Get Updates
Get notified of breaking news, exclusive insights, and must-see stories!

ರಜಾ ಇದ್ದಾಗ ಜಾಸ್ತಿ ಟೀವಿ ನೋಡಬೇಡ ಮಗಾ!

ಉಸ್ಸ್ ಅಂತ ಸ್ಕೂಲ್ ಬಸ್ಸಲ್ಲಿ ಆರಾಮಾಗಿ ಬಂದ ಮಗನನ್ನು ಕಂಡು, how was your day buddy? any important papers ಇದೆಯಾ ನೋಡಲಿಕ್ಕೆ? ಅಂತ ನಾ ಕೇಳಿದಾಗ, ಹಾ ಇದೆ .. next week Spring break. ನೋ ಸ್ಕೂಲ್ ಅಪ್ಪ.. ಮುಖ ಅರಳಿಸಿ ಮಗರಾಯ ಬ್ಯಾಗ್ ನಿಂದ ಏನೋ ಒಂದು ಪೇಪರ್ ತೆಗೆದು ಕೊಟ್ಟ. "ನೋ ಟೀವಿ ವೀಕ್" ಈ ಬಾರಿ ಅರಳಿತ್ತು ನನ್ನ ಮುಖ... ಆ ಪೇಪರ್ ನೋಡಿ :)

ಅಪ್ಪಾ.. how do i spend one week spring week, that too with out TV? ಪೆಚ್ಚು ಮೋರೆ ಹಾಕಿ ಕೇಳಿದ ಮಗನಿಗೆ, ಓಹ್ ಅದರಲ್ಲೇನು.. lot of other things can be done ಟು ಸ್ಪೆಂಡ್ ಟೈಮ್.. ಲೈಕ್ ಇಂಡೋರ್ ಗೇಮ್ಸ್, ಪ್ಲೇಯಿಂಗ್ ವಿಥ್ ಪೇರೆಂಟ್ಸ್, ಫ್ರೆಂಡ್ಸ್, ರೀಡಿಂಗ್, ರೈಟಿಂಗ್, ಪೇಂಟಿಂಗ್...

ಓಕೆ ಓಕೆ.. ಅಪ್ಪ ನೀವು ಏನು ಮಾಡ್ತಾ ಇದ್ರೀ "ನೋ ಟಿವಿ ವೀಕ್ ಮತ್ತೆ ಹಾಲಿಡೇಸ್ ನಲ್ಲಿ?" ಅಂತ ತಿರುಗಿ ಪ್ರಶ್ನೆ ಬಂದಾಗ... ಮನದಲ್ಲಿ ಹಾಗೆ ಮೂಡಿದ್ದವು ನೆನಪಿನ ಸುರಳಿಗಳು.

Nagaraja Maheswarappa
ಸ್ಕೂಲ್ ಕೊನೆಯ ದಿನ.. ರಜಾ ಬಂತೆಂದರೆ ಸಾಕು ಮಜಾ ಅಂತ ಕುಣಿದಾಡುತ್ತ, ಜವಾನ ರಂಗಪ್ಪ ಯಾವಾಗ ಲಾಂಗ್ ಬೆಲ್ ಹೊಡೀತಾನೆ ಅಂತ ಅತ್ತ ಕಡೆನೇ ಕಿವಿಕೊಟ್ಟಿದ್ದ ನಂಗೆ... ಮಾಸ್ತರು "ಎಲ್ಲರು ಇವೇ ಪ್ರಶ್ನೆ ಪತ್ರಿಕೆಗಳಿಗೆ ರಜಾದಲ್ಲಿ ಮತ್ತೆ ಉತ್ತರ ಬರಕೊಂಡು ಬರಬೇಕು.. ಇಲ್ಲ ಅಂದ್ರೆ..." ಅಂತಾ ಹೇಳಿದಾಗ,

ಏನೆಲ್ಲಾ ಪ್ಲಾನ್ ಮಾಡಿದ್ದೆ ಮಾಡಲು ಮಜಾ...
ಈ ಮೇಷ್ಟ್ರು ಯಾಕೆ ಕೊಡ್ತಾರೋ? ಹೀಗೆ ಸಜಾ ):

