ಕುಸೇಲನ್ ಬಿಡುಗಡೆಗೆ ಅನುಮತಿ ನೀಡಿದ್ದು ನಾಚಿಕೆಗೇಡು
ತಮಿಳುನಾಡಿನಲ್ಲಿ ಜೀವನೋಪಾಯಕ್ಕಾಗಿ ನೆಲೆಸಿರುವುದರಿಂದ ನಾನು ತಮಿಳಿಗ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತೆ ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದು-ನೆಲೆಸಿರುವ ತಮಿಳರು ಈ ಸಂದರ್ಭದಲ್ಲಿ ರಜನೀಕಾಂತ್‌ನ ಉದಾಹರಣೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಕನ್ನಡಿಗರೊಡನೆ ಕೈ ಜೋಡಿಸಿ ರಜನೀಕಾಂತನ ಚಿತ್ರವನ್ನು ಇಲ್ಲಿ ಬಹಿಷ್ಕರಿಸಬೇಕಿದೆ. ಜನತೆಯ ಜೊತೆ ರಜನಿಯಿಂದ ಉಗಿಸಿಕೊಂಡಿದ್ದ ಬಿಎಸ್ವೈ, ಎಸ್ಎಂ ಕೃಷ್ಣ, ಕುಮಾರಸ್ವಾಮಿಯವರೂ ಪಕ್ಷಭೇದ ಮರೆತು ಕನ್ನಡದ ಸ್ವಾಭಿಮಾನ ಉಳಿಸಿಕೊಳ್ಳಲು ಟೊಂಕಕಟ್ಟಿನಿಲ್ಲಬೇಕಿದೆ.
ಕನ್ನಡ ಬಾಂಧವರೆ,
ರಜನೀಕಾಂತ್ ಅಭಿನಯದ ಕುಸೇಲನ್ ಎಂಬ ಹೊಸ ತಮಿಳು ಚಿತ್ರವನ್ನು ಬೆಂಗಳೂರು ಮತ್ತು ಕರ್ನಾಟಕದಲ್ಲಿ ಬಿಡುಗಡೆಗೆ ಇರುವ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಅವರ ಹೇಳಿಕೆ ಸಮಸ್ತ ಕನ್ನಡಿಗರು ತಲೆ ತಗ್ಗಿಸುವಂತೆ ಮಾಡಿದೆ. ಈ ಚಿತ್ರವನ್ನು ಕನ್ನಡಿಗರೊಬ್ಬರು ಕರ್ನಾಟಕದಲ್ಲಿ 2 ಕೋಟಿ ರು. ದುಡ್ಡು ತೆತ್ತು ವಿತರಣೆಗೆ ಪಡೆದಿದ್ದಾರೆ, ಇದು ಬಿಡುಗಡೆಯಾಗದಿದ್ದರೆ ಕನ್ನಡಿಗನಿಗೆ ನಷ್ಟವಾಗುತ್ತದೆ ಎಂದು ಅವರು ಉದುರಿಸಿರುವ ನುಡಿಮುತ್ತುಗಳು 5 ಕೋಟಿ ಕನ್ನಡಿಗರ ಮಾನವನ್ನು2 ಕೋಟಿ ರು.ಗಳಿಗೆ ಹರಾಜು ಹಾಕಲು ಸಜ್ಜಾಗಿರುವಂತಿಲ್ಲವೇ? ಆ ವಿತರಕರಿಗೆ ಸ್ವಲ್ಪ ಮಟ್ಟಿಗಾದರೂ ಕನ್ನಡದ ಬಗೆಗೆ ಕಳಕಳಿಯಿದ್ದಿದ್ದರೆ ಇಡೀ ಕನ್ನಡ ನಾಡಿನ ಜನತೆಯನ್ನು ಅವಹೇಳನ ಮಾಡಿರುವ ರಜನೀಕಾಂತರ ಚಿತ್ರವನ್ನು ಬಿಡುಗಡೆಗೊಳಿಸಲು ಆಣಿಯಾಗುತ್ತಿದ್ದರೆ? ಇದಕ್ಕೆ ಸಮಸ್ತ ಕನ್ನಡಿಗರು ತಕ್ಕ ಉತ್ತರ ನೀಡಬೇಕಿದೆ ಅಲ್ಲವೇ?
ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರ ಬಂದ ನಂತರದಲ್ಲಿ ವಿವಾದ ಬಗೆಹರಿಸಿಕೊಳ್ಳಲು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸಿತು. ಕೆಲ ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ಜನಪ್ರತಿನಿಧಿಗಳ ಸರ್ಕಾರ ಇಲ್ಲದ ಸಂದರ್ಭದಲ್ಲಿ, ರಾಜಕೀಯ ಪ್ರೇರಿತರಾಗಿಯೋ ಅಥವ ತಮ್ಮ ಬಲ, ಶಕ್ತಿ, ಸಾಮರ್ಥ್ಯದ ಪ್ರದರ್ಶನದ ತೋರ್ಪಡಿಕೆಗಾಗಿಯೋ ಕರುಣಾನಿಧಿ ನೇತೃತ್ವದ ತಮಿಳುನಾಡು ಸರಕಾರ "ಹೊಗೇನಕಲ್ ಯೋಜನೆ"ಯನ್ನು ಪ್ರಾರಂಭಿಸಿತು. ಅಂದು ನಮ್ಮ ಕೇಂದ್ರ ಸರ್ಕಾರ ಸಹ, ತನ್ನ ಜತೆಗೆ ಕೈ ಜೋಡಿಸಿರುವ ಕರುಣಾನಿಧಿಯವರ ನಿಲುವಿನ ಪರವಾಗಿ ವಾಲಿದ್ದೇ ಹೆಚ್ಚು.ಕಾನೂನು ಬಾಹಿರವಾದ ತಮಿಳುನಾಡು ಸರ್ಕಾರದ ಯೋಜನೆಯನ್ನು ಕರ್ನಾಟಕದ ರೈತರು, ನಾಡಪರ ಸಂಘಟನೆಗಳು, ಹಿತಚಿಂತಕರು ತೀವ್ರವಾಗಿ ಪ್ರತಿಭಟಿಸಿ, ವಿರೋಧಿಸಿ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಲ್ಲಿ ಸಫಲರಾಗಿದ್ದರು.
ಅಂದು ತಮಿಳುನಾಡು ಸರ್ಕಾರದ ನಿಲುವನ್ನು ಬೆಂಬಲಿಸುತ್ತ, ತಮಿಳು ಚಿತ್ರರಂಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಿಳುನಾಡು ಸರ್ಕಾರದ ಪರವಾಗಿ ತನ್ನ ಬೆಂಬಲವನ್ನು ವ್ಯಕ್ತಪಡಿಸುವ ಸಮಯದಲ್ಲಿ ರಜನೀಕಾಂತ್ ಕನ್ನಡಿಗರನ್ನು ಅವಹೇಳನಕಾರಿ ಮಾತುಗಳಿಂದ ನಿಂದಿಸಿ ದರ್ಪವನ್ನು ಮೆರೆದಿದ್ದರು. ಕರ್ನಾಟಕದಲ್ಲಿ ನನ್ನ ಚಿತ್ರ ಬಿಡುಗಡೆ ಆಗದಿದ್ದರೆ ನನಗೇನು ನಷ್ಟವಿಲ್ಲ ಎಂಬಂತಹ ಅಹಂಕಾರದ ಮಾತುಗಳನ್ನಾಡಿದ್ದರು. ತಮಿಳರು ಕರ್ನಾಟಕದಲ್ಲಿ ಸಹ ಇದ್ದಾರೆ, ಅವರು