ಮುಗಿಲುಪೇಟೆ ಎಂಬ ಕೊಡಗಿನ ಸ್ವರ್ಗ

ಸೌಂದರ್ಯದ ನೆಲೆವೀಡು: ಕೊಡಗಿಗೆ ಆಗಮಿಸಿ ಇಲ್ಲಿ "ಮುಗಿಲುಪೇಟೆ" ಎಲ್ಲಿ ಬರುತ್ತೆ ಸ್ವಾಮಿ ಅಂತ ಯಾರನ್ನಾದರೂ ಕೇಳಿಬಿಟ್ಟೀರಾ? ಜೋಕೆ. ಏಕೆಂದರೆ ಅದು ಸಿನಿಮಾದಲ್ಲಿಟ್ಟ ಹೆಸರಷ್ಟೆ. ಕೊಡಗಿನವರು ಈ ಸುಂದರ ನಿಸರ್ಗ ತಾಣವನ್ನು "ಮಾಂದಲಪಟ್ಟಿ" ಎನ್ನುತ್ತಾರೆ. ಇಲ್ಲಿನವರಿಗೆ ಅದರಲ್ಲೇನು ವಿಶೇಷ ಕಾಣಿಸುವುದಿಲ್ಲ. ಎಲ್ಲಾ ಬೆಟ್ಟಗಳಂತೆ ಅದು ಕೂಡಾ. ಆದರೆ ಸದಾ ಪಟ್ಟಣದ ಜಂಜಾಟದಲ್ಲಿ ತೊಳಲಾಡುವವರು ಇಲ್ಲಿಗೆ ಬಂದರೆ ಇಲ್ಲಿನ ನಿಸರ್ಗ ಸಿರಿ ಎಲ್ಲಾ ಒತ್ತಡಗಳನ್ನು ಮರೆಸಿ ಮಾನಸಿಕ ನೆಮ್ಮದಿ ನೀಡುವುದಂತು ಖಂಡಿತಾ.
ನಿಸರ್ಗ ಸೌಂದರ್ಯದ ನೆಲೆವೀಡಾದ "ಮಾಂದಲಪಟ್ಟಿ" ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಅರಣ್ಯ ಇಲಾಖೆಯ ಅಧೀನದಲ್ಲಿರುವುದರಿಂದ ತೆರಳುವವರು ಅನುಮತಿ ಪಡೆಯುವುದು ಅಗತ್ಯ. ಅಲ್ಲಿಗೆ ತೆರಳಬೇಕಾದರೆ ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಹಾಗೂ ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ರಸ್ತೆಯಲ್ಲಿ ಸಾಗಿದರೆ ಎಂಟು ಕಿ.ಮೀ. ದೂರದಲ್ಲಿ ಮಕ್ಕಂದೂರು ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಎಡಕ್ಕಿರುವ ರಸ್ತೆಯಲ್ಲಿ ಸಾಗಿದರೆ ಮಾಂದಲಪಟ್ಟಿ ತಲುಪಬಹುದು.
ಇನ್ನು ಒಂದು ವೇಳೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದವರು ಅಲ್ಲಿಂದ ಅರಣ್ಯದ ಮೂಲಕ ನಡೆದುಕೊಂಡು ಹೋಗಬಹುದು.ರಸ್ತೆಯಲ್ಲಿ ಸಾಗೋದೇ ಥ್ರಿಲ್; ಮಡಿಕೇರಿಯಿಂದ ಅಬ್ಬಿಪಾಲ್ಸ್‌ನ ಕಡಿದಾದ ರಸ್ತೆಯಲ್ಲಿ ಸಾಗುವುದೇ ಒಂದು ರೀತಿಯ ಥ್ರಿಲ್. ಇನ್ನು ಸುತ್ತ ಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು... ತೊರೆ ಝರಿಗಳು... ಒಂದನ್ನೊಂದು ಮುತ್ತಿಕ್ಕುತ್ತಾ ಸಾಲಾಗಿ ನಿಂತ ಪಶ್ಚಿಮಘಟ್ಟ ಶ್ರೇಣಿಗಳು... ಅವುಗಳ ನಡುವಿನ ಕಂದಕದಲ್ಲಿ ಬೆಳೆದು ನಿಂತ ಗಿಡಮರಗಳು... ನೋಡುತ್ತಾ ಹೋದಂತೆ ಪ್ರಕೃತಿಯ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿರುತ್ತದೆ.