ಅಂತಾ ಮನದಲ್ಲೇ ಶಪಿಸಿ.. ಎರಡು ದಿನದಲ್ಲೇ ಬರ ಬರ ಅಂತಾ ಗೀಚಿ ಹಾಕಿ ಬ್ಯಾಗ್ನಲ್ಲಿ ಇಟ್ಟು.. ಉಸ್ಸಪ್ಪ ಅಂತಾ ಅನ್ನುವಾಗಲೇ... ನಾಗೇಶ ಬರ್ತಿಯೇನೋ ಗೋಲಿ ಹಾಡೋಕೆ? ಅಂತ ಪಕ್ಕದ ಮನೆಯ ಗೊಣ್ಣೆ ಸೀನಿ ಒಂದು ಕೈತುಂಬಾ ಗೋಲಿಗಳನ್ನು ಹಿಡ್ಕೊಂಡು, ಮತ್ತೊಂದು ಕೈಯಿಂದ ಮೂಗಿನಿಂದ ತೊಟ್ಟಿಕ್ಕುತ್ತಿದ್ದ ಗೊಣ್ಣೆ ಒರೆಸ್ಕೊತಾ ಕರೆದಾಗ.. ಒಂದೇ ಜಂಪಿಗೆ ಹೊಸ್ತಿಲ ಹೊರಗಿದ್ದೆ.

ಬೆಳಿಗ್ಗೆ ತಿಂಡಿ ತಿಂದು, ಅಪ್ಪ ಅತ್ತ ಕಡೆ ಕೆಲ್ಸಕ್ಕೆ ಹೋದ ತಕ್ಷಣ ಅಮ್ಮನಿಗೆ ಹೇಗೋ ಹೇಳಿ ಒಪ್ಪಿಸಿ ಹೊರಟೆ ಅಂದರೆ ಬರುತ್ತಿದ್ದು ಮಧ್ಯಾನ್ಹ ಊಟಕ್ಕೆ ಅಪ್ಪ ಬರೋದರಲ್ಲಿ. ಗೋಲಿ ಆಟ, ಬುಗುರಿ, ಚಿನ್ನಿದಾಂಡು, ಕ್ರಿಕೆಟ್ ಒಂದೇ ಎರಡೇ.. ರಜಾ ಬಿಟ್ಟು ಒಂದು ವಾರ ಆಗಿಲ್ಲ.. ನೋಡು ಅವನನ್ನು.. ಕರ್ರಗೆ ಇದ್ದಿಲು ಆದಂಗೆ ಹಾಗ್ಯಾನೆ ಬಿಸಿಲಲ್ಲಿ ಕುಣಿದಾಡಿ ಅಂತಾ ಅಪ್ಪನ ಬೈಗುಳ. ಈಗಿನ ಹಾಗೆ ಅಂದು ಸನ್ ಕ್ರೀಂ.. ಅದು ಇದು ಇದ್ದಿಲ್ಲವಲ್ಲ?

