ಹಿಡಿತದ ತುಡಿತ: ಹೊಗಳಿಕೆ ಧಾಟಿಯಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿತಾ ತಾಲಿಬಾನ್!?
ಕಾಬೂಲ್, ಆಗಸ್ಟ್ 14: ಅಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟು, ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸುವ ಭಾರತದ ಮಾನವೀಯ ಮತ್ತು ಅಭಿವೃದ್ಧಿ ಪ್ರಯತ್ನಗಳ ಬಗ್ಗೆ ತಾಲಿಬಾನ್ ಶ್ಲಾಘನೆ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನದಲ್ಲಿ ಸೇನೆ ಸ್ಥಾಪಿಸದಂತೆ ಕೋರಿದೆ. ತಾಲಿಬಾನ್ ಭಾರತವನ್ನು ಹಾಡಿಹೊಗಳುವುದರ ಜೊತೆಗೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿತಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.
ಕ್ವಾತಾರ್ ಮೂಲದ ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್ ಎಎನ್ಐ ಸುದ್ದಿ ಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸೇನಾ ಪಾತ್ರದ ಅರ್ಥವನ್ನು ನೀವು ಹೇಗೆ ತಿಳಿದುಕೊಂಡಿದ್ದೀರಿ. ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ಅವರು ತಮ್ಮ ಉಪಸ್ಥಿತಿಯನ್ನು ವಹಿಸಿಕೊಳ್ಳಲು ಸೇನೆಯನ್ನು ತೆಗೆದುಕೊಂಡು ಬಂದರೆ ಅದು ಅವರಿಗೇ ಒಳ್ಳೆಯದ್ದಲ್ಲ. ಅಫ್ಘಾನಿಸ್ತಾನದಲ್ಲಿ ಸೇನಾ ಪಡೆಯನ್ನು ನಿಯೋಜಿಸಿದ ಬೇರೆ ರಾಷ್ಟ್ರಗಳ ಹಣೆಬರಹವನ್ನು ಅವರು ನೋಡಿರುತ್ತಾರೆ. ಆದ್ದರಿಂದ ಅದು ಒಂದು ರೀತಿ ತೆರೆದ ಪುಸ್ತಕವಾಗಿದೆ. ಇದರ ಹೊರತಾಗಿ ಅಫ್ಘಾನ್ ಪ್ರಜೆಗಳು ದೇಶಕ್ಕಾಗಿ ಅವರು ನೀಡಿದ ಯೋಜನೆಗಳು ಮತ್ತು ಪ್ರಯತ್ನವನ್ನು ಮೆಚ್ಚಲೇಬೇಕು," ಎಂದಿದ್ದಾರೆ.
ಅಫ್ಘಾನಿಸ್ತಾನದ ಸಾಮರ್ಥ್ಯ ಅಭಿವೃದ್ಧಿ ಸಂಸತ್, ಶಾಲೆ-ಕಾಲೇಜು, ರಸ್ತೆಗಳು ಹಾಗೂ ಅಣೆಕಟ್ಟುಗಳ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ 2 ಬಿಲಿಯನ್ ಯುಎಸ್ ಡಾಲರ್ ಗಿಂತ ಹೆಚ್ಚು ಆರ್ಥಿಕ ನೆರವನ್ನು ನೀಡಿದೆ. ಈ ಬಗ್ಗೆ ಉಲ್ಲೇಖಿಸಿರುವ ತಾಲಿಬಾನ್, ನಿಮ್ಮ ಸಹಕಾರ ಮೆಚ್ಚುವಂಥದ್ದೇ ಆದರೂ, ನೀವು ಸೇನಾ ಪಡೆಗಳನ್ನು ಇಲ್ಲಿಗೆ ಕಳುಹಿಸುವುದು ಸೂಕ್ತವಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಹೊಗಳಿಕೆ ಧಾಟಿಯಲ್ಲಿ ಭಾರತಕ್ಕೆ ತಾಲಿಬಾನ್ ನೀಡಿದ ಎಚ್ಚರಿಕೆ ಸಂದೇಶ ಹಾಗೂ ಅಫ್ಘಾನಿಸ್ತಾನದ ಸನ್ನಿವೇಶದ ಕುರಿತು ಒಂದು ವರದಿಗಾಗಿ ಮುಂದೆ ಓದಿ.

