ಅಪಾಯದಲ್ಲಿ ಅಫ್ಘಾನ್: ಕಾಬೂಲ್‌ಗೆ ಕಾಲಿಟ್ಟ ತಾಲಿಬಾನ್ ಮುಖಂಡ ಮುಲ್ಲಾ ಅಬ್ದುಲ್ ಬರದಾರ್!

ಕಾಬೂಲ್, ಆಗಸ್ಟ್ 18: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ವಿಜಯೋತ್ಸವದೊಂದಿಗೆ ರಾಜಧಾನಿಗೆ ಕಾಲಿಟ್ಟಿದ್ದಾನೆ. ಕಾಬೂಲ್ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಉಗ್ರ ಸಂಘಟನೆಯು ವಿಜಯೋತ್ಸವದ ಧ್ವಜ ಹಾರಿಸಿದೆ. ಎರಡು ದಶಕಗಳ ನಂತರ ಕಂದಾಹಾರ್ ನಗರಕ್ಕೆ ಆಗಮಿಸಿದ ಸಂಘಟನೆಯ ಸಹ- ಸಂಸ್ಥಾಪಕನಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಲಾಗಿದೆ.

ಕ್ವಾತಾರ್ ನಗರದಲ್ಲಿದ್ದ ಸಂದರ್ಭದಲ್ಲಿ ಇದೇ ಮುಲ್ಲಾ ಬರಾದಾರ್ ಯುನೈಟೆಡ್ ಸ್ಟೇಟ್ಸ್ ಮತ್ತು ಅಫ್ಘಾನಿಸ್ತಾನದ ಸಂಧಾನಕಾರರ ಜೊತೆಗೆ ತಿಗಂಳುಗಟ್ಟಲೆ ಮಾತುಕತೆ ನಡೆಸಿದ್ದರು. ಅಂದು ಸಂಧಾನ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದ ಅದೇ ನಾಯಕ ಇಂದು ತಾಲಿಬಾನ್ ಧಾರ್ಮಿಕ ಜನ್ಮಸ್ಥಳ ಎನಿಸಿರುವ ಕಂದಾಹಾರ್ ನಗರಕ್ಕೆ ವಾಪಸ್ ಆಗಿದ್ದಾರೆ. ಇದೇ ಕಂದಾಹಾರ್ ನಗರವು ತಾಲಿಬಾನ್ ಮೊದಲ ಅವಧಿ ಆಡಳಿತದ ಸಂದರ್ಭದಲ್ಲಿ ರಾಜಧಾನಿಯಾಗಿತ್ತು.

ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಫ್ಘಾನಿಸ್ತಾನಕ್ಕೆ ಹಿಂದಿರುಗಿದ ನಂತರ ಮಂಗಳವಾರ ಹಲವು ಘೋಷಣೆಗಳನ್ನು ಹೊರಡಿಸಲಾಯಿತು. ಸುಮಾರು 20 ವರ್ಷಗಳ ಕಾಲ ಯುಎಸ್ ಸೇನಾ ದಾಳಿಯಿಂದ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಡಳಿತ ಕಳೆದುಕೊಂಡಿತ್ತು. ಎರಡು ದಶಕಗಳ ನಂತರ ಯುನೈಟೆಡ್ ಸ್ಟೇಟ್ಸ್ ಸೇನೆ ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಇಡೀ ದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ದೇಶದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್ ಹೊರಡಿಸಿದ ಘೋಷಣೆಗಳೇನು?, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮುಂದಿನ ಪ್ಲಾನ್ ಏನು?, ತಾಲಿಬಾನ್ ಜೊತೆಗೆ ದ್ವಿಪಕ್ಷೀಯ ನಂಟು ಮುಂದುವರಿಸುವ ಬಗ್ಗೆ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳು ಹೇಳುವುದೇನು?, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ವಾತಾವರಣ ಹೇಗಿದೆ ಎನ್ನುವುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಸೇಡು ತೀರಿಸಿಕೊಳ್ಳುವುದು ತಾಲಿಬಾನ್ ಸಂಘಟನೆ ಉದ್ದೇಶವಲ್ಲ

