ನಟಿ ಮಣಿಯರ ಕೂದಲಿಗೆ ಕೈ ಹಾಕಿದ ಸಿಸಿಬಿ: ಏನಿದು ಪರೀಕ್ಷೆ?
ಬೆಂಗಳೂರು, ಡಿಸೆಂಬರ್ 05: ಸ್ಯಾಂಡಲ್ ವುಡ್ ಡ್ರಗ್ ಜಾಲದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ತಲೆ ಕೂದಲನ್ನು ಈ ಸಲ ಬುಡ ಸಮೇತ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ತಪ್ಪು ಅರ್ಥ ಮಾಡಿಕೊಳ್ಳಬೇಡಿ. ಡ್ರಗ್ ಜಾಲದಲ್ಲಿ ಬಂಧಿತ ನಟಿಯರು ಸೇರಿದಂತೆ ನಾಲ್ವರ ಆರೋಪಿಗಳ ತಲೆ ಕೂದಲು ಬುಡ ಸಮೇತ ಬೇಕಾಗಿದೆ.
ವಿಧ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಈ ಕೂದಲನ್ನು ಒಳಪಡಿಸಲಗುತ್ತದೆ. ಡ್ರಗ್ ಸೇವನೆ ಬಗ್ಗೆ ಮತ್ತಷ್ಟು ಸಾಕ್ಷಾಧಾರ ಸಂಗ್ರಹಣೆ ಮಾಡಲು ಮುಂದಾಗಿರುವ ಸಿಸಿಬಿ ಪೊಲೀಸರು ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಿ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ನಟಿ ರಾಗಿಣಿ, ಸಂಜನಾ ಇತರೆ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರ ಬಂಧನ ವೇಳೆ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜತೆಗೆ ಮೂತ್ರದ ಮಾದರಿಯೂ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿತ್ತು. ಇದೇ ವೇಳೆ ರಾಗಿಣಿ ಮೂತ್ರ ನೀಡುವ ಬದಲಿಗೆ ಅದರಲ್ಲಿ ನೀರು ಬೆರೆಸಿ ಕೊಟ್ಟು ಸಿಕ್ಕಿಬಿದ್ದಿದ್ದರು. ಇದೇ ಅವಧಿಯಲ್ಲಿ ನಟಿ ಸಂಜನಾ, ಆಪ್ತರಾದ ಪ್ರಶಾಂತ್ ರಂಕಾ, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಮತ್ತು ನಿಯಾಜ್ ಕೂದಲು ಮಾದರಿ ಸಂಗ್ರಹಿಸಿ ಹೈದರಾಬಾದ್‌ಗೆ ಕಳುಹಿಸಲಾಗಿತ್ತು.

ಮೊದಲು ಸಂಗ್ರಹಿಸುವಾಗ ಎಡವಟ್ಟು ? :
ಕೂದಲು ಮಾದರಿ ಸಂಗ್ರಹ ಮಾಡುವ ಪ್ರಕ್ರಿಯೆಯಲ್ಲಿ ತಪ್ಪಾಗಿತ್ತು. ಹೀಗಾಗಿ ಸಿಸಿಬಿ ಪೊಲೀಸರು ಕಳಿಸಿದ್ದ ಆರೋಪಿಗಳ ಕೂದಲ ಮಾದರಿಯನ್ನು ವಿಧಿ ವಿಜ್ಙಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲು ನಿರಾಕರಿಸಲಾಗಿತ್ತು. ತಾಂತ್ರಿಕ ದೋಷದಿಂದ ಪರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಮೊತ್ತಮ್ಮೆ ಕೂದಲಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವಂತೆ ಹೈದರಾಬಾದ್ ಪ್ರಯೋಗಾಲಯದ ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಅನುಮತಿ ಕೋರಿ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹೊಸದಾಗಿ ಕೂದಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ನ್ಯಾಯಾಲಯ ಅನುಮತಿ ನೀಡಿದೆ. ಹೀಗಾಗಿ ನಟಿಯರಾದ ರಾಗಿಣಿ, ಸಂಜನಾ, ಇತರೆ ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಿ ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಎರಡನೇ ಮಹಾ ಯುದ್ಧ ಕಾಲದ ಪರೀಕ್ಷೆ ?
ಕೂದಲನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸುವ ಮೂಲಕ ದೇಹದಲ್ಲಿರುವ ಅಂಶ ಪತ್ತೆ ಮಾಡುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಆಗಲೇ ಕಂಡು ಹಿಡಿದಿದ್ದರು. ಹಿಟ್ಲರ್ ಆಡಳಿತ ಅವಧಿಯಲ್ಲಿ ಆರ್ಸನಿಕ್ ಎಂಬ ಸ್ಲೋ ಪಾಯಿಸನ್ ಬೆರೆಸಿ ಜನರನ್ನು ಸಾಯಿಸಲಾಗುತ್ತಿತ್ತು. ಈ ವೇಳೆ ಮೃತಪಟ್ಟವರ ಬಗ್ಗೆ ವಿಜ್ಙಾನಿ ಮಾರ್ಸ್ ಎಂಬುವರು ಕೂದಲು ಪರೀಕ್ಷೆಗೆ ಒಳಪಡಿಸಿ ಆರ್ಸನಿಕ್ ವಿಷ ಬೆರೆಸಿದ್ದ ಬಗ್ಗೆ ಕಂಡು ಹಿಡಿದಿದ್ದರು. ಅದರಿಂದ ಅದನ್ನು ಮರ್ಸ್ ಟೆಸ್ಟ್ ಎಂದೇ ಖ್ಯಾತಿ ಪಡೆಯಿತು. ಈಗಲೂ ಮೆಟಲ್ ಪಾಯಿಸನ್ ನನ್ನ ಕೂದಲಿನಿಂದಲೇ ಕಂಡು ಹಿಡಿಯಲಾಗುತ್ತದೆ.

ಬುಡ ಸಮೇತ ಕೂದಲು ಅಗತ್ಯ:
ಮಾದಕ ವಸ್ತು ಸೇವನೆ ಬಗ್ಗೆ ಮೂತ್ರ, ರಕ್ತದ ಮಾದರಿ ಹಾಗೂ ಕೂದಲನ್ನು ಪ್ರಯೋಗಾಲಯಕ್ಕೆ ಒಳಪಡಿಸಬಹುದು. ಕೂದಲು ಕೊಡುವಾಗ ಕತ್ತರಿಸಿ ಕೊಟ್ಟರೆ ಆಗುವುದಿಲ್ಲ. ಬದಲಿಗೆ ಬುಡ ಸಮೇತ ತೆಗೆದುಕೊಡಬೇಕು. ನಿರಂತರವಾಗಿ ಡ್ರಗ್ ಸೇವನೆಯಲ್ಲಿದ್ದರೆ ಅಂತಹವರ ಕೂದಲನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಡ್ರಗ್ ಸೇವನೆ ಬಗ್ಗೆ ಖಚಿತ ಸಾಕ್ಷಿಗಳು ಸಿಗುತ್ತವೆ. ಚೈನ್ ಸ್ಮೋಕಿಂಗ್ ಮಾದರಿಯಲ್ಲೇ ನಿರಂತರ ಡ್ರಗ್ ಸೇವನೆ ಮಾಡಿದ್ದರೆ ಮಾತ್ರ ಪತ್ತೆ ಮಾಡಲು ಸಾಧ್ಯ, ಅಪರೂಪಕ್ಕೆ ಡ್ರಗ್ ಸೇವಿಸಿ ಬಿಟ್ಟಿದ್ದರೆ, ಅಂತವರ ಕೂದಲನ್ನು ಪರೀಕ್ಷೆಗೆ ಒಳಪಡಿಸಿ ಫಲಿತಾಂಶ ಪಡೆಯುವುದ ಕಷ್ಟ ಎಂದು ಮಡಿವಾಳ ವಿಧಿ ವಿಜ್ಙಾನ ಪ್ರಯೋಗಾಲಯದ ನಿವೃತ್ತ ಅಧಿಕಾರಿ ರವೀಂದ್ರ ಅವರು ತಿಳಿಸಿದ್ದಾರೆ.

ತಿಂಗಳಲ್ಲಿ ವರದಿ
ರಕ್ತದ ಮಾದರಿ ಹಾಗೂ ಯುರಿನ್ ಮಾದರಿ ಪರೀಕ್ಷೆ ಡ್ರಗ್ ಸೇವನೆ ಮಾಡಿದ ಎಂಟು ತಾಸಿನ ಒಳಗೆ ರಕ್ತದ ಮಾದರಿ ಹಾಗೂ ಯೂರಿನ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದರೆ ಉತ್ತಮ ಫಲಿತಾಂಶ ಬರುತ್ತದೆ. ಕೆಲವು ದಿನಗಳ ನಂತರ ಪರೀಕ್ಷೆಗೆ ಒಳಪಡಿಸಿದರೆ ಕಷ್ಟ. ಕೂದಲನ್ನೂ ಸಹ ವಿಧಿ ವಿಜ್ಙಾನ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಬೇಕಾದರೆ, ಮಾದರಿ ಸಂಗ್ರಹ ಹಾಗೂ ರವಾನೆ ನಿಯಮಗಳನ್ನು ಪೊಲೀಸರು ಶಿಸ್ತುಬದ್ಧವಾಗಿ ಪಾಲಿಸಬೇಕು ಎಂದು ರವೀಂದ್ರ ಒನ್ ಇಂಡಿಯಾ ಕನ್ನಡ ಗೆ ತಿಳಿಸಿದ್ದಾರೆ. ಕೂದಲಿನ ಮಾದರಿಯನ್ನು ಗ್ಯಾಸ್ ಕ್ರೋಮೋಟೋಗ್ರಫಿ ಹಾಗೂ ಮಾಸ್ ಸ್ಪೆಟ್ರೋ ಫೋಟೋಮೆಟ್ರಿ ಎಂಬ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಅಧುನಿಕ ಉಪಕರಣಗಳಲ್ಲಿ ಪರೀಕ್ಷೆ ಮಾಡಿ ಇದೇ ಡ್ರಗ್ ಸೇವನೆ ಮಾಡಿದ್ದಾರೆ ಎಂದು ವರದಿ ನೀಡಬಹುದು. ವರದಿ ಬಂದ ಬಳಿಕ ಯಾವ ಡ್ರಗ್ ಸೇವನೆ ಮಾಡಿದ್ದಾರೆ ಎಂಬುದರ ಬಗ್ಗೆ ಖಚಿತವಾಗಿ ಹೇಳಬಹುದು. ಪರೀಕ್ಷೆ ನಡೆಸಿ ಫಲಿತಾಂಶ ಅನ್ವೇಷಣೆ ಮಾಡಲು ಕನಿಷ್ಠ ಒಂದು ತಿಂಗಳು ಕಾಲ ಬೇಕಾಗುತ್ತದೆ ಎಂದು ವಿಧಿ ವಿಜ್ಙಾನ ಪ್ರಯೋಗಾಲಯ ತಜ್ಙ ಡಾ. ರವೀಂದ್ರ ತಿಳಿಸಿದ್ದಾರೆ.












Click it and Unblock the Notifications