ಭಾರತದ ಬಗ್ಗೆ ಮೆಚ್ಚುಗೆ ಮಾತಾಡಿದ ತಾಲಿಬಾನ್
ಭಾರತವು "ಅಫ್ಘಾನಿಸ್ತಾನದ ಜನರಿಗಾಗಿ ಅಣೆಕಟ್ಟು, ರಾಷ್ಟ್ರೀಯ ಯೋಜನೆ, ಮೂಲಸೌಕರ್ಯಗಳು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿಗೆ ಹಾಗೂ ಅದರ ಪುನರ್ ನಿರ್ಮಾಣಕ್ಕಾಗಿ ಆರ್ಥಿಕ ಏಳಿಗೆಗಾಗಿ ಮತ್ತು ಅಫ್ಘಾನಿಸ್ತಾನದ ಜನರಿಗಾಗಿ ಮಾಡಿದ ಎಲ್ಲ ಬಗೆಯ ಕಾರ್ಯವನ್ನು ನಾವು ಪ್ರಶಂಸಿಸುತ್ತೇವೆ" ಎಂದು ಕ್ವಾತಾರ್ ಮೂಲದ ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್ ಹೇಳಿದ್ದಾರೆ.

ರಾಯಭಾರಿ ಸಿಬ್ಬಂದಿ ಮೇಲೆ ನಮ್ಮ ದಾಳಿ ಇರುವುದಿಲ್ಲ
ರಾಜತಾಂತ್ರಿಕ ಸಮುದಾಯವನ್ನು ಗುರಿಯಾಗಿಸಿಕೊಂಡು ಯಾವುದೇ ರೀತಿ ದಾಳಿ ನಡೆಸುವುದಿಲ್ಲ ಎಂದು ತಾಲಿಬಾನ್ ಈಗಾಗಲೇ ಸ್ಪಷ್ಟಪಡಿಸಿದೆ. ಇದರ ಹೊರತಾಗಿ ಅಫ್ಘಾನಿಸ್ತಾನದಲ್ಲಿ ಸ್ಥಳೀಯ ಸೇನಾ ಪಡೆ ಹಾಗೂ ತಾಲಿಬಾನ್ ನಡುವೆ ಹಿಂಸಾಚಾರ ಹೆಚ್ಚಾಗಬಹುದು ಎಂಬ ಭೀತಿಯಲ್ಲಿ ಭಾರತ ಮತ್ತು ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಪ್ರಾಂತ್ಯಗಳಿಂದ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ಸ್ಥಳಾಂತರಿಸಿವೆ. ಇನ್ನು ಅನೇಕ ದೇಶಗಳು ತಮ್ಮ ದೂತವಾಸ ಕಚೇರಿಯಲ್ಲಿನ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿವೆ.
"ವಿದೇಶಿ ರಾಯಭಾರಿಗಳು ಮತ್ತು ದೂತವಾಸ ಕಚೇರಿ ಸಿಬ್ಬಂದಿಗೆ ನಮ್ಮ ಕಡೆಯಿಂದ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ನಾವು ಯಾವುದೇ ರಾಯಭಾರಿಗಳು ಮತ್ತು ದೂತವಾಸದ ಮೇಲೆ ಕಣ್ಣಿಟ್ಟಿಲ್ಲ. ಇದನ್ನು ಒಂದು ಬಾರಿ ಅಲ್ಲ, ಹಲವು ಬಾರಿ ನಮ್ಮ ಹೇಳಿಕೆಗಳಲ್ಲಿ ಸ್ಪಷ್ಟಪಡಿಸಿದ್ದೇವೆ. ಮಾಧ್ಯಮಗಳಲ್ಲಿ ಏನು ಪ್ರಸಾರವಾಗಿದೆಯೋ ಅದಕ್ಕೆ ನಾವು ಬದ್ಧರಾಗಿ ನಡೆದುಕೊಳ್ಳುತ್ತೇವೆ. ನಾವು ಭಾರತದ ಮೇಲಿನ ಕಾಳಜಿಯಿಂದ ಹೇಳುತ್ತಿದ್ದು, ಇದರ ಮೇಲಿನ ನಿರ್ಧಾರ ಅವರಿಗೆ ಬಿಟ್ಟಿದ್ದು. ನಮ್ಮ ಬಗ್ಗೆ ಹೇಳುವುದಾದರೆ ಯಾವುದೇ ರಾಯಭಾರಿ ಕಚೇರಿ ಮತ್ತು ದೂತವಾಸದ ಮೇಲೆ ದಾಳಿ ನಡೆಸುವುದಿಲ್ಲ ಎಂದ ನಮ್ಮ ನಿಲುವು ಸ್ಪಷ್ಟವಾಗಿದೆ," ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್ ಹೇಳಿದ್ದಾರೆ.

