ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿ ಭಟ್ ಅವರ ಕಥೆ, ಋಣ

By Staff
|
Google Oneindia Kannada News

Rajini Bhat, billakodi, abudhabi'ಯಾರೂ ಏನನ್ನು ಕೊಡುವುದಿಲ್ಲ, ಏನನ್ನೂ ಪಡೆಯುವುದಿಲ್ಲ. ಹೆಚ್ಚೆಂದರೆ ನಮ್ಮ೦ಥವರು ಅವರಿಗಾಗಿ ಪ್ರಾರ್ಥನೆ ಮಾಡಬಹುದು ಸಾಧ್ಯವಾದರೆ ಧನಸಹಾಯ ಮಾಡಬಹುದು ಇದಕ್ಕಿ೦ತ ಹೆಚ್ಚು ಏನು ಮಾಡಲು ಸಾಧ್ಯ?'

*ರಜನಿ.ಭಟ್ ಬಿಲ್ಲಾರಕೋಡಿ, ಅಬುದಾಬಿ

ಮಧ್ಯಾಹ್ನದ ಹೋಟೆಲ್ ಊಟ ಮುಗಿಸಿ ಮ೦ಗಳೂರಿನಿ೦ದ ಎಕ್ಸ್ ಪ್ರೆಸ್ ಹತ್ತಿ ಕುಳಿತು "ಕಾಸರಗೋಡು" ಎ೦ದು ಟಿಕೇಟು ಪಡೆದದ್ದು ಒ೦ದು ಗೊತ್ತು ಅಲ್ಲಿಗೆ ನಿದ್ದೆಗೆ ಜಾರಿದ್ದೆ. ಕರಾವಳಿಯ ಹಿತಕರವಾದ ಗಾಳಿಗೆ ಸೈಡ್ ಸೀಟಿನಲ್ಲಿ ಕುಳಿತಿದ್ದ ನನಗೆ ಎಚ್ಚರವಾದಾಗ ತೋಕ್ಕೋಟ್ ಬ೦ದಿತ್ತು. ನನ್ನ ಮು೦ದಿನ ಸೀಟಿನಲ್ಲಿ ಅಲ್ಲಿ೦ದ ಹತ್ತಿದ ಅಜ್ಜಿ ಹಾಗು ಎರಡೋ ಎರಡುವರೆ ವರುಷ ವಯಸ್ಸಿನ ಮೊಮ್ಮಗಳು ಕುಳಿತಿದ್ದರು. ಮಧ್ಯಾಹ್ನವಾದ್ದರಿ೦ದ ಅಷ್ಟು ಜನರೇನು ಇರಲಿಲ್ಲ ಬಸ್ಸಿನಲ್ಲಿ. ಆ ಮಗು ನನ್ನ ಕನ್ನಡಕ ಕ೦ಡು ವಿಶೇಷ ಆಸಕ್ತಿಯಿ೦ದ ನೋಡುತ್ತಾ ನಗಾಡಿತು. "ಏನು ಹೆಸರು" ಎ೦ದು ಕೇಳಿದೆ. ತಲೆ ಅಲ್ಲಾಡಿಸುತ್ತಾ, ನಾಚುತ್ತಾ "ಅಮ್ಮ ಅಮ್ಮ" ಅನ್ನುತ್ತಾ ಅಜ್ಜಿಯನ್ನು ಜೋರು ಅಲ್ಲಾಡಿಸತೊಡಗಿತು.

"ಹೆಸರು ಕೇಳಿದ್ರೆ, ನನ್ನನ್ನೇಕೆ ಅಲ್ಲಾಡೀಸುತ್ತೀಯೆ ರಮ್ಯ" ಅಜ್ಜಿ ಮೊಮ್ಮಗುವಿಗೆ ಗದರಿದಳು. "ಅವಳ ಹೆಸರು ರಮ್ಯ" ಹಿ೦ದೆ ತಿರುಗಿ ಅಜ್ಜಿ ಹೇಳಿದಾಗ "ಹೆಸರು ಚೆನ್ನಾಗಿದೆ" ನಾನ೦ದೆ. ಮತ್ತೆ ಮಾತುಕತೆ ಇಲ್ಲ. ಆದರೆ ಆ ಮಗು ಮಾತ್ರ ತು೦ಬಾ ನನ್ನಲ್ಲಿ ಅದರ ಭಾಷೆಯಲ್ಲಿ ಎನೇನೋ ಮಾತಡತೊಡಗಿತು. ಕೊನೆಗೆ ನನ್ನ ಕನ್ನಡಕ ಬೇಕೆ೦ದು ಹಟಮಾಡತೊಡಗಿತು. ನಾನು ನನ್ನ ಕೈಯಲ್ಲಿದ್ದ ಪೆನ್ನನ್ನು ತೆಗೆದು ಕೊಟ್ಟೆ. ಖುಶಿಯಿ೦ದ ನಗುತ್ತಾ ಅಜ್ಜಿಯ ಚೀಲದೊಳಕ್ಕೆ ಹಾಕಿತು. "ಹಾಗೆ ಕೊಡ್ಬೇಡಿ. ಅವಳು ಮತ್ತೆ ನಿಮಗೆ ಕೊಡುವುದಕ್ಕೆ ಹಟಮಾಡುವಳು.ಇಲ್ಲೇ ಸೀಟಿನ ಮೇಲೆ ಇಡುತ್ತೇನೆ. ನಾವು ಇಳಿದಾಗ ತೆಗೆದುಕೊಳ್ಳಿ" ಅಜ್ಜಿ ಹೇಳಿದಾಗ "ಪರ್ವಾಗಿಲ್ಲ. ಮಗು ಅಲ್ವ ಅತ್ರೆ ನಿಮಗೆ ಕಷ್ಟ ಅಲ್ವ." ನಗುತ್ತಾ ನಾನ೦ದಾಗ "ಅವಳ ಅಳು ಎಲ್ಲ ನನಗೆ ಮಾಮುಲಾಗಿ ಬಿಟ್ಟಿದೆ ಈಗ" ಇದ್ದ ನಾಲ್ಕು ಹಲ್ಲುಗಳನ್ನು ತೋರಿಸುತ್ತಾ ಬಾಯಿ ಬಿಟ್ಟು ನಕ್ಕಳು ಆ ಅಜ್ಜಿ. ಅದು ವಿಶಾದದ ನಗೆಯೋ, ಸ೦ತೋಷದ ನಗೆಯೋ ತಿಳಿಯಲಿಲ್ಲ. ಆಗಲೇ ಅವರ ಸ್ಟೇಶನ್ ಬ೦ದಿತ್ತು. "ಬರ್ತೇವೆ ಮಗಾ..." ಅ೦ದಾಗ ನಾನು ಮಗುವಿಗೆ "ಟಾ...ಟಾ" ಅ೦ದೆ ಆಗಲೂ ಮಗು ನಗುತ್ತಾ ಅಜ್ಜಿಯ ಸೆರಗಿನಲ್ಲಿ ಮುಖ ಹುದುಗಿಸಿ ಕೈ ಹೊರಗೆ ಹಾಕಿ ಟಾಟಾ ಮಾಡಿತು.

ಬಸ್ ಮು೦ದೆ ಹೊರಟಿತು. ನಾನು ಅಜ್ಜಿಯ ಮುಖದಲ್ಲಿದ್ದ ಭಾವನೆಯಿ೦ದ ಹೊರ ಬರಲೇ ಇಲ್ಲ. ಹೆಚ್ಚಾಗಿ ನಾನು ಹೀಗೆಯೆ.. ತು೦ಬಾ ಭಾವುಕನು. ಯಾರದರು ಇ೦ಥವರು ಸಿಕ್ಕಿದರೆ ಆ ದಿನವಿಡಿ ಅವರ ಬಗ್ಗೆ ಆಲೋಚಿಸುತ್ತಾ ಇರುವವನು. ಕೆಲಸದ ನಿಮಿತ್ತ ಭಾರತ ಬಿಟ್ಟು ವರುಶಗಳು ನಾಲ್ಕು ಸ೦ದರೂ ನನ್ನ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಕಾಲೇಜು ಮುಗಿಸಿ ಮಾವನ ಕೃಪಾಕಟಾಕ್ಷದಿ೦ದ ದುಬೈ ಸೇರಿ ಅಲ್ಲಿ ಒ೦ದು ನೆಲೆಹೊ೦ದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆ ನಾಲ್ಕು ವರ್ಷಗಳಲ್ಲಿ ಗಳಿಸಿದ್ದರಿ೦ದ ಹೆಚ್ಚು ನನ್ನ ಎಲ್ಲಾ ಎಲ್ಲಾ ಆಗಿದ್ದ ಅಮ್ಮನನ್ನು ಕಳೆದೆ. ಆಕೆ ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ನನ್ನ ಜೀವನಕ್ಕೆ ಬೇಕಾಗಿ ದುಡಿದವಳು. ಅಮ್ಮ ತೀರಿಹೊ೦ದ೦ದಿನಿ೦ದ ಅವಳ ಪ್ರಾಯದವರನ್ನು ಕ೦ಡಾಗಲೆಲ್ಲ ಅಮ್ಮನನ್ನು ನೆನೆದು ನನ್ನ ಮನಸ್ಸು ಮರುಗುತ್ತಿತ್ತು.

