• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಿಯರ ತೋಟದಲ್ಲಿ ಅರಳಿದ ಕನ್ನಡ ಹೂವುಗಳು

By * ಸುರೇಶ ಎಚ್. ಸಿ., ವಸಂತ್ ಕುಲಕರ್ಣಿ
|
ಸಿಂಗಪುರದಲ್ಲಿ ನಿನ್ನೆ ಭಾನುವಾರ ರಾತ್ರಿ ಸಂಪನ್ನವಾದ 7ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ವರದಿಗಳನ್ನು ನೀವೀಗ ಓದುತ್ತಿದ್ದೀರಿ. ಮೊದಲ ದಿನದ , ಅಂದರೆ ನವೆಂಬರ್ 27ರ ಶನಿವಾರ "ಸಿಂಗಾರ ಉದ್ಯಮ ಸಮಾವೇಶ" ಹಾಗೂ "ಸಾಂಸ್ಕೃತಿಕ ಕಾರ್ಯಕ್ರಮ"ವು ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆದರೂ, ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಕಿಂಚಿತ್ತೂ ದಣಿಯಲಿಲ್ಲ. ಭಾನುವಾರ ಬೆಳಗ್ಗೆ ಎಂಟೂವರೆಗೆ ಮತ್ತೆ ಶಿಸ್ತಿನ ಸಿಪಾಯಿಗಳಂತೆ ಹಾಜರಾಗಿದ್ದರು. ಸುಮಾರು ಒಂಬತ್ತೂವರೆಗೆ ಪ್ರೊ. ಕೃಷ್ಣೇಗೌಡ, ಮುಖ್ಯಮಂತ್ರಿ ಚಂದ್ರು ಹಾಗೂ ರಾಜೇಂದ್ರ ಗೋಗ್‌ವಾಡ್ ಅವರ "ಹಾಸ್ಯಲೋಕ"ದಿಂದ ಭಾನುವಾರದ ಮೊದಲ ಕಾರ್ಯಕ್ರಮ ತೆರೆದುಕೊಂಡಿತು.

ನಗೆಯ ಬುಗ್ಗೆ : ಬಿಜಾಪುರದ ರಾಜೇಂದ್ರ ಗೋಗ್‌ವಾಡ್ ಅವರು ಶಾಲಾ ಕಾಲೇಜುಗಳ ಜೀವನದ, ಪಾರ್ಕುಗಳಲ್ಲಿ, ಆಫೀಸು, ಮನೆ, ಮಾರ್ಕೆಟ್ಟುಗಳಲ್ಲಿ ಸಿಡಿಯುವ ದೈನಂದಿನಹಾಸ್ಯರಸಾಯನಗಳನ್ನು ಉತ್ತರ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ರಸವತ್ತಾಗಿ ಬಣ್ಣಿಸಿದರು. ನಗುವುದರಿಂದ ಆರೋಗ್ಯ ಹಾಗೂ ಮುಖ ಸೌಂದರ್ಯ ವೃದ್ಧಿಯಾಗುತ್ತದೆ ಎಂದ ಇವರ ಹಾಸ್ಯದ ಒಂದು ತುಣುಕು: ಶಿಕ್ಷಕರೊಬ್ಬರು ನಿಜ ಹಾಗೂ ಭ್ರಮೆಯ ಉದಾಹರಣೆ ಕೇಳಿದ್ದಕ್ಕೆ ಶಿಷ್ಯನೊಬ್ಬನ ಉತ್ತರ : ನೀವು ಪಾಠ ಮಾಡುವುದು "ನಿಜ"; ಅದು ನಮಗೆ ಅರ್ಥ ಆಗುತ್ತದೆ ಎಂದುಕೊಳ್ಳುವುದು "ಭ್ರಮೆ"!

