ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ತವರಲ್ಲಿ ಸೌಂದರ್ಯ ಶಿಕಾರಿ! ಪ್ರಯಾಣಕ್ಕೆ ಅಣಿಯಾಗಿ

By Staff
|
Google Oneindia Kannada News


ರಸ್ತೆಯಾಂದೇ ಮಾರ್ಗ : ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕುಗಳನ್ನು ಒಳಗೊಂಡ ಕೊಡಗು ರಾಜ್ಯದ ಚಿಕ್ಕ ಜಿಲ್ಲೆ. ರೈಲು ಮಾರ್ಗವಿಲ್ಲದ ರಾಜ್ಯದ ಏಕೈಕ ಜಿಲ್ಲೆಯೂ ಹೌದು. ಬೆಂಗಳೂರಿನಿಂದ ಕೊಡಗಿಗೆ 5 ಗಂಟೆಯ ಪ್ರಯಾಣ, 200 ಕಿಮೀ ದೂರ. ಮೈಸೂರಿನಿಂದ 120 ಕಿಮೀ. ಕೊಡಗು ಹತ್ತಿರವಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಸೊಂಪಾಗಿ ಬೆಳೆದು ನಿಂತಿರುವ ಬಿದಿರುಮೆಳೆ ಕಣ್ಣಿಗೆ ಹಬ್ಬ. ಶ್ರೀಗಂಧ ಮುಂತಾದ ಬಂಗಾರ ಮೌಲ್ಯದ ವೃಕ್ಷ ಸಂಪತ್ತಿನ ಕಾವಲಿಗೆ ನಿಂತಿರುವ ಕಾವಲು ಪಡೆಯನ್ನು ಹಾದುಕೊಂಡೇ ಮುಂದೆ ಸಾಗಬೇಕು.

ಧಾರ್ಮಿಕ ಮಹತ್ವದ ತಲ ಕಾವೇರಿ ಬಿಟ್ಟರೆ ಕೊಡಗಿನ ಆಕರ್ಷಣೆಯ ಕೇಂದ್ರಗಳಲ್ಲಿ - ರಾಜಾಸೀಟು, ಅಬ್ಬಿ ಜಲಪಾತ, ಓಂಕಾರೇಶ್ವರ ದೇಗುಲ, ನಾಗರಹೊಳೆ, ಇರ್ಪು ಜಲಪಾತ, ಹಾರಂಗಿ ಜಲಾಶಯ ಹಾಗೂ ನಿಸರ್ಗಧಾಮ ಪ್ರಮುಖವಾದವು.

ಮಡಿಕೇರಿ ಕೊಡಗಿನ ಕೇಂದ್ರವಾದರೆ, ರಾಜಾಸೀಟು ಮಡಿಕೇರಿಯ ಹೃದಯ. ಕೊಡಗಿನ ದೊರೆ ಸೂರ್ಯಾಸ್ತದ ಸಂಜೆಯ ಸೊಬಗನ್ನ ಕಣ್ತುಂಬಿಕೊಳ್ಳುತ್ತಿದ್ದುದು ರಾಜಾ ಸೀಟು ಪ್ರದೇಶದಿಂದಲೇ. ಮಡಿಕೇರಿಯ ಕೋಟೆ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳು. ಮಡಿಕೇರಿಯ ಹೊರ ವಲಯದಲ್ಲಿ ಅಬ್ಬೆ ಜಲಪಾತ ಮೊರೆಯುತ್ತದೆ. ಹಸಿರು ಸಿರಿಯಲಿ ಮೊರೆಯುವ ಅಬ್ಬೆಯ ತುಂತುರಿನಲ್ಲಿ ಹೊಂದುವ ರೋಮಾಂಚನ ಇಡೀ ಜೀವಮಾನ ನೆನಪಿಟ್ಟುಕೊಳ್ಳಲು ಸಾಕು.

ಮಡಿಕೇರಿಯಿಂದ 39 ಕಿಮೀ ದೂರದಲ್ಲಿ ತ್ರಿವೇಣಿ ಸಂಗಮದ ಭಾಗಮಂಡಲವಿದೆ. ಇಲ್ಲಿ ಕನ್ನಿಕೆ ಹಾಗೂ ಸುಜ್ಯೋತಿ ನದಿಗಳೊಂದಿಗೆ ಕಾವೇರಿ ಕೂಡುತ್ತಾಳೆ. ತ್ರಿವೇಣಿ ತಟದಲ್ಲಿ ಗಣಪತಿ, ವಿಷ್ಣು ಹಾಗೂ ಸುಬ್ರಹ್ಮಣ್ಯನ ಒಳಗೊಂಡ ಭಗಂಡೇಶ್ವರ ದೇವಾಲಯವಿದೆ.