ಸೇಡು ತೀರಿಸಿಕೊಳ್ಳುವುದು ತಾಲಿಬಾನ್ ಸಂಘಟನೆ ಉದ್ದೇಶವಲ್ಲ

"ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಅದರ ಜೊತೆಗೆ ಕಾಬೂಲ್‌ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ದೇಶದ ಉಳಿದ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ಅಸ್ತಿತ್ವ ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ದುರದೃಷ್ಟವಶಾತ್, ಈ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು. ಅವರಿಗೆ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ಅಫ್ಘಾನಿಸ್ತಾನದ ಒಳಗೆ ಅಥವಾ ಹೊರಗೆ ಯಾವುದೇ ಶತ್ರುಗಳನ್ನು ಹುಡುಕುವುದಿಲ್ಲ," ಎಂದಿದ್ದಾರೆ.

ಅಫ್ಘಾನ್ ದುಸ್ಥಿತಿ ಹಾಗೂ ತಾಲಿಬಾನ್ ವಕ್ತಾರರ ಮಾತು

ಅಫ್ಘಾನ್ ದುಸ್ಥಿತಿ ಹಾಗೂ ತಾಲಿಬಾನ್ ವಕ್ತಾರರ ಮಾತು

ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರದಲ್ಲಿ ಕೆಲವೇ ಕೆಲವು ಅಂಗಡಿಗಳು ತೆರೆದಿವೆ. ತಾಲಿಬಾನಿಗಳು ಸರ್ಕಾರದ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ ಹೊರತಾಗಿಯೂ ಕೆಲವು ಅಧಿಕಾರಿಗಳು ಮತ್ತು ಮಹಿಳೆಯರು ಮಾತ್ರ ರಸ್ತೆಗೆ ಇಳಿದಿದ್ದಾರೆ. ತಾಲಿಬಾನ್ ಅಡಿಯಲ್ಲಿ ನಿರೀಕ್ಷಿತ ಕಠಿಣ ಇಸ್ಲಾಮಿಸ್ಟ್ ಆಳ್ವಿಕೆಯಿಂದ ತಪ್ಪಿಸಿಕೊಳ್ಳಲು ಅಥವಾ ಕಳೆದ ಎರಡು ದಶಕಗಳಿಂದ ಅಧಿಕಾರದಲ್ಲಿರುವ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರದೊಂದಿಗೆ ನೇರ ಪ್ರತೀಕಾರಕ್ಕೆ ಹೆದರಿ ಸಾವಿರಾರು ಜನರು ದೇಶವನ್ನು ತೊರೆದು ಹೋಗುತ್ತಿದ್ದಾರೆ.

