ಬಿಜೆಪಿಯೇತರ ರಾಜ್ಯಗಳತ್ತ ಅದಾನಿ ಗ್ರೂಪ್ ಚಿತ್ತ: ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ 5 ಲಕ್ಷ ಕೋಟಿ ರೂ. ಬೃಹತ್ ಹೂಡಿಕೆ
ರಸ್ತೆ, ಬಂದರು, ವಿದ್ಯುತ್, ನವೀಕರಿಸಬಹುದಾದ ಇಂಧನ, ಸಿಮೆಂಟ್ ಮತ್ತು ಡೇಟಾ ಸೆಂಟರ್‌ಗಳಂತಹ ವಲಯಗಳಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ, ಅದಾನಿ ಗ್ರೂಪ್ ಕಾಂಗ್ರೆಸ್ ನೇತೃತ್ವದ ಮತ್ತು ಇತರ ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನ ವಿಸ್ತರಿಸುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗಾಗಿ ರಾಜ್ಯ ಸರ್ಕಾರಗಳು ಖಾಸಗಿ ಬಂಡವಾಳದತ್ತ ಹೆಚ್ಚು ಒಲವು ತೋರುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಒಂದು ಕಾಲದಲ್ಲಿ ಬಿಜೆಪಿಯೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ಈ ಸಂಸ್ಥೆಯು, ಈಗ ರಾಜಕೀಯ ಎಲ್ಲೆಗಳನ್ನ ಮೀರಿ ತನ್ನ ಪ್ರಾಜೆಕ್ಟ್ ಪೋರ್ಟ್‌ಫೋಲಿಯೊವನ್ನ ವಿಸ್ತರಿಸಿದೆ. ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಬಿಹಾರ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳು ಅದಾನಿ ಗ್ರೂಪ್‌ನಿಂದ ಹೂಡಿಕೆಯನ್ನ ಆಕರ್ಷಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ
ಬೆಂಗಳೂರಿನಲ್ಲಿ ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಅನ್ನ ಸಂಪರ್ಕಿಸುವ ಉದ್ದೇಶಿತ 16.75-ಕಿಮೀ ಉದ್ದದ ಉತ್ತರ-ದಕ್ಷಿಣ ಸುರಂಗ ರಸ್ತೆಯ ಎರಡೂ ಪ್ಯಾಕೇಜ್‌ಗಳಿಗೆ ಅದಾನಿ ಎಂಟರ್‌ಪ್ರೈಸಸ್ ಅತ್ಯಂತ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿದೆ. ಇದಕ್ಕಾಗಿ 22,267 ಕೋಟಿ ರೂಪಾಯಿ ಕೋಟ್ ಮಾಡಿದ್ದು, ಇದು ಎರಡನೇ ಅತಿ ಕಡಿಮೆ ಬಿಡ್‌ದಾರರಿಗಿಂತ ಸುಮಾರು 3,500 ಕೋಟಿ ರೂಪಾಯಿ ಕಡಿಮೆ ಇದೆ. ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ. ಬೆಂಗಳೂರಿನ ಟ್ರಾಫಿಕ್ ದಟ್ಟಣೆಯನ್ನ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಈ ಯೋಜನೆಯು ರಾಜಕೀಯವಾಗಿಯೂ ಸೂಕ್ಷ್ಮವಾಗಿದೆ. ಬಿಡ್ ಮೊತ್ತವು ಅಧಿಕೃತ ಅಂದಾಜಿಗಿಂತ ಹೆಚ್ಚಿದ್ದರೂ, ಖಾಸಗಿ ಮೂಲಸೌಕರ್ಯ ಯೋಜನೆಗೆ ಬೆಂಬಲ ನೀಡಲು ರಾಜ್ಯ ಸರ್ಕಾರ ಎಷ್ಟರಮಟ್ಟಿಗೆ ಸಿದ್ಧವಾಗಿದೆ ಎಂಬುದಕ್ಕೆ ಇದೊಂದು ಪರೀಕ್ಷೆಯಾಗಿದೆ. ಈ ಬಿಡ್ ಬಹಿರಂಗವಾದ ಬಳಿಕ, ಕಳೆದ ತಿಂಗಳು ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಅದಾನಿ ಗ್ರೂಪ್ ಈಗಾಗಲೇ ರಾಜ್ಯದಲ್ಲಿ 1,200-ಮೆಗಾವ್ಯಾಟ್ ಉಡುಪಿ ವಿದ್ಯುತ್ ಸ್ಥಾವರ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ.
ಕೇರಳ
ಹಿಂದಿನ ಎಲ್‌ಡಿಎಫ್ (LDF) ಸರ್ಕಾರದ ಅವಧಿಯಲ್ಲಿ ಆರಂಭವಾಗಿ, ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಸರ್ಕಾರದ ಬೆಂಬಲದೊಂದಿಗೆ ಮುಂದುವರೆಯುತ್ತಿರುವ ವಿಝಿಂಜಮ್ ಅಂತಾರಾಷ್ಟ್ರೀಯ ಬಂದರನ್ನು (ಡೀಪ್-ವಾಟರ್ ಟ್ರಾನ್ಸ್‌ಶಿಪ್‌ಮೆಂಟ್ ಹಬ್) ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ನಿರ್ಮಿಸಿದೆ. ಜನವರಿ 2026 ರಲ್ಲಿ, ಬಂದರಿನ ಎರಡನೇ ಹಂತಕ್ಕಾಗಿ ಗ್ರೂಪ್ 16,000 ಕೋಟಿ ರೂಪಾಯಿಗಳ ಹೆಚ್ಚುವರಿ ಹೂಡಿಕೆಯನ್ನ ಘೋಷಿಸಿತು. ಇದರೊಂದಿಗೆ ಒಟ್ಟು ಹೂಡಿಕೆ ಸುಮಾರು 30,000 ಕೋಟಿ ರೂಪಾಯಿಗಳಿಗೆ ತಲುಪಿದೆ. ಅದಾನಿ ಗ್ರೂಪ್ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಹ ನಿರ್ವಹಿಸುತ್ತಿದೆ. ಜೊತೆಗೆ, 2025ರಲ್ಲಿ ಕೊಚ್ಚಿಯ ಕಳಮಶ್ಶೇರಿಯಲ್ಲಿ 70 ಎಕರೆ ವಿಸ್ತೀರ್ಣದಲ್ಲಿ 600 ಕೋಟಿ ರೂಪಾಯಿ ವೆಚ್ಚದ ಲಾಜಿಸ್ಟಿಕ್ಸ್ ಪಾರ್ಕ್ ಕಾಮಗಾರಿಯನ್ನು ಆರಂಭಿಸಿದೆ. ಇದರಿಂದ 1,500ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ತೆಲಂಗಾಣ
ಡೇಟಾ ಸೆಂಟರ್‌ಗಳು, ಎನರ್ಜಿ ಸ್ಟೋರೇಜ್ ಮತ್ತು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳನ್ನ ಒಳಗೊಂಡಂತೆ 12,400 ಕೋಟಿ ರೂಪಾಯಿ ಮೌಲ್ಯದ ನಾಲ್ಕು ಒಪ್ಪಂದಗಳಿಗೆ (MoU) ಕಾಂಗ್ರೆಸ್ ಸರ್ಕಾರವು 2024ರ ಜನವರಿಯಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳೊಂದಿಗೆ ಸಹಿ ಹಾಕಿದೆ.
ತಮಿಳುನಾಡು
ಈ ಹಿಂದೆ ಡಿಎಂಕೆ (DMK) ಮತ್ತು ಈಗ ಟಿವಿಕೆ (TVK) (ಎರಡೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಹೊಂದಿವೆ) ಆಡಳಿತದಲ್ಲಿರುವ ಈ ರಾಜ್ಯವು 2024 ರಿಂದ 42,700 ಕೋಟಿ ರೂ.ಗೂ ಅಧಿಕ ಮೌಲ್ಯದ ಒಪ್ಪಂದಗಳನ್ನು ಆಕರ್ಷಿಸಿದೆ. ಇದರಲ್ಲಿ ಮೂರು ಪಂಪ್-ಸ್ಟೋರೇಜ್ ಯೋಜನೆಗಳಿಗೆ 24,500 ಕೋಟಿ ರೂಪಾಯಿ, ಹೈಪರ್‌ಸ್ಕೇಲ್ ಡೇಟಾ ಸೆಂಟರ್‌ಗೆ 13,200 ಕೋಟಿ ರೂಪಾಯಿ ಮತ್ತು ಸಿಮೆಂಟ್ ಗ್ರೈಂಡಿಂಗ್ ಘಟಕಗಳಿಗೆ 3,500 ಕೋಟಿ ರೂಪಾಯಿ ಸೇರಿವೆ. ಪ್ರತ್ಯೇಕವಾಗಿ, 2,511 ಕೋಟಿ ರೂಪಾಯಿಗಳ ಬಿಡ್‌ನೊಂದಿಗೆ ಅದಾನಿ ಎಂಟರ್‌ಪ್ರೈಸಸ್ ಚೆನ್ನೈ ಔಟರ್ ರಿಂಗ್ ರೋಡ್ (O&M) ಮತ್ತು ಟೋಲಿಂಗ್ ರಿಯಾಯಿತಿಯನ್ನು ಗೆದ್ದುಕೊಂಡಿದೆ.
ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ
ಹಿಮಾಚಲ ಪ್ರದೇಶದಲ್ಲಿ ಅದಾನಿ ಗ್ರೂಪ್ ತನ್ನ ಅಸ್ತಿತ್ವದಲ್ಲಿರುವ ಸಿಮೆಂಟ್ ಕಾರ್ಯಾಚರಣೆಗಳ ಜೊತೆಗೆ ಸೇಬು ಬೆಳೆಗಾರರಿಗೆ ಹಣ್ಣಿನ ಪೂರೈಕೆ ಸರಪಳಿಗಳನ್ನ ನಿರ್ಮಿಸಲು ಬೆಂಬಲ ನೀಡುತ್ತಿದೆ. ಜಾರ್ಖಂಡ್‌ನಲ್ಲಿ, 16,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ 1,600-ಮೆಗಾವ್ಯಾಟ್ ಗೊಡ್ಡಾ ವಿದ್ಯುತ್ ಸ್ಥಾವರವನ್ನು ನಿರ್ವಹಿಸುತ್ತಿದೆ. ಫೆಬ್ರವರಿಯಲ್ಲಿ ಜಾರ್ಖಂಡ್ ಮತ್ತು ಬಿಹಾರದಾದ್ಯಂತ ಯೋಜನೆಗಳನ್ನು ಪರಿಶೀಲಿಸಿದ ಗೌತಮ್ ಅದಾನಿ, ಈ ಎರಡು ರಾಜ್ಯಗಳಲ್ಲಿ 40,000 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಮಾಡುವ ಕುರಿತು ಚಿಂತನೆ ನಡೆಸಿದ್ದಾರೆ. ಬಿಹಾರದ ಭಾಗಲ್ಪುರದ ಪಿರ್‌ಪೈಂಟಿಯಲ್ಲಿ 27,000 ಕೋಟಿ ರೂಪಾಯಿ ವೆಚ್ಚದ 2,400-ಮೆಗಾವ್ಯಾಟ್ ಉಷ್ಣ ವಿದ್ಯುತ್ ಯೋಜನೆ ಸೇರಿದಂತೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ವಿದ್ಯುತ್, ರಸ್ತೆ, ಅನಿಲ ವಿತರಣೆ, ಸಿಮೆಂಟ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ 50,000 ದಿಂದ 60,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಯೋಜನೆಯನ್ನ ಮೇ ತಿಂಗಳಲ್ಲಿ ಗ್ರೂಪ್ ಪ್ರಕಟಿಸಿದೆ.
