಿ ಅತ್ಯಂತ ಜಾಗರೂಕತೆಯಿಂದ ಹತ್ತಬೇಕು. ಹೆಚ್ಚುಕಮ್ಮಿಯಾದರೆ ಎಣಿಸಲು ಮೂಳೆಗಳೂ ಸಿಗುವುದಿಲ್ಲ. ಹತ್ತುವುದು ಕಷ್ಟಕರವಾಗಿದ್ದರೂ ಕೆಲವು ಕಡೆ ಜಾರು ಬಂಡೆಯೆಂತೆ ಜಾರುವ ಸಾಹಸಕ್ಕೆ ಕೈಹಾಕಿ ಪ್ರಾಣವನ್ನು ಕಳೆದುಕೊಂಡಿರುವವರು ಹಾಗು ಹತ್ತಲಾಗದೆ ಏದುರಿಸುಬಿಡುತ್ತ ಅರ್ಧ ಮಾರ್ಗದಲ್ಲಿಯೇ ವಾಪಸ್ಸಾಗಿ ಬಿಡುವವರು ಎಷ್ಟೋ ಮಂದಿ.

ಚೀನಾ ಮತ್ತು ಜಪಾನ್ ದೇಶದ ಪ್ರವಾಸಿಗಳ ಉತ್ಸಾಹ, ಮುನ್ನುಗ್ಗುವಿಕೆ, ನಮಗೂ ಹೆಚ್ಚಿನ ಉತ್ತೇಜನ, ಪ್ರೋತ್ಸಾಹ ಕೊಟ್ಟು ಗುರಿ ಮುಟ್ಟುವಂತೆ ಮಾಡುತ್ತದೆ. ಅಲ್ಲಿಯ ಮನಮೋಹಕ ಪ್ರಕೃತಿ ಸೌಂದರ್ಯ ಆಯಾಸವನ್ನೆಲ್ಲ ಕರಗಿ ನೀರಾಗಿಸಿಬಿಡುತ್ತದೆ. ಬಂಡೆಯ ತುತ್ತತುದಿಗೆ ಹೋಗಿಬರಲು ಸುಮಾರು 2 ರಿಂದ 3 ಗಂಟೆಕಾಲ ಬೇಕಾಗುತ್ತದೆ.

ಬಂಡೆ ಹತ್ತುವ ಮೊದಲು 9 ಕಿ.ಮೀ ಕ್ರಮಿಸಬೇಕು. ಬಂಡೆಯ ಬಳಿಯಿರುವ ಗುಹೆಗಳನ್ನು ನೋಡುತ್ತ, ಚಿತ್ರವಿಚಿತ್ರವಾದ ಬಗೆಬಗೆಯ ಹೂವಿನ ಗಿಡಗಳನ್ನ ವೀಕ್ಷಿಸುತ್ತ, ಮ್ಯೂಸಿಯಮ್‌ನಲ್ಲಿ ಅಬೊರಿಜಿನಲ್ಸ್‌ರ ಕುಶಲ ಕಲೆ, ಚಿತ್ತಾರ, ಬೊಂಬಿನಲ್ಲಿ ಮಾಡಿದ ಅವರ ಸಂಗೀತ ವಾದ್ಯ ಡಿಜರಿಡುಗಳನ್ನು ನೋಡುತ್ತ ಸಾಗಿದರೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ.

ಇನ್ನೊಂದು ವಿಶೇಷವೆಂದರೆ, ಸೂರ್ಯಾಸ್ತದ ಸಮಯದಲ್ಲಿ ಉಲುರು ಕೆಮ್ಮಣ್ಣಿನ ಬಣ್ಣಕ್ಕೆ ತಿರುಗುವ ಮನಮೋಹಕ ದೃಶ್ಯವನ್ನು ಸವಿಯಬಹುದು.

"ಹುಟ್ಟಿದ್ ಮೇಲೆ ಒಮ್ಮೆ ನೋಡು ಜೋಗದ್ ಗುಂಡಿ ಎಂದು ಹೇಳುವಂತೆ, ಆಸ್ಟ್ರೇಲಿಯಾಕ್ಕೆ ಬಂದವರು ಒಮ್ಮೆ ನೋಡಿ ಈ ಉಲುರು ಬಂಡೆ" ಎಂದು ಹೇಳಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uluru rock changes its colors according to the change in the weather. It is one of the most attractive tourist spot in Australia. Climbing the rock is the real challenge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more