ಓದುಗರ ಓಲೆ : ಗುಟ್ಕಾದಂತೆ ಪ್ಲಾಸ್ಟಿಕ್ ನಿಷೇಧಿಸಲಿ

ಮೈಸೂರಿನ ನಿವಾಸಿ ಲಿಂಗದೇವರು ಪತ್ರದ ಮೂಲಕ ಪ್ಲಾಸ್ಟಿಕ್ ನಿಷೇಧ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು. ಇದರಿಂದ ನಗರ ಪ್ರದೇಶಗಳಲ್ಲಿ ಟನ್ ಗಟ್ಟಲೇ ತ್ಯಾಜ್ಯ ಉತ್ಪತ್ತಿಯಾಗುವುದು ತಪ್ಪುತ್ತದೆ. ಜೊತೆಗೆ ಪರಿಸರ ಸಂರಕ್ಷಣೆ ಆಗುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಪ್ಲಾಸ್ಟಿಕ್ ನಿಷೇಧಕ್ಕೆ ಕೊಡಗು ಜಿಲ್ಲೆ ರಾಜ್ಯಕ್ಕೆ ಮಾದರಿ ಆಗಬೇಕು ಎಂದು ತಿಳಿಸಿದ್ದಾರೆ.
ನೋ ಪ್ಲಾಸ್ಟಿಕ್ : ಕೊಡಗು ಜಿಲ್ಲೆಯ ಮಡಕೇರಿ ಪಟ್ಟಣದಲ್ಲಿ ಜನರು ಪ್ಲಾಸ್ಟಿಕ್ ಕವರ್ ಹಿಡಿದು ಹೋಗುವುದು ಕಂಡು ಬಂದರೆ, ತಕ್ಷಣ ಕರೆದು ಪ್ಲಾಸ್ಟಿಕ್ ಕವರ್ ತಂದ ಮೂಲದ ಬಗ್ಗೆ ವಿಚಾರಿಸುತ್ತಾರೆ. ಪ್ಲಾಸ್ಟಿಕ್ ನೀಡಿದ ಅಂಡಿಯವರಿಗೆ ಅಧಿಕಾರಿಗಳು ದಂಡ ವಿಧಿಸುತ್ತಾರೆ. ಜನರು ಸರಿಯಾದ ಮಾಹಿತಿ ನೀಡದಿದ್ದರೆ, ಕವರ್ ಕೈಯಲ್ಲಿ ಹಿಡಿದವರಿಗೆ ದಂಡ ವಿಧಿಸುತ್ತಾರೆ. ಈ ಕಾರಣದಿಂದ ಮಡಕೇರಿ ಪಟ್ಟಣದಲ್ಲಿ ಎಲ್ಲೂ ಪ್ಲಾಸ್ಟಿಕ್ ಕವರ್ ಸಿಗುವುದಿಲ್ಲ.
ಇಂತಹ ಸ್ಥಿತಿಯಲ್ಲಿ ಇಡೀ ರಾಜ್ಯದಲ್ಲಿ ನಿರ್ಮಾಣವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಲಿಂಗದೇವರು ಅವರ ಕಾಳಜಿ. ಪ್ಲಾಸ್ಟಿಕ್ ಕವರ್ ನಿಷೇದಿಸಿದರೆ, ಭೂ ಮತ್ತು ಅದನ್ನು ಸುಡುತ್ತಿರುವುದರಿಂದ ಆಗುವ ವಾಯು ಮಾಲಿನ್ಯವನ್ನು ತಡೆಗಟ್ಟಬಹದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೊಬ್ಬರ ತಯಾರಿಸಿ : ನಗರಗಳಲ್ಲಿ ಟನ್ ಗಟ್ಟಲೆ ಕಸ ಪ್ಲಾಸ್ಟಿಕ್ ನಿಂದ ಉತ್ಪತ್ತಿಯಾಗುತ್ತಿದೆ. ಕಸದಿಂದ ಉತ್ತಮವಾದ ಗೊಬ್ಬರ ತಯಾರಿಸಿ ಬಳಸಬಹುದಾದ ತಂತ್ರಜ್ಞಾನಗಳು ಲಭ್ಯವಿದೆ. ಸರ್ಕಾರ ಅವುಗಳನ್ನು ಉಪಯೋಗಿಸಿಕೊಂಡು, ಕಸದ ಸಮಸ್ಯೆ ಸಹ ನಿವಾರಣೆ ಮಾಡಬಹುದು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಎಂದು ಲಿಂಗದೇವರು ಹೇಳಿದ್ದಾರೆ.
ವಿಶ್ವ ಪರಿಸರ ದಿನ ಕಳೆದಿದೆ. ಸರ್ಕಾರ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತಂದು, ಇಚ್ಛಾ ಶಕ್ತಿ ಪ್ರದರ್ಶಿಸಿದರೆ ಮುಂದಿನ ಜನಾಂಗದವರಿಗೆ, ಉತ್ತಮವಾದ ಪರಿಸರವನ್ನು ಕೊಡುಗೆಯಾಗಿ ಕೊಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications