• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣಾರೆ ಕಂಡೆ ನಾ ಕಾಶ್ಮೀರ...ವ್ಹಾ...!

By Staff
|
  • ಸುಷ್ಮಾ . ಪಿ. ಕಾಕತ್ಕರ್‌, ಪುಣೆ

pbkpune@rediffmail.com

Hello from Kashmirಕಾಶ್ಮೀರ - ಹೆಸರು ಕೇಳುತ್ತಲೇ ರೋಮಾಂಚನವಾಗುತ್ತದಲ್ಲವೇ(ಭಯೋತ್ಪಾದಕತೆಯದಲ್ಲ ಬಿಡಿ)! ಭಾರತಮಾತೆಯ ಶಿರೋಮುಕುಟವಾದ, ಸ್ವರ್ಗವೇ ಧರೆಗಿಳಿದುಬಂದಂತೆ ಭಾಸವಾಗುವ ಸ್ನಿಗ್ಧ ಸೌಂದರ್ಯದ ಕಾಶ್ಮೀರ ಈಗ ಮತ್ತೆ ವೈಭವಯುತವಾಗಿ ಕಂಗೊಳಿಸುತ್ತಿದ್ದು, ಪ್ರವಾಸಿಗಳಿಗೆ ತೆರೆದಿದ್ದು ,‘ಕಾಶ್ಮೀರ ಪ್ರವಾಸ’ದ ಕನಸನ್ನೀಗ ನನಸಾಗಿಸುವುದು ಕಷ್ಟವಿಲ್ಲ.

ನನಗೂ ಅದೇ ಕನಸಿತ್ತು, ಚಿಕ್ಕಂದಿನಿಂದಲೂ. ಒಮ್ಮೆ ಕಾಶ್ಮೀರವನ್ನು ಕಣ್ತುಂಬ ನೋಡಬೇಕು, ಒಂದೊಂದು ಋತುವಿನಲ್ಲೂ ಬಣ್ಣ ಬದಲಿಸುತ್ತ ಮರುಳುಗೊಳಿಸುವ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಬೊಗಸೆಬೊಗಸೆಯಾಗಿ ಆಸ್ವಾದಿಸಬೇಕು, ದಾಲ್‌ ಸರೋವರದಲ್ಲಿ ದೋಣಿ ಸಾಗಬೇಕು, ಸಿಹಿಯಾದ ಸೇಬು ಮೆಲ್ಲಬೇಕು, ಕೊನೆಗೆ ‘ಶಂಕರ್‌ ಗುರು’ ಸಿನೆಮಾದಲ್ಲಿ ಕೇಳಿದ್ದ ‘ಚುವ್ವಿಚಮೇಡಾ ಚುನಾಡೊ ಚುಕ್ಕುಚುಕ್ಕಾ ಚುನಾಡೋ...’ವನ್ನೂ ಅಲ್ಲಿನ ನಿವಾಸಿಗಳು ಗುನುಗುನಿಸುವುದನ್ನೇ ಆಲಿಸಬೇಕು... ಇತ್ಯಾದಿ.

ಇಲ್ಲಿ ಪುಣೆಯಲ್ಲಿ ನಮ್ಮ ಆಪ್ತ ಕುಟುಂಬವೊಂದು, ಈ ಸಲ ಬೇಸಿಗೆ ರಜೆಯಲ್ಲಿ ಕಾಶ್ಮೀರಕ್ಕೆ ಪ್ರವಾಸ ಹೋಗೋಣವೇ? ಎಂಬ ಸಲಹೆಯನ್ನಿತ್ತಾಗ ಅದು ಹೇಗೆ ಈ ಅವಕಾಶವನ್ನು ತಪ್ಪಿಸಿಕೊಂಡೇನು ಹೇಳಿ! ಸರಿ, ಆಲೋಚನೆ ಪಕ್ಕಾ ಆಯ್ತು. ಮಾಹಿತಿಪತ್ರಗಳನ್ನೆಲ್ಲ ತರಿಸಿದೆವು, ಪ್ರವಾಸಿಕಂಪೆನಿಗಳಿಂದ ಕೊಟೇಶನ್‌ ಪಡೆದೆವು, ಸುರಕ್ಷತೆಯ ಬಗ್ಗೆ ಅಧಿಕೃತವಾಗಿ ಖಾತರಿಪಡಿಸಿಕೊಂಡೆವು, ಕೊನೆಗೂ ಪುಣೆಯ ಒಂದು ಪ್ರತಿಷ್ಠಿತ ಕಂಪೆನಿಯ ಮೂಲಕ ನಮ್ಮ ಪ್ರವಾಸವನ್ನು ನಿಗದಿಗೊಳಿಸಿದೆವು.