ಮಧ್ಯಾನ್ಹ ಅಮ್ಮ ಓದಿದ ಬಳಿಕ ಕೊಟ್ಟ ಸುಧಾ, ತರಂಗ ವಾರ ಪತ್ರಿಕೆಗಳನ್ನು ಹಿಂದಿನ ಪೇಜ್ ನಿಂದ ಹಿಡಿದು ಮೊದಲ ಪೇಜ್ ತನಕ ಬಿಡದೆ ಓದಿ ನಂತರ.. ಊಟ ಆದಮೇಲೆ ಸ್ವಲ್ಪ ಹೊತ್ತು ಮನೆಯಲ್ಲೇ ಅಮ್ಮನ ಬಲವಂತಕ್ಕೆ ಸಣ್ಣಗೆ ನಿದ್ದೆ ಮಾಡಿ ಮತ್ತೆ ಹೊರಗಡೆ ಪಯಣ.. ಕೆಲವೊಮ್ಮೆ ಕುಣಿದಾಡಿ ಬೆವೆತು.. ಅಲ್ಲೇ ಸಮೀಪದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಸ್ನಾನ.. ಸ್ನೇಹಿತರಾದ ಸೀನಿ, ಸುರೇಶ ಎಲ್ಲರು ಚೆನ್ನಾಗಿ ಈಜುತ್ತಿದ್ದಿದ್ದು ನೋಡಿ.. ನಾನು ಸಹ ಹೇಗಾದರೂ ಮಾಡಿ ಈ ರಜಾದಲ್ಲಿ ಈಜು ಕಲಿಬೇಕು ಅಂತಾ ಅಲ್ಲೇ ಪಕ್ಕದಲ್ಲಿ ಇದ್ದ ತೋಟದಲ್ಲಿ ನುಗ್ಗೆ ಮರದ ಕೊಂಬೆಗಳನ್ನೇ ಕಾಣದ ಹಾಗೆ ಕಿತ್ತುಕೊಂಡು ಬಂದು, ಬೆನ್ನಿಗೆ ಹಗ್ಗದಿಂದ ಕಟ್ಟುಕೊಂಡು ಈಜುವಾಗ ಏನೋ ಮಜಾ.

ನಾವಿದ್ದ ಹಳ್ಳಿಯಲ್ಲಿ ಇದ್ದಿದ್ದೆ ಇನ್ನೂರು - ಮುನ್ನೂರು ಮನೆಗಳು. ಕಂಪ್ಯೂಟರ್, ಮೊಬೈಲ್ ಫೋನ್, ಐಪ್ಯಾಡ್ ಅನ್ನೋದು ಕನಸಲ್ಲೂ ಬರ್ದೇ ಇದ್ದ ಕಾಲ... ಅಪ್ಪ ಒಂದು ಸಲ ಸಿಟಿಯಲ್ಲಿ ನೋಡಿ ಬಂದ ಟೀವಿ ಬಗ್ಗೆ ಹೇಳಿದಾಗ...ಅಬ್ಬಬ್ಬ ..ಹೆಂಗಿರಬಹುದು ಅದು ಅಂತ ಮೂಗಿನ ಮೇಲೆ ಕೈಯಿಟ್ಟು ಯೋಚಿಸ್ತಾ ಇದ್ದ ದಿನಗಳು ಅವು!

ಆಗ ನಡೆಯುತ್ತಿದ್ದ ಕ್ರಿಕೆಟ್ ವರ್ಲ್ಡ್ ಕಪ್ಪಿನ ಸ್ಕೋರ್ ಕೇಳಲಿಕ್ಕೆ ಇದ್ದ ಹಳೆ ಒಂದು ರೇಡಿಯೋ ಸೆಟ್ ಮುಂದೇನೆ ಕಿವಿ ಆನಿಸಿ ನಾವೆಲ್ಲಾ ಕೇಳುವಾಗ ಆ ಕಾಮೆಂಟರಿ ಗದ್ದಲಕ್ಕೆ ಕಪಿಲ್ ಸಿಕ್ಸರ್ ಹೊಡೆದ ಅಂತಾ ಹುರ್ರೇ ಅಂತಾ ಕೇಕೆ ಹಾಕಿದರೆ.. ಅದು ಸಿಕ್ಸರ್ ಅಲ್ಲ ಔಟ್ ಅಂತಾ ಗೊತ್ತಾಗಿ ಮತ್ತೆ ತೆಪ್ಪಗೆ ಕೂತಿದ್ದೆ, ಬಯ್ಯುತ್ತ ಕಾಮೆಂಟರಿ ಹೇಳುವವನ ಅರ್ಥವಾಗದ ಆ ಹಿಂದಿ ಭಾಷೆಗೆ!

