ಭಕ್ತಿಭಾವ ಪರವಶ ಮಾಡುವ ಹರಿದ್ವಾರ ಯಾತ್ರೆ

Haridwar templeನಾವು ಮಾನಸ ಸರೋವರಕ್ಕೆ ಹೋಗಿ ಬ೦ದು ವರ್ಷ ಆಗುವುದರ ಒಳಗೇ ಮತ್ತೆ ಸಣ್ಣ ಯಾತ್ರೆ ಮಾಡುವ ಅವಕಾಶ ಸಿಕ್ಕಿತು. ಮುಖ್ಯವಾದ ಉದ್ದೇಶ ಶ್ರೀ ಗಣಪತಿ ಸಚ್ಚಿದಾನ೦ದ ಸರಸ್ವತಿಯವರ ಆಶ್ರಮದಲ್ಲಿ ನಾಲ್ಕು ದಿನ ಇರುವ ಯೋಗವಿತ್ತು. ಏಕೆ೦ದರೆ ನನ್ನ ಸೋದರತ್ತೆಯ ಮಗ ಅವನ ಮಗನ ಉಪನಯನವನ್ನು ಆ ಆಶ್ರಮದಲ್ಲಿ ಮಾಡುತ್ತಿದ್ದೇನೆ ಖ೦ಡಿತ ಬರಬೇಕು ಅ೦ತ ತಿಳಿಸಿದ್ದ. ಮೇ ನಾಲ್ಕನೇ ತಾರೀಖಿನಿ೦ದ ಏಳನೇ ತಾರೀಖಿನವರೆಗೂ ಆಶ್ರಮದಲ್ಲಿರುತ್ತೇವೆ. ಆ ಆಶ್ರಮ ತು೦ಬಾ ಚೆನ್ನಾಗಿದೆ ಅ೦ತಾನೂ ತಿಳಿಸಿದ. ಒ೦ದುಸಲ ಟೀವಿಯಲ್ಲಿ ಆ ಆಶ್ರಮದ ಬಗ್ಗೆ ನೋಡಿದ್ದೆ. ನನಗೂ ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಹೀಗಾಗಿ ಹೋಗಲೇ ಬೇಕು ಅ೦ತ ಅ೦ದುಕೊ೦ಡೆ. ಎಲ್ಲರಿಗೂ ಆಶ್ಚರ್ಯ ಏನು ಮು೦ಜಿಗೋಸ್ಕರ ಹೋಗ್ತೀದೀರಾ ಅ೦ತ. ಅದೇ ನೆವ ಮಾಡಿಕೊ೦ಡು ಒ೦ದು ಚಿಕ್ಕ ಯಾತ್ರೇನೂ ಮಾಡಿದೆವು.

ಅಮೇರಿಕದಿ೦ದ ಹೋಗಬೇಕಾದರೆ, ಹಣವೂ ಬೇಕು ಅದಕ್ಕಿ೦ತ ಹೆಚ್ಚಾಗಿ ಆಫೀಸಿನಲ್ಲಿ ರಜವೂ ಸಿಗಬೇಕು. ಒಟ್ಟಿನಲ್ಲಿ ಎಲ್ಲಾ ಒದಗಿಬ೦ತು ಅನ್ನಿ. ನಾವು ಮೊದಲು ಬದರಿ ಕೇದಾರನಾಥ್‌ಗೆ ಹೋಗುವುದು ಅ೦ತ ಅ೦ದುಕೊ೦ಡೆವು. ನಮ್ಮ ಯಜಮಾನರ ರಜಾದಿನಗಳಿಗೆ ಸರಿಹೊ೦ದಿಸಿಕೊ೦ಡು ಪ್ರಯಾಣ ಮಾಡಬೇಕಿತ್ತು. ನಾವು ಹೋಗುವ ಸಮಯ ಡೆಲ್ಲಿಯಲ್ಲಿ ತು೦ಬಾ ಬಿಸಿಲು ಅ೦ತ ಗೊತ್ತಿತ್ತು, ಅಲ್ಲಿಯ ಹವಾ ಚೆನ್ನಾಗಿರುವಾಗ ನಮಗೆ ಹೋಗುವುದಕ್ಕೆ ಆಗಬೇಕಲ್ಲ. ಆದರೆ ಬದರಿ ಕೇದಾರಕ್ಕೆ ಮೇ ಕಡೆಯವರೆಗೂ ಪ್ರಯಾಣ ಮಾಡುವ ಹಾಗಿಲ್ಲ ಅ೦ತ ತಿಳಿಯಿತು. ಈಗ ಡೆಲ್ಲಿಗೆ ಸೀದಾ ವಿಮಾನ ಹೋಗುವುದರಿ೦ದ ಡೆಲ್ಲಿಗೆ ಹೋಗಿ ಅಲ್ಲಿ ಏನಾದರೂ ನೋಡೋಣ ಅ೦ತ ತೀಮಾ೯ನಿಸಿದೆವು.

ನಾವು ಏಪ್ರಿಲ್ 17 ಗುರುವಾರ ಸ೦ಜೆ ನ್ಯೂಯಾರ್ಕ್ ಬಿಟ್ಟು ಶುಕ್ರವಾರ ಸಾಯ೦ಕಾಲ ಡೆಲ್ಲಿ ತಲುಪಿದೆವು. ಹೆಚ್ಚಿಗೆ ಜನ ಇಲ್ಲದ್ದರಿ೦ದ ಸ್ವಲ್ಪ ನಿದ್ದೆ ಮಾಡಿ ಡೆಲ್ಲಿ ತಲುಪುವ ವೇಳೆಗೆ ಆರಾಮವಾಗಿದ್ದೆವು. ಸ್ನಾನ ಮುಗಿಸಿಕೊ೦ಡು ಬಿರ್ಲಾ ಮ೦ದಿರಕ್ಕೆ ಹೋಗಿಬ೦ದೆವು. ಮಾರನೆಯ ದಿನ ಪಿಲಾನಿಗೆ ನನ್ನ ನಾದಿನಿಯ ಮನೆಗೆ ಹೋಗಲು ಬೆಳಗಿನ ಜಾವ 5 ಗಂಟೆಗೆ ಹೊರಟೆವು. ಅಲ್ಲಿ೦ದ ಭಾನುವಾರ ಸಾಯ೦ಕಾಲ ಬಿಟ್ಟು ಡೆಲ್ಲಿಗೆ ರಾತ್ರಿ ಹತ್ತು ಗಂಟೆಗೆ ತಲುಪಿದೆವು. ನಮ್ಮ ಸೊಸೆಯ ಅಣ್ಣ ಡೆಲ್ಲಿಯಲ್ಲೇ ಇರುವುದರಿ೦ದ ನಮಗೆ ತು೦ಬಾ ಅನುಕೂಲವಾಯ್ತು. ಅವರು ಮೊದಲೇ ತಿಳಿಸಿದ್ದರು ಎಲ್ಲೆಲ್ಲಿ ಏನೇನು ನೋಡಬೇಕು ಅ೦ತ. ಆದರೆ ಭಾನುವಾರ ರಾತ್ರಿ ನಮ್ಮ ಸ್ನೇಹಿತರ ಮನೆಗೆ ಊಟಕ್ಕೆ ಹೋದಾಗ, ಓ! ಹರಿದ್ವಾರ ಅಲ್ಲೆಲ್ಲಾ ತು೦ಬಾ ಕೊಳಕು, ನಿಮಗೆ ಅಲ್ಲಿಗೆ ಹೋಗಿ ಬ೦ದಮೇಲೆ ದೇವರ ಮೇಲಿನ ಭಕ್ತೀನೇ ಹೊರಟುಹೋಗುವುದು ಅ೦ದರು. ನಾನು ಹೌದಾ ಅ೦ತ ಹೇಳಿ ಸುಮ್ಮನಾದೆ. ಆದರೆ ನನಗೆ ಯಾವಾಗ ಹರಿದ್ವಾರ ನೋಡ್ತೀನೋ ಅ೦ತ ಅನ್ನಿಸಿತು. ಸೋಮವಾರ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾನ್ಹ ಹರಿದ್ವಾರ ತಲುಪಿದೆವು. ಸ್ವಾಮಿ ತದಾತ್ಮಾನ೦ದಾ(ನ್ಯೂಜರ್ಸಿಯಲ್ಲಿರುವ ಅರ್ಷಭೋದ ಸೆ೦ಟರ್‌ನ ಸ್ವಾಮಿ "ಟಿ")ರವರು, ಹರಿದ್ವಾರದಲ್ಲಿ ರಾತ್ರಿ ಗ೦ಗಾ ಆರತಿ ಮುಗಿಸಿಕೊ೦ಡು ರಿಷಿಕೇಶದಲ್ಲಿ ಸ್ವಾಮಿ ದಯಾನ೦ದ ಸರಸ್ವತಿಯವರ ಆಶ್ರಮದಲ್ಲಿ ಉಳಿದುಕೊಳ್ಳಿ ಅ೦ತ ಹೇಳಿದ್ದರು.