ತನ್ನ ಚಿತ್ರ ನೋಡುವುದರಿಂದ ವಂಚಿತರಾಗುತ್ತಾರೆ, ತಾನು ಸಹ ತನ್ನ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತೇನೆ ಎಂಬ ಕಾಳಜಿ ಮೊದಲಿಗೆ ಇದ್ದಿದ್ದರೆ ಅನಾವಶ್ಯಕವಾಗಿ ಮಾತನಾಡಿ ಕನ್ನಡಿಗರ ಮನ ನೋಯಿಸಬಾರದಿತ್ತು ಅಥವ ಈಗ ಚಿತ್ರವನ್ನು ವಿತರಿಸುವ ಮೊದಲಾದರೂ ಆಡಿದ ತಪ್ಪು ಮಾತುಗಳಿಗೆ ಕನ್ನಡಿಗರ ಕ್ಷಮಾಪಣೆ ಕೇಳುವ ಔದಾರ್ಯವನ್ನು ತೋರಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ರಜನೀಕಾಂತರಿಗೆ ಆತ್ಮಾಭಿಮಾನ ಎಂಬುದಿದ್ದಿದ್ದರೆ, ಅಂದು ತಾವು ಹೇಳಿದ ಮಾತುಗಳ ಬಗ್ಗೆ ಬದ್ಧತೆಯಿದ್ದಿದ್ದರೆ ಇಂದು ತಮ್ಮ ಹೊಸ ಚಿತ್ರವನ್ನು ಖುದ್ದಾಗಿ ಅವರೇ ಕರ್ನಾಟಕದಲ್ಲಿ ವಿತರಿಸಲು ಅನುಮತಿಸಬಾರದಿತ್ತು. ನಾಲಿಗೆಯಲ್ಲಿ ಉಲಿಯುವ ಮಾತು, ಮನೋಭಾವ, ನಡತೆ ಮತ್ತು ನಡವಳಿಕೆ ಒಬ್ಬ ವ್ಯಕ್ತಿಯ ಸಂಸ್ಕೃತಿಯನ್ನು ಪರಿಚಯಿಸುತ್ತದೆ ಎಂಬ ಸತ್ಯದಂತೆ ಮತ್ತು "ನಾನು ಹೇಳುವುದನ್ನೇ ಮಾಡೋದು - ಮಾಡುವುದನ್ನೆ ಹೇಳುವುದು" ಎಂದು ಶಿಳ್ಳುಗಿಟ್ಟಿಸಿಕೊಳ್ಳಲು ತಾನು ಸಿನಿಮಾದಲ್ಲಿ ಹೇಳುವ ಸಂಭಾಷಣೆಗೂ, ನಿಜಜೀವನದಲ್ಲಿ ತಾನು ಅನುಸರಿಸುವ ರೀತಿಗೂ ಸಾಮ್ಯವಿರುತ್ತಿತ್ತು. ಆದರೆ ಈಗ ಜಯಮಾಲಾಗೆ ಬೇಕಾಬಿಟ್ಟಿ ಪತ್ರವೊಂದನ್ನು ಗೀಚಿ ಬರೆದು ರವಾನಿಸಿ ಇದೇ ನನ್ನ ತಪ್ಪೊಪ್ಪಿಗೆ ಪತ್ರ ಎಂದು ಕನ್ನಡಿಗರಿಗೆಲ್ಲ ಕಿವಿಯಲ್ಲಿ ಹೂವು ಇಡುತ್ತ, ತನ್ನ ಮಾತು, ನಂಬಿಕೆ, ಹೊಣೆಗಾರಿಕೆ ಮತ್ತು ತಿಳಿವಳಿಕೆಯನ್ನು ಗಾಳಿಗೆ ತೂರಿ ಹಣದ ಮುಂದೆ ಇವೆಲ್ಲ ನಗಣ್ಯ ಎಂದು ತೋರಿಸಿ ತನ್ನ ಬಣ್ಣದ ಮುಖವಾಡವನ್ನು ಕಳಚಿಟ್ಟಿದ್ದಾರೆ.