Jhelum river viewಏಪ್ರಿಲ್‌ 24ರಂದು ನಮ್ಮ ಪ್ರವಾಸದ ಶುಭಾರಂಭ. ಅವತ್ತು, ಜಮ್ಮು-ತಾವಿ ರಿkುೕಲಂ ಎಕ್ಸ್‌ಪ್ರೆಸ್‌ ರೈಲು ಹತ್ತಿದೆವು. ಇಲ್ಲಿಂದ ಹೊರಟು ಜಮ್ಮು ತಲುಪಿದಾಗ ತಾರೀಕು ಇಪ್ಪತ್ತಾರಾಗಿರುತ್ತದೆ, ಅಂದರೆ ಹೊರಟ ಮತ್ತು ತಲುಪುವ ದಿನ ಸೇರಿ ಒಟ್ಟು ಮೂರು ದಿನ ಪ್ರಯಾಣ! ಆದರೂ ಆ ಪ್ರಯಾಣವೇನೂ ಸುದೀರ್ಘವೆನಿಸಲಿಲ್ಲ, ಮನಸಲ್ಲೆಲ್ಲ ಕಾಶ್ಮೀರದ್ದೇ ಕಲ್ಪನೆಯಾದ್ದರಿಂದ. ಜಮ್ಮು ತಲುಪಿದೆವು, ನಮ್ಮ ವಸತಿತಾಣವನ್ನು ಸೇರಿ ಆಯಾಸ ಪರಿಹರಿಸಿ, ಮುಂದಿನ ದಿನಗಳಲ್ಲಿನ ರಸಾಸ್ವಾದನೆಗೆ ನಮ್ಮ ಮೈಮನಗಳನ್ನು ಸಜ್ಜುಗೊಳಿಸಿಕೊಂಡೆವು.

ಮಾರನೆಯ ದಿನ ಬೆಳಿಗ್ಗೆಯೇ ಶ್ರೀನಗರಕ್ಕೆ ಹೊರಟೆವು. ದೂರ ಸುಮಾರು 300 ಕಿ.ಮೀ ಮಾತ್ರವಾದರೂ ಕಡಿದಾದ ಬೆಟ್ಟಗುಡ್ಡಗಳ ದಾರಿಯಾದ್ದರಿಂದ ಆ ಪ್ರಯಾಣಕ್ಕೆ 12 ಗಂಟೆ ತಗಲುತ್ತದೆ. ಬಸ್ಸಲ್ಲಿ ಹೋಗುವಾಗ ಕಾಣುವ ನಯನಮನೋಹರ ದೃಶ್ಯಗಳು - ಜುಳುಜುಳು ಹರಿಯುವ ಕಿರುತೊರೆಗಳು, ಸ್ಫಟಿಕದಂಥ ಸಲಿಲಝರಿಗಳು, ಹಿಮಾಚ್ಛಾದಿತ ಗಿರಿಶಿಖರಗಳು... (ನನ್ನ ಮಿತಿಗೆ ಸಿಲುಕಿದ ಪದಗಳನ್ನು ಉಪಯೋಗಿಸಿದ್ದೇನೆ, ನೈಜತೆಯನ್ನು ಪೂರ್ತಿ ವರ್ಣಿಸಲು ಇವೂ ಅಸಮರ್ಥ ಎಂದುಕೊಳ್ಳುತ್ತೇನೆ) ಪ್ರಯಾಣದ ಉತ್ಸಾಹವೃದ್ಧಿಗೆ ಇನ್ನೇನು ಬೇಕು! ಶ್ರೀನಗರಕ್ಕೆ ನಾವು ತಲುಪಿದಾಗ ಸಂಜೆಯಾಗಿತ್ತು. ಅಲ್ಲಿ ಕಂಡು ಗಮನಿಸಿದ ಮೊದಲ ಸಂಗತಿಯೆಂದರೆ ಮಿಲಿಟರಿ ಪಡೆಗಳ ಕಣ್ಗಾವಲು. ಛೇ, ಈ ಸ್ಥಳ ಅದೆಷ್ಟು ಕ್ಷೋಭೆಗೊಳಗಾಗಿದೆ, ಎಷ್ಟೊಂದು ಸೂಕ್ಷ್ಮ-ನಾಜೂಕಿನ ಪರಿಸ್ಥಿತಿಯಲ್ಲಿದೆಯಲ್ಲ ಎಂದೆನಿಸಿದ್ದು ಖರೇ.