ಮೊದಲೆಲ್ಲಾ ಮಾಂದಲಪಟ್ಟಿಗೆ ದನಗಳನ್ನು ಮೇಯಿಸಲು ಅಥವಾ ಶಿಕಾರಿಗೆ ಗ್ರಾಮಸ್ಥರು ಹೋಗುತ್ತಿದ್ದರು. ಅಲ್ಲಿಗೆ ಯಾವುದೇ ರಸ್ತೆಗಳಿರಲಿಲ್ಲ. ಸಾಹಸಿಗಳು ಮಾತ್ರ ಗುಡ್ಡವನ್ನೇರುತ್ತಾ ಬೆಟ್ಟದ ತುತ್ತ ತುದಿಯೇರಿ ಅಲ್ಲಿಂದ ಕಾಣಸಿಗುವ ಸೌಂದರ್ಯವನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮಾಂದಲಪಟ್ಟಿ ಕೂಡ ಜಿಲ್ಲೆಯಲ್ಲಿರುವ ಇತರೆ ಪ್ರವಾಸಿ ತಾಣಗಳಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಒಂದಷ್ಟು ದೂರ ಅಂದರೆ ಅರಣ್ಯ ಇಲಾಖೆ ವಸತಿ ಗೃಹದ ತನಕ ಡಾಂಬರು ರಸ್ತೆ ಮಾಡಲಾಗಿದೆ. ಆ ನಂತರ ಮಣ್ಣು ರಸ್ತೆಯಲ್ಲಿ ಸಾಗುವುದು ಅನಿವಾರ್ಯ.
ಸದಾ ನೀರವಮೌನ: ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರದಲ್ಲಿರುವ ಮಾಂದಲಪಟ್ಟಿಗೆ ಆಗೊಮ್ಮೆ ಈಗೊಮ್ಮೆ ಪ್ರವಾಸಿಗರು ಬರುತ್ತಾರೆಯಾದರೂ ವರ್ಷದ ಹೆಚ್ಚಿನ ದಿನಗಳು ಅಲ್ಲಿ ನೀರವ ಮೌನ ನೆಲೆಸಿರುತ್ತದೆ. ಕೊಡವ ಭಾಷೆಯಲ್ಲಿ "ಮಾಂದಲ್ ಪಟ್ಟ" ಎಂದರೆ ಎತ್ತರದ ಜಾಗ ಎಂದರ್ಥ. ಬಹುಶ: ಆಡು ಭಾಷೆಯಲ್ಲಿ ಅದು ಮಾಂದಲಪಟ್ಟಿ ಆಗಿರಬಹುದೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಮಾಂದಲಪಟ್ಟಿ ಪ್ರವಾಸಿಗರಿಗೆ ಸ್ವರ್ಗ ತಾಣ ಎಂದರೆ ತಪ್ಪಾಗಲಾರದು. ಏಕೆಂದರೆ ಏರು ರಸ್ತೆಯಲ್ಲಿ ಹರಸಾಹಸ ಮಾಡಿ ಬೆಟ್ಟವೇರಬೇಕು. ಇಲ್ಲಿ ಫೋರ್‌ವೀಲರ್‌ಗಳು ಮಾತ್ರ ಸಲೀಸಾಗಿ ಮುಂದೆ ಸಾಗುತ್ತವೆ. ಉಳಿದಂತೆ ಕಾರುಗಳು ಇಲ್ಲಿನ ಮಣ್ಣು ರಸ್ತೆಯಲ್ಲಿ ಸಾಗುವುದು ಅಷ್ಟರಲ್ಲಿಯೇ ಇದೆ. ಸ್ಥಳೀಯರು ಈ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಜೀಪು ಚಾಲಿಸಿ ಒಂದು ರೀತಿಯ ಮಜಾ ಪಡೆಯುತ್ತಾರೆ. ಹೆಚ್ಚಿನವರು "ನಡೆದು ನೋಡು ಕೊಡಗಿನ ಬೆಡಗಾ" ಎಂಬ ಕವಿ ವಾಣಿಯಂತೆ ನಡೆದೇ ಬೆಟ್ಟದ ಮೇಲೆ ಸಾಗುತ್ತಾರೆ.