ಹಿಂದೂ ಮತ್ತು ಸಿಖ್ಖರ ಭದ್ರತೆ ಬಗ್ಗೆ ಉಲ್ಲೇಖಿಸಿದ ತಾಲಿಬಾನ್
ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿನ ಗುರುದ್ವಾರದಲ್ಲಿ ಧಾರ್ಮಿಕ ಧ್ವಜವನ್ನು ಕೆಳಗಿಸಲಾಗಿತ್ತು. ಈ ಘಟನೆ ಬಗ್ಗೆ ಪ್ರಶ್ನಿಸಿದಾಗ, ಸಿಖ್ ಸಮುದಾಯದ ಜನರಿಂದಲೇ ಆ ಧ್ವಜವನ್ನು ಕೆಳಗೆ ಇಳಿಸಲಾಯಿತು ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಸಿಖ್ಖರು ಮತ್ತು ಹಿಂದೂಗಳ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ. "ಆ ಧಾರ್ಮಿಕ ಧ್ವಜವನ್ನು ಸಿಖ್ ಸಮುದಾಯದ ಜನರಿಂದಲೇ ಕೆಳಗಿಳಿಸಲಾಯಿತು. ಸ್ವತಃ ಅವರೇ ತಮ್ಮ ಧ್ವಜವನ್ನು ಇಳಿಸಿದ್ದಾರೆ. ಭಾರತೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ನಾವು ಪಕ್ತಿಯಾ ಪ್ರಾಂತ್ಯದ ಆ ಪ್ರದೇಶಕ್ಕೆ ಭೇಟಿ ನೀಡಿದೆವು. ನಮ್ಮ ಭದ್ರತಾ ಸಿಬ್ಬಂದಿಯು ಗುರುದ್ವಾರಕ್ಕೆ ತೆರಳಿ ಅಲ್ಲಿನ ಸಮಸ್ಯೆಯನ್ನು ಆಲಿಸಿದ್ದಾರೆ. ಇದರ ಜೊತೆಗೆ ತಮ್ಮ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಧಕ್ಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ."

ತಾಲಿಬಾನ್ ಕೈಗೆ ಅಫ್ಘಾನ್ ಸಿಲುಕಿದರೆ ಭಾರತಕ್ಕೆ ಅಪಾಯವೇ?
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯು ಸಂಪೂರ್ಣ ಹಿಡಿತ ಸಾಧಿಸಿದರೆ ಭಾರತಕ್ಕೆ ಹೆಚ್ಚು ಅಪಾಯವಾಗಲಿದೆ. ತಾಲಿಬಾನ್ ಜೊತೆಗೆ ಗುರುತಿಸಿಕೊಂಡಿರುವ ಉಗ್ರ ಸಂಘಟನೆಗಳು ಭಾರತೀಯ ವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸುವ ಆತಂಕವೂ ಇದೆ. ಅದರ ಹಿಂದೆಯೂ ಒಂದು ಕಥೆಯಿದೆ. ತಾಲಿಬಾನ್ ಹಾಗೂ ಪಾಕಿಸ್ತಾನ್ ಮೂಲದ ಲಷ್ಕರ್-ಇ ತೊಯ್ಬಾ ಉಗ್ರ ಸಂಘಟನೆ ನಡುವೆ ಅವಿನಾಭಾವ ಸಂಬಂಧವಿದೆ. ಕಳೆದೊಂದು ದಶಕದಿಂದ ಪಾಕಿಸ್ತಾನದ ಕ್ವೆತ್ತಾ ಮತ್ತು ಪೇಶಾವರದಿಂದಲೇ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ತಾಲಿಬಾನ್ ಮುಂದಾಳತ್ವದ ಬಗ್ಗೆ ಪಾಕಿಸ್ತಾನದ ಆಂತರಿಕ ಗುಪ್ತಚರ ಇಲಾಖೆ(ಐಎಸ್ಐ) ಅತಿಯಾದ ವಿಶ್ವಾಸವನ್ನು ಹೊಂದಿದೆ. ಈ ಹಿನ್ನೆಲೆ ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಪೂರ್ಣ ಹಿಡಿತ ಸಾಧಿಸಿದ್ದಲ್ಲಿ ಅದು ಭಾರತೀಯ ವಿರೋಧಿ ಚಟುವಟಿಕೆಗಳ ನೆಲವಾಗಿ ಪರಿವರ್ತನೆಯಾಗುವ ಅಪಾಯವಿದೆ.

ವಿದೇಶಿ ನೆಲದಲ್ಲಿ ದಾಳಿ ನಡೆಸುವುದು ತಾಲಿಬಾನ್ ಉದ್ದೇಶವಲ್ಲ
ಪಾಕಿಸ್ತಾನ ಜೊತೆಗೆ ದಶಕಗಳಿಂದ ಸಂಬಂಧ ಬೆಸೆದುಕೊಂಡು ಬರಲಾಗಿದೆ ಎಂಬ ವಾದವನ್ನು ತಾಲಿಬಾನ್ ತಳ್ಳಿ ಹಾಕಿದೆ. ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆಗೆ ತಾಲಿಬಾನ್ ಸಂಪರ್ಕ ಹೊಂದಿದೆ ಎಂಬುದು ಕೇವಲ ರಾಜಕೀಯ ಪ್ರೇರಿತ ಹಾಗೂ ಆಧಾರ ರಹಿತ ಆರೋಪಗಳಾಗಿವೆ. ಅಫ್ಘಾನ್ ನೆಲದಲ್ಲಿ ನಿಂತು ಭಾರತ ಸೇರಿದಂತೆ ಬೇರೆ ಯಾವುದೇ ರಾಷ್ಟ್ರಗಳ ಮೇಲೆ ಆಕ್ರಮಣ ನಡೆಸುವುದಿಲ್ಲ ಎಂದಿದ್ದಾರೆ. "ಇವೆಲ್ಲ ಆಧಾರ ರಹಿತ ಆರೋಪಗಳು. ನೆಲದ ವಾಸ್ತವತೆಯನ್ನು ಅರಿತುಕೊಳ್ಳದೇ ನಮ್ಮ ವಿರುದ್ಧದ ಸಿದ್ಧಾಂತಗಳು ಹಾಗೂ ರಾಜಕೀಯ ಪ್ರೇರಿತ ಉದ್ದೇಶಕ್ಕಾಗಿ ಈ ರೀತಿಯ ಆಧಾರ ರಹಿತ ಆರೋಪಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ನಾವು ಸಾಮಾನ್ಯ ನೀತಿಗಳನ್ನು ಹೊಂದಿದ್ದೇವೆ. ನೆರೆಯ ದೇಶಗಳು ಸೇರಿದಂತೆ ಯಾವುದೇ ದೇಶದ ವಿರುದ್ಧ ಅಫ್ಘಾನಿಸ್ತಾನದ ಮಣ್ಣನ್ನು ಬಳಸಿಕೊಂಡು ಆಕ್ರಮಣ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ," ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಲು ಹೊರಟ ತಾಲಿಬಾನ್
1999ರಲ್ಲಿ ತಾಲಿಬಾನ್ ಆಡಳಿತದ ವೇಳೆ ಭಾರತೀಯ ವಿಮಾನ ಐಸಿ 814 ಅನ್ನು ಅಪಹರಿಸಿ ಅಫ್ಘಾನಿಸ್ತಾನಕ್ಕೆ ತರಲಾಗಿತ್ತು. ಆದರೆ ಇಂದು ಅದೇ ತಾಲಿಬಾನ್ ಕಂಧಹಾರ್, ಹೆರಾತ್, ಮಜರ್-ಇ-ಶರೀಫ್ ಮತ್ತು ಲಷ್ಕರ್ ಗಾಹ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸಿದೆ. ಯಾವುದೇ ಶಾಂತಿ ಒಪ್ಪಂದವಿಲ್ಲದೆ ಅಫ್ಘಾನಿಸ್ತಾನದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. "ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿ ಹಿಂಸಾಚಾರ ನಡೆಸುವ ಅಗತ್ಯವಿಲ್ಲ, ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. "ನಾವು ಪ್ರಾಂತ್ಯಗಳು ಮತ್ತು ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತಿದ್ದೇವೆ. ಅವರು