ಕನ್ನಡಿಗರನ್ನು ಹೇಗೆ ಯಾವರೀತಿ ಯಾರು ಬೇಕಾದರೂ ಚುಡಾಯಿಸಿ, ಅವಹೇಳನಗೊಳಿಸಿ ಅರಗಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಮೇಲಿನ ಘಟನೆ ಮತ್ತು ಜಯಮಾಲ ಅವರ ಹೇಳಿಕೆ ಸಾಬೀತು ಮಾಡುತ್ತದೆ. ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಬೇಕಾದ ವ್ಯವಸ್ಥೆಯೊಂದು ಯಾವ ಸ್ವಾರ್ಥ ಸಾಧಾನೆಗಾಗಿ ತನ್ನ ಸ್ವಾಭಿಮಾನವನ್ನು ಕಿತ್ತೊಗೆದಿದೆ ಎಂದು ಇಡೀ ಕನ್ನಡ ನಾಡಿನ ಜನತೆ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೇ ಪ್ರಶ್ನಿಸಬೇಕಿದೆ. ಹೊಗೇನಕಲ್ ಹೋರಾಟದ ಸಮಯದಲ್ಲಿ ನಮ್ಮ ಚಿತ್ರ ಕಲಾವಿದರ ಸಂಘಟನೆಯೊಂದಿಗೆ, ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಕರ್ನಾಟಕದ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ರಜನೀಕಾಂತ್ ಅವರು ಕರ್ನಾಟಕದ ಪರವಾಗಿ ಹೋರಾಟವನ್ನು ಬೆಂಬಲಿಸಿದವರೆಲ್ಲರನ್ನೂ ಒಳಗೊಂಡಂತೆ ಹೀಯಾಳಿಸಿದ್ದರು. ಹಾಗಾಗಿ ಅವಮಾನಿತರಾಗಿದ್ದ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ರಜನೀಕಾಂತರ ಚಿತ್ರವನ್ನು ಇಲ್ಲಿ ಬಹಿಷ್ಕರಿಸುವುದನ್ನು ಬಿಟ್ಟು ಬಿಡುಗಡೆಗೆ ಶ್ರಮಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಕುಸೇಲನ್ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುವುದು ಕೇವಲ ಕನ್ನಡ ಪರ ಸಂಘಟನೆಗಳ ಹೋರಾಟಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಇಡೀ ನಾಡಿನ ಸ್ವಾಭಿಮಾನಿ ಕನ್ನಡಿಗರ ಜನಾಂದೋಲನ ಹೋರಾಟವಾಗಿ ರೂಪಿತಗೊಳ್ಳಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇರುವುದು ಕನ್ನಡ ಚಿತ್ರಗಳ ಅಭಿವೃದ್ಧಿಗೆ ಎಂದು ಅದರ ಅಧ್ಯಕ್ಷರಿಗೆ ಮನವರಿಕೆ ಮಾಡಿಸಬೇಕು. ಹೇಗೆ ಕನ್ನಡಿಗನಾಗಿದ್ದರೂ [ಅವಕಾಶ ಸಾಧನೆಗಾಗಿ ನಾನು ಸಹ ಕನ್ನಡಿಗ ಎಂದು ರಜನೀಕಾಂತ್ ಆಗಾಗ ಹೇಳಿರುವುದುಂಟು] ತಮಿಳುನಾಡಿನಲ್ಲಿ ಜೀವನೋಪಾಯಕ್ಕಾಗಿ ನೆಲೆಸಿರುವುದರಿಂದ ನಾನು ತಮಿಳಿಗ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತೆ ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ-ನೆಲೆಸಿರುವ ತಮಿಳರು ಈ ಸಂದರ್ಭದಲ್ಲಿ ರಜನೀಕಾಂತ್‌ನ ಉದಾಹರಣೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಕನ್ನಡಿಗರೊಡನೆ ಕೈ ಜೋಡಿಸಿ ರಜನೀಕಾಂತನ ಚಿತ್ರವನ್ನು ಇಲ್ಲಿ ಬಹಿಷ್ಕರಿಸಬೇಕಿದೆ. ಕನ್ನಡದ ಋಣವಿರುವ ನಮ್ಮ ರಾಜ್ಯದ ಯಾವುದೇ ವಿತರಕರು ಮತ್ತು ಚಿತ್ರಮಂದಿರದವರು ಸಹ ಆ ಚಿತ್ರದ ಬಿಡುಗಡೆಗೆ ಸಹಕರಿಸದಿರಲು ಮುಂದಾಗಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಂದು ಹೋಗೆನಕಲ್ ಹೋರಾಟದಲ್ಲಿ ಇತರರಿಗಿಂತ ಒಂದಿಂಚು ಹೆಚ್ಚೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ರಜನೀಕಾಂತ್‌ನಿಂದ ವೈಯುಕ್ತಿಕವಾಗಿ ನಿಂದನೆಗೊಳಗಾಗಿದ್ದ, ಇಂದು ಆಡಳಿತ ಚುಕ್ಕಾಣಿ ಹಿಡಿದಿರುವ ಬಿಎಸ್ ಯಡಿಯೂರಪ್ಪನವರು ಸಹ ಈ ಚಿತ್ರದ ವಿರುದ್ಧವಾಗಿ ತಮ್ಮ ನಿಲುವನ್ನು ಪ್ರತಿಪಾದಿಸಬೇಕಿದೆ. ಇವರ ಜತೆಗೆ ರಜನೀಕಾಂತ್‌ನಿಂದ ಬೈಸಿಕೊಂಡಿರುವ ಪ್ರತಿಪಕ್ಷದಲ್ಲಿರುವ ಎಸ್ಎಂ ಕೃಷ್ಣ ಮತ್ತು ಕುಮಾರಸ್ವಾಮಿಯವರು ಸಹ ಇದು ಕನ್ನಡಿಗರೆಲ್ಲರ ಸ್ವಾಭಿಮಾನದ ಪ್ರಶ್ನೆ ಎಂದು ಪಕ್ಷಾತೀತವಾಗಿ ಒಗ್ಗೂಡಿ ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ.
