''ಚಿತಾಗಾರಗಳ ಕಾರ್ಮಿಕರಿಗೆ ವರ್ಷದಿಂದ ಸಂಬಳವೇ ಸಿಕ್ಕಿಲ್ಲ''
ಬೆಂಗಳೂರು, ಏಪ್ರಿಲ್ 16: ಕೋವಿಡ್ ಕಾಲದಲ್ಲೂ ಮೃತಪಟ್ಟವರ ಅಂತ್ಯಕ್ರಿಯೆಗೆ ನೆರವಾಗುತ್ತಿರುವ ಸ್ಮಶಾನ ಹಾಗೂ ಚಿತಾಗಾರಗಳ ಕಾರ್ಮಿಕರಿಗೆ ತಿಂಗಳುಗಟ್ಟಲೆ ಸಂಬಳ ನೀಡದೆ ಬಿಬಿಎಂಪಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದು, ಶೀಘ್ರದಲ್ಲೇ ಅವರ ವೇತನ ಪಾವತಿ ಮಾಡದಿದ್ದರೆ ಬೀದಿಗಳಿದು ಹೋರಾಟ ಮಾಡಬೇಕಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ನಗರಾಧ್ಯಕ್ಷೆ ಕುಶಲ ಸ್ವಾಮಿ ಬಿಬಿಎಂಪಿ ಆಯುಕ್ತರಿಗೆ ಎಚ್ಚರಿಕ ನೀಡಿದ್ದಾರೆ.
ಬ್ರಿಗೇಡ್ ರಸ್ತೆ ಬಳಿಯ ಕ್ಯಾಸ್ಟಲ್ ಸ್ಟ್ರೀಟ್‌ನ ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯ ಕೆಲ ವಲಯಗಳಲ್ಲಿ ಸ್ಮಶಾನ ನಿರ್ವಹಣಾ ಸಿಬ್ಬಂದಿ ಸಂಬಳದ ಮುಖ ನೋಡಿ 10 ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ. ಬಿಬಿಎಂಪಿ ಅಧಿಕಾರಿಗಳ ಈ ನಡೆಯಿಂದ ಕಾರ್ಮಿಕರ ಕುಟುಂಬ ಹಸಿವಿನಿಂದ ನರಳುವಂತಾಗಿದೆ. ಅಧಿಕಾರಿಗಳಿಗೆ ಮಾನವೀಯತೆ ಜತೆಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ತಡೆ ಹಿಡಿದಿರುವ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಅವರಿಗೆ ಇಂತಿಷ್ಟು ಸಂಬಳ ಎಂಬುದು ಇರಲಿಲ್ಲ ತಿಂಗಳೊಳಗೆ 2000 ರೂ. ವರೆಗೆ ನೀಡುತ್ತಿದ್ದರು. ನಂತರ ಕಾಂಗ್ರೆಸ್‌ನ ಜಿ. ಪದ್ಮಾವತಿ ಅವರು ಮೇಯರ್ ಆಗಿದ್ದಾಗ ಮಾಸಿಕ ವೇತನ 10500 ರೂ. ನಿಗದಿಯಾಯಿತು. ಬಳಿಕ ವೇತನ ಹೆಚ್ಚಿಸದ ಕಾರಣ ಈ ಸಂಬಳದಿಂದ ಕುಟುಂಬ ನಿರ್ವಾಹಣೆ ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಪ್ರತಿಭಟನೆ ನಡೆಸಿದ ನಂತರ ತಿಂಗಳಿಗೆ 17000 ಕನಿಷ್ಠ ವೇತನ ನಿಗದಿ ಪಡಿಸುವಂತೆ ಹಿಂದಿನ ಬಿಬಿಎಂಪಿ ಆಯುಕ್ತರು ಆದೇಶ ಮಾಡಿದ್ದರು.