ಕಲ್ಲು, ಮುಳ್ಳನ್ನು ಮೆಟ್ಟುತ್ತಾ ಏರು ರಸ್ತೆಯಲ್ಲಿ ಸಾಗುವಾಗ ಆಯಾಸವಾಗುವುದು ಸಹಜ ಆದರೆ ಬೆಟ್ಟದ ತುತ್ತ ತುದಿ (ವ್ಯೂಪಾಯಿಂಟ್) ತಲುಪಿದಾಗ ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುವ ಮುಗಿಲು... ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು... ಅಲೆಅಲೆಯಾಗಿ ತೇಲಿ ಬರುವ ಮಂಜು... ಸುಂದರ ನಿಸರ್ಗ ಸೌಂದರ್ಯ ನಿಮ್ಮ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತದೆ. ನಡುಬೇಸಿಗೆಯಲ್ಲೂ ತಂಪು ಹವೆ... ಮುಂಜಾನೆ ಇಬ್ಬನಿಯ ಸಿಂಚನ... ಸಂಜೆ ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ದೃಶ್ಯ ಮನಮೋಹಕ ಅದು ವರ್ಣಿಸಲಸಾಧ್ಯ.
ಗ್ರಾಮಸ್ಥರಿಗೆ ಕ್ರೀಡಾತಾಣ: ಮಾಂದಲಪಟ್ಟಿ ಪ್ರವಾಸಿಗರಿಗೆ ಸ್ವರ್ಗ ತಾಣವಾದರೆ, ಸುತ್ತಲಿನ ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಮಕ್ಕಂದೂರು, ದೇವಸ್ತೂರು, ಮುತ್ತ್‌ನಾಡು, ಹಚ್ಚಿನಾಡು ಗ್ರಾಮಗಳ ಯುವಕರಿಗೆ ವರ್ಷಕ್ಕೊಮ್ಮೆ ತಮ್ಮ ಕ್ರೀಡಾ ಸಾಹಸ ಮೆರೆಯಲು ಮೈದಾನವೂ ಹೌದು. ಇದು ಅಚ್ಚರಿ ಮೂಡಿಸಿದರೂ ಸತ್ಯ.
ಕಾಳಚಂಡ ರವಿತಮ್ಮಯ್ಯರವರ ನೇತೃತ್ವದ ಕೊಡಗು ಪಶ್ಚಿಮ ಘಟ್ಟ ಮೂಲನಿವಾಸಿಗಳ ವಿಮೋಚನಾ ಸಂಘದ ಮೂಲಕ ಕಳೆದ ಹದಿನೈದು ವರ್ಷಗಳಿಂದ ಸಹಸ್ರಾರು ರೂಪಾಯಿ ಖರ್ಚು ಮಾಡಿ ಕ್ರೀಡಾಕೂಟ ನಡೆಸಿಕೊಂಡು ಬರಲಾಗುತ್ತಿದೆ.