ಅಡಿಗರ ಪದ್ಯ "ಕನ್ನಡವೆಂದರೆ ದೇವಿ ತಾಯಿ.."ಯನ್ನು ನೆನೆಸಿಕೊಂಡ ಕೃಷ್ಣೇಗೌಡರು "ಭೌಗೋಳಿಕ ಕನ್ನಡ ನಾಡಿನ ಸೀಮೆ ಸೀಮಿತರಾದರೂ, ಸಾಂಸ್ಕೃತಿಕ ಕನ್ನಡ ನಾಡಿಗೆ ಎಲ್ಲೆಗಳಿಲ್ಲ " ಎಂದರು. ನಾವು ಎಲ್ಲಿರುವೆವೋ ಅದೇ ಕನ್ನಡ ನಾಡು. ಕನ್ನಡಿಗರು ಎಲ್ಲಾ ಕಡೆ. ಅರ್ಥವಿಲ್ಲದ ಮಾತಿಗೆ ಅರ್ಥ ಕೊಟ್ಟರೆ; ಅರ್ಥವಿರುವ ಮಾತಿಗೆ ಅರ್ಥ ಕೊಡದಿದ್ದರೆ ಏನಾಗುತ್ತದೆ ಎಂಬುದನ್ನು "ಇವತ್ತು", "so", "ಯೋಚನೆ ಮಾಡಿ", "ಒಂದು ಕೆಲ್ಸ ಮಾಡಿ", "ಲೆಕ್ಕ ಹಾಕಿ", "ತಗೊಳ್ಳಿ", "ಬಿಸಾಕಿ" ಮುಂತಾದ ಪದಪ್ರಯೋಗಗಳ ಮೂಲಕ ಸೊಗಸಾಗಿ ವಿವರಿಸಿದರು.

ಏನು ಮಾತನಾಡುತ್ತೇವೆ ಎಂಬುದಕ್ಕಿಂತ ಅದರ ಹಿಂದಿನ ಅರ್ಥ ಏನಿತ್ತು ಎಂಬುದು ಮುಖ್ಯ. ಕುಡುಕರ ಸುಪ್ರಭಾತ ಕೇಳಿ ಸಭಿಕರು ಹುಚ್ಚೆದ್ದು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂತೋಷ ವ್ಯಕ್ತಪಡಿಸಿದರು. ತಮ್ಮ ಮಧುರವಾದ ಕಂಠದಲ್ಲಿ ಹಾಸ್ಯದಷ್ಟೇ ಸೊಗಸಾದ ಆಧುನಿಕ ಯುಗದ ಜೋಗುಳದ ಆಣಕು ಹಾಡನ್ನು ಸೊಗಸಾಗಿ ಹಾಡಿದರು. ಐಶ್ವರ್ಯ ರೈ ಮೇಲೆ ಹಾಡಿದ "ಅಹಿಗಿರಿ ನಂದಿನಿ" ಧಾಟಿಯ ಅಣಕು ಹಾಡನ್ನು ವಯೋಭೇದವಿಲ್ಲದೇ ಎಲ್ಲರೂ ಆನಂದಿಸಿದರು. ಬಡಬಡ ಮಾತನಾಡುವ ಬುಡುಬುಡಿಕೆಯವನ ಮಾತನ್ನು ಇವರು ತಡಬಡಿಸದೇ ಹೇಳಿದ್ದನ್ನು ಕೇಳಿ ಇಡೀ ಸಭೆ ಮೂಕವಿಸ್ಮಿತವಾಯಿತು.

"ಈಗ ಮಕ್ಕಳನ್ನು ಭಾವುಕರಾಗಿ ಬೆಳೆಸುತ್ತಾ ಇಲ್ಲ, ಆದ್ದರಿಂದ ಈಗಿನ ಮಕ್ಕಳು ಜಾಣರಾಗಿದ್ದರೂ, ಅವರಲ್ಲಿ ಭಾವ ಕಡಿಮೆಯಾಗಿದೆ" ಎಂಬ ಅವರ ಮಾತು ಸಭಿಕರೆಲ್ಲರನ್ನೂ ತಟ್ಟಿತು. ಸಾಹಿತಿ, ರಾಜಕಾರಣಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು "ಹಾಸ್ಯ ಸಹಜವಾಗಿ ನಡೆಯುತ್ತದೆ. ಅದಕ್ಕೆ ಬಣ್ಣ ಕಟ್ಟಿ ಹೇಳುವುದು ಒಂದು ಕಲೆ" ಎಂದು ಹೇಳಿ, ರಾಜಕೀಯ ರಂಗದ ನಾಯಕರೊಂದಿಗಿನ ತಮ್ಮ ರಸನಿಮಿಷಗಳನ್ನು ಸೊಗಸಾಗಿ ಹಂಚಿಕೊಂಡರು. ನಂತರ ಮಲೆನಾಡಿನ ಮಯೂರಿ ಶಿವಮೊಗ್ಗದ ಕುಮಾರಿ ತನೂಶ್ರೀ ಸಂತ ಶಿಶುನಾಳ ಶರೀಫ್ ಅವರ "ಗಡಿಗೆ ಜ್ವಾಕಿ ತಂಗಿ" ಹಾಡಿಗೆ ಸೊಗಸಾದ ಜಾನಪದ ನೃತ್ಯ ಮಾಡಿದರು.

