ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರುಹೇಗೋ ಕಾಣೆ,ನಾನಂತೂ ಹೀಗೆ

By Staff
|
Google Oneindia Kannada News

ರಾಜಕಾರಣಿಗಳು ಹಾಗೆ, ಆಡಳಿತಾಂಗ ಹೀಗೆ: ಆದರೆ, ನಾನು ಹೇಗೆ ? ಎನ್ನುವ ಪ್ರಶ್ನೆ ಸಮಂಜಸವಾಗದೆ?

*ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ರಾಜಕಾರಣಿಗಳ ಟೀಕಿಸುವುದನ್ನು ನಿಲ್ಲಿಸಿ ಆಡಳಿತಾಂಗವನ್ನು ವಿಚಾರಿಸಿಕೊಳ್ಳುವುದರತ್ತ ನಾವು ಗಮನ ಹರಿಸುವುದು ತರವೆಂಬ ಶಾಮ್‌ಸುಂದರ್ ಅವರ ಲೇಖನ ನನ್ನೀ ಬರಹಕ್ಕೆ ಪ್ರೇರಣೆ. ಶಾಮ್ ಅವರು ತಮ್ಮ ಲೇಖನದಲ್ಲಿ ಕೇಳಿರುವ ಪ್ರಶ್ನೆಗಳಿಗೆ ನನ್ನ ಈ ಕೆಳಕಂಡ ಅನುಭವಗಳೇ ಉತ್ತರ ಹೇಳುತ್ತಿವೆ:

* 90 ದಶಕ. ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿದ್ದೆ. ಸರ್ಕಾರದ ಬೃಹತ್ ಯೋಜನೆಯೊಂದರ ಅನುಷ್ಠಾನದಿಂದಾಗಿ ಕೋಟಿಗಳ ವ್ಯವಹಾರ ನಾನಾ ಬ್ಯಾಂಕ್‌ಗಳ ಶಾಖೆಗಳಲ್ಲಿ ನಡೆದಿತ್ತು. ಸರ್ಕಾರದ ಉನ್ನತಾಧಿಕಾರಿಗಳು ಭರ್ಜರಿಯಾಗಿ ಕಬಳಿಸುತ್ತಿದ್ದರು. ಸಾಕ್ಷ್ಯಾಧಾರಗಳಿಲ್ಲದಿದ್ದರೂ ಇದು ಊರಿಗೆಲ್ಲ ಗೊತ್ತಿರುವ ಸಂಗತಿಯಾಗಿತ್ತು. ಇಂಥ ಸಂದರ್ಭದಲ್ಲಿ ನಾನು ಭ್ರಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ನಿರಾಕರಿಸಿದೆನಲ್ಲದೆ ಸರ್ಕಾರದ ಆಡಳಿತಾಂಗ ವ್ಯವಸ್ಥೆಯ ಭ್ರಷ್ಟತನವನ್ನು ಬಹಿರಂಗವಾಗಿ ವಿರೋಧಿಸಿದೆ. ಪರಿಣಾಮ, ಸರ್ಕಾರದ ಉನ್ನತಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದೆ. ಸ್ಥಳೀಯ ಭ್ರಷ್ಟ ಪುಢಾರಿಯೊಬ್ಬ ನನ್ನನ್ನು ಮಗ್ಗುಲ ಮುಳ್ಳಿನಂತೆ ಕಾಣತೊಡಗಿದ. ಅತ್ಯಂತ ವಿಷಾದದ ಸಂಗತಿಯೆಂದರೆ, ಆ ಊರಿನ ಸಾರ್ವಜನಿಕರು ಯಾರೂ ನನ್ನ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಬದಲಾಗಿ, ಚುನಾವಣೆಯಲ್ಲಿ ಆ ಪುಢಾರಿಯನ್ನು ವಿಧಾನಸಭೆಗೆ ಆರಿಸಿ ಕಳಿಸಿದರು!