ಆಂಧ್ರಪ್ರದೇಶ
ಆಂಧ್ರಪ್ರದೇಶವು ಅತಿ ದೊಡ್ಡ ಹೂಡಿಕೆಯ ಅವಕಾಶವನ್ನ ಒದಗಿಸಿದೆ. ಗೂಗಲ್ 2026 ಮತ್ತು 2030ರ ನಡುವೆ ವಿಶಾಖಪಟ್ಟಣಂನಲ್ಲಿ ಕೃತಕ ಬುದ್ಧಿಮತ್ತೆ (AI) ಹಬ್ ನಿರ್ಮಿಸಲು ಸುಮಾರು 15 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ವಾಗ್ದಾನ ಮಾಡಿದೆ. ಇದರಲ್ಲಿ ಗಿಗಾವ್ಯಾಟ್-ಪ್ರಮಾಣದ ಡೇಟಾ-ಸೆಂಟರ್ ಸಾಮರ್ಥ್ಯ ಮತ್ತು ಸಬ್‌ಸೀ ಕನೆಕ್ಟಿವಿಟಿ ಒಳಗೊಂಡಿರುತ್ತದೆ. ಇದಕ್ಕೆ ಅದಾನಿಕನೆಕ್ಸ್ (AdaniConneX) ಮತ್ತು ಏರ್‌ಟೆಲ್ ಮೂಲಸೌಕರ್ಯ ಪಾಲುದಾರರಾಗಿದ್ದು, 2026ರ ಏಪ್ರಿಲ್‌ನಲ್ಲಿ ಶಂಕುಸ್ಥಾಪನೆ ನೆರವೇರಿದೆ. ಪ್ರತ್ಯೇಕವಾಗಿ, ಭಾರತದ ಪೂರ್ವ ಕರಾವಳಿಯ ಅತಿದೊಡ್ಡ ಬಂದರಾದ ಕೃಷ್ಣಪಟ್ಟಣಂ ಬಂದರನ್ನು ಅದಾನಿ ನಿರ್ವಹಿಸುತ್ತಿದೆ ಮತ್ತು ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಪ್ರಸರಣ ಯೋಜನೆಗಳಲ್ಲಿ 20,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡುತ್ತಿದೆ.
ರಾಜಕೀಯ ಮೀರಿದ ಬೆಳವಣಿಗೆ
ದೊಡ್ಡ ಮತ್ತು ಸಂಕೀರ್ಣ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅದಾನಿ ಗ್ರೂಪ್‌ನ ಸಾಮರ್ಥ್ಯವು, ಇತರ ಪ್ರಮುಖ ಕಂಪನಿಗಳು ಆಸಕ್ತಿ ತೋರದ ರಾಜ್ಯಗಳ ಅಭಿವೃದ್ಧಿ ಯೋಜನೆಗಳಲ್ಲಿ ಈ ಸಂಸ್ಥೆಯನ್ನು ಪ್ರಮುಖವಾಗಿಸಿದೆ ಎಂದು ಮೂಲಗಳು ವಿಶ್ಲೇಷಿಸಿವೆ. ಭಾರಿ ಪ್ರಮಾಣದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗಾಗಿ ಕಾಂಗ್ರೆಸ್ ನೇತೃತ್ವದ ಮತ್ತು ವಿರೋಧ ಪಕ್ಷದ ಸರ್ಕಾರಗಳು ಸಹ ಈ ಬೃಹತ್ ಸಂಸ್ಥೆಯೊಂದಿಗೆ ಕೈಜೋಡಿಸಲು ಹೆಚ್ಚು ಒಲವು ತೋರುತ್ತಿರುವುದನ್ನು ಈ ಬೆಳವಣಿಗೆಗಳು ತೋರಿಸುತ್ತವೆ. ರಾಜ್ಯ ಸರ್ಕಾರಗಳು ಬೃಹತ್ ಯೋಜನೆಗಳಿಗೆ ಹಣಕಾಸು ಒದಗಿಸುವ ಮತ್ತು ಕಾರ್ಯಗತಗೊಳಿಸುವ ಸಮರ್ಥ ಪಾಲುದಾರರ ಹುಡುಕಾಟದಲ್ಲಿರುವುದರಿಂದ, ಅದಾನಿ ಗ್ರೂಪ್‌ನ ಹೆಜ್ಜೆಗುರುತು ಭಾರತದ ರಾಜಕೀಯ ವಿಭಜನೆಗಳನ್ನು ಮೀರಿ ಬೆಳೆಯುತ್ತಿದೆ.


Click it and Unblock the Notifications
