ಈ ವರ್ಷದ ಮುಂಗಾರು ಮಳೆಗೆ ಜೋಗ ಹೇಗಿದೆ?
ಹೋದ್ವರ್ಷದಷ್ಟು ನೀರು ಬೀಳಲು ಇನ್ನೂ ಶುರುವಾಗಿಲ್ಲ ಆದ್ರೆ ಅಷ್ಟು ನೀರು ಬರೋ ಹೊತ್ತಿಗೆ ಬಹಳ ರಷ್ ಆಗ್ಬಿಡುತ್ತೆ ಕಣ್ರೀ.... ಹಾಗಾಗಿ ಈಗ್ಲೆ ಸರಿಯಾದ ಸಮಯ ಜೋಗಕ್ಕೆ , ಜೋಗದ ಜಲಪಾತಕ್ಕೆ ಬರೋದಕ್ಕೆ ಕಣ್ರೀ....
ಸಾಯೋದ್ರೊಳೊಗೆ ಒಮ್ಮೆ ನೋಡಿ ಜೋಗಾದ್ ಗುಂಡಿ ಅನ್ನೋ ಹಾಡಿನಷ್ಟೆ ಚೆನ್ನಾಗಿದೆ ಇವತ್ತಿನ ಜೋಗ ಜಲಪಾತ. ಜೂನ್ ತಿಂಗಳಿನಿಂದ ಒಂದೇ ಸಮನೆ ಮಳೆಯ ಪರಿಣಾಮವಾಗಿ ರಾಜಾ ರಾಣಿ ರೋರರ್ ರಾಕೇಟ್ ಲೇಡಿ ರಭಸದಿಂದ ಜಿಂಗಾ ಜಿಕ್ಕಾ ಉಕ್ಕಿ ಹರಿಯುತ್ತಿದ್ದಾರೆ. ನೋಡ್‌ಬೇಕು ಆ ನೃತ್ಯನ ನೀವು.
ಅದೇನ್ರಿ ಆ ಸಿನಿಮಾ ಆಪಾಟಿ ಫೇಮಸ್ಸು. ಅಬ್ಬಬ್ಬ್ಬ..ಈ ವರ್ಷ ಮುಂಗಾರು ಮಳೆ ಸಿನಿಮಾದ ದೆಸೆಯಿಂದ ಪ್ರವಾಸಿಗರಿಗೆ ಅದೇ ಹಳೆಯ ಜಾಗಕ್ಕೆ ಹೊಸ ಹೊಸ ಹೆಸರನ್ನಿಟ್ಟು ಗೈಡ್ಗಳು ಪರಿಚಯಿಸುತ್ತಿದ್ದಾರೆ. ಮುಂಗಾರು ಮಳೆ ಸ್ಪಾಟ್ ನೋಡ್ತೀರಾ ಸಾರ್? ಎನ್ನುತ್ತಾ ಆಸೆ ಹುಟ್ಟಿಸಿ ನಮ್ಮದೇ ಕಾರಿನಲ್ಲಿ ಬ್ರಿಟೀಷ್ ಬಂಗ್ಲೆಗೆ ಕರೆದೊಯ್ಯುವ ಗೈಡ್‌ಗಳು ನಂತರ 150 ರೂಪಾಯಿ ಕೊಡಿ ಎಂದರೆ ಬೇಸರ ಮಾಡ್ಕೊಬೇಡಿ..
ಪಾಪ. ಅವಕ್ಕೆ ಇದೊಂದು ಮೂರ್ನಾಲ್ಕು ತಿಂಗಳು ಸಂಪಾದನೆ. ನಮ್ಮ ದೇಶದಲ್ಲಿ ಪ್ರವಾಸೋದ್ಯಮ ಯಾವತ್ತು ಅಭಿವೃದ್ಧಿ ಆಗತ್ತೋ ಮನಮೋಹನಸಿಂಗಾ. ಹೋಗ್ಲಿ ಬಿಡಿ. ಕ್ಯಾಮರಾ ಇಲ್ದೇ ಇದ್ರೆನೂ ಪರವಾಗಿಲ್ಲ. ಅಲ್ಲಿಯೇ ನಿಮ್ಮ ಮನೆ ಮಂದಿಯನ್ನೆಲ್ಲಾ ಸಾಲಾಗಿ ನಿಲ್ಲಿಸಿ ಹಲ್ಕಿರಿಯಿರಿ ಎನ್ನುವ ಫೋಟೊ ಗ್ರಾಫರ್ ತಕ್ಷಣ ಕ್ಲಿಕ್ಕಿಸಿ ಐದು ನಿಮಿಷದಲ್ಲಿ ತಂದುಕೊಡುತ್ತಾನೆ ನಿಮ್ಮ ಫೋಟೋನಾ. ನಿಮ್ಮದೇ ಫೋಟೋ ಕೇವಲ 50 ರೂಪಾಯಿ. ಅಲ್ಲೂ ಚೌಕಾಶಿ ಬೇಡ ಮತ್ತದೇ ಪಾಪ.........