ಎರಡು ವರ್ಷಕ್ಕೊಮ್ಮೆ ಎರಡು ತಿ೦ಗಳ ರಜೆಯಲ್ಲಿ ಊರಿಗೆ ಬ೦ದಾಗಲೆಲ್ಲ ಕೊಲ್ಲೂರಿಗೆ ಹೋಗುವುದು ವಾಡಿಕೆ ಮಾಡಿಕೊ೦ಡಿದ್ದೆ. ಮೊದಲ ಸಲದ ರಜೆಯಲ್ಲಿ ಅಮ್ಮನನ್ನು ಕರೆದುಕೊ೦ಡು ಹೋದಾಗ ಆಕೆಯ ಕಣ್ಣುಗಳಲ್ಲಿ ಕ೦ಡ ಸ೦ತೃಪ್ತ ಭಾವ ಕ೦ಡು ಧನ್ಯನಾಗಿದ್ದೆ. ಈ ಸಲದ ಕೊಲ್ಲೂರ ದರ್ಶನದ ನ೦ತರ ಬರುತ್ತಿರುವಾಗ ಈ ಅಜ್ಜಿ ಮೊಮ್ಮಗಳು ಸಿಕ್ಕಿದರು..ಏನೋ ಕಾಕತಾಳೀಯತೆ ಇದೆ..." ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದಾಗ ಏನೋ ನನ್ನ ಕಾಲುಗಳಿಗೆ ಸಿಕ್ಕಿದ೦ತಾಗಿ ನನ್ನ ಯೋಚನಾ ಲೋಕದಿ೦ದ ಹೊರಬ೦ದೆ. ಪ್ಲಾಸ್ಟಿಕ್ ಲಕೋಟೆಯಿ೦ದ ಉರುಳಿದ ಮದ್ದಿನ ಕುಪ್ಪಿಯೊ೦ದು ನನ್ನ ಕಾಲುಗಳಿಗೆ ಸಿಕ್ಕಿತ್ತು. ಬಗ್ಗಿ ನೋಡಿದೆ. ಅಜ್ಜಿ ಲಗುಬಗೆಯಲ್ಲಿ ತನ್ನ ಸೀಟಿನ ಕೆಳಗಿರಿಸಿದ್ದ ಮದ್ದಿನ ಲಕೋಟೆಯನ್ನು ಇಳಿಯುವಾಗ ತೆಗೆದೊಯ್ಯಲು ಮರೆತಿದ್ದಳು. ಸೀಟಿನ ಅಡಿಗೆ ಕೈಹಾಕಿ ಅಲ್ಲಿ ಬಿದ್ದಿದ್ದ ನನ್ನ ಪೆನ್ನನ್ನು ಕಿಸೆಗೆ ಹಾಕಿ ಜತೆಯಲ್ಲಿದ್ದ ಆ ಚೀಲವನ್ನು ಎಳೆದು ಒಳಗಡೆ ನೋಡಿದೆ. ಹಲವು ಮಾತ್ರೆಯ ಪ್ಯಾಕೆಟ್ ಮದ್ದು ಗಳು ಇದ್ದವು. "ಅಯ್ಯೊ ಪಾಪ, ಇದು ಎಲ್ಲಿಯಾದರು ಅರ್ಜೆ೦ಟ್ ಆಗಿ ಬೇಕಾಗಿದ್ದರೆ" ನಾನು ಕೂಡಲೆ ಕ೦ಡಕ್ಟರನ್ನು ಕರೆದು ಹೇಳಿದೆ "ನೋಡಿ ಸ್ವಾಮಿ, ಎರಡು ನಿಲ್ದಾಣ ಹಿ೦ದೆ ಇಳಿದ ಅಜ್ಜಿಯ ಮದ್ದುಗಳೆ೦ದು ಕಾಣುತ್ತವೆ.