ಇದರ ಮಧ್ಯೆ ಮಂಗಳವಾರ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಸಾರ್ವಜನಿಕರಲ್ಲಿ ವಿಶ್ವಾಸ ತುಂಬುವ ರೀತಿ ಮಾತನಾಡಿದ್ದಾರೆ. ತಾಲಿಬಾನ್ ಹೊಸ ಸರ್ಕಾರ ಮತ್ತು ಆಡಳಿತವು 1996-2001ರ ಆಡಳಿತಕ್ಕಿಂತ ಸಕಾರಾತ್ಮಕ ಹಾಗೂ ಭಿನ್ನವಾಗಿರುತ್ತದೆ. ಪುರುಷರ ಜೊತೆಗೆ ಸರಿಸಮಾನವಾಗಿ ಕೆಲಸ ಮಾಡುವ ಮಹಿಳೆಯರನ್ನು ಕಲ್ಲು ಹೊಡೆದು ಕೊಲ್ಲುವ ಸ್ಥಿತಿ ಇರುವುದಿಲ್ಲ. "ತಾಲಿಬಾನ್ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡುವುದಾದರೆ, ನಮ್ಮ ಸಿದ್ಧಾಂತ ಮತ್ತು ನಂಬಿಕೆಗಳ ಮೇಲೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ನಮ್ಮ ಅನುಭವ, ಪ್ರಬುದ್ಧತೆ ಮತ್ತು ಒಳನೋಟದ ಆಧಾರದ ಮೇಲೆ ನೋಡುವುದಾದರೆ ನಿಸ್ಸಂದೇಹವಾಗಿ ಹಲವು ವ್ಯತ್ಯಾಸಗಳಿವೆ" ಎಂದು ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯು ಆದಷ್ಟು ಬೇಗವೇ ಹೊಸ ಸರ್ಕಾರವನ್ನು ರಚಿಸಲಿದೆ. "ಇಸ್ಲಾಮಿಕ್ ಕಾನೂನುಗಳ ವ್ಯಾಪ್ತಿಯಲ್ಲಿ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗೆ ತಾಲಿಬಾನ್ ಸಂಘಟನೆಯು ಆದ್ಯತೆ ನೀಡುತ್ತದೆ. ಸಮಾಜದಲ್ಲಿ ಮಹಿಳೆಯರು ಕೂಡಾ ಸ್ವತಂತ್ರರಾಗಿ ಕಾರ್ಯ ಚಟುವಟಿಕೆಗಳಿಂದ ಇರಬೇಕು, ಆದರೆ ಅದು ಇಸ್ಲಾಮಿಕ್ ಪರಧಿಯನ್ನು ಮೀರುವಂತಿಲ್ಲ. ನಮ್ಮ ರಾಷ್ಟ್ರವು ಮುಸ್ಲೀಂ ರಾಷ್ಟ್ರವಾಗಿದೆ, ಅದು 20 ವರ್ಷಗಳ ಹಿಂದೆಯೇ ಆಗಿರಬಹುದು ಅಥವಾ ಇಂದೇ ಆಗಿರಬಹುದು. ಆದರೆ 20 ವರ್ಷಗಳ ಹಿಂದಿನ ಪರಿಸ್ಥಿತಿಗೂ ಇಂದಿನ ಸ್ಥಿತಿಗತಿಗೂ ತುಂಬಾ ವ್ಯತ್ಯಾಸವಿದೆ. ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ನಂತರದಲ್ಲಿ ಕಾನೂನುಗಳ ಬಗ್ಗೆ ಮಾತನಾಡಲಾಗುವುದು," ಎಂದು ಮುಜಾಹಿದ್ ಹೇಳಿದರು.

ಪ್ರಜೆಗಳನ್ನು ಕರೆ ತರಲು ಅಫ್ಘಾನ್ ಕಡೆಗೆ ವಿಮಾನ

ಪ್ರಜೆಗಳನ್ನು ಕರೆ ತರಲು ಅಫ್ಘಾನ್ ಕಡೆಗೆ ವಿಮಾನ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿದ ಬೆನ್ನಲ್ಲೇ ಗೊಂದಲಮಯ ವಾತಾವಾರಣ ಸೃಷ್ಟಿಯಾಯಿತು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತನ್ನ ದೂತವಾಸ ಕಚೇರಿ ಸಿಬ್ಬಂದಿ ಮತ್ತು ಪ್ರಜೆಗಳನ್ನು ಕರೆ ತರುವ ಕಾರ್ಯಾಚರಣೆಗೆ ಮೊದಲು ಚಾಲನೆ ನೀಡಿತು. ಈ ಕಾರ್ಯಾಚರಣೆ ನಡೆಸುವುದಕ್ಕಾಗಿಯೇ 6,000 ಸೇನಾ ಸಿಬ್ಬಂದಿಯನ್ನು ರವಾನಿಸಲಾಗಿತ್ತು. ಅಲ್ಲಿಂದ ಅಮೆರಿಕಾದ ಪ್ರಜೆಗಳನ್ನು ವಿಶೇಷ ವಿಮಾನಗಳ ಮೂಲಕ ಸ್ವದೇಶಕ್ಕೆ ವಾಪಸ್ ಕರೆ ತರಲಾಯಿತು.