ಆದರೆ ಅಂದಿನಿಂದ ಕಾರ್ಮಿಕರಿಗೆ ಕೆಲ ವಲಯಗಳಲ್ಲಿ ಸಂಬಳವನ್ನು ನೀಡುತ್ತಿಲ್ಲ. ಇನ್ನು ದಕ್ಷಿಣ ವಲಯಗಳಲ್ಲಿ ಸಂಬಳ ವಾಗಿಯೇ ತಿಂಗಳುಗಳು ಕಳೆದಿವೆ. ಪಶ್ಚಿಮ ವಲಯದಲ್ಲಿ ಒಂಬತ್ತು ತಿಂಗಳಿನಿಂದ ಸಂಬಳದ ಮುಖವನ್ನೇ ಕಾರ್ಮಿಕರು ನೋಡಿಲ್ಲ. ರಾಜರಾಜೇಶ್ವರಿ ವಲಯದಲ್ಲಿ ಮೂರು ತಿಂಗಳಿನಿಂದ ವೇತನ ನೀಡಿಲ್ಲ.
ಸಂಬಳ ಬಿಡುಗಡೆಗೆ ಕೆಲವು ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಏನು ಮಾಡಬೇಕು ಎಂಬ ದಿಕ್ಕೇ ತೋಚದಂತಾಗಿದೆ. ನಮ್ಮನ್ನು ಕೇಳುವವರಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ ಆದರೂ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ಅಂತ್ಯಕ್ರಿಯೆಗೆ ಬಳಸುವ ಅಕ್ಕಿಗಳನ್ನು ಬಳಸುತ್ತಿದ್ದ ಕಾರ್ಮಿಕರು ಕೋವಿಡ್ ಕಾಣಿಸಿಕೊಂಡ ಬಳಿಕ ಭಯಗೊಂಡು ಅದನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಜನರು ಅವರ ಕೆಲಸ ಮೆಚ್ಚಿ ಒಂದಿಷ್ಟು ಭಕ್ಷೀಸು ನೀಡುತ್ತಿದ್ದರು ಈಗ ಅದು ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಜನರು ಕೊಡುವ ಭಕ್ಷೀಸು ಕಾರ್ಮಿಕರಿಗೆ ಬೇಡ ಬಿಬಿಎಂಪಿ ನಿಗದಿ ಪಡಿಸಿರುವ ವೇತನವನ್ನು ಸಮಯಕ್ಕೆ ಸರಿಯಗಿ ಬಿಡುವಡೆ ಮಾಡಿದರೆ ಕಾರ್ಮಿಕರು ನೆಮ್ಮಂದಿಯ ಜೀವನ ಮಾಡುತ್ತಾರೆ ಎಂದು ಹೇಳಿದರು.
ಕೋವಿಡ್‌ನಿಂದ ಮೃತಪಟ್ಟವರ ಕಳೆಬರಹ ಅಂತ್ಯಕ್ರಿಯೆ ವೇಳೆ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್) ಧರಿಸಬೇಕು. ಚಿತಾಗಾರದಲ್ಲಿ ಮೊದಲೇ ಬೆಂಕಿಯ ಬೇಗೆ. ಅರ್ಧ ತಾಸು ಕೆಲಸ ಮಾಡಲು ಸಾಧ್ಯವಿಲ್ಲ. ಇನ್ನು ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವ ಅವರ ಸ್ಥಿತಿ ಹೇಗಿರುತ್ತದೆ ಎಂಬುದರ ಅರಿವು ಅಧಿಕಾರಿಗಳಿಗೆ ಇಲ್ಲದಿರುವ ದುರಂತ ಎಂದು ಆಕ್ರೋಶ ವ್ಯಕ್ತೊಡಿಸಿದರು.
ಕೋವಿಡ್ ಕಾಣಿಸಿಕೊಂಡಾಗ ಒಂದು ತಿಂಗಳ ಸಂಬಳವನ್ನು ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಿದ ಉದಾರಿಗಳು ಇವರು. ಇವರಿಗೆ ಸಂಬಳ ಪಾವತಿಸದಿರುವುದು ದುರಂತ. ಇದು ಇದು ಹೀಗೆ ಮುಂದುವರಿದರೆ ಕಾರ್ಮಿಕರ ಪರವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.(ಎಎಪಿ ಪ್ರಕಟಣೆ)












Click it and Unblock the Notifications