ಈ ಪ್ರಕರಣದಲ್ಲಿ, ನನ್ನ ಬ್ಯಾಂಕಿಗೆ ಆಗಬಹುದಾಗಿದ್ದ ಲಕ್ಷಾಂತರ ರೂಪಾಯಿ ನಷ್ಟವನ್ನು ಉಳಿಸುವಲ್ಲಿ ಮಾತ್ರ ನಾನು ಸಫಲನಾದೆ. ಭ್ರಷ್ಟರಿಗೆ ಬ್ಯಾಂಕ್ ಅನುಕೂಲಗಳನ್ನು ನೀಡದಿರುವ ಮೂಲಕ, ಅರ್ಥಾತ್ ಕಟ್ಟುಬಾಕಿಗೆ ಅವಕಾಶ ಮಾಡಿಕೊಡದಿರುವ ಮೂಲಕ, ಸಾರ್ವಜನಿಕರ ಹಣವು ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಪುಢಾರಿಗಳ ಪಾಲಾಗದಂತೆ ನೋಡಿಕೊಂಡ ತೃಪ್ತಿ ನನ್ನದಾಯಿತು.

* 80ರ ದಶಕ. ಬೆಂಗಳೂರು. ಬೇರೊಂದು ಊರಿನಿಂದ ವರ್ಗವಾಗಿ ಬಂದ ನಾನು ಪಡಿತರ ಚೀಟಿಗಾಗಿ ಸಂಬಂಧಿತ ಸರ್ಕಾರಿ ಕಚೇರಿಗೆ ಹೋದಾಗ ಅಲ್ಲಿ 30 ರುಪಾಯಿಗಳ ಲಂಚಕ್ಕೆ ಬೇಡಿಕೆ ಬಂತು. ಕೊಡಲು ನಿರಾಕರಿಸಿದೆ. ಆರು ತಿಂಗಳು ಓಡಾಡಿಸಿದರು. ಆದರೂ ನಾನು ಜಗ್ಗಲಿಲ್ಲ. ಸದರಿ ಕಚೇರಿಯೆದುರು ಒಂದು ದಿನ ಪಬ್ಲಿಕ್ಕಾಗಿ ಆ ಭ್ರಷ್ಟರ ಜನ್ಮ ಜಾಲಾಡತೊಡಗಿದೆ. ಸಾರ್ವಜನಿಕರೆಲ್ಲ ನನ್ನನ್ನು ಮೃಗಾಲಯದ ಪ್ರಾಣಿಯಂತೆ ನೋಡತೊಡಗಿದರಾಗಲೀ ಯಾರೂ ನನ್ನೊಡನೆ ದನಿಗೂಡಿಸಲಿಲ್ಲ!

ಆದರೆ, ಇದಾದ ಕೆಲವೇ ದಿನಗಳಲ್ಲಿ ಲಂಚವಿಲ್ಲದೆ ಪಡಿತರ ಚೀಟಿ ನನ್ನ ಕೈಗೆ ಬಂತು. ಅಷ್ಟರೊಳಗೆ ನನಗೆ ಆರು ತಿಂಗಳಿನ ಪಡಿತರ ನಷ್ಟವಾಗಿತ್ತು. ನನ್ನ ನೆರೆಹೊರೆಯವರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಬಹುಪಾಲು ಬಂಧುಗಳೂ ಈ ವಿಷಯದಲ್ಲಿ ನನ್ನನ್ನು ದಡ್ಡನೆಂದು ಜರಿದರು!