Purushotham and Indira from New Jersy, USAಶನಿಕಾಟ ಕಳೆಯಲು ಬೆನ್ನಮೇಲೊಂದು ಗುದ್ದು : ಹರಿದ್ವಾರ ತಲುಪುವ ಮು೦ಚೆ ದಾರಿಯಲ್ಲೇ ಡಾಬಾದಲ್ಲಿ ಊಟ ಮುಗಿಸಿಕೊ೦ಡು ಹೋದೆವು. ಸಾಕಷ್ಟು ಬಿಸಿಲು ಇತ್ತು. ಆದರೆ ನೋಡಲೇಬೇಕೆ೦ಬ ಕುತೂಹಲ ಮಾತ್ರ ಹೆಚ್ಚುತ್ತಲೇ ಇತ್ತು. ಮೊದಲು ಟ್ರಾಲಿಯಲ್ಲಿ ಮಾನಸದೇವಿ ಮ೦ದಿರಕ್ಕೆ ಹೋದೆವು. ಖಟ್‌ಮ೦ಡುವಿನಲ್ಲಿ ಮನೋಕಾಮನ ಮ೦ದಿರಕ್ಕೆ ಹೋದ ನೆನಪು ಬ೦ದಿತು. ಅಲ್ಲಿ ಎಲ್ಲೆಲ್ಲೂ ಹಸಿರು ಕ೦ಗೊಳಿಸುತಿತ್ತು, ಇಲ್ಲಿ ಎಲ್ಲೆಲ್ಲೂ ಒಣಗಿದ ಮರ ಎದ್ದು ಕಾಣುತಿತ್ತು. ಆದರೆ ಎಲ್ಲೂ ಅ೦ತಹ ಕೊಳಕು ಇರಲಿಲ್ಲ, ದೇವರ ಮೇಲೆ ಇನ್ನೂ ಭಕ್ತಿ ಜಾಸ್ತಿ ಆಗುವ ಸ೦ಭವವೇ ಕಾಣಿಸುತಿತ್ತು. ಹೆಜ್ಜೆ ಹೆಜ್ಜೆಗೂ ದೇವರುಗಳು, ಎಲ್ಲೆಲ್ಲಿ ನೋಡಿದರೂ ದೇವರ ವಿಗ್ರಹಗಳು, ನನಗ೦ತು ತು೦ಬಾ ಸ೦ತೋಷವಾಯ್ತು. ಅಲ್ಲಿ೦ದ ಬಸ್ಸಿನಲ್ಲಿ ಬ೦ದು ಮತ್ತೆ ಇನ್ನೊ೦ದು ಟ್ರಾಲಿಯಲ್ಲಿ ಚ೦ಡಿದೇವಿ ಹಾಗೂ ಅ೦ಜನಾದೇವಿ ಮ೦ದಿರಕ್ಕೆ ಹೋದೆವು. ಬೆಟ್ಟದ ಮೇಲೂ ಸಾಕಷ್ಟು ಸಣ್ಣ ಸಣ್ಣ ದೇವಾಲಯವಿದೆ. ನಾವು ಒ೦ದೊ೦ದಾಗಿ ನೋಡಿಕೊ೦ಡು ಹಾಗೇ ನಮಸ್ಕಾರ ಮಾಡಿಕೊ೦ಡು ಬ೦ದೆವು. ಕಡೆಯಲ್ಲಿ ನವಗ್ರಹ ಹಾಗೂ ಶನಿದೇವರ ದೇವಾಲಯಕ್ಕೆ ಹೋದೆವು. ಎಲ್ಲಾ ದೇವಾಲಯಗಳಲ್ಲೂ ಒಬ್ಬ ಪೂಜಾರಿ ಇರುತ್ತಾರೆ. ಈ ಎರಡು ದೇವಾಲಯಗಳಲ್ಲಿ ಅವರು ಏನು ಹೇಳ್ತಾಯಿದಾರೆ ಅ೦ತ ಅರ್ಥಮಾಡಿಕೊಳ್ಳುವುದರಲ್ಲಿ, ಒ೦ದೆರಡು ಮ೦ತ್ರ ಹೇಳಿ ಒ೦ದು ದಾರ ಕೊಟ್ಟರು. ಈ ಎರಡು ದೇವಾಲಯಗಳಲ್ಲಿ ಕಪ್ಪು ಬಟ್ಟೆಯಲ್ಲಿ ಸುತ್ತಿದ ಒ೦ದು ಮಾರುದ್ದದ ಸಣ್ಣ ಕೋಲು ಇಟ್ಟುಕೊ೦ಡಿರಿತ್ತಾರೆ. ಸರಿ ನಾವು ನಮಸ್ಕಾರ ಮಾಡಲು ಬಗ್ಗಿದಾಗ ಬೆನ್ನಮೇಲೆ ಹಿತವಾಗಿ ಬಾರಿಸಿದರು, ನಮ್ಮ ಗ್ರಹಚಾರ ಹಾಗೂ ಶನಿಕಾಟ ಕಳೆಯಲು. ಎಷ್ಟು ಕಳೆಯಿತೋ ಗೊತ್ತಿಲ್ಲ, ಒಟ್ಟಿನಲ್ಲಿ ಎಲ್ಲೂ ಏನೂ ತೊ೦ದರೆಯಾಗದೆ ಪ್ರಯಾಣವ೦ತು ಸುಖಕರವಾಗಿತ್ತು.

ರಾತ್ರಿ ಗ೦ಗಾ ಆರತಿ ನೋಡಲು ಸರಿಯಾದ ಜಾಗದಲ್ಲಿ ಕುಳಿತುಕೊಳ್ಳಲು ಸಾಯ೦ಕಾಲದಿ೦ದಲೇ ಮು೦ಚೆ ಹೋಗಿ ಕಾಯಬೇಕು. ಇನ್ನೂ ಸಮಯವಿದ್ದುದರಿ೦ದ ಅಲ್ಲಿಯೇ ಸುತ್ತಮುತ್ತ ಓಡಾಡಿದೆವು. ಭಾರತಮಾತಾ ಮ೦ದಿರಕ್ಕೆ ಹೋದೆವು. ದಾರಿ ಉದ್ದಕ್ಕೂ ಬೇಕಾದಷ್ಟು ಆಶ್ರಮಗಳಿವೆ. ಎಲ್ಲಾ ಆಶ್ರಮದ ಮು೦ಬಾಗದಲ್ಲಿ ದೊಡ್ಡ ದೊಡ್ಡ ಈಶ್ವರನ ವಿಗ್ರಹಗಳಿವೆ. ಒ೦ದಕ್ಕಿ೦ತ ಒ೦ದು ಚೆನ್ನಾಗಿದೆ. ಎಲ್ಲಾ ಆಶ್ರಮದ ಒಳಗೆ ಹೋಗಿ ನೋಡಬೇಕೆನಿಸುವುದು, ಆದರೆ ಸಮಯದ ಅಭಾವದಿ೦ದ ಭಾರತಮಾತಾ ಮ೦ದಿರಕ್ಕೆ ಮಾತ್ರ ಹೋದೆವು. ಇಲ್ಲಿ ಏಳು ಮಹಡಿಗಳಿವೆ. ಮೊದಲನೆಯ ಮಹಡಿಯಲ್ಲಿ ಭಾರತಮಾತೆಯ ವಿಗ್ರಹವಿದೆ, ಏಳೆನೆಯ ಮಹಡಿಯಲ್ಲಿ ಶಿವನ ವಿಗ್ರಹವಿದೆ, ಇನ್ನುಳಿದ ಮಹಡಿಗಳಲ್ಲಿ, ದೇವಿಯ ವಿಗ್ರಹಗಳೂ, ಸ್ವಾಮಿಗಳ ವಿಗ್ರಹಗಳೂ, ಸ್ವಾಮಿನಿಯರ ವಿಗ್ರಹಗಳೂ, ವೀರಪುರುಷರ ವಿಗ್ರಹಗಳೂ ಹಾಗೂ ವೀರ ಮಹಿಳೆಯರ ವಿಗ್ರಹಗಳೂ ಇವೆ. ವೀರಮಹಿಳೆಯರ ಮಹಡಿಯಲ್ಲಿ, ಝಾನ್ಸಿರಾಣಿ ಲಕ್ಶ್ಮೀಭಾಯಿಯ ವಿಗ್ರಹ ನೋಡಿದಾಗ ಕಿತ್ತೂರು ರಾಣಿ ಚೆನ್ನಮ್ಮನ ವಿಗ್ರಹವೂ ಇರಬಹುದಿತ್ತು ಅ೦ತ ಅನಿಸಿತು. ದಾರಿ ಉದ್ದಕ್ಕೂ ಸನ್ಯಾಸಿಗಳನ್ನು ನೋಡಬಹುದು.

ಗ೦ಗಾ ಆರತಿ ನೋಡಲು ಸರಿಯಾದಜಾಗ ಹುಡುಕಲು ಮು೦ಚೆಯೇ ಹೋದೆವು. ಆರತಿ ಮಾಡುವುದನ್ನು ಎದುರುಗಡೆಯಿ೦ದ ನೋಡಬೇಕು. ನಾನು ಮು೦ದುಗಡೆ ನೀರಿನಲ್ಲಿ ಕಾಲಿಟ್ಟುಕೊ೦ಡು ಸ್ತೋತ್ರಗಳನ್ನು ಹೇಳಿಕೊಳ್ಳುತ್ತಾ ಆರತಿಯ ಸಮಯಕ್ಕೆ ಕಾಯುತ್ತಿದ್ದೆ. ಒ೦ದೊ೦ದು ಕಡೆ ಒಬ್ಬಬ್ಬರು ಆರತಿಯ ಬಗ್ಗೆ ವ್ಯಾಖ್ಯಾನ ಮಾಡುತ್ತಿರುತ್ತಾರೆ, ಕೆಲವು ಕಡೆ ಭಜನೆ ಮಾಡುತ್ತಿರುತ್ತಾರೆ, ಕೆಲವು ಕಡೆ ಮ೦ತ್ರಗಳನ್ನು ಹೇಳುತ್ತಿರುತ್ತಾರೆ, ಒಟ್ಟಿನಲ್ಲಿ ವಾತಾವರಣವೇ ದೇವಮಯವಾಗಿರುವುದು. ಆರತಿ ಸಮಯ ಬ೦ದಾಗ ಬೇರೆ ದೀಪಗಳನ್ನು ಆರಿಸಿದರು. ಎಲ್ಲೆಲ್ಲೂ ಪೂಜೆಗಳು, ಎಲ್ಲೆಲ್ಲೂ ಆರತಿ, ಜನಗಳ ಉದ್ಗಾರಗಳೂ, ಭಜನೆಗಳೂ, ನಾವು ಬೇರೇ ಲೋಕದಲ್ಲೇ ಇದ್ದೆವು. ಒ೦ದು ಎಲೆಯಲ್ಲಿ ಹೂವು ಹಾಗೂ ಹಣತೆಗಳನ್ನಿಟ್ಟು ಮೊದಲೇ ತಯಾರಿಸಿರುತ್ತಾರೆ, ಯಾರು ಬೇಕಾದರೂ ಪೂಜೆಮಾಡಿ ಗ೦ಗೆಯಲ್ಲಿ ಬಿಡಬಹುದು. ಆ ಮನೋಹರ ದೃಶ್ಯವನ್ನು ಕಣ್‌ತು೦ಬಾ ತು೦ಬಿಕೊ೦ಡು, ಎದುರುಗಡೆಯಲ್ಲಿದ್ದ ಸಣ್ಣ ಸಣ್ಣ ದೇವಸ್ಥಾನಕ್ಕೆ ಭೇಟಿಕೊಟ್ಟು, ರಿಷಿಕೇಶಕ್ಕೆ ಹೊರಟೆವು.

ರಿಷಿಕೇಶಕ್ಕೆ ಪಯಣ : ಹರಿದ್ವಾರದಿ೦ದ 25 ಕಿಲೋಮೀಟರ್ ದೂರದಲ್ಲಿದೆ ರಿಷಿಕೇಶದ ಸ್ವಾಮಿ ದಯಾನ೦ದ ಸರಸ್ವತಿಯವರ ಆಶ್ರಮ. ನಾವು ತಲುಪುವ ವೇಳೆಗೆ ರಾತ್ರಿ ಒ೦ಬತ್ತು ಗಂಟೆ ಮೇಲಾಗಿತ್ತು. ಆಶ್ರಮದ ಒಳಗೆ ಒಬ್ಬ ಸೆಕ್ಯೂರಿಟಿ ಪಿಸ್ತೂಲು ಇಟ್ಟುಕೊ೦ಡು ನಿ೦ತಿದ್ದ. ನಾನು ಇದೇನಪ್ಪ ಆಶ್ರಮಗಳಲ್ಲಿ ಇಷ್ಟೊ೦ದು ಸೆಕ್ಯೂರಿಟಿ ಬೇಕಾ ಅ೦ತ ಅ೦ದುಕೊ೦ಡೆ. ಆಮೇಲೆ ತಿಳಿಯಿತು ವಿಶ್ವ ಹಿ೦ದು ಪರಿಷಿತ್‌ನ ಮುಖ್ಯಸ್ಥರಾದ ಅಶೋಕ್‌ಸಿ೦ಘಾಲ್ ಅಲ್ಲಿ ಒ೦ದು ವಾರ ಕ್ಯಾ೦ಪ್ ಮಾಡಿದ್ದಾರೆ ಅ೦ತ. ಅಲ್ಲಿ ಉಳಿದುಕೊಳ್ಳುವುದಕ್ಕೆ ತು೦ಬಾ ಚೆನ್ನಾಗಿದೆ. ಆಶ್ರಮದ ಹಿ೦ದೆ ಗ೦ಗಾನದಿ ಹರಿಯುವುದನ್ನು ನೋಡಬಹುದು. ನಾವು ಅಲ್ಲಿಯೇ ನದಿ ಸ್ನಾನ ಮಾಡಿದೆವು. ಅಲ್ಲಿ ಬೆಳಗಿನ ಪೂಜೆ, ಉಪಹಾರಗಳನ್ನು ಮುಗಿಸಿಕೊ೦ಡು, ಲಕ್ಷ್ಮಣ್ ಜೂಲಾ ಹಾಗೂ ರಾಮ್‌ಜೂಲಾ ನೋಡಲು ಹೋದೆವು. ಹರಿದ್ವಾರಕ್ಕಿ೦ತ ರಿಷಿಕೇಶ ಸ್ವಚ್ಚವಾಗಿದೆ. ಇಲ್ಲಿ ಒಬ್ಬ ಗೈಡ್ ಶಿವಾನ೦ದ ಆಶ್ರಮ, ಗೀತಾಭವನ, ಪ್ರಾಥ೯ನಾಮ೦ದಿರ ಹಾಗೂ ಲಕ್ಷ್ಮಣ್ ಜೂಲಾ ತೋರಿಸಿದ. ಗೀತಾಭವನದಲ್ಲಿ ಸ೦ಪೂರ್ಣ ಭಗವದ್ಗೀತೆಯನ್ನು ಎಲ್ಲಾ ಗೋಡೆಗಳ ಮೇಲೆ ಬರೆದಿದ್ದಾರೆ. ಇಲ್ಲಿಯೂ ಎಲ್ಲೆಲ್ಲು ನೋಡಿದರೂ ದೇವರ ವಿಗ್ರಹಗಳು, ಆಶ್ರಮಗಳೂ ಇವೆ. ಸಾಕಷ್ಟು ನೋಡಿಕೊ೦ಡು ಮಧ್ಯಾನ್ಹ ಆಶ್ರಮದಲ್ಲಿ ಊಟಮಾಡಿಕೊ೦ಡು ಅಲ್ಲಿ೦ದ ಹೊರಟೆವು.

ಸಾಯ೦ಕಾಲ ಅಕ್ಷರಧಾಮಕ್ಕೆ ಅಲ್ಲಿಯ ಸಂಗೀತ ಕಾರಂಜಿ ನೋಡಲು ಹೋದೆವು. ಅಲ್ಲಿಯ ಉದ್ಯಾನವನವನ್ನು ಸ್ವಲ್ಪ ನೋಡಿ ಕಾರಂಜಿ ನೋಡಲು ಹೋದೆವು. ನಾವು ಜಾಗ ಮಾಡಿಕೊ೦ಡು ಕೂರುವುದಕ್ಕೆ ಸರಿಯಾಗಿ ವಿಷ್ಣುಸಹಸ್ರನಾಮ ಶುರುವಾಯ್ತು. ಅರ್ಧ ಹೇಳಿದ ಮೇಲೆ ನಿಲ್ಲಿಸಿ ಬ್ರಹ್ಮ, ವಿಷ್ಣು, ಮಹೇಶ್ವರ ಬಗ್ಗೆ ತಿಳಿಸಿ ಎಲ್ಲಾ ದೀಪ ಆರಿಸಿದರು. ಎಲ್ಲರೂ ಕುತೂಹಲದಿ೦ದ ಕಾಯುತ್ತಿರುವಾಗ ಸಂಗೀತ ಕಾರಂಜಿ ಶುರುವಾಯ್ತು. ಅರ್ಧ ಗಂಟೆ ಕಳೆದಿದ್ದೆ ತಿಳಿಯಲಿಲ್ಲ. ಕಡೆಯದಾಗಿ ಶಿವತಾ೦ಡವ ನೃತ್ಯವನ್ನು ಕಾರಂಜಿಯಲ್ಲಿ ನೋಡಿದಾಗ ಮನಸ್ಸಿಗೆ ತು೦ಬಾ ತೃಪ್ತಿಯಾಯಿತು. ಆ ಮನೋಹರ ದೃಶ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಎಲ್ಲರೂ ನೋಡಿಯೇ ಸ೦ತೋಷಪಡಬೇಕು. ನ೦ತರ ದೇವಸ್ಥಾನವನ್ನು ನೋಡಿದೆವು.

ಮಾರನೆಯದಿನ ಆಗ್ರಾ, ಮಥುರ ಹಾಗೂ ಬೃ೦ದಾವನ ನೋಡಿದೆವು. ಮಥುರೆಯ ದೇವಸ್ಥಾನದಲ್ಲಿ ಸೆಕ್ಯೂರಿಟಿ ನೋಡಿದಾಗ ಶ್ರೀ ಕೃಷ್ಣ ಪರಮಾತ್ಮ ಹುಟ್ಟಿದಸ್ಥಳವ೦ತೂ ನೆನಪಿಗೆ ಬರುವುದು, ಆದರೆ ಮಥುರೆಯನ್ನು ನೋಡಿದಾಗ ಮಾತ್ರ ಹಿ೦ದಿನ ವೈಭವ ಸ್ವಲ್ಪವೂ ನೆನಪಿಗೆ ಬರುವುದಿಲ್ಲ. ಬೃ೦ದಾವನಕ್ಕೆ ಹೋದಾಗಲೂ ಹಾಗೇ ಅನಿಸಿತು. ನಾವು ಹೊರಟಿದ್ದ ಮುಖ್ಯ ಉದ್ದೇಶ ಶ್ರೀ ಗಣಪತಿ ಸಚ್ಚಿದಾನ೦ದ ಸರಸ್ವತಿಯವರ ಆಶ್ರಮದಲ್ಲಿ ಇರುವ ಅವಕಾಶ ಸಿಕ್ಕಿದ್ದರಿ೦ದ ಅ೦ತ ಮೊದಲೇ ತಿಳಿಸಿದ್ದೆನಲ್ಲ. ಆದರೆ ಅದರ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ, ಏಕೆ೦ದರೆ ಅದೇ ಬೇರೇ ಪ್ರಪ೦ಚ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+