ಈ ಕ್ರೀಡಾಕೂಟಕ್ಕೆ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಯುವತಿಯರು, ಹಿರಿಯರು, ಕಿರಿಯರು ಎಲ್ಲರೂ ಬೆಟ್ಟವೇರಿ ಮಾಂದಲಪಟ್ಟಿಯಲ್ಲಿ ಸೇರುತ್ತಾರೆ. ಕ್ರೀಡಾಕೂಟದ ದಿನದಂದು ಬೆಳಿಗ್ಗೆಯೇ ಜನರು ಬೆಟ್ಟವನ್ನೇರ ತೊಡಗುತ್ತಾರೆ. ೧೦ಗಂಟೆಗೆಲ್ಲಾ ಕ್ರೀಡಾಕೂಟ ಆರಂಭವಾಗುತ್ತದೆ. ಬೀಸುವ ಕುಳಿರ್‌ಗಾಳಿಗೆ ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಸುಲಭದ ಕೆಲಸವಲ್ಲ. ಆದರೂ ಹರಸಾಹಸ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ವಿಶಿಷ್ಟ ಕ್ರೀಡೆಗಳು: ಇಲ್ಲಿ ವಿವಿಧ ಬಗೆಯ ಕ್ರೀಡಾಕೂಟಗಳು ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯುತ್ತದೆ. ಮಕ್ಕಳ ಶಕ್ತಿ, ಛಲ, ಜಾಣ್ಮೆ ಪರೀಕ್ಷಿಸಲು ಅಂಬುಕಾಯಿ (ತೆಂಗಿನಕಾಯಿ ಕೀಳುವ) ಸ್ಪರ್ಧೆ ನಡೆಯುತ್ತದೆ. ಇದು ವಿಶಿಷ್ಟ ಕ್ರೀಡೆ. ಹತ್ತಾರು ಮಕ್ಕಳನ್ನು ಸುತ್ತ ನಿಲ್ಲಿಸಿ ಅವರ ಮಧ್ಯೆ ತೆಂಗಿನಕಾಯಿ ಎಸೆಯಲಾಗುತ್ತದೆ. ಈ ತೆಂಗಿನಕಾಯಿಯನ್ನು ಎಲ್ಲರಿಂದ ತಪ್ಪಿಸಿ ಯಾರು ತಮ್ಮ ವಶ ಮಾಡಿಕೊಂಡು ಅದನ್ನು ಮೇಲಕ್ಕೆ ಎತ್ತಿ ತೋರಿಸುತ್ತಾರೆಯೋ ಅವರೇ ವಿನ್ನರ್...
ಆದರೆ ಅದು ಸುಲಭವಲ್ಲ ತೆಂಗಿನಕಾಯಿಗಾಗಿ ಬಹಳ ಸಮಯದವರೆಗೆ ಕಿತ್ತಾಟ, ಪರದಾಟ ನಡೆಯುತ್ತದೆ. ಕಾಯಿ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಸಾಗುತ್ತಲೇ ಇರುತ್ತದೆ. ನೆಲಕ್ಕೆ ಬಿದ್ದು ಎದ್ದು ಕೊನೆಗೆ ಯಾರ ಕೈಗೆ ಕಾಯಿ ಸಿಕ್ಕುತ್ತದೆಯೋ ಅವರು ಅದನ್ನು ಮೇಲಕ್ಕೆ ಎತ್ತಿ ಪ್ರದರ್ಶಿಸುತ್ತಾರೆ. ಆಗ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇನ್ನು ಗುಡ್ಡಗಾಡು ಓಟ ಸ್ಪರ್ಧೆ ಇದರಲ್ಲಿ ಹಳ್ಳಿ ಹೈದರು ಪಟ್ಟಣದವರಂತೆ ಕಾಲಿಗೆ ಯಾವುದೇ ಶೂ ಹಾಕದೆ ಹತ್ತಾರು ಕಿ.ಮೀ. ದೂರವನ್ನು ಓಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಮಹಿಳೆಯರು, ಮಕ್ಕಳು, ಪುರುಷರಿಗೆ ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯುತ್ತದೆ.