ಅದೇ ವೇಳೆ ನಮ್ಮ ಹಳ್ಳಿಯ ಗೌಡ್ರ ಮನೆಗೆ ಬಂದಿತ್ತು ಕಪ್ಪು ಬಿಳುಪು ಟೀವಿ. ಮೊದಲೇ ಹಳ್ಳಿ ಗೌಡ್ರು ಅಂತಸ್ತು ಬೇರೆ. ಅದರ ಮೇಲೆ ಮನೇಲಿ ಟೀವಿ.. ಸ್ಟೇಟಸ್! ಓಹ್ ಗೌಡ್ರು ಮನೇಲಿ ಟೀವಿ ಬಂದೈತೆ ಅಂತಾ ಊರಲ್ಲೆಲ್ಲ ಸುದ್ದಿ. ಕೇಳಿ ನಾನು ಸಹಾ ಓಡಿದ್ದೆ ನೋಡಲಿಕ್ಕೆ. ನೋಡಿದರೆ ಅವರ ಮನೆ ತುಂಬಾ ಕುಂತಿದ್ದ ಜನ... ಚಿಕ್ಕ ಕಿಟಕಿಯಲ್ಲಿ ಬಗ್ಗಿ ಬಗ್ಗಿ ನೋಡುತ್ತಿದ್ದ ಹುಡುಗರ ಗುಂಪಿನಲ್ಲಿ ಕಂಡ ಸೀನಿ, ಸುರೇಶ ಎಲ್ಲರನ್ನು ನೋಡಿ ನಾನು ಸಹಾ ಇಣುಕಿ ಇಣುಕಿ ದೂರದಿಂದಲೇ ನೋಡಿದ್ದೇ ಆ ದೂರದರ್ಶನ. ಯಾರೋ ನ್ಯೂಸ್ ಓದುತ್ತಿದ್ದು ನೋಡಿ.. ಹೇಳಿದ್ದೆ ಸುರೇಶನಿಗೆ "ಲೇ ಸೂರಿ.. ಆ ಯಮ್ಮ ಡೆಲ್ಲಿಯಲ್ಲಿ ಕುಂತು ಓದೋ ವಾರ್ತೆಗಳು. ಇಲ್ಲಿ ಯಂಗೆ ಬರ್ತಾ ಇದಾವೆ ನೋಡಲೇ" ಅಂತಾ ...ಯವ್ವ, ಯವ್ವ ಅಂತಾ ಅಂದಿದ್ದ ಆ ಸೂರಿ.

ಅಮ್ಮನಿಗೆ ಆಡಲು ಹೋಗ್ತೀನಿ ಅಂತಾ ಹೇಳಿ ಟೀವಿ ನೋಡ್ಲಿಕ್ಕೆ ಹೋಗಿ ಕೂರುತ್ತಿದ್ದೆ ಗೌಡ್ರು ಮನೆಯ ಜಗಲಿಮೇಲೆ. ಒಂದು ದಿನ ಕಿಟಕಿಯಲ್ಲಿ ಬಗ್ಗಿ ಟೀವಿ ನೋಡ್ತಿದ್ದಾಗ.. "ರಾಜು.. ಒಳಗಡೆ ಬಂದು ನೋಡುಬಾ ಅಂತಾ" , ಯಾವಾಗ್ಲೂ ಗಣಿತ ಹೋಂ ವರ್ಕ್ ನೋಟ್ಸ್ ಕೊಡೊ ಅಂತಾ ಇಸ್ಕೊಂಡು ಹೋಗ್ತಿದ್ದ ಗೌಡ್ರು ಮಗಳು ಕವಿತ ಕರೆದಾಗ.. ಹಾಹ್.. ಅಂತ ಸೀನಿ, ಸೂರಿಗೆ ಒಂದು ಲುಕ್ ಕೊಟ್ಟು ಒಳಗಡೆ ಹೋಗಿ ನೋಡಿದ್ದೆ ಹತ್ತಿರದಿಂದ, ಆ ದೂರ..ದರ್ಶನವನ್ನು!

ಅಂದು ಕಾಡುತ್ತಿದ್ದಳು ಬೇಕು,
ಬೇಕೆಂದು ನೋಟ್ಸ್ ಗಣಿತ...
ಇಂದು ಕರೆಯುತ್ತಿದ್ದಳು.. ಟೀವಿ ನೋಡೆಂದು,
ಆ ಗೌಡ್ರು ಮಗಳು ಕವಿತ!