ಸ್ವಯಂ-ಪ್ರೇರಣೆಯಿಂದ ನಮ್ಮ ಬಲೆಗೆ ಬೀಳುತ್ತಿದ್ದಾರೆ. ನೀವು ನೂರಾರು ಮತ್ತು ಸಾವಿರಾರು ಭದ್ರತಾ ಪಡೆಗಳು ಮತ್ತು ಆಡಳಿತದ ವೀಡಿಯೊಗಳನ್ನು ನೋಡಿರಬಹುದು. ಅವರು ನಮ್ಮ ಕಡೆಗೆ ಬಂದು ನಮ್ಮೊಂದಿಗೆ ಸೇರುತ್ತಿದ್ದಾರೆ ಎಂಬುದು ನಿಜವೇ ಆದರೂ ಹಿಂಸೆಯಿಂದಾಗಿ ಅವರು ಸೇರುತ್ತಿಲ್ಲ. ಕಾಬೂಲ್ ನಲ್ಲಿ ಅಮಾಯಕ ಜನರ ಹಿಂಸೆ ಹಾಗೂ ಹತ್ಯೆಯನ್ನು ಆಡಳಿತ ನಡೆಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ನಮ್ಮ ನೀತಿಗೆ ವಿರುದ್ಧವಾಗಿ ಹಿಂಸೆ ಹೆಚ್ಚಿಸುವುದಕ್ಕೆ ನಮ್ಮ ಜನರಿಗೆ ಏಕೆ ಹೇಳಬೇಕು," ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್ ಹೇಳಿದ್ದಾರೆ.

ತಾಲಿಬಾನ್ ಅಧಿಕಾರ ಹಂಚಿಕೆ ಬಗ್ಗೆ ಹೇಳುವುದೇನು?
ಅಫ್ಘಾನಿಸ್ತಾನದಲ್ಲಿ ಸರ್ಕಾರದ ಜೊತಗೆ ತಾಲಿಬಾನ್ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ವಕ್ತಾರ ಸುಹೈಲ್ ಶಾಹಿನ್ ಪ್ರತಿಕ್ರಿಯೆ ನೀಡಿದ್ದಾರೆ. "ಕಾಬೂಲ್ ಜೊತೆಗೆ ನಾವು ಯಾವುದೇ ರೀತಿ ಮಾತುಕತೆಗೂ ಸಿದ್ಧರಿದ್ದೇವೆ. ಶಾಂತಿಯುತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ಮುಂದ ಬರಬೇಕಾಗಿದ್ದು, ಪ್ರಜೆಗಳು ಅದನ್ನೇ ಎದುರು ನೋಡುತ್ತಿದ್ದಾರೆ. ಇದು ಆದಷ್ಟು ಬೇಗ ನಡೆಯುವ ಪ್ರಕ್ರಿಯೆ ಎಂದು ಅನ್ನಿಸುತ್ತದೆ ಆದರೆ ಸರ್ಕಾರವೇ ಮುಂದೆ ಹೆಜ್ಜೆ ಇರಿಸಬೇಕಿದೆ. ಮೊದಲ ಅಂಶವೆಂದರೆ ಇನ್ನೊಂದು ಬದಿಯು ನಮ್ಯತೆಯನ್ನು ತೋರಿಸಲು ಮತ್ತು ಪರಿಹರಿಸಿಕೊಳ್ಳಲು ಹಿಂಜರಿಯಲಾಗುತ್ತಿದೆ. ನಮ್ಮ ಕೈದಿಗಳನ್ನು ಬಿಡುಗಡೆ ಮಾಡಲು ಮತ್ತು ದೋಹಾ ಒಪ್ಪಂದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುವ ನಮ್ಮ ಕಪ್ಪುಪಟ್ಟಿಯನ್ನು ತೆಗೆದುಹಾಕಲು ಅಡೆತಡೆಗಳಿವೆ, ಇದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ರಮಗಳಿಗೆ ಬಹಳ ಮುಖ್ಯ���ಾಗಿದೆ "ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಗದ್ದುಗೆ ತ್ಯಾಗ?