ಶ್ರೀನಗರದಲ್ಲಿ ನಮಗಾಗಿ ನಿಗದಿಯಾಗಿದ್ದ ‘ಹೌಸ್‌ಬೋಟ್‌’ಗೆ ನಮ್ಮನ್ನು ಕರೆದೊಯ್ದರು. ಇದುವರೆಗೆ ಚಿತ್ರಗಳಲ್ಲಿ ಅಥವಾ ಬೇರಾರೊ ಹಿಂದೊಮ್ಮೆ ಜಮ್ಮು-ಕಾಶ್ಮೀರಕ್ಕೆ ಹೋಗಿಬರುವಾಗ ತಂದಿದ್ದ ಮಾದರಿಗಳಲ್ಲಷ್ಟೇ ನೋಡಿದ್ದ ಹೌಸ್‌ಬೋಟ್‌, ಈಗ ನಾನು ನಿಜವಾಗಿ ಅದರೊಳಗೆ ಹೊಕ್ಕಾಗ ಅದೇ ಒಂದು ಅಮಿತಾನಂದದ ಅನುಭವ! ಅದೊಂದು ದೊಡ್ಡ ಬಂಗಲೆಯಿದ್ದಂತೆ (ಅರಮನೆ ಎಂದರೂ ಸರಿಯೇ!) ಪೀಠೋಪಕರಣಗಳಿಂದ, ಆಧುನಿಕ ಯಂತ್ರೋಪಕರಣಗಳಿಂದ ಸುಸಜ್ಜಿತ ಪ್ರವಾಸಿಗೃಹ. ಅದೂ ದಾಲ್‌ ಸರೋವರದಲ್ಲಿ ತೇಲುತ್ತಿರುವ ನೌಕಾಗೃಹ!

Sonmargಶ್ರೀನಗರವನ್ನು ನಿಜವಾಗಿಯೂ ಭಾರತದ ವೆನಿಸ್‌ ನಗರ ಎನ್ನಬಹುದು. ನಮ್ಮ ಹೌಸ್‌ಬೋಟ್‌ನಲ್ಲಿ ಕುಳಿತೇ ದಾಲ್‌ ಸರೋವರದ ‘ಶಿಕಾರಾ’ ಯಾತ್ರೆ. ಅಲ್ಲೊಂದು ಇಲ್ಲೊಂದು ಕಾಣಸಿಗುವ ಹೌಸ್‌ಬೋಟ್‌, ಒಂದೊಂದರದ್ದೂ ಅಸದೃಶ ಕಲಾಕುಸುರಿ, ಮತ್ತೆ ಕೆಲವು ದಿನಸಿಧಾನ್ಯಗಳ, ತರಕಾರಿ-ಹಣ್ಣುಹಂಪಲು ವ್ಯಾಪಾರಿಗಳ ದೋಣಿಗಳು. ಸರೋವರ ಮಧ್ಯದ ಚಾರ್‌-ಚಿನಾರ್‌ ದ್ವೀಪಕ್ಕೂ ನಾವು ಹೋಗಿದ್ದೆವು. ದ್ವೀಪದ ಪರಿಧಿಯಲ್ಲಿ ನಾಲ್ಕು ಗೋಪುರಗಳಂತಿರುವ ಚಿನಾರ್‌ ಮರಗಳಿಂದಾಗಿ ದ್ವೀಪಕ್ಕೆ ಆ ಹೆಸರು. ಅಲ್ಲಿನ ಒಂದು ‘ಫ್ಲೋಟಿಂಗ್‌ ಕೆಫೆಟೆರಿಯಾ’ದಲ್ಲೇ ತಿಂಡಿ ತಿಂದೆವು, ಕಾಶ್ಮೀರ್‌ ಟೀ ಕುಡಿದೆವು.

