ಅಕ್ಕ ಸಮ್ಮೇಳನದಲ್ಲಿ ಬಾಯಲ್ಲಿ ನೀರೂರಿಸುವ ಭಕ್ಷ್ಯಭೋಜ್ಯ

By: ಸಂದರ್ಶನ : ಸತ್ಯ ಪ್ರಸಾದ್
Subscribe to Oneindia Kannada

9ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಸೆಪ್ಟೆಂಬರ್ 2, 3 ಮತ್ತು 4ರಂದು ನ್ಯೂ ಜೆರ್ಸಿಯ ಸಮೃದ್ದ ನಗರಿ ಅಟ್ಲಾಂಟಿಕ್ ಸಿಟಿಯಲ್ಲಿ ನಡೆಯಲಿದೆ. ಸಮ್ಮೇಳನಕ್ಕೆ ದಿನಗಣನೆಯೂ ಶುರುವಾಗಿದೆ ಮತ್ತು ತಯಾರಿ ಭರ್ಜರಿಯಾಗಿ ಸಾಗುತ್ತಿದೆ. ಬಾಣಸಿಗರು ಕೂಡ ತಮ್ಮ ಸೌಟು ಹಿಡಿದು ತಯಾರಾಗಿ ನಿಂದಿದ್ದಾರೆ.

ಬಹುತೇಕ ಎಲ್ಲ ಸಮ್ಮೇಳನದ ಗುಣಮಟ್ಟವನ್ನು ಅಳೆಯುವುದು ಅಲ್ಲಿ ತಯಾರಾದ ಸ್ವಾಗಿಷ್ಟಭರಿತವಾದ, ಅತಿಥಿಗಳನ್ನು ಮನಃಪೂರ್ವಕವಾಗಿ ತೃಪ್ತಿಪಡಿಸುವಂಥ ಭಕ್ಷ್ಯಭೋಜನಗಳು. ವಿಶ್ವದ ಎಲ್ಲೆಡೆಯಿಂದ ಅಟ್ಲಾಂಟಿಕ್ ಸಿಟಿಗೆ ಬರಲಿರುವ ಅತಿಥಿ ದೇವರುಗಳನ್ನು ತೃಪ್ತಿಪಡಿಸಲೆಂದು ಸಂಪುಷ್ಟವಾದ ಅಡುಗೆಯ ತಯಾರಿಯೂ ಜೋರಾಗಿಯೇ ನಡೆಯುತ್ತಿದೆ.

ಮೂರು ದಿನಗಳ ಸಮ್ಮೇಳನದಲ್ಲಿ ಅತಿಥಿ ಅಭ್ಯಾಗತರ ಹೊಟ್ಟೆ ತುಂಬಿಸಲಿರುವ ಐಟಂಗಳನ್ನು ಕೇಳಿಯೇ ನಿಮ್ಮ ಬಾಯಲ್ಲಿ ನೀರೂರಲಿದೆ. ಇದರ ಕುರಿತು ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಊಟೋಪಚಾರ ತಂಡದ ಮುಖ್ಯಸ್ಥ ರಾಘವೇಂದ್ರ ಪ್ರಸಾದ್ ಅವರು ತಂಡದ ಪರವಾಗಿ ವಿಶ್ವ ಕನ್ನಡಿಗರೊಂದಿಗೆ ತಮ್ಮ ಅನಿಸಿಕೆಗಳನ್ನು ಸತ್ಯಪ್ರಸಾದ್ ಜೊತೆ ಹಂಚಿಕೊಂಡಿದ್ದಾರೆ. ['ಅಕ್ಕ' ಸಮ್ಮೇಳನ ನೋಂದಾವಣಿ ತಂಡದ ಜೊತೆ ಮಾತುಕತೆ]

AKKA WKC Atlanta City : Food committee chair Raghu interview

ಸತ್ಯ : ರಘು ನಮಸ್ಕಾರ, ಯಾವುದೇ ಒಂದು ಸಮಾರಂಭದಲ್ಲಿ ಊಟ ಚೆನ್ನಾಗಿದ್ದರೆ ಅದು ಅರ್ಧ ಯಶಸ್ವಿಯಾದಂತೆ, ಸಮಾರಂಭದ ಎಲ್ಲಾ ಕಾರ್ಯಕ್ರಮಗಳು ಒಂದು ತೂಕವಾದರೆ ಊಟದ್ದೇ ಒಂದು ತೂಕ, ಅಂದರೆ ಬಾಣಸಿಗರ ಪಾತ್ರ ಅತಿ ಮುಖ್ಯ. ಬಾಣಸಿಗರ (chef) ಬಗ್ಗೆ ನಿಮ್ಮೆರಡು ಮಾತು?