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸುತ್ತಿದೆ. ರಾಜಧಾನಿ ಕಾಬೂಲ್ ನಿಂದ ಕೇವಲ 80 ಕಿಲೋ ಮೀಟರ್ ಅಂತರದವರೆಗೂ ತಾಲಿಬಾನ್ ತನ್ನ ಹಿಡಿತವನ್ನು ಸಾಧಿಸಿಕೊಂಡಿದೆ. ಈ ಹಂತದಲ್ಲಿ ಶಾಂತಿ ಮಾತುಕತೆ ಸಮಿತಿಯು ಅಧ್ಯಕ್ಷ ಅಶ್ರಫ್ ಘನಿ ಸರ್ಕಾರವನ್ನು ಸಂಪೂರ್ಣವಾಗಿ ಪತನಗೊಳಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಹೊಸ ಸೂತ್ರ ರೂಪಿಸಲಾಗುತ್ತಿದೆ ಎಂದು CNN-News18 ವರದಿ ಮಾಡಿದೆ. ಈ ಶಾಂತಿ ಸೂತ್ರದ ಪ್ರಕಾರ, ಅಶ್ರಫ್ ಘನಿ ಆಡಳಿತದಿಂದ ಕೆಳಗಿಳಿಯಬೇಕಾಗುತ್ತದೆ.
ಅಫ್ಘಾನಿಸ್ತಾನದಲ್ಲಿ ಪ್ರಸ್ತು ಸೇನಾಧಿಕಾರಿಗಳು, ಪ್ರತಿನಿಧಿಗಳ ಜೊತೆಗೂಡಿ ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚಿಸುವುದಕ್ಕೆ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಸೂತ್ರವನ್ನು ಸೂಕ್ತ ಚರ್ಚೆ ನಂತರ ಎಲ್ಲ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುವುದು. ಈ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿರುವ ಹಿನ್ನೆಲೆ ಯೋಜನೆಯನ್ನು ತಾಲಿಬಾನ್ ಅಥವಾ ಅಫ್ಘಾನ್ ಸರ್ಕಾರ ಯಾವುದೇ ಪಾಲುದಾರರೊಂದಿಗೆ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕಿದ ಅಫ್ಘಾನಿಸ್ತಾನ
ತಾಲಿಬಾನ್ ಉಗ್ರ ಸಂಘಟನೆಯು ಅಫ್ಘಾನಿಸ್ತಾನದ ಹಲವು ನಗರಗಳ ಮೇಲೆ ಹಿಡಿತ ಸಾಧಿಸಿಕೊಳ್ಳುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇನೆಯು ಸ್ವದೇಶಕ್ಕೆ ಹಿಂತಿರುಗಿದ ಬೆನ್ನಲ್ಲೇ ಅಫ್ಘಾನ್ ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಗುರುವಾರವಷ್ಟೇ ದೇಶದ ಅತಿದೊಡ್ಡ ನಗರ ಎನಿಸಿಕೊಂಡಿರುವ ಕಂದಾಹಾರ್ ಅನ್ನು ತಾಲಿಬಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕಂದಹಾರ್ ನಲ್ಲಿರುವ ರಾಜ್ಯಪಾಲದ ಕಚೇರಿ ಮತ್ತು ಇತರೆ ಆಡಳಿತ ಕಚೇರಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ನಗರದ ಮೇಲೆ ಹಿಡಿತ ಸಾಧಿಸಿದೆ. ಈವರೆಗೂ ರಾಷ್ಟ್ರದಲ್ಲಿ 12 ಪ್ರಮುಖ ನಗರಗಳ ಮೇಲೆ ತಾಲಿಬಾನ್ ಉಗ್ರ ಸಂಘಟನೆಯು ನಿಯಂತ್ರಣವನ್ನು ಕಾಯ್ದುಕೊಂಡಿದೆ. ಅಫ್ಘಾನಿಸ್ತಾನದ ಸರ್ಕಾರವು ದೇಶದ ಪ್ರಮುಖ ನಗರಗಳಲ್ಲೇ ತನ್ನ ಹಿಡಿತವನ್ನು ಕಳೆದುಕೊಂಡಿದೆ.












Click it and Unblock the Notifications