ಆಮೇಲೆ ನಾವು ನಿಶಾತ್‌ ಮತ್ತು ಶಾಲಿಮಾರ್‌ ಗಾರ್ಡನ್‌ಗಳನ್ನು ನೋಡಲು ಹೋದೆವು. ಇವು, ಮೊಘಲರು ಕಟ್ಟಿದ ಉದ್ಯಾನವನಗಳು, ಬಹಳ ಸೊಗಸಾಗಿವೆ. ವಾಪಾಸ್‌ ಬರುತ್ತ, ವಿಖ್ಯಾತ ಕಾಶ್ಮೀರ್‌ ಕಾರ್ಪೆಟ್‌ - ರತ್ನಗಂಬಳಿಗಳ ಕಾರ್ಖಾನೆಗಳನ್ನು ಸಂದರ್ಶಿಸಿದೆವು. ಅತಿ ನಾಜೂಕಿನ ಕೈಕೆಲಸವುಳ್ಳ ಒಂದೊಂದು ಕಾರ್ಪೆಟ್‌ ತಯಾರಿಕೆಗೂ ಸುಮಾರು ಎರಡು-ಎರಡೂವರೆ ತಿಂಗಳುಗಳೇ ಬೇಕಾಗುತ್ತವಂತೆ! ಬೆಲೆಯೂ ಹಾಗೆಯೇ, ಲಕ್ಷಗಳ ಕೆಳಗಿನ ಮಾತೇ ಇಲ್ಲ. ಇವೆಲ್ಲ ಹೆಚ್ಚಾಗಿ ಹೊರದೇಶಗಳಿಗೆ ರಫ್ತಾಗುವುದಕ್ಕೇ ಉತ್ಪಾದನೆಯಾಗುತ್ತವೆ.

ನಮ್ಮ ಮುಂದಿನ ಪ್ರಯಾಣ ಪಹಲ್‌ಗಾಂವ್‌ಗೆ. ಅದು ‘ ಕುರುಬರ ಕಣಿವೆ’. ಅಲ್ಲಿನ ಸೌಂದರ್ಯವನ್ನಂತೂ ನೋಡೇತೀರಬೇಕು, ಇಲ್ಲಿ ಶಬ್ದಗಳಲ್ಲದನ್ನು ವರ್ಣಿಸಲಾರೆ. ಸಾಮಾನ್ಯವಾಗಿ ಯಾತ್ರಿಕರು ಭೇಟಿಕೊಡದ ಕೆಲ ಜಾಗಗಳಿಗೂ ಅಲ್ಲಿ ನಾವು ಹೋಗಿಬಂದೆವು, ಅದೂ ಹೇಗೆ, ಕುದುರೆ ಸವಾರಿಯಲ್ಲಿ! ಅಲ್ಲಿ ಕಳೆದ ಮೂರು ಘಂಟೆಗಳ ಅವಧಿಯಲ್ಲಿ ನನಗನಿಸಿದ್ದು ಒಂದೇ ಒಂದು - ‘ನಾನಿಲ್ಲೇ ಇದ್ದುಬಿಡುತ್ತೇನೆ!’ ಎಂದು. ಮತ್ತೆ ಮರುಘಳಿಗೆಯಲ್ಲೇ, ಅಯ್ಯೋ ನಾನೊಬ್ಬ ಪ್ರವಾಸಿಯಷ್ಟೆ, ಮರಳಬೇಕಲ್ಲ ಮನೆಗೆ... ಎಂಬ ವಾಸ್ತವಲೋಕಕ್ಕೆ. ಅಲ್ಲಿಂದ ನಮ್ಮ ಹೌಸ್‌ಬೋಟ್‌ಗೆ ವಾಪಸಾಗುವಾಗ ಅವಂತಿಪುರದ ಕುರುಹುಗಳನ್ನೂ ತೋರಿಸಿದರು. ಸಶಬ್ದವಾಗಿ ಹರಿಯುವ ಲಿಡ್ಡರ್‌ ನದಿಯನ್ನೂ ನೋಡಿದೆವು. ಬೇತಾಬ್‌, ಬಾಬ್ಬಿ ಇತ್ಯಾದಿ ಹಿಂದಿಚಿತ್ರಗಳ ಶೂಟಿಂಗ್‌ ನಡೆದಿದ್ದ ಸ್ಥಳಗಳನ್ನೂ ಕಂಡೆವು.

Floating flower marketಸೋನ್‌ಮಾರ್ಗ್‌ ಅಥವಾ ಸ್ವರ್ಣಮೈದಾನ ನಮ್ಮ ಮುಂದಿನ ತಾಣ. ದಾರಿಯ ಇಕ್ಕೆಲಗಳಲ್ಲಿ ಕೇಸರ್‌ ಉದ್ಯಾನಗಳು (ಕೇಸರಿಭಾತು ನೆನಪಿಸಿ ಬಾಯಲ್ಲಿ ನೀರು...), ವಾಲ್‌ನಟ್‌ ತೋಪುಗಳು, ಸೇಬು ಆರ್ಚರ್ಡ್‌ಗಳು. ಅಲ್ಲಲ್ಲಿ ಕಾಣಸಿಗುವ ಪುಟ್ಟಪುಟ್ಟಮಕ್ಕಳ ಗಲ್ಲಗಳೂ ಅಚ್ಚ ಸೇಬಿನಂತೆಯೇ ಸೈ! ಸೋನ್‌ಮಾರ್ಗ್‌ದಲ್ಲಿ ನಾವು ಸ್ಲೆಡ್ಜ್‌ರೈಡ್‌ ಸಹ ಆನಂದಿಸಿದೆವು.

ಮಾರನೆ ದಿನ ನಾವು ನೋಡಿದ್ದು, ಬಹುನಿರೀಕ್ಷಿತ ತಾಣ, ಗುಲ್‌ಮಾರ್ಗ್‌. ವಾಹ್‌! ಇದಂತೂ ಭಾರತದ ಸ್ವಿಡ್ಜರ್ಲ್ಯಾಂಡೇ ಸರಿ. ಸ್ವಿಡ್ಜರ್ಲ್ಯಾಂಡ್‌ ಅನ್ನು ನಾನು ನೋಡಿಲ್ಲ, ಆದರೆ ಅಲ್ಲೂ ಸಹ ಇದಕ್ಕಿಂತ ಹೆಚ್ಚಿನದೇನೂ ಖಂಡಿತ ಇರಲಿಕ್ಕಿಲ್ಲ. ಸಮುದ್ರಮಟ್ಟದಿಂದ 2890ಮೀ ಎತ್ತರದಲ್ಲಿರುವ, ಪ್ರಪಂಚದ ಅತಿ ಎತ್ತರಪ್ರದೇಶದ ಗೋಲ್ಫ್‌ಕೋರ್ಸನ್ನು ಗುಲ್‌ಮಾರ್ಗ್‌ದಲ್ಲಿ ನೋಡಿದೆವು. ಮೈನವಿರೇಳಿಸುವ ಗಂಡೋಲಾ ಕೇಬಲ್‌ಕಾರ್‌ ರೈಡ್‌ ಮಾಡಿದೆವು (ಅಲ್ಲೆ ಇನ್ನೊಂದು ಕೇಬಲ್‌ಕಾರ್‌ ಪ್ರೋಜೆಕ್ಟ್‌ ನಡೆಯುತ್ತಿದ್ದು ಪೂರ್ಣವಾದಾಗ ಅದು ಪ್ರಪಂಚದಲ್ಲೇ ಅತಿ ಎತ್ತರದ ಕೇಬಲ್‌ಕಾರ್‌ ರೈಡ್‌ ಎನಿಸಿಕೊಳ್ಳಲಿದೆ). ಹಿಮದಲ್ಲಿ ಯಥೇಷ್ಟ ಆಡಿದೆವು, ‘ಹಿಮಮಾನವ’ನನ್ನು ನಿರ್ಮಿಸಿದೆವು, ನಾವು ಅಲ್ಲಿದ್ದಾಗಲೇ ಲಘುವಾಗಿ ಹಿಮಪಾತವೂ ಆಗುತ್ತಿತ್ತು.