ಗ್ರಾಮಸ್ಥರ ಸಹಭೋಜನ: ಓಟದ ಸ್ಪರ್ಧೆಯೆಲ್ಲಾ ಮುಗಿಯುವ ವೇಳೆಗೆ ಸೂರ್ಯ ನೆತ್ತಿಯ ಮೇಲೆ ಬರುತ್ತಾನೆ. ಅಷ್ಟರಲ್ಲೇ ಹೊಟ್ಟೆಯೂ ಚುರುಗುಟ್ಟ ತೊಡಗುತ್ತದೆ. ಆಗ ಭೋಜನ ಸಮಯ. ಸದಾ ತಮ್ಮ ತಮ್ಮ ತೋಟದ ಕೆಲಸಗಳಲ್ಲಿ ನಿರತರಾದವರು ಅಂದು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಕ್ರೀಡಾಕೂಟಕ್ಕೆ ಬಂದಿರುತ್ತಾರೆ. ಬರುವಾಗ ಮಧ್ಯಾಹ್ನಕ್ಕೆ ತಮ್ಮ ಮನೆಯಿಂದಲೇ ಏನಾದರೊಂದು ಸ್ಪೆಷಲ್ ತಿನಿಸುಗಳನ್ನು ಮಾಡಿ ತಂದಿರುತ್ತಾರೆ.
ಅದನ್ನು ಒಬ್ಬರನ್ನೊಬ್ಬರು ಹಂಚಿ ತಿನ್ನುತ್ತಾ ಉಭಯಕುಶಲೋಪರಿ ವಿಚಾರಿಸುತ್ತಾರೆ. ಊಟದ ಬಳಿಕ ಮಹಿಳೆಯರು ಹಾಗೂ ಪುರುಷರಿಗೆ ಹಗ್ಗಜಗ್ಗಾಟದ ಸ್ಪರ್ಧೆ ನಡೆಯುತ್ತದೆ. ಬಲಿಷ್ಠ ತಂಡಗಳು ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ. ಈ ಸಂದರ್ಭ ತಮ್ಮ ಗ್ರಾಮಗಳ ತಂಡವನ್ನು ಬಲಿರಾ... ಎಳಿರಾ... ಬುಡತೆರಾ... ಎಂದು ನೆರೆದವರು ಪ್ರೋತ್ಸಾಹಿಸುವುದು ಮುಗಿಲು ಮುಟ್ಟುತ್ತದೆ.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ: ಆ ನಂತರ ಕೊಡಗಿನ ಶೌರ್ಯದ ಪ್ರತೀಕವಾದ ಕೋವಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯುತ್ತದೆ. ಸಾಮಾನ್ಯವಾಗಿ ಶಿಕಾರಿಯಲ್ಲಿ ಆಸಕ್ತಿಯಿರುವವರೇ ಈ ಸ್ಪರ್ಧೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ದೂರದಲ್ಲಿ ಮರಕ್ಕೆ ತೆಂಗಿನಕಾಯಿ ಕಟ್ಟಲಾಗುತ್ತದೆ. ಬಳಿಕ ಗುಂಡುಹೊಡೆಯುವ ಸ್ಪರ್ಧೆ ಆರಂಭವಾಗುತ್ತದೆ. ಇಲ್ಲಿ ಗುರಿತಪ್ಪಿದರೆ ಗುಂಡು ನಷ್ಟವಾಗುತ್ತದೆ. ಆದರೂ ತಲೆಕೆಡಿಸಿಕೊಳ್ಳದೆ ಗುರಿಯಿಟ್ಟು ಗುಂಡುಹೊಡೆಯುತ್ತಾರೆ. ಯಾರು ಗುರಿಯಿಟ್ಟು ಗುಂಡು ಹೊಡೆದು ತೆಂಗಿನಕಾಯಿಯನ್ನು ಕೆಳಕ್ಕೆ ಬೀಳಿಸುತ್ತಾರೆಯೋ ಅವರನ್ನು "ಗುರಿಕಾರ" ಎಂದು ಗೌರವಿಸಲಾಗುತ್ತದೆ.
ಈ ಸ್ಪರ್ಧೆಯಲ್ಲಿ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಪಾಲ್ಗೊಂಡು ತಾವೇನು ಪುರುಷರಿಗಿಂತ ಕಡಿಮೆಯಿಲ್ಲ ಎಂಬುವುದನ್ನು ಸಾಬೀತುಪಡಿಸುತ್ತಾರೆ. ಇದೇ ಸಂದರ್ಭ ಬೆಟ್ಟದ ಮೇಲೆ ಬೈಕ್ ಓಡಿಸುವ, ಜೀಪು ಹತ್ತಿಸುವ ಸಾಹಸವೂ ನಡೆಯುತ್ತದೆ. ಇದು ನೋಡುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಇಷ್ಟೆಲ್ಲಾ ಸ್ಪರ್ಧೆಗಳು ಮುಗಿಯುತ್ತಿದ್ದಂತೆಯೇ ಸಂಜೆಯಾಗುತ್ತದೆ. ನಂತರ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಗುತ್ತದೆ.