* ಕೆಲ ತಿಂಗಳುಗಳ ಹಿಂದೆ. ಇದೇ ಬೆಂಗಳೂರು. ನಾಯಿಗಳ ಉಪಟಳದ ಬಗ್ಗೆ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯೊಂದು ನಡೆಯಿತು. ಅದರಲ್ಲಿ ನಾನು ಸಕ್ರಿಯ ಪಾತ್ರ ವಹಿಸಿದ್ದೆ. ಕಾರ್ಯಯೋಜನೆಯ ನಿರ್ಧಾರ ಮತ್ತು ಅನುಷ್ಠಾನಕ್ಕಾಗಿ ಮುಂದಿನ ಸಮಾಲೋಚನಾ ಸಭೆಯ ದಿನಾಂಕ ನಿಗದಿಯಾಯಿತು. ಆದರೆ ತದನಂತರದಲ್ಲಿ ಆ ಸಭೆಯನ್ನು ಮಹಾನಗರಪಾಲಿಕೆಯು ಕಾರಣಾಂತರದಿಂದ ಮುಂದೂಡಿತು. ಹಲವು ತಿಂಗಳುಗಳುರುಳಿದರೂ ಇನ್ನೂ ಮಹಾನಗರಪಾಲಿಕೆಯು ಸಭೆಯನ್ನು ಏರ್ಪಡಿಸಿಲ್ಲ. ನನ್ನ ವಿಚಾರಣೆಗಳು ಅರಣ್ಯರೋದನವಾಗಿವೆ. ವಿಷಾದದ ಸಂಗತಿಯೆಂದರೆ, ಬಹುತೇಕ ಸಂಘಸಂಸ್ಥೆಗಳವರೇ ಈಗ ಈ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ!

* ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ. ಬೆಂಗಳೂರಿನ ಒಂದು 'ವಿದ್ಯಾ'ವಂತ ಬಡಾವಣೆ. ವಿಳಾಸ ಬದಲಾದ ಮತದಾರರ ಗುರುತಿನ ಚೀಟಿಗಾಗಿ ಸರತಿಯಲ್ಲಿ ನಿಂತು ಫೋಟೋ ತೆಗಿಸಿಕೊಂಡೆ. ಚೀಟಿಗೆ ಹೊದಿಸುವ ಪ್ಲಾಸ್ಟಿಕ್ ಹಾಳೆ ಖಾಲಿಯಾಗಿದೆಯೆಂದು ಹೇಳಿ ಚೀಟಿಯನ್ನು ಮರುದಿನ ಮಹಾನಗರಪಾಲಿಕೆ ಕಚೇರಿಗೆ ಬಂದು ಪಡೆದುಕೊಳ್ಳುವಂತೆ ಅಲ್ಲಿದ್ದ ಸಿಬ್ಬಂದಿ 'ಆದೇಶಿಸಿದರು'. ಇನ್ನೊಮ್ಮೆ ಬರಲು ಹೇಳಿ ಎಲ್ಲರ ಸಮಯವನ್ನೂ ಪೋಲು ಮಾಡುವುದು ಉಚಿತವಲ್ಲವೆಂದೂ ಪ್ಲಾಸ್ಟಿಕ್ ಹಾಳೆಯನ್ನು ತರಿಸಿರೆಂದೂ ಸಿಬ್ಬಂದಿಯನ್ನು ಒತ್ತಾಯಿಸತೊಡಗಿದೆ. ಅಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರೇ ನನ್ನಮೇಲೆ ಹರಿಹಾಯ್ದರು! 'ಹೋಗ್ಹೋಗ್ರೀ, ಪ್ಲಾಸ್ಟಿಕ್ ಇಲ್ಲ ಅಂತ ಅವ್ರು ಹೇಳ್ತಾ ಇಲ್ವಾ? ನಾಳೆ ಆಫೀಸ್‌ಗ್ಹೋಗಿ ತಗೊಳ್ಳಿ. ಸುಮ್ನೆ ಹೋಗಿ', ಎಂದು ನನಗೇ ದಬಾಯಿಸತೊಡಗಿದರು! ಅಷ್ಟರಲ್ಲಾಗಲೇ ಪ್ಲಾಸ್ಟಿಕ್ ಹಾಳೆಗಾಗಿ ಅದೆಲ್ಲಿಗೋ ಫೋನ್ ಮಾಡಿ ಮಾತಾಡುತ್ತಿದ್ದ ಮಹಾನಗರಪಾಲಿಕೆ ನೌಕರನು ಜನರ ಈ ಮಾತು ಕೇಳಿದವನೇ ಮೊಬೈಲ್ ಕಟ್ ಮಾಡಿ ಕಿಸೆಯೊಳಗಿಟ್ಟುಕೊಂಡು ಸುಮ್ಮನೆ ಕುಳಿತುಬಿಟ್ಟ!