ಮೂಗಿನಿಂದ ಶಹನಾಯಿ: ಅಪರೂಪದ ಕಲಾವಿದ ಜಿ. ಕೆ. ಕಾಡೇಶ್ ಮೂಗಿನಿಂದ ಶಹನಾಯಿಯ ಸ್ವರವನ್ನು ಹೊರಡಿಸಿ, ರಾಗ ಮಿಶ್ರ ಭೈರವಿಯಲ್ಲಿ "ಕರೆದರೂ ಕೇಳದೆ"ಯಂಥ ಪ್ರಖ್ಯಾತ ಚಲನ ಚಿತ್ರ ಗೀತೆಗಳನ್ನು ನುಡಿಸಿ ರಂಜಿಸಿದರು. ಅಲ್ಲದೇ, ಕೇವಲ ತಮ್ಮ ಹಣೆಯನ್ನುಪಯೋಗಿಸಿ key board ನಲ್ಲಿ "ದೋಣಿ ಸಾಗಲಿ ಮುಂದೆ ಹೋಗಲಿ" ಗೀತೆಯನ್ನು ನುಡಿಸಿದರು. ತಮ್ಮ ಅಪರೂಪದ ಈ ಕಲಾ ಪ್ರದರ್ಶನದಿಂದ ಅವರು ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಎರಡು ಬಾರಿ ದಾಖಲೆಯಾಗಿದ್ದಾರೆ. ಅವರನ್ನು ಕಾರ್ಯಕ್ರಮದ ನಂತರ ಸಂದರ್ಶಿಸಿದಾಗ, ಅವರು ಗುರು ಮುಖೇನ ಸಂಗೀತದ ಅಭ್ಯಾಸ ಮಾಡಿಲ್ಲ, ಕೇವಲ ತಮ್ಮ ಸ್ವಂತ ಪ್ರಯತ್ನದ ಮೂಲಕ ಈ ಕಲೆಗಳನ್ನು ಕರಗತ ಮಾಡಿಕೊಂಡಿದುದಾಗಿ ತಿಳಿಸಿದರು. "ಕಾಡಪ್ಪಾ ಬಸವಣ್ಣೆಪ್ಪಾ ಕುರಬೇಟ್" ಎಂಬ ಮೂಲನಾಮಧೇಯದ ಕಾಡೇಶ್, ಮಕ್ಕಳು ಆಟವಾಡುತ್ತಿರುವಾಗ ತಮ್ಮ ಮೂಗಿನಿಂದ ಸ್ವರ ಹೊರಡಿಸುವದರಿಂದ ಪ್ರಭಾವಿತರಾಗಿ ಮೂಗಿನ ಮೂಲಕ ಶಹನಾಯಿಯ ಧ್ವನಿ ಹೊರಡಿಸುವದನ್ನು ಪ್ರಯತ್ನಿಸಿ ಕಲೆಯಾಗಿ ಬೆಳೆಸಿಕೊಂಡಿದ್ದಾರೆ.

ಕಗ್ಗ, ಹಗ್ಗಗಳ ಯಕ್ಷಿಣಿ ಲೋಕ: ಜಾದೂ ಮಾಂತ್ರಿಕ ಉದಯ್ ಜಾದೂಗಾರ್ ಅವರ ಶಿಷ್ಯರಾದ ಕೌಶಿಕ್‍ರವರದು ಒಂದು ವಿಶಿಷ್ಟ ಪ್ರಯೋಗ. ಜಾದೂ ಪ್ರದರ್ಶನಕ್ಕೆ ಕನ್ನಡ ಸಾಹಿತ್ಯದ ರತ್ನಗಳನ್ನು ತಳುಕು ಹಾಕಿ ಅದಕ್ಕೆ ಒಂದು ಹೊಸ ಆಯಾಮವನ್ನೇ ತಂದು ಕೊಡುವ ನವೀನ ಕೆಲಸವನ್ನು ಮಾಡಿದ್ದಾರೆ ಕೌಶಿಕ್‍ರವರು. ಸಿಂಗಪುರದ ಅವರ ಪ್ರದರ್ಶನದಲ್ಲಿ "ಮಂಕುತಿಮ್ಮನ ಕಗ್ಗ"ವನ್ನು ತಮ್ಮ ಜಾದೂವಿನೊಡನೆ ಸಭಿಕರ ಮುಂದೆ ಪ್ರದರ್ಶಿಸಿ ಸಭಿಕರನ್ನು ಮಂತ್ರ ಮುಗ್ಧಗೊಳಿಸಿದರು. ಕಾರ್ಯಕ್ರಮದ ನಂತರ ಅವರನ್ನು ಈ ಕಲೆಗೆ ಪ್ರೇರಣೆ ಏನು ಎಂದು ಕೇಳಿದಾಗ ತಮ್ಮ ಜಾದೂವನ್ನು ಕೇವಲ ಮಕ್ಕಳ ಮನೋರಂಜನೆಗೆ ಮಾತ್ರ ಬಳಸಲು ಒಪ್ಪದೇ ಅವರು ಅದಕ್ಕೊಂದು ಗಂಭೀರ ಆಯಾಮವನ್ನು ತರಲು, ಅದರೊಂದಿಗೆ ಕನ್ನಡ ಸಾಹಿತ್ಯವನ್ನು ಜನತೆಗೆ ತಲುಪಿಸಲು ಈ ಕಲೆಯನ್ನು ಹುಟ್ಟುಹಾಕಿದೆ ಎಂದು ಹೇಳಿದರು.

ಆನಂತರ ವೇದಿಕೆಗೆ ಬಂದವರು ಗಿಲಿ ಗಿಲಿ ಮ್ಯಾಜಿಕ್ ಪ್ರಖ್ಯಾತಿಯ ಹೆಗ್ಡೆ ಜಾದೂಗಾರ್ ಶಿರ್ಶಿ. ಸಾವಿರಾರು ಪ್ರದರ್ಶನಗಳನ್ನು ನೀಡಿದ ಹೆಗ್ಡೆ ಜಾದೂಗಾರ್ ತಮ್ಮ ಉತ್ಪಾದನಾ ಪೆಟ್ಟಿಗೆ (ಪ್ರೊಡಕ್ಷನ್ ಬಾಕ್ಸ್)ನಿಂದ ಅನೇಕ ವಸ್ತುಗಳನ್ನು ಹೊರತೆಗೆದು ಜನರನ್ನು ರಂಜಿಸಿದರು. ತಮ್ಮ ಹಗ್ಗ ಸಾಧನದಿಂದ ಅನೇಕ ಜಾದುಗಳನ್ನು ಅವರು ಪ್ರದರ್ಶಿಸಿ ಮೋಜು ಹಂಚಿದರು.

ತದನಂತರ ಸುಮಾರು ಐದು ವರ್ಷದಿಂದ ಕೂಚುಪುಡಿ ತಾಲೀಮು ಮಾಡುತ್ತಿರುವ ನೃತ್ಯ ಪ್ರವೀಣೆ ಕುಮಾರಿ ವರ್ಷಿಣಿ ಸದಾನಂದ ಅವರು "ಹಚ್ಚೇವು ಕನ್ನಡ ದ ದೀಪ" ಹಾಡಿಗೆ ಸೊಗಸಾಗಿ ದೀಪ ನೃತ್ಯ ಮಾಡಿ ಕನ್ನಡದ ದೀಪವನ್ನು ಬೆಳಗಿದರು. ಬೆಂಗಳೂರಿನ ಶ್ರೀಮತಿ ಉಷಾ ಅವರು ಭಾವಪೂರ್ಣವಾಗಿ "ಭರತಾಂಜಲಿ" ಭರತನಾಟ್ಯ ಮಾಡಿದರು.

ಕನ್ನಡ ಕಲಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಂಗಪುರದಲ್ಲಿ "ಕನ್ನಡ ಕಲಿ" ಕಾರ್ಯಕ್ರಮ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರಿಂದ ನೆರವೇರಿತು. ಚಂದ್ರು ಅವರು ಹೊರನಾಡಿನಲ್ಲಿ ನಿರಂತರವಾಗಿ ಹಾಗೂ ಕಡ್ಡಾಯವಾಗಿ "ಕನ್ನಡ ಕಲಿ" ನಡೆಯಬೇಕು. ಇದು ಹೊರನಾಡಿನಲ್ಲಿ ಬೆಳೆಯುತ್ತಿರುವ ಕನ್ನಡದ ಮಕ್ಕಳಿಗೆ ಕನ್ನಡೇತರರಿಗೆ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಿದು, ಇದಕ್ಕೆ ಕರ್ನಾಟಕ ಸರಕಾರದ ವತಿಯಿಂದ ಸಂಪೂರ್ಣ ಪ್ರೋತ್ಸಾಹ, ಪೋಷಣೆ ದೊರೆಯುತ್ತದೆ ಎಂದು ನುಡಿದರು.

"ಕನ್ನಡ ಕಲಿ" ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯ ಮೇಲೆ ಇವರಿಬ್ಬರ ಜೊತೆ ಪ್ರೊ. ಕೃಷ್ಣೇಗೌಡ, ರಂಗಾರೆಡ್ಡಿ ಕೋಡಿರಾಮಪುರ ಹಾಗೂ ಕನ್ನಡ ಸಂಘ(ಸಿಂಗಪುರ)ದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರು ಉಪಸ್ಥಿತರಿದ್ದರು. ಬರಗೂರು ಅವರು "ಸ್ನೇಹಿತರೇ, ಉತ್ತಮವಾದ ಕೆಲಸ, ಮೂಲ ಕನ್ನಡಿಗರ ಮಕ್ಕಳು ಕನ್ನಡ ಕಲಿಯಬೇಕು; ಮಾನವೀಯತೆಯ ಕೆಲಸವಿದು" ಎಂದು ಸಂದೇಶ ನೀಡಿದರು. ಪ್ರೊ.ಕೃಷ್ಣೇಗೌಡರು ವಿಶೇಷ ಯೋಜನೆಯಾದ "ಕನ್ನಡ ಕಲಿ" ಕಾರ್ಯಕ್ರಮದಲ್ಲಿ ಯಾರು ಸ್ವಯಂಸೇವೆಯ ಪ್ರವೃತ್ತಿಯಿಂದ ಕನ್ನಡ ಕಲಿಸುತ್ತಾರೋ ಅವರ ಕನ್ನಡ ಚೆನ್ನಾಗಿ ಇರುತ್ತದೆ" ಎಂದಾಗ ನಗುವಿನೊಂದಿಗೆ ತುಂಬು ಕರತಾಡನ.

ಇನ್ನೂ ಇದೆ! ಹೃದಯವಾಹಿನಿ ಪತ್ರಿಕೆಯ ಮಂಜುನಾಥ ಸಾಗರ್ ಮತ್ತು ತಂಡ, ಕನ್ನಡ ಸಂಘ (ಸಿಂಗಪುರ)ದ ಹತ್ತು ಮಂದಿ ಕಾರ್ಯಕರ್ತರು, ಸುಮಾರು ಮೂವತ್ತು ಪ್ರಾಯೋಜಕರು, ಐವತ್ತು ಮಂದಿ ಸ್ವಯಂಸೇವಕರು, 350 ಕ್ಕೂ ಹೆಚ್ಚು ಕಲಾವಿದರು!! ಇವರೆಲ್ಲರ ಪರಿಶ್ರಮ, ಸರಕಾರೀ ಇಲಾಖೆಗಳ ಸಹಕಾರ ಹಾಗೂ ನೆರೆದಿದ್ದ ಸುಮಾರು ಒಂದುಸಾವಿರ ಸಭಿಕರ ಅಭಿಮಾನದ ಫಲವಾಗಿ ಕಳೆದ ಒಂದೂವರೆ ದಿನದಲ್ಲಿ ನಡೆದ ಏಳನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಕಾರ್ಯಕ್ರಮ ಯಶಸ್ವಿಯಾಗಿದ್ದಷ್ಟೇ ಅಲ್ಲದೇ ಕನ್ನಡ ಕಲೆಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭ ಮಾಡಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಈ ದಿನದ ಇನ್ನುಳಿದ ಕಾರ್ಯಕ್ರಮ ಮತ್ತು ತಾರಾ ಸಂಜೆ "Star Night" ಕಾರ್ಯಕ್ರಮದ ವಿವರಗಳಿಗಾಗಿ ಮುಂದಿನ ಲೇಖನವನ್ನು ನಿರೀಕ್ಷಿಸಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
From rib shaking humor to learn kannada classes, 2 day at 7th World Kannada convention in Singapore offered wide range of cultural events and entertainment programs to Kannada audience in Singapore. Report of Day 2 by Suresh HC and Vasant Kulakarni.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more