ಅಮೆರಿಕಾವಷ್ಟೇ ಅಲ್ಲದೇ ಫ್ರಾನ್ಸ್, ಜರ್ಮನಿ, ಭಾರತ ಮತ್ತು ಆಸ್ಟ್ರೇಲಿಯಾದಿಂದ ಅಫ್ಘಾನಿಸ್ತಾನಕ್ಕೆ ವಿಶೇಷ ವಿಮಾನಗಳನ್ನು ಬಿಡಲಾಯಿತು. ಅಫ್ಘಾನ್ ನೆಲದಲ್ಲಿರುವ ದೂತವಾಸ ಕಚೇರಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರುವ ಕಾರ್ಯಾಚರಣೆ ನಡೆಸಲಾಯಿತು. ಇದರ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸೃಷ್ಟಿಯಾದ ಚಿತ್ರಣದ ಬಗ್ಗೆ ವಿವಿಧ ರಾಷ್ಟ್ರ ನಾಯಕರು ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.

"ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹತಾಶೆಯ ಚಿತ್ರಗಳು ನಾಚಿಕೆಗೇಡು" ಎಂದು ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಹೇಳಿದ್ದಾರೆ. ಅಫ್ಘಾನಿಸ್ತಾನ ಮತ್ತು ತಾಲಿಬಾನ್ ಬಿಕ್ಕಟ್ಟಿನ ಕುರಿತು ಮುಂದಿನ ವಾರ ಏಳನೇ ಗುಂಪುಗಳ ಶೃಂಗಸಭೆ ನಡೆಸುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ.

ಅಫ್ಘಾನಿಸ್ತಾನ ವಶಕ್ಕೆ 10 ದಿನ ತೆಗೆದುಕೊಂಡ ತಾಲಿಬಾನ್

ಅಫ್ಘಾನಿಸ್ತಾನ ವಶಕ್ಕೆ 10 ದಿನ ತೆಗೆದುಕೊಂಡ ತಾಲಿಬಾನ್

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಅಲರ್ಟ್ ಆಗಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ.

ಅಫ್ಘಾನ್ ಮೇಲೆ ಅಮೆರಿಕಾ ಹಿಡಿತ ಸಾಧಿಸಿದ ಕಾಲ:

ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.

ತಾಲಿಬಾನ್ ಆಡಳಿತದ ಬಗ್ಗೆ ಪ್ರಜೆಗಳಲ್ಲಿ ನಡುಕ:

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ದೇಶದ ಲಕ್ಷಾಂತರ ಜನರ ಎದೆಯಲ್ಲಿ ಢವಢವ ಜೋರಾಗಿದೆ. ಭವಿಷ್ಯದ ಭೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದೇಶವನ್ನೇ ತೊರೆದು ಹೋಗುವುದಕ್ಕೆ ಶುರು ಮಾಡಿದ್ದಾರೆ. 1996 ರಿಂದ 2001ರ ಅವಧಿಯಲ್ಲಿ ಆಡಳಿತ ನಡೆಸಿದ ಇದೇ ತಾಲಿಬಾನ್ ಉಗ್ರರು ಕ್ರೂರಾತೀಕ್ರೂರ ಶಿಕ್ಷೆಗಳನ್ನು ನೀಡುವ ಮೂಲಕ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1990ರ ದಶಕದ ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿ ಜಾರಿಗೊಳಿಸಿದ ಶರಿಯಾ ಕಾನೂನಿನ ಕ್ರೌರ್ಯತೆ ಬಗ್ಗೆ ಅರಿತಿರುವ ಜನರು ಉಗ್ರರ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+