ಸಾಮೂಹಿಕ ಕುಣಿತ: ಬಳಿಕ ನೆರೆದವರೆಲ್ಲಾ ಮಕ್ಕಳು, ಮಹಿಳೆಯರು, ಪರುಷರೆನ್ನದೆ ಎಲ್ಲರೂ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕುತ್ತಾ ಕುಣಿಯುತ್ತಾರೆ. ಅಷ್ಟರಲ್ಲೇ ಸೂರ್ಯ ಬೆಟ್ಟಗಳ ನಡುವೆ ಮರೆಯಾಗುತ್ತಾನೆ. ಕತ್ತಲು ಆವರಿಸುತ್ತಿದ್ದಂತೆಯೇ ಕ್ರೀಡಾಕೂಟಕ್ಕೆ ವಿದಾಯ ಹೇಳಿ ಎಲ್ಲರೂ ತಮ್ಮ ಮನೆಗಳತ್ತ ಬೆಳದಿಂಗಳಿನಲ್ಲಿಯೇ ಹೆಜ್ಜೆಹಾಕುತ್ತಾ ಹೋಗುತ್ತಾರೆ.
ಮಾಂದಲಪಟ್ಟಿಗೆ ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ನಿಸರ್ಗ ಸೌಂದರ್ಯ ಮುದನೀಡಬಹುದು. ಆದರೆ ಇದರ ಸುತ್ತಮುತ್ತ ಇರುವ ಗ್ರಾಮಗಳು ಇನ್ನೂ ಕುಗ್ರಾಮಗಳಾಗಿಯೇ ಉಳಿದಿವೆ. ಇಲ್ಲಿನವರು ಇದುವರೆಗೆ ವಿದ್ಯುತ್ ಮುಖ ನೋಡದೆ ಸೀಮೆಣ್ಣೆ ದೀಪದ ಬೆಳಕಿನಲ್ಲಿಯೇ ದಿನಕಳೆಯುತ್ತಿದ್ದಾರೆ. ರಸ್ತೆ, ದೂರವಾಣಿ, ಬಸ್ ಸಂಪರ್ಕವೂ ಇಲ್ಲಿಗಿಲ್ಲ. ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ದಿನಕಳೆಯುತ್ತಾರೆ.
ಕಷ್ಟ ಬಂದಾಗ ಒಗ್ಗಟ್ಟಿನಿಂದ ಹೋರಾಡಲು ಯಾವತ್ತೂ ಹಿಂಜರಿಯವುದಿಲ್ಲ. ಇವರ ಒಗ್ಗಟ್ಟಿನ ಹೋರಾಟದ ಫಲದಿಂದಲೇ ಇನ್ನೂ "ಮಾಂದಲಪಟ್ಟಿ" ಸುಂದರ ತಾಣವಾಗಿ ಉಳಿದಿದೆ ಎಂದರೆ ತಪ್ಪಾಗಲಾರದು.
ನಾಣಯ್ಯ ರಸ್ತೆ: ಕೆಲವು ವರ್ಷಗಳ ಹಿಂದೆ ಮಾಂದಲಪಟ್ಟಿಯಲ್ಲಿ ನಾಗರಹೊಳೆ ಗಿರಿಜನ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಅರಣ್ಯ ಇಲಾಖೆ, ಟೀ ತೋಟ ನಿರ್ಮಾಣದ ಯೋಜನೆಯನ್ನು ಕಂದಾಯ ಇಲಾಖೆ ರೂಪಿಸಿತ್ತು. ಆದರೆ ಈ ಸುಂದರ ಪ್ರದೇಶದಲ್ಲಿ ಅಂತಹ ಯಾವುದೇ ಯೋಜನೆಗೆ ನಾವು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟಿಸಿದ್ದರು. ಇದರಿಂದ ಯೋಜನೆಯನ್ನು ಕೈಬಿಡಲಾಗಿತ್ತು.