ರಘು : ನಮಸ್ಕಾರ ಸತ್ಯ, ನಿಮ್ಮ ಮಾತು ನಿಜ, ಯಾವುದೇ ಸಮಾರಂಭದಲ್ಲಿ ಊಟ ತಿಂಡಿಯ ಪಾತ್ರ ಅತಿ ಮುಖ್ಯ. ಈ ಬಾರಿ ಸಮಾರಂಭದಲ್ಲಿ ನಮಗೆ ಬಗೆಬಗೆಯ ಖಾದ್ಯವನ್ನು ಉಣ ಬಡಿಸುತ್ತಿರುವವರು ಸತೀಶ್ ರಾವ್ ಮತ್ತು ತಂಡ. ಸತೀಶ್ ರಾವ್ ಬಗ್ಗೆ ಹೆಚ್ಚಿಗೆ ಏನು ಹೇಳೋ ಅವಶ್ಯಕತೆಯೇ ಇಲ್ಲ, ನೀವು ಗೂಗಲ್ ಮಾಡಿದರೆ ಅವರ ಕೈರುಚಿಯ ಮಹತ್ವ ತಿಳಿಯುತ್ತದೆ.

ಸತೀಶ್ ರಾವ್ celebrity chef, ಶ್ವೇತಭವನದಲ್ಲಿ ಹೆಸರಾಂತ ಗಣ್ಯರಿಗೆ ಭಾರತೀಯ ಖಾದ್ಯಗಳನ್ನು ಸಿದ್ಧಪಡಿಸುವವರು ಇವರೇ. ಒಬಾಮಾ, ಮೋದಿ, ಅಬ್ದುಲ್ ಕಲಾಂ, ಎಸ್ಎಂ ಕೃಷ್ಣ, ಎಆರ್ ರೆಹಮಾನ್, ಜೇಸುದಾಸ್, ಜಾಕಿ ಹುಸೇನ್ ಇತ್ಯಾದಿ ಇತ್ಯಾದಿ ಇವರ ರುಚಿಗೆ ಮಾರು ಹೋದವರು. ಈ ಬಾರಿ ಊಟದ ಗುಣಮಟ್ಟದ ವಿಷಯದಲ್ಲಿ ಸೂಜಿ ಮೊನೆಯಷ್ಟು ರಾಜಿಯಿಲ್ಲದೆ ನಿಮಗೆ ಉತ್ಕೃಷ್ಟವಾದುದನ್ನೇ ಉಣಬಡಿಸುತ್ತೇವೆಂದು ತಿಳಿಸಲು ಸಂತೋಷಪಡುತ್ತೇನೆ. [ಅಕ್ಕ ಸಮ್ಮೇಳನದ ಸೂತ್ರಧಾರಿ ರಾಜ್ ಪಾಟೀಲ್ ಸಂದರ್ಶನ]

AKKA WKC Atlanta City : Food committee chair Raghu interview

ಸತ್ಯ : ಮೂರೂ ದಿನದ ಊಟ ತಿಂಡಿಯ ವಿವರಗಳನ್ನು ಕೊಡುವಿರಾ?

ರಘು : ಊಟ ತಿಂಡಿಯ ಪಟ್ಟಿ ಓದುತ್ತ ಹೋದರೆ ಹನುಮಂತನ ಬಾಲಕ್ಕಿಂತ ಉದ್ದವಾಗಬಹುದು (ನಗು), ಸಮಗ್ರವಾಗಿ ಹೇಳುವುದಾದರೆ....

ಶುಕ್ರವಾರ:

ಸಂಜೆ ಲಘು ಉಪಹಾರ (snacks) : ಸಮೋಸ, ಚಟ್ನಿ, ಕಾಫಿ ಮತ್ತು ಟೀ.

ರಾತ್ರಿ ಭೋಜನ : ವೆಜ್ಜಿ ಪಕೋಡ, ವೆಜ್ಜಿ ಸಾಗು, ವಾಂಗೀಬಾತ್, ಪೂರಿ, ಅನ್ನ, ತಿಳಿಸಾರು, ಮೊಸರನ್ನ, ರಸಮಲೈ, ಚಿಕನ್ ಡ್ರೈ, ಬಟರ್ ಚಿಕನ್ ಇತ್ಯಾದಿ.

ಶನಿವಾರ : ಇದನ್ನು ಸಂಭ್ರಮದ ಊಟವೆಂದು ನಾಮಕರಣ ಮಾಡಿದ್ದೇವೆ.

ಬೆಳಿಗ್ಗೆ ಉಪಹಾರ : ಇಡ್ಲಿ, ವಡೆ, ಸಾಂಬಾರ್, ಚಟ್ನಿ, ಪೈನಾಪಲ್ ಕೇಸರಿ ಬಾತ್, ಉಪ್ಪಿಟು ಇತ್ಯಾದಿ.