ವಿರಾಜಪೇಟೆಯಿಂದ 48 ಕಿಮೀ ದೂರದಲ್ಲಿರುವ ಲಕ್ಷ್ಮಣತೀರ್ಥ ನದಿ ಕೊಡಗಿನ ಪೌರಾಣಿಕ ಸಮೃದ್ಧಿಗೆ ಕಾರಣವಾಗಿದೆ. ಈ ನದಿಯ ದಂಡೆಯಲ್ಲಿ ಶ್ರೀರಾಮ ಕಟ್ಟಿದನೆಂದು ಹೇಳುವ ಶಿವ ದೇಗುಲವಿದೆ.

ನಾಗರಹೊಳೆ, ಹಾರಂಗಿ ಜಲಾಶಯ ಹಾಗೂ ನಿಸರ್ಗಧಾಮವನ್ನು ನೋಡಲೇಬೇಕು. ಹಾರಂಗಿ ಜಿಲ್ಲೆಯ ಏಕೈಕ ಜಲಾಶಯ. ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯದಿಂದ 8 ಕಿಮೀ ದೂರದಲ್ಲಿ ರುವ ನಿಸರ್ಗಧಾಮ, ಬೇಸಗೆಯಲ್ಲಿ ಸಾವಿರಾರು ಪ್ರವಾಸಿಗರ ಸೆಳೆಯುತ್ತದೆ. ನಾಗರಹೊಳೆ ಅಭಯಾರಣ್ಯಕ್ಕೆ ವಿರಾಜಪೇಟೆಯಿಂದ 64 ಕಿಮೀ. ಕಾಡಿನ ನಡುವೆ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಆನೆಯನ್ನು ನೋಡಲು ನಾಗರಹೊಳೆಯೇ ಸೈ. ಅದೃಷ್ಟ ನಿಮ್ಮ ಕಡೆಯಿದ್ದಲ್ಲಿ ಇತರ ಕಾಡು ಮೃಗಗಳೂ ಸಫಾರಿಯಲ್ಲಿ ಕಣ್ಣಿಗೆ ಬಿದ್ದಾವು. ಪ್ರವಾಸಿಗರಿಗೆ ಉಳಿದುಕೊಳ್ಳಲು ನಾಗರಹೊಳೆಯಲ್ಲಿ ವ್ಯವಸ್ಥೆಯಿದೆ.

ಕೊಡವರು ಸಾರ್‌ ಕೊಡವರು... : ನಡೆ ನುಡಿ ಹವ್ಯಾಸ ಪ್ರತಿಯಾಂದರಲ್ಲೂ ಕೊಡವರು ಕೊಂಚ ವಿಭಿನ್ನರು. ಭಾರತೀಯ ಮಿಲಿಟರಿಯಲ್ಲಿ ಕೊಡವರಿಗೊಂದು ಹೆಮ್ಮೆಯ ಸ್ಥಾನವಿದೆ. ಭಾರತೀಯ ಸೇನೆಯಲ್ಲಿ ಇವತ್ತಿಗೂ ಕೊಡವರದು ಮೇಲುಗೈ. ಆತಿಥ್ಯದಲ್ಲೂ ಕೊಡವರು ಮೊದಲಿಗರೇ. ಕೊಡವರ ಮನೆಗೆ ಭೇಟಿ ಕೊಟ್ಟಿರಾದರೆ, ಕಪ್ಪು ಕಾಫಿ ತಕ್ಷಣವೇ ಎದುರುಗೊಳ್ಳುತ್ತದೆ. ನಿರಾಕರಿಸುವ ಪ್ರಮೇಯವೇ ಇಲ್ಲ. ನಿರಾಕರಣೆಯೆಂದರೆ ಕೊಡವರ ಪಾಲಿಗೆ ಅವಮಾನವೇ ಸರಿ.

ಮಳೆಮುಖ ಇನ್ನೂ ಕಂಡಿಲ್ಲ. ಬಿಸಿಲ ಧಗೆಯಲ್ಲಿ ಕೊಡಗು ತಂಪಾಗಿದೆ. ಕೊಡಗಿಗೆ ಹೋಗಲು ಇನ್ನೇನು ಕಾರಣ ಬೇಕು. ಅಂದಹಾಗೆ, ವಾಪಸ್ಸಾಗುವಾಗ ಕಾಫಿ, ಜೇನು, ಕಾಳು ಮೆಣಸು ಲಗೇಜಿನ ಜೊತೆಗಿರಲಿ. ಆ ಮೂಲಕ ಕೊಡಗಿನ ಘಮ ನಿಮ್ಮ ಮನೆಗೂ ಬರಲಿ.

ಮಡಿಕೇರಿಯಲ್ಲಿ ಹೊಟೆಲ್‌ ವಾಸ್ತವ್ಯ

ಹೆಚ್ಚಿನ ಮಾಹಿತಿ, ನೆರವು ಮತ್ತು ಮಾರ್ಗದರ್ಶನಕ್ಕೆ ಬರೆಯಿರಿ : [email protected]
ದೂರ-ವಾಣಿ : +91-80-65653333 / 25180888

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X