ಫಾಲ್ಸ್ ನೋಡಲು ನಿಮ್ಮ ವಾಹನಕ್ಕೆ ಕೇವಲ 20 ರೂಪಾಯಿ. ಇಲ್ಲಂತೂ ಚೌಕಾಶಿನೇ ಇಲ್ಲ. 20 ರೂಪಾಯಿ ಕೊಟ್ಟರೆ ಗಂಟು ಮುಖದ ಸೆಕ್ಯುರೆಟಿ ಏನೋ ಮಹಾ ದೊಡ್ಡ ಉಪಕಾರ ಮಾಡಿದಂತೆ ಹಚಾ...ಹಚಾ... ಅನ್ನುತ್ತಾನೆ. ಹತ್ತೆಂಟು ಅಂಗಡಿ ಹೋಟೆಲ್ ಜಲಪಾತದ ಆವರಣದಲ್ಲಿ ಏನು ಬೇಕಾದರೂ ತಿನ್ನಬಹುದು. ಜೇಬು ಸ್ವಲ್ಪ ಗಟ್ಟಿಯಾಗಿರಬೇಕಷ್ಟೆ, ಡಾಕ್ಟರ್ ಜತೆಯಲ್ಲಿ ಇದ್ದರೆ ಒಳ್ಳೆಯದು.
ಅಲ್ಲಿಂದ ಒಳಗಡೆ ನಡೆದಾಡುವ ರಸ್ತೆ ಇಳಿಯುವ ಮೆಟ್ಟಿಲುಗಳಲ್ಲಿ ಸ್ಕೇಟಿಂಗ್ ಉಚಿತ. ಪಲ್ಟಿ ಹೊಡೆದರೆ ಬ್ಯಾಂಡೆಜ್ ಖಚಿತ. ಆದರೂ ಜೋಗ್ ಫಾಲ್ಸ್ ಚೆನ್ನಾಗಿದೆ ಎಂಬೋ ಕಾರಣ ಶರಾವತಿ ನಮ್ಮನ್ಯಾರನ್ನೂ ಕೇಳದೆ ತನ್ನಷ್ಟಕ್ಕೆ ಜುಳು ಜುಳು ಹರಿದು ಧುಮ್ಮಿಕ್ಕುತ್ತಿದ್ದಾಳೆ . ಅವಳಿಗೆ ಜೋಗದಿಂದ ಅರಬ್ಬೀ ಸಮುದ್ರ ಸೇರುವ ಅರ್ಜೆಂಟು. ಆಕೆಯ ಧಾವಂತದ ಕ್ಷಣಗಳನ್ನು ನಮ್ಮ ಕಣ್ಣುಗಳಲ್ಲಿ ಒಮ್ಮೆ ತುಂಬಿಕೊಳ್ಳಬೇಕು ಕಣ್ರೀ.... ಅದು ಖಂಡಿತಾ ಮರೆಯಲಾರದ ಕ್ಷಣ ಕಣ್ರೀ.....ಹಾಗಾಗಿ ಈ ವರ್ಷ ಖಂಡಿತಾ ನೀವು ಬರ್ಬೇಕು ಕಣ್ರೀ..... ಬರ್ತೀರಾ ತಾನೆ?
ಹಾ ಹೇಳಲು ಮರೆತೆ. ಹೋದ್ವರ್ಷದಷ್ಟು ನೀರು ಬೀಳಲು ಇನ್ನೂ ಶುರುವಾಗಿಲ್ಲ ಆದ್ರೆ ಅಷ್ಟು ನೀರು ಬರೋ ಹೊತ್ತಿಗೆ ಬಹಳ ರಷ್ ಆಗ್ಬಿಡುತ್ತೆ ಕಣ್ರೀ.... ಹಾಗಾಗಿ ಈಗ್ಲೆ ಸರಿಯಾದ ಸಮಯ ಜೋಗಕ್ಕೆ , ಜೋಗದ ಜಲಪಾತಕ್ಕೆ ಬರೋದಕ್ಕೆ ಕಣ್ರೀ.... ಅಲ್ಲಿ ಅಕಸ್ಮಾತ್ ವೆಹಿಕಲ್ ಊಟ ಯಾವ್ದೇ ತೊಂದ್ರೆ ಆದ್ರೂ ನಂಗೆ ಒಂದು ರಿಂಗ್ ಮಾಡಬಹುದು ಕಣ್ರೀ....ಕಾರಣ ನಾನು ಅದೇ ಊರಿನ ಹತ್ತಿರದವನು ಕಣ್ರೀ.....ನನ್ನ ನಂ +91-94489 76959.
ಆದ್ರೆ ಒಂದು ಕಂಡೀಷನ್. ದಟ್ಸ್ ಕನ್ನಡದಲ್ಲಿ ಜೋಗದ ಫೋಟೊ ನೋಡಿದೀನಿ ಅಂತ ಹೇಳಿದವರಿಗೆ ಮಾತ್ರ ಈ ಫೆಸಿಲಿಟಿ ಅಪ್ಲೈ ಆಗತ್ತೆ !












Click it and Unblock the Notifications