ಮದ್ಯಾಹ್ನದ ಭೋಜನ : ಜೋಳದ ರೊಟ್ಟಿ, ತೊಂಡೆಕಾಯಿ ಪಲ್ಯ, ಕಾಳು ಹುಳಿ, ಎಣೆಗಾಯಿ, ವೆಜ್ಜಿ ಕರಿ, ಬಾಳೆಕಾಯಿ ಪಕೋಡ, ಚಿಕನ್ ಕರಿ, ಅನ್ನ, ರಸಂ, ಕ್ಯಾರಟ್ ಹಲ್ವಾ ಇತ್ಯಾದಿ.

ಸಂಜೆ ಲಘು ಉಪಹಾರ (snacks) : ಪಕೋಡ, ಚಿಪ್ಸ್, ಮಿಕ್ಸ್‌ಚರ್, ಚಟ್ನಿ, ಕಾಫಿ ಮತ್ತು ಟೀ ಇತ್ಯಾದಿ.

ರಾತ್ರಿ ಭೋಜನ : ಒತ್ತುಶಾವಿಗೆ, ಚಪಾತಿ, ಪರೋಟ, ಗೋಬಿ ಮಂಚೂರಿ, ಸೌತ್ ಇಂಡಿಯನ್ ಕೂರ್ಮ, ದಹಿ ಬೂಂದಿ, ಮಾವಿನಕಾಯಿ ಚಿತ್ರಾನ್ನ, ಅನ್ನ, ಹಕ್ಕಾ ನೂಡಲ್ಸ್, ಆಲೂ ಮಟರ್ ಗಸ್ಸಿ, ಚಿಕನ್ ಗಸ್ಸಿ, ಮಟನ್ ಸುಖ, ಮೊಸರನ್ನ, ಗುಲಾಬ್ ಜಾಮೂನ್ ಇತ್ಯಾದಿ.

ಭಾನುವಾರ : ಇದನ್ನು ಹಬ್ಬದ ಊಟವೆಂದು ನಾಮಕರಣ ಮಾಡಿದ್ದೇವೆ, ಕಾರಣ ಅಂದು ಗೌರಿ ಗಣೇಶನ ಹಬ್ಬ.

ಬೆಳಿಗ್ಗೆ ಉಪಹಾರ : ಅವಲಕ್ಕಿ, ಮಂಡಕ್ಕಿ ಉಸ್ಲಿ, ಸೇವಿಗೆ ಬಾತ್, ಮೆಣಸಿನ ಕಾಯಿ ಬಜ್ಜಿ, ಸ್ವೀಟ್ ಪೊಂಗಲ್, ಮೋದಕ ಕಡುಬು, ಗೋದಿ ಹಲ್ವಾ ಇತ್ಯಾದಿ.

ಮದ್ಯಾಹ್ನದ ಭೋಜನ : ಹೋಳಿಗೆ, ಪಕೋಡ, ಪಲ್ಯ, ಜಾಕ್ ಫ್ರೂಟ್ ಕರಿ, ಪೈನಾಪಲ್ ಗೊಜ್ಜು, ಬಿಸಿಬೇಳೆ ಬಾತ್, ಆಂಬೊಡೆ, ಅನ್ನ, ಸಾಂಬಾರ್, ಮಜ್ಜಿಗೆ, ಕೋಸಂಬರಿ, ಪಚಡಿ ಇತ್ಯಾದಿ...

ಸಂಜೆ ಲಘು ಉಪಹಾರ (snacks): ಗೋಳಿಬಜೆ, ಚೀವ್ದ, ಚಕ್ಕುಲಿ, ಕಾಫಿ ಮತ್ತು ಟೀ ಇತ್ಯಾದಿ.

ಕಾಕ್ ಟೈಲ್: ಸಮೋಸ, ಚಿಲ್ಲಿ ಚಿಕನ್, ಕಟ್ಲೇಟ್, ಫಿಶ್ ಕರಿ

ರಾತ್ರಿ ಭೋಜನ : ವೆಜ್ ಪಲಾವ್, ನವರತ್ನ ಕೂರ್ಮ, ಅವಿಯಲ್, ಚನ್ನ ಮಸಾಲಾ, ಅನ್ನ, ಮೊಸರನ್ನ, ಜಹಾಂಗೀರ್, ಚಿಕನ್ ಬಿರಿಯಾನಿ, ಮಟನ್ ಗ್ರೀನ್ ಕರಿ, ಚಿಕನ್ ಕುಂದಾಪುರ ಇತ್ಯಾದಿ...

ಸಮಯ :
ಬೆಳಿಗ್ಗೆ ಉಪಹಾರ : 7am to 10am
ಮದ್ಯಾಹ್ನದ ಭೋಜನ : 11:30am to 2pm
ಸಂಜೆ ಲಘು ಉಪಹಾರ (snacks) : 3pm to 5pm
ರಾತ್ರಿ ಭೋಜನ : 7pm to 10pm
ಒಂದು ಸೂಚನೆ, ಕೊನೆ ಗಳಿಗೆಯಲ್ಲಿ ಮೇಲಿನ ವಿವರಗಳಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳಾಗಬಹುದು.

ಸತ್ಯ : ಓಹ್ ರಘು ನಿಮ್ಮ ವಿವರಗಳನ್ನು ಕೇಳುತ್ತಿದ್ದರೆ ನಮಗೆ ಈಗಲೇ ಬಾಯಿಯಲ್ಲಿ ನೀರೂರಿ ಹಸಿವಾಗುತ್ತಿದೆ (ನಗು), ಮಕ್ಕಳ ಊಟದ ವ್ಯವಸ್ಥೆ ಹೇಗಿದೆ?

ರಘು : ಪ್ರತಿ ಊಟದಲ್ಲೂ ಮಕ್ಕಳಿಗೆ ಇಷ್ಟವಾಗುವ ಪಾಸ್ತಾ, ನೂಡಲ್ ಇತ್ಯಾದಿ ಇತ್ಯಾದಿ ಲಭ್ಯ.

ಸತ್ಯ : ಪ್ರತಿ ಬಾರಿ ಸಮಾರಂಭದಲ್ಲಿ ಬಾಗವಹಿಸುವವರ ಅನುಭವ ಮತ್ತು ಕಾಳಜಿ. ಉದ್ದದ ಸಾಲುಗಳನ್ನು ಹೇಗೆ ನಿಭಾಯಿಸುತ್ತೀರಿ? ಹಿರಿಯ ನಾಗರಿಕರಿಗೆ, ಅವಶ್ಯಕ ಮಹಿಳೆ ಮತ್ತು ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಇದೆಯೇ?

ರಘು : ಒಂದು ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತದೆ. ಈ ಬಾರಿ ಉದ್ದದ ಕ್ಯೂ ನಿಮಗೆ ಕಾಣುವುದೇ ಇಲ್ಲ. ಕಾರಣ, ಭೋಜನ ಶಾಲೆ ಅತೀ ವಿಶಾಲವಾಗಿದ್ದು ಒಂದು ಪಂಕ್ತಿಗೆ ಸರಿ ಸುಮಾರು 1750 ಜನ ಕೂತು ಊಟ ಮಾಡುವ ವ್ಯವಸ್ಥೆ ಇದೆ. ಹಿರಿಯ ನಾಗರಿಕರಿಗೆ, ಅವಶ್ಯಕ ಮಹಿಳೆ ಮತ್ತು ಮಕ್ಕಳಿಗೆ ಪ್ರತ್ಯೇಕ ಸಾಲಿದ್ದು ಅವರು ಸಾಲಿನಲ್ಲಿ ನಿಲ್ಲುವ ಪ್ರಮೇಯವೇ ಇಲ್ಲ, ಅವರು ಯಾವಾಗ ಬೇಕಾದರೂ Walk-in ಮಾಡಬಹುದು.

ಸತ್ಯ : ನಿಮ್ಮ ತಂಡದ ಬಗ್ಗೆ ಎರಡು ಮಾತು.

ರಘು : ಖಂಡಿತ ನಮ್ಮ ತಂಡದ ಬಗ್ಗೆ ಎರಡು ಮಾತು ಹೇಳಲೇಬೇಕು. ನಮ್ಮ ಸಮಿತಿಯ ಉಪಾಧ್ಯಕ್ಷರು ಕೃಷ್ಣ ಪ್ರಸಾದ್ ಮತ್ತು ತಂಡದ ಸದಸ್ಯರು ಸುಧೀರ್, ಬಾಬು, ಪ್ರವೀಣ್, ಶೇಖರ್, ಶ್ರೀನಾಥ್, ಚಂದ್ರ ಮತ್ತು ಸುಧೀಂದ್ರ. ಸಮ್ಮೇಳನವನ್ನು ಅತ್ಯಂತ ಯೆಶಸ್ವಿಗೊಳಿಸಬೇಕೆಂದು ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Success of any function is gauged by quality of food prepared. AKKA World Kannada Conference is no different. Already preparations are on and variety of delicioius food are lined up on menu card. In an interview Food Committee chair Raghavendra Prasad rolls out the list of mouth watering dishes.
Please Wait while comments are loading...