ಮೊದಲೆಲ್ಲಾ ಮಾಂದಲಪಟ್ಟಿಯ ನಿಸರ್ಗ ಸೌಂದರ್ಯವನ್ನು ಸವಿಯಲು ತೆರಳುವವರಿಗೆ ಸರಿಯಾದ ರಸ್ತೆಯೇ ಇರಲಿಲ್ಲ ಈ ಸಂದರ್ಭ ಪ್ರವಾಸಿಗರ ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಕೆಲವು ವರ್ಷಗಳ ಹಿಂದೆ ಸಚಿವರಾಗಿದ್ದ ಸಂದರ್ಭ ಎಂ.ಸಿ.ನಾಣಯ್ಯರವರು 1.60 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿದ್ದು, ಈ ರಸ್ತೆಯನ್ನು ಗ್ರಾಮಸ್ಥರು "ನಾಣಯ್ಯ ರಸ್ತೆ" ಎಂದೇ ಕರೆಯುತ್ತಿದ್ದಾರೆ.
ಪ್ರವಾಸಿಗರೇ ಎಚ್ಚರ: ಇತ್ತೀಚೆಗೆ ಮಾಂದಲಪಟ್ಟಿಯ ಸೌಂದರ್ಯಕ್ಕೆ ಮನಸೋತ ಚಿತ್ರತಂಡಗಳು ಶೂಟಿಂಗ್‌ಗಾಗಿ ಇತ್ತ ಬರುತ್ತಿವೆ. ಇದು ಸಂತೋಷದ ವಿಷಯವಾದರೂ ಇದರಿಂದ ಪ್ರಶಾಂತ ಪರಿಸರಕ್ಕೆ ಎಲ್ಲಿ ಧಕ್ಕೆ ಬರುತ್ತೋ ಎಂಬ ಭಯವೂ ನಿಸರ್ಗ ಪ್ರೇಮಿಗಳನ್ನು ಕಾಡತೊಡಗಿದೆ. ಇಲ್ಲಿಗೆ ಭೇಟಿ ನೀಡುವವರು ತಿಂಡಿ ತಿನಿಸುಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯುವುದು ಒಳ್ಳೆಯದು ಅಲ್ಲಿ ಏನೂ ಸಿಗಲಾರದು. ಆದರೆ ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗದಿದ್ದರೆ ಅದೇ ಮಾಂದಲಪಟ್ಟಿಯ ಸೌಂದರ್ಯದ ಉಳಿವಿಗೆ ಪ್ರವಾಸಿಗರು ನೀಡುವ ಕೊಡುಗೆಯಾಗುತ್ತದೆ.
ಕೊನೆಯ ಎಚ್ಚರಿಕೆ ಏನೆಂದರೆ ಮೋಜು ಮಸ್ತಿಗಾಗಿ ಹೊತ್ತಲ್ಲದ ಹೊತ್ತಿನಲ್ಲಿ ಇಲ್ಲಿಗೆ ಭೇಟಿ ನೀಡುವ ಸಾಹಸ ಮಾಡಬೇಡಿ. ಆಗಾಗ್ಗೆ ಕಾಡಾನೆಗಳು ಅಡ್ಡಾಡುತ್ತಿರುವುದರಿಂದ ಅಪಾಯ ತಪ್ಪಿದಲ್ಲ. ಅಲ್ಲದೆ ಏನೇ ತೊಂದರೆಯಾದರೂ ನಿರ್ಜನ ಪ್ರದೇಶವಾದುದರಿಂದ ಯಾರೂ ನಿಮ್ಮ ಸಹಾಯಕ್ಕೆ ಬರಲಾರರು ಎಂಬುವುದು ನೆನಪಿರಲಿ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications