ಶಿರಾಡಿ ರಸ್ತೆಗೆ ರೊಕ್ಕ ಕೊಡಲ್ಲ ಎಂದ ಕೇಂದ್ರ ಸರ್ಕಾರ

ಎಲ್ಲಕ್ಕಿಂತ ಮುಖ್ಯವಾಗಿ ಪೆಟ್ರೋಲ್, ಡೀಸಲ್ ಮುಂತಾದ ಅನಿಲಗಳನ್ನು ಸರಬರಾಜು ಮಾಡುವ ದೊಡ್ಡ ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಯಗಿರುವುದರಿಂದ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ದ ವ್ಯಾಪ್ತಿಯಲ್ಲಿ ಬರುತ್ತದೆ.
ಪಶ್ಚಿಮ ಘಟ್ಟಗಳಲ್ಲಿ ವಿಪರೀತ ಮಳೆ ಮತ್ತು ಈ ರಸ್ತೆಯ ಬಳಕೆ ಹೆಚ್ಚಿರುವುದರಿಂದ ಈ ರಸ್ತೆ ಸದಾ ದುರಸ್ತೆಯಲ್ಲಿಯೇ ಇರುತ್ತದೆ. ಈ ರಸ್ತೆಯನ್ನು ಸರಿಪಡಿಸಲು ಕೇಂದ್ರಕ್ಕೆ ಅನುದಾನ ಕೇಳಿದ್ದಕ್ಕೆ ಕೇಂದ್ರ ಸರ್ಕಾರ ರಾಷ್ಟೀಯ ಹೆದ್ದಾರಿ ಇಲಾಖೆಗೆ "ಇರೋ ದುಡ್ಡಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಿ ಸಾಕು" ಅಂತ ತಾಕೀತು ಮಾಡಿದೆ.
ಇಂತಹ ಬೇಜವಾಬ್ಧಾರಿ ಉತ್ತರಗಳನ್ನು ಭಾರತದಂತಹ ಒಕ್ಕೂಟದಲ್ಲಿ ಬಿಟ್ಟು ಇನ್ನೆಲ್ಲಿಯೂ ನಾವು ಕೇಳಿರಲಾರೆವು. ಕರ್ನಾಟಕದಿಂದ ಕೋಟ್ಯಂತರ ರುಪಾಯಿ ತೆರಿಗೆ ಹಣವನ್ನು ಕೇಂದ್ರ
ಅಚ್ಚುಕಟ್ಟಾಗಿ ಪಡೆದುಕೊಳ್ಳುತ್ತದೆ ಆದರೆ ನಮ್ಮ ರಾಜ್ಯದ ಅಭಿವೃದ್ಧಿಗೆ ಹಣ ಕೇಳಿದಾಗ ಮಾತ್ರ ಕೇಂದ್ರದಿಂದ ಬರುವುದು ಬರೀ ಸಾಮ್ರಾಜ್ಯಶಾಹಿ ಉತ್ತರಗಳು.
ಸಮಸ್ಯೆಯ ಮೂಲ ಏನು?: ಈ ಸಮಸ್ಯೆಯ ಮೂಲ ಇರುವುದೇ ಬೇರೆಡೆ. ಒಂದು ಕಡೆ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರೋ ರಾಷ್ಟ್ರೀಯ ಪಕ್ಷಗಳು ಮಾತಿಗೆ ಮುಂಚೆ ನಮ್ಮ ದೆಹಲಿ ನಾಯಕರು ಹೇಳಿದಂತೆ ನಾವು ಕೇಳಬೇಕು.
ನಮ್ಮ ಹೈಕಮಾಂಡ್ ನಿರ್ಧಾರವೇ ಅಂತಿಮ ಅಂತ ಹೇಳಿಕೊಂಡು ತಮಗಿರುವ ಸಾಮರ್ಥ್ಯವನ್ನು, ನಾಡಪರವಿರುವ ರಾಜಕೀಯ ಇಚ್ಚಾಶಕ್ತಿಯ ಕೊರತೆಯನ್ನು ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಕೆಲವು ಪಕ್ಷಗಳು ತಾವು ರಾಷ್ಟ್ರೀಯ ಪಕ್ಷವೋ, ಅಥವಾ ಪ್ರಾದೇಶಿಕ
ಪಕ್ಷವೋ ಅನ್ನುವ ಗೊಂದಲದಲ್ಲೇ ವರ್ಷಗಳಿಂದ ಮುಳುಗಿಹೋಗಿವೆ. ಯಾವುದೇ ಪ್ರಾದೇಶಿಕ ಸಮಸ್ಯೆಯ ಬಗ್ಗೆ ಗಟ್ಟಿಯಾಗಿ ಮಾತನಾಡದಿರುವ ನಮ್ಮ ನಾಡಿನ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸ್ವಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ ಹೊರತು ಕನ್ನಡದ ದನಿಯಾನಿ ಎಂದಿಗೂ ಕೆಲಸಮಾಡಿಲ್ಲ.
ನಾವು ಕೇಂದ್ರಕ್ಕೆ ಕೊಟ್ಟ ತೆರಿಗೆ ಹಣವನ್ನು ನಮ್ಮ ರಾಜ್ಯದ ಅಭಿವೃದ್ಧಿಗೆ ಕೇಳುತ್ತಿದ್ದೀವಿ ಹೊರತು ನಾವೇನು ಕೇಂದ್ರಸರ್ಕಾರಕ್ಕೆ ಭಿಕ್ಷೆ ಬೇಡುತ್ತಿಲ್ಲ ಅಂತ ಹೇಳುವ ಧೈರ್ಯವು ನಮ್ಮ ರಾಜಕೀಯ ನಾಯಕರುಗಳಿಗೆ ಇರಬೇಕಿತ್ತು.
ತಮಿಳುನಾಡಿನ ಉದಾಹರಣೆ ತೆಗೆದುಕೊಂಡರೆ, ಅಲ್ಲಿ ಪ್ರತಿಸಲವೂ ಒಂದಿಲ್ಲೊಂದು ಪ್ರಾದೇಶಿಕ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಆ ಪಕ್ಷಗಳು ಕೇಂದ್ರದಲ್ಲಿರುವ ಸರ್ಕಾರಗಳಿಗೆ ಬೆಂಬಲ ಸೂಚಿಸಲಿ, ಸೂಚಿಸದೇ ಇರಲಿ, ರಾಜ್ಯದ ಅಭಿವೃದ್ದಿಯ ವಿಷಯ ಬಂದಾಗ ಒಕ್ಕೊರಳಿನಿಂದ ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡು ಬಂದಿದೆ.
ಪಶ್ಚಿಮ ಬಂಗಾಳದಲ್ಲಿಯೂ ತೃಣಮೂಲ ಕಾಂಗ್ರೆಸ್ ರಾಜ್ಯದ ಅಭಿವೃಧಿಗೆ ಕೇಂದ್ರವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಸಮಗ್ರ ಏಳಿಗೆ ಆಗಬೇಕೆಂದರೆ, ಒಂದು ಪ್ರಾದೇಶಿಕ ಪಕ್ಷ ಅತ್ಯಂತ ಅವಶ್ಯಕ. ಇಲ್ಲದಿದ್ದರೆ, ಕರ್ನಾಟಕಕ್ಕೆ ದಶಕಗಳಿಂದ ಕೇಂದ್ರ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆಗೆ ಕೊನೆಯೇ ಇಲ್ಲ.












Click it and Unblock the Notifications