ದೇವೇಗೌಡರ ನಿರಶನ: ಅಳುವುದೋ, ನಗುವುದೋ ನೀವೇ ಹೇಳಿ?

ಮಾಜಿ ಪ್ರಧಾನಿಯೊಬ್ಬರು ಇಡೀ ದೇಶದ ಹಿತಾಸಕ್ತಿ ಕುರಿತು ಚಿಂತಿಸಬೇಕೇ ಹೊರತು ಯಾವುದೋ ಒಂದು ಜಿಲ್ಲೆಯ ಅಭಿವೃದ್ಧಿ ಕುರಿತಲ್ಲ. ಹೋಗಲಿ, ಕರ್ನಾಟಕದ ಹಿತಾಸಕ್ತಿ ಬಗ್ಗೆ ದೇವೇಗೌಡರು ಚಿಂತಿಸುತ್ತಿದ್ದಾರೆಯೆ ಎಂದರೆ ಅದೂ ಇಲ್ಲ. ಅವರಿಗೆ ಬೇಕಾಗಿರುವುದು ಹಾಸನ ಜಿಲ್ಲೆಯ ಅಭಿವೃದ್ಧಿಯೊಂದೇ. ಹಾಸನ ಜಿಲ್ಲೆಯೊಂದೇ ಅಭಿವೃದ್ಧಿಯಾದರೆ ಅವರಿಗೇನು ಲಾಭ ? ಲಾಭವಿದ್ದೇ ಇದೆ.
ಲಾಭವಿಲ್ಲದೆ ಗೌಡರು ಯಾವುದಾದರೂ ಕೆಲಸ ಮಾಡುತ್ತಾರೆಯೆ? ಹಾಸನ ಜಿಲ್ಲೆ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆಯೆಂದು ಕ್ಯಾತೆ ತೆಗೆದು ಧರಣಿಗೆ ಮುಂದಾದ ಗೌಡರು, ಅದೇ ಕಾಳಜಿಯನ್ನು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಸಕಾಲದಲ್ಲಿ ಮನೆ ನಿರ್ಮಿಸಿಕೊಡದಿದ್ದಾಗ ಏಕೆ ಪ್ರದರ್ಶಿಸಲಿಲ್ಲ? ಆಗೇಕೆ ಅವರು ಧರಣಿಗೆ ಮುಂದಾಗಲಿಲ್ಲ? ಹೈ-ಕ ಪ್ರದೇಶದ ಜಿಲ್ಲೆಗಳು ಈಗಲೂ ಹಿಂದುಳಿದು ಅಭಿವೃದ್ಧಿಯಿಂದ ವಂಚಿತವಾಗಿವೆ. ಅದರ ಬಗ್ಗೆ ಏಕೆ ಗೌಡರು ಧ್ವನಿಯೆತ್ತಿ ಮುಖ್ಯಮಂತ್ರಿ ಮನೆಯೆದುರು ಧರಣಿ ಮಾಡುತ್ತಿಲ್ಲ?
ಹಾಸನ ಜಿಲ್ಲೆ, ಅದರಲ್ಲೂ ಹೊಳೆನರಸೀಪುರ ಹಾಗೂ ತಮ್ಮ ಕುಟುಂಬದ 'ಅಭಿವೃದ್ಧಿ" ಮಾತ್ರ ಆದರೆ ಸಾಕೆಂಬುದು ಗೌಡರ ಹಿಡನ್ ಅಜೆಂಡಾವೆ? ಅಧಿಕಾರ ಕೈತಪ್ಪಿದ ಬಳಿಕ, ಈಗ ಸರ್ಕಾರದ ವಿವಿಧ ಮೂಲಗಳಿಂದ ಹಣದ ಒಳ ಹರಿವು ತಮ್ಮತ್ತ ಸರಾಗವಾಗಿಲ್ಲವೆಂಬ ದುಃಖ ಅವರಿಗಿರುವಂತೆ ಕಾಣುತ್ತಿದೆ!
ದೇವೇಗೌಡರು ಪ್ರಧಾನಿಯಾಗಿದ್ದಾಗ ಸಂತಸಪಟ್ಟವರಲ್ಲಿ ನಾನೂ ಒಬ್ಬ. ಆದರೀಗ ಹಾಸನ ಅಭಿವೃದ್ಧಿಗಾಗಿ ಮಾತ್ರ ಅವರು ಧರಣಿಗೆ ಮುಂದಾಗಿರುವುದನ್ನು ನೋಡಿದರೆ ಗೌಡರು ಯಾಕಾದರೂ ಪ್ರಧಾನಿ ಪಟ್ಟಕ್ಕೇರಿದರೋ ಎಂದೆನಿಸುತ್ತದೆ. ಅವರೇರಿದ ಆ ಉನ್ನತ ಹುದ್ದೆಗಾದರೂ ಒಂದಿಷ್ಟು ಗೌರವ ಬೇಡವೇ? ಗೌಡರದು ಶುದ್ಧ ಗ್ರಾಮ ಪಂಚಾಯಿತಿ ಮಟ್ಟದ ರಾಜಕೀಯ. ಪ್ರಧಾನಿ ಪಟ್ಟಕ್ಕೇರಿದರೇನು, ಗೌಡರ ವ್ಯಕ್ತಿತ್ವ ಮಾತ್ರ ಕುಬ್ಜ ಕುಬ್ಜ..!












Click it and Unblock the Notifications