ಅಂತೂ ಕಾಶ್ಮೀರಯಾತ್ರೆಯ ಆ ಹತ್ತು ದಿನಗಳು ನನ್ನ ಬಾಳಿನ ಅವಿಸ್ಮರಣೀಯ ದಿನಗಳಾಗಿ ಉಳಿಯಲಿವೆ. ಪ್ರಕೃತಿಮಾತೆಯ ಆ ವೈಯಾರ, ಸುಂದರ ಹೂಗಳ ಆ ಶೃಂಗಾರ, ದಟ್ಟಕಾಡುಗಳ ಚಿತ್ತಾರ, ಸ್ವಚ್ಛಂದ ಸರೋವರ... ಒಂದೇ ಎರಡೇ! ಆದಷ್ಟೂ ದೃಷ್ಯಗಳನ್ನು ನನ್ನ ಕೆಮರಾದಲ್ಲಿ ಕ್ಲಿಕ್ಕಿಸಿ ಸಂಗ್ರಹಿಸಿಟ್ಟುಕೊಂಡಿದ್ದೇನೆ. ಪ್ರಕೃತಿಸೌಂದರ್ಯದ ಮಾತಂತೂ ಆಯಿತೆ, ಅಲ್ಲಿನ ನಿವಾಸಿಗಳೂ ನಾನು ತಿಳಿದ ಮಟ್ಟಿಗೆ ತುಂಬ ಸಾಧುಸ್ವಭಾವದವರು, ನಗುಮೊಗದ ಸೇವೆ-ಆತಿಥ್ಯ ಸಲ್ಲಿಸುವವರು. ಉದ್ಧಟತನ, ಲಂಪಟತನಗಳ ಲೇಷವೂ ಅವರಲ್ಲಿಲ್ಲ. ಬಹುಷಃ ಅವರ ಜೀವನಶೈಲಿ-ವ್ಯಕ್ತಿತ್ವಗಳಿಂದ ನಾವೊಂದಿಷ್ಟು ಕಲಿಯುವುದಿದೆ.

ಪ್ರವಾಸ ಅಂದಮೇಲೆ ಪ್ರಯಾಸವೂ ಸಣ್ಣಪುಟ್ಟದ್ದೇನಾದರೂ ಇರಲೇಬೇಕಲ್ಲ? ನಮಗೂ ಹಾಗೇ ಆಯ್ತು. ಅಷ್ಟೂ ದಿನಗಳವರೆಗೂ ನಮ್ಮ ದೃಷ್ಟಿಯಲ್ಲಿ ಬೆಸ್ಟ್‌ ಸರ್ವಿಸ್‌ ಎನಿಸಿಕೊಂಡಿದ್ದ ನಮ್ಮ ಟೂರಿಸ್ಟ್‌ ಕಂಪೆನಿ ಕೊನೇ ದಿನ ಸ್ವಲ್ಪ ಪಡಪೋಸಿಯಾಗಿ ಕಂಡುಬಂತು. ಅವತ್ತು ಒಂದುಕಡೆ ಭೂಕುಸಿತವುಂಟಾದ್ದರಿಂದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಮುಚ್ಚಿದ್ದರು. ಅದು ಗೊತ್ತಿದ್ದೂ ನಮ್ಮ ಕಂಪೆನಿ, ಇಲ್ಲ ಟ್ರಾಫಿಕ್‌ ನಿಧಾನಕ್ಕೆ ಮೂವ್‌ ಆಗ್ತಿದೆ ಅಂತ ನಂಬಿಸಿ ನಮ್ಮನ್ನು ಜಮ್ಮುಗೆ ತರಲು ಹೊರಡಿಸಿತು. ರಸ್ತೆತಡೆಯಿಂದಾಗಿ 8 ಗಂಟೆಗಳ ಕಾಲ ಕಾದುಕಾದು ನಾವು ಶ್ರೀನಗರಕ್ಕೆ ಮರಳಬೇಕಾಯಿತು. ಬದಲಿವ್ಯವಸ್ಥೆ ಮಾಡದೆ ಕೈಚೆಲ್ಲಿಬಿಟ್ಟಿತು ನಮ್ಮ ವಿಶ್ವಾಸಾರ್ಹ ಕಂಪೆನಿ. ನಮ್ಮ ಪಂಗಡದಲ್ಲಿ ಸಣ್ಣಮಕ್ಕಳು ಬೇರೆ ಇದ್ದರು, ಹಾಗಾಗಿ ಸಾಹಸಕ್ಕೆ ಅದು ವೇಳೆಯಲ್ಲ. ಆದರೆ ಮಾರನೆದಿನ ಜಮ್ಮುದಿಂದ ಹೊರಡುವ ಟ್ರೈನ್‌ ನಾವು ಹತ್ತಲೇಬೇಕು, ಅದಕ್ಕಾಗಿ ಕೊನೆಗೂ ನಮ್ಮದೇ ಖರ್ಚಿನಲ್ಲಿ, ಶ್ರೀನಗರ-ಜಮ್ಮು ವಿಮಾನಯಾನ ಮಾಡಿ ಜಮ್ಮು ತಲುಪಿ ಊರಿನತ್ತ ರೈಲು ಹತ್ತಿದೆವೆನ್ನಿ. All is well that ends well. ಮೇ 6ಕ್ಕೆ ಸುಖರೂಪವಾಗಿ ಪುಣೆ ತಲುಪಿದೆವು.

ಇದು ನನ್ನ ಕಾಶ್ಮೀರಯಾತ್ರೆಯ ವರದಿ. ಎಷ್ಟೊಂದು ಕಲೆ-ಸಂಗೀತ-ಸಾಹಿತ್ಯಕ್ಕೆ ಸ್ಫೂರ್ತಿಯಾದ, ಪ್ರೇಮಿಗಳ ಮಧುಚಂದ್ರಮಂಚವಾದ, ಪ್ರಕೃತಿಪ್ರೇಮಿಗಳಿಗೆ ರಮ್ಯತಾಣವಾದ ಕಾಶ್ಮೀರಕ್ಕೆ ನಾನೂ ಹೋಗಿಬಂದೆ ಎಂಬ ಪುಳಕದಿಂದಲೇ ಇದನ್ನು ಬರೆದು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮೂಲ ಇಂಗ್ಲಿಷ್‌ನಲ್ಲಿ ಬರೆದ ಈ ಕಥನದ ಕನ್ನಡ ನಿರೂಪಣೆಗೆ ನೆರವಾದವರು ನನ್ನ ಸೋದರತ್ತೆಮಗ, ಅಮೆರಿಕದಲ್ಲಿರುವ ಶ್ರೀವತ್ಸ ಜೋಶಿ.

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more