ತಮಿಳು ಚಿತ್ರರಂಗದವರಿಂದ ಕನ್ನಡಿಗರ ಮೇಲಿನ ಅವಹೇಳನ ಇದು ಮೊದಲನೆಯದೇನೂ ಅಲ್ಲ. ಕಾಲಕಾಲಕ್ಕೆ ಇವು ನಿರಂತರವಾಗಿ ನಡೆದುಬಂದಿದೆ. ಇವು ಕನ್ನಡಿಗರ ಗಮನಕ್ಕೆ ಬಂದಾಗ, ಕನ್ನಡಿಗರ ವ್ಯವಸ್ಥಿತವಾದ ಪ್ರತಿಭಟನೆ ಮತ್ತು ಹೋರಾಟದಿಂದ ಬೇಜವಾಬ್ದಾರಿ ತಮಿಳರ ಅಟ್ಟಹಾಸವನ್ನು ಆಗಾಗ್ಗೆ ತಡೆಹಿಡಿದಿದೆ. 1964ರಲ್ಲಿ ಕಾಂಚಿ ತಲೈವನ್ ಎಂಬ ತಮಿಳು ಸಿನಿಮಾದಲ್ಲಿ ಕನ್ನಡಿಗರ ಮನನೋಯಿಸಿದ ಘಟನೆಗಾಗಿ ಆ ಚಿತ್ರದ ಪ್ರದರ್ಶನ ಕನ್ನಡ ಚಳವಳಿಗಾರರ ಪ್ರತಿಭಟನೆಯಿಂದ ಸ್ಥಗಿತಗೊಂಡಾಗ ತಮಿಳಿನ ಮೇರು ನಟ ಎಂಜಿಆರ್ ಬೆಂಗಳೂರಿಗೆ ಆಗಮಿಸಿ ಕ್ಷಮೆ ಕೇಳಿರುವುದು ನಮ್ಮ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಂತರದಲ್ಲಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ರೂಪುಗೊಂಡು ಜನಪ್ರಿಯತೆಯ ಉತ್ತುಂಗಕ್ಕೇರಿದ್ದೂ ನಿಜವೆ. ತಮಿಳುನಾಡಿನಲ್ಲಿ ನಾನು ಎಂಜಿಆರ್ ಉತ್ತರಾಧಿಕಾರಿ ಎಂದು ಬಿಂಬಿಸಲ್ಪಡುತ್ತಿರುವ ರಜನೀಕಾಂತ್ ಸರಿಯಾದ ರೀತಿಯಲ್ಲಿ ಕ್ಷಮಾಪಣೆ ಕೇಳುವ ಮೇಲ್ಪಂಕ್ತಿಯನ್ನು ಅನುಸರಿಸುವುದು ಅವರ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂಬ ಅರಿವು ಅವರಿಗೆ ಮನವರಿಕೆಯಾಗಬೇಕಿದೆ.
ವಂದನೆಗಳು
ಚಂ.ಶೇ. ಕಲ್ಯಾಣ ರಾಮನ್, ಬೆಂಗಳೂರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications