ಕೇಳುವವರೇ ಗತಿಯಿಲ್ಲದ ಕಳಸ ಭಂಡೂರಿ!

No drinking water in North Karnataka
ಮಾನ್ಯ ಸಂಪಾದಕರೇ,

ಹುಬ್ಬಳ್ಳಿ, ಧಾರವಾಡ ಮತ್ತು ಗದಗ ಜಿಲ್ಲೆಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. 15 ದಿನಕೊಮ್ಮೆ ಕುಡಿಯುವ ನೀರು ಸರಬರಾಜಾಗುವ ಕೆಟ್ಟ ಪರಿಸ್ಥಿತಿ ಉತ್ತರ ಕರ್ನಾಟಕದಲ್ಲಿದೆ. ಈ ನೀರಿನ ಬವಣೆಯನ್ನು ತಿರಿಸಲು ಮಹದಾಯಿ ನದಿಯ ನೀರನ್ನು ಕಳಸ ಭಂಡೂರ ನಾಲೆಗಳ ಮೂಲಕ ಮಲಪ್ರಭ ನದಿಗೆ ಹರಿಸುವ ಕಾಮಗಾರಿಯನ್ನು ಕರ್ನಾಟಕ ಕೈಗೆತ್ತಿಕೊಂಡಿತ್ತು. ಯಾರಿಗಾದರೂ ನೆನೆಪಿದೆಯಾ?

ಎರಡೂ ನಾಲೆಗಳಲ್ಲಿ ಅಣೆಕಟ್ಟುಗಳನ್ನು ಕಟ್ಟುವ ಯೋಜನೆಗೆ 2003ರಲ್ಲಿ ಸುಮಾರು 100 ಕೋಟಿ ಮಂಜೂರಾಗಿತ್ತು. ಶೇ. 77ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದ್ದು ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಬಾಕಿ ಇದೆ. 2002ರಲ್ಲಿ ಕೇಂದ್ರ ಸರ್ಕಾರದಿಂದ ಪಡೆದಿದ್ದ ಮಂಜೂರಾತಿಯನ್ನು ಪ್ರಶ್ನಿಸಿ ಗೋವಾ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಈ ವಿಚಾರಣೆ ನಡೆಯುತ್ತಿದ್ದರೂ ಗೋವಾ ಸರ್ಕಾರ ತನ್ನ ಲಾಬಿಯನ್ನು ಮುಂದುವರಿಸಿ ನ್ಯಾಯಾಧಿಕರಣ ನೇಮಿಸುವಂತೆ ಕೇಂದ್ರಕ್ಕೆ ಒತ್ತಾಯಿಸಿದೆ.

ನಮ್ಮ ಪಾಲಿನ 45 ಟಿ.ಎಮ್.ಸಿ ನೀರಿನಲ್ಲಿ 7.56 ಟಿ.ಎಮ್.ಸಿ ನೀರನ್ನು ಬಳಸಲು ಈ ದೊಣ್ಣೆ ನಾಯಕರ ಅಪ್ಪಣೆ ಬೇಕಿರುವುದು ಭಾರತದ ಒಕ್ಕೂಟದ ವ್ಯವಸ್ಥೆಗೆ ಅವಮಾನ ಮಾಡಿದಂತೆ. ಹೊಗೇನಕಲ್ ನಲ್ಲಿ ತಮಿಳುನಾಡು ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದಾಗ ಕರ್ನಾಟಕಕ್ಕೆ ಸುಮ್ಮನಿರುವಂತೆ ತಾಕೀತು ಮಾಡಿದ ಕೇಂದ್ರ ಸರ್ಕಾರ ಈಗ ಮಹದಾಯಿ ವಿಷಯದಲ್ಲಿ ನ್ಯಾಯಾಧಿಕರಣ ರೂಪಿಸಲು ಹೊರಟಿರುವುದು ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿರುವುದು ಸ್ಪಷ್ಟವಾಗಿದೆ.

ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಲ್ಲದೆ ಸಾಯುತ್ತಿದ್ದರೂ ನಮ್ಮ ಜನಪ್ರತಿನಿಧಿಗಳು ರೆಸಾರ್ಟುಗಳಲ್ಲಿ ಮೋಜುಮಾಡಿಕೊಂದು ಕುದುರೆ ವ್ಯಾಪಾರದಲ್ಲಿ ನಿರತರಾಗಿರುವುದು ಹೇಸಿಗೆಯ ವಿಷಯ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಾಯ ಹೇರಿ ಈ ಯೋಜನೆ ಪೂರ್ಣಗೊಳಿಸಿ ಉತ್ತರ ಕರ್ನಾಟಕದ ಲಕ್ಷಾಂತರ ಜನರ ದಾಹ ತೀರಿಸುವಲ್ಲಿ ಯಶಸ್ವಿಯಾಗಲಿ ಎಂದು ಈ ಮೂಲಕ ನಾನು ಆಗ್ರಹಿಸುತ್ತಿದ್ದೇನೆ.

ಅಮರ, ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+