ಸ್ವಲ್ಪ ದಿನಗಳಾದ ಮೇಲೆ ನಮ್ಮ ಮನೆಗೂ ಒಂದು ಟೀವಿ ತರಲಿಕ್ಕೆ ಅಮ್ಮನ ಮೂಲಕ ಹಾಕಿದ್ದೆ ಅಪ್ಲಿಕೇಶನ್ ಅಪ್ಪನ ಬಳಿ. ಹಾ ಹಾ ..ನೋಡನಂತೆ..ಮೊದ್ಲು ಸರಿಯಾಗಿ ಓದಲು ಹೇಳು ಅವನಿಗೆ ಅಂತಾ ಅಪ್ಪ ಊಟ ಮಾಡುತ್ತಾ ಗೊಣಗಿದ್ದು ಕೇಳಿತ್ತು ಅಡುಗೆ ಮನೆಯಿಂದ.

ನಿಮ್ಮ ಮಾವನ ಮನೆಯಲ್ಲಿ ತಂದಿದಾರಂತೆ ಟೀವಿನಾ.. ಬೇಕಾದರೆ ಒಂದೆರಡು ದಿನಾ ಹೋಗಿ ಬಾ, ಅಂತ ಅಪ್ಪ ಹೇಳಿ ಅನುಮತಿ ಕೊಟ್ಟಾಗ ಬರ್ರಂತಾ ಏರಿದ್ದೆ ಸೈಕಲ್. ಹತ್ತು ಕಿಲೋ ಮೀಟರ್ ದೂರದಲ್ಲಿ ಇದ್ದ ಹಳ್ಳಿಯಲ್ಲಿ ಇತ್ತು ಮಾವನ ಮನೆ. ಎರಡು ವರ್ಷಗಳಿಂದ ಹೋಗಿದ್ದಿಲ್ಲ ಮಾವನ ಮನೆಗೆ. ಅಬ್ಬ ಫುಲ್ ಕ್ರಿಕೆಟ್ ಮ್ಯಾಚ್ ನೋಡಬಹುದು ಅಂತ ಅಂದುಕೊಂಡು ಮಾವನ ಮನೆಯಲ್ಲಿ ಹೋಗಿ ಹತ್ತಿರದಿಂದಲೇ ಟೀವಿ ನೋಡ್ತಾ ಕುಳಿತಿದ್ದೆ. ಹೇ ನಾಗು ಅಂತಾ ಯಾರೋ ಕರೆದಂಗೆ ಕೇಳಿದಾಗ ನೋಡಿದರೆ ಪಕ್ಕದಲ್ಲೇ ಬಂದು ಪವಡಿಸಿದ್ದಳು ಮಾವನ ಮಗಳು ಪ್ರೀತಿ! ಎಲಾ ಇವಳ.. ಚೋಟುದ್ದ ಇದ್ದವಳು ಮಾರುದ್ದ ಆಗಿದ್ದಾಳಲ್ಲ ಅಂತಾ ಅಂದಿದ್ದೆ, ಮನದಲ್ಲೇ!

ಎರಡು ದಿನ ಇದ್ದು ಬರ್ತೀನಿ ಅಂತ ಹೋದವನು ಒಂದು ವಾರ ಅಲ್ಲೇ ಟೆಂಟ್ ಹಾಕಿದ್ದೆ. ಸ್ವಲ್ಪ ಹೊತ್ತು ಟೀವಿ ನೋಡಿ (ಬರ್ತಿದ್ದಿದ್ದು ಬರಿ ಹಿಂದಿ ಚಾನೆಲ್) ಹೊರಗಡೆ ಕಟ್ಟೆ ಮೇಲೆ ಹುಣಸೆ ಬೀಜದಲ್ಲಿ ಚೌಕಿ-ಬಾರ್ ಆಟ, ಹಾವು-ಏಣಿ ಆಟ, ಮಧ್ಯಾನ್ಹ ಪಕ್ಕದಲ್ಲೇ ಇದ್ದ ಮಾವಿನ ತೋಪಿಗೆ ಹೋಗಿ ಮಾವಿನ ಕಾಯಿ ಕಿತ್ತು ತಿನ್ನುತ್ತ.. ಅಲ್ಲೇ ಕಣ್ಣಾ ಮುಚ್ಚಾಲೆ ಆಡುತ್ತಿದ್ದೆ ಪ್ರೀತಿಯ ಜೊತೆ. ಒಂದು ವಾರ ಮುಗಿದಿದ್ದು ಗೊತ್ತೇ ಆಗಲಿಲ್ಲ... ಯಾಕೋ ಮಾವನ ಮನೆ (ಅಲ್ಲಲ್ಲ ..ಮಾವನ ಮಗಳು ಪ್ರೀತಿಯನ್ನು) ಬಿಟ್ಟು ಹೊರಡುವಾಗ ಭಾರವಾಗಿತ್ತು ಮನ!

ಸ್ಕೂಲ್ ಸ್ಟಾರ್ಟ್ ಆದ ಮೇಲೆ ಎರಡು-ಮೂರು ತಿಂಗಳಿಗೊಮ್ಮೆ ಶನಿವಾರದ ಸ್ಕೂಲ್ ಮುಗಿಸಿಕೊಂಡು ಹೋಗ್ತಾ-ಬರ್ತಾ ಇದ್ದೆ ಮಾವನ ಮನೆಗೆ ಟೀವಿ ನೋಡ್ಬೇಕು ಅಂತಾ. ಆ ದೂರ..ದರ್ಶನ ತಂದಿತ್ತು ನಮ್ಮಿಬ್ಬರನ್ನು ಬಲು ಹತ್ತಿರ!

"ಅಪ್ಪ, ಅಪ್ಪ.. ನೀವು ಏನು ಮಾಡ್ತಾ ಇದ್ರೀ ಸ್ಕೂಲ್ ಬ್ರೇಕ್ ಟೈಮ್ ನಲ್ಲಿ" ಅಂತಾ ಮಗ ಜೋರಾಗಿ ಮತ್ತೊಮ್ಮೆ ನನ್ನ ಅಲುಗಾಡಿಸಿ ಕೇಳಿದಾಗ, ಈ ಲೋಕಕ್ಕೆ ಮತ್ತೆ ಬಂದ ನಾನು ತಡವರಿಸಿ ಹೇಳಿದ್ದೆ. "ಟೀವಿ ಜಾಸ್ತಿ ನೋಡಬೇಡ ಮಗಾ. ಅದರಿಂದ ಜಾಸ್ತಿ ತೊಂದರೆನೆ" ಅಂತ ಅಡುಗೆ ಮನೆ ಕಡೆ ತಿರುಗಿ ಹೇಳಿದ್ದೆ! ಹಾ ..ಹಾ.. ಹೌದು ಹೌದು... ಅದರಿಂದಲೇ ಈ ಎಲ್ಲ ತಾಪತ್ರಯ ಅನುಭವಿಸ್ತಾ ಇರೋದು ಅಂತ ಗೊಣಗಾಡಿದ್ದಳು ಮಾವನ ಮಗಳು.. ಅಲ್ಲಲ್ಲ ಮನೆಯ ಒಡತಿ ಪ್ರೀತಿ.

"I don't understand what you guys are saying" ಅಂತಾ ಐಪ್ಯಾಡ್ ಹಿಡಿದು ಒಳಗಡೆ ಹೋದ ಮಗರಾಯನಿಗೆ ಹೇಳಿದ್ದೆ. ನಡಿಯೋ ಪಕ್ಕದ ಸ್ಟೇಟ್ ನಲ್ಲಿರೋ ನಿನ್ನ ಅತ್ತೆ ಮಾವನ ಮನೆಯಲ್ಲಿ ಬಿಟ್ಟು ಬರ್ತೀನಿ. ಎರಡು ದಿನ ಇದ್ದು ಬರುವೆಯಂತೆ :)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+