ಮರುದಿನದಿಂದ ನಾಲ್ಕು ದಿನ ಮಹಾನಗರಪಾಲಿಕೆಯ ಕಚೇರಿಗೆ ಓಡಾಡಿದರೂ ಚೀಟಿ ಸಿಗಲಿಲ್ಲ. ನನ್ನಂತೆ ಅನೇಕರು ಎಡತಾಕುತ್ತಿದ್ದರು. ಕೊನೆಗೆ ನನ್ನ ಒತ್ತಡ ಜೋರಾದಾಗ, ಜೊತೆಗೆ, ಬರಹಗಾರನಾದ ನಾನು ಪತ್ರಿಕೆಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿಯೇನೆಂಬ ಅನುಮಾನ ಸಂಬಂಧಿತ ಸಿಬ್ಬಂದಿಗೆ ಉಂಟಾದಾಗ ಗುರುತಿನ ಚೀಟಿ ನನ್ನ ಮನೆಬಾಗಿಲಿಗೇ ಬಂತು!

* ಈ ಚುನಾವಣೆಯ ಸಂದರ್ಭದಲ್ಲೇ, ಮತದಾನದ ಕರ್ತವ್ಯದ ಬಗ್ಗೆ ನಾನು ಬರೆದಿದ್ದ ಸುದೀರ್ಘ ಲೇಖನವೊಂದು ಜನಪ್ರಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅನೇಕ ಕಡೆಗಳಲ್ಲಿ ನಾನು ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿಯೂ ಇದ್ದೆ. ಆದರೆ ಪರಿಣಾಮ ಮಾತ್ರ ಶೂನ್ಯ. ನನ್ನ ಬಡಾವಣೆಯೂ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಮತದಾನದ ಪ್ರಮಾಣ ಎಂದಿನಂತೆ ಶೇಕಡಾ 45ರಿಂದ 55 ಅಷ್ಟೆ!

ವೋಟು ಹಾಕದೇ ಮನೆಯಲ್ಲೇ ಉಳಿದಿದ್ದ ವಿದ್ಯಾವಂತ 'ಗಣ್ಯ'ರೊಬ್ಬರನ್ನು ನಾನು ವಿಚಾರಿಸಿದಾಗ ಅವರ ಉತ್ತರ, 'ಇಷ್ಟು ಮಾತಾಡ್ತೀರಲ್ಲಾ, ನೀವು ವೋಟು ಹಾಕಿದ್ದೀರಾ?' ಅವರಿಗೆ ನನ್ನ ಬೆರಳಿನ ಮಸಿ ಗುರುತನ್ನು ತೋರಿಸಿದೆ. ಅದಕ್ಕೆ ಅವರ ಮರುಪ್ರಶ್ನೆ, 'ನಿಮ್ಮ ಫ್ಯಾಮಿಲಿ ಮೆಂಬರ್‍ಸ್ ಎಲ್ರೂ ಹಾಕಿದ್ದಾರಾ?' 'ಹೌದು, ಎಲ್ರೂ ಹಾಕಿದ್ದಾರೆ. ಬೇಕಾದರೆ ಮನೆಗೆ ಬಂದು ನೋಡಿ', ಎಂದೆ. ಸುಮ್ಮನಾದರು. ಅವರ ಮನೆಯಲ್ಲಿ ಮೂರು ಮತಗಳಿದ್ದು ಯಾರೂ ಮತದಾನ ಮಾಡಿರಲಿಲ್ಲ!'

ಒಟ್ಟಾರೆ ಸಾರಾಂಶ ಇಷ್ಟೆ. ಪ್ರಜೆಗಳಾದ ನಾವು ಜಾಗೃತರಾಗಬೇಕಾಗಿದೆ; ಸೋಮಾರಿತನ ಬಿಟ್ಟು ಎದ್ದೇಳಬೇಕಾಗಿದೆ; ಸ್ವಾರ್ಥ ತೊರೆದು ಭ್ರಷ್ಟರ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾಗಿದೆ; ಮೊದಲು ಸ್ವಯಂ ನಾವು ಭ್ರಷ್ಟತನದಿಂದ ದೂರಾಗಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X