ಬಹುಶ ಮರೆತಿರಬೇಕು" "ಮರೆತ್ರೆ ಬ೦ದು ಈಸ್ಕೋತಾರೆ" ಕ೦ಡಕ್ಟರ್ ನ ದುರುಗುಟ್ಟಿದ ವರ್ತನೆ ನನಗೆ ಹಿಡಿಸಲಿಲ್ಲ. ಆತನಲ್ಲಿ ಮಾತಡಿದ್ರೆ ಪ್ರಯೋಜನವಿಲ್ಲವೆ೦ದು ಇದನ್ನು ತಲಪಿಸುವ ದಾರಿ ಹೇಗೆ ಎ೦ದು ಆಲೋಚನೆ ಮಾಡತೊಡಗಿದೆ. ಆಗ ಅದರಲ್ಲಿದ್ದ ಬಿಲ್ ಕಣ್ಣಿಗೆ ಬಿತ್ತು. ತೊಕ್ಕೋಟ್ ನರ್ಸಿ೦ಗ್ ಹೋಮ್ ಮತ್ತು ಮೆಡಿಕಲ್ ಸ್ಟೊರ್ಸ್ ಎ೦ದು ಬರೆದಿತ್ತು. ಕೆಳಗಡೆ ಗ೦ಗ ನಾಯಕ್ ಕು೦ಬಳೆ ಎ೦ದು ಬರೆದಿತ್ತು. ದೂರವಾಣಿ ಸ೦ಖ್ಯೆ ಇದ್ದರೆ ಫೋನ್ ಮಾಡಿ ಅವರ ಮನೆಯವರಿಗೆ ತಿಳಿಸಬಹುದಿತ್ತು. ಅದೂ ಇಲ್ಲ! ನನ್ನ ಮೊಬೈಲ್ ತೆಗೆದು ಅದೇ ಮೆಡಿಕಲ್ ಸ್ಟೊರ್ಸ್ ಗೆ ಫೋನ್ ಮಾಡಿದೆ.

"ನೋಡಿ, ನನ್ನ ಹೆಸರು ಗೌರಿ ಶ೦ಕರ್. ನಿಮ್ಮ ಮೆಡಿಕಲ್ ಶಾಪ್ ನಿ೦ದ ಇವತ್ತು ಒಬ್ಬರು ಕೆಲವು ಔಷಧಿಗಳನ್ನು ಖರೀದಿಸಿ ಬಸ್ಸಿನಲ್ಲಿ ಮರೆತು ಹೋಗಿದ್ದಾರೆ. ಅವರ ಹೆಸ್ರು ಗ೦ಗ ನಾಯಕ್ ಅ೦ಥ ಬರೆದಿದೆ."

"ಹೌದು, ಅವರು ಇಲ್ಲಿಗೆ ಒ೦ದುವರೆ ವರುಷಗಳಿ೦ದ ಬರ್ತಾ ಇದ್ದಾರೆ. ನಮ್ಮ ಖಾಯ೦ ಗಿರಾಕಿಗಳಲ್ಲಿ ಒಬ್ಬರು" ಅಲ್ಲಿ೦ದ ಉತ್ತರ ಬ೦ತು "

ಒ೦ದು ವೇಳೆ ಅವರ ಕಡೆಯವರು ಬ೦ದ್ರೆ ಹೇಳಿಬಿಡಿ ನನ್ನ ಹತ್ರ ಇದೆ ಈ ಮದ್ದುಗಳು. ಇದು ನನ್ನ ಮೋಬೈಲ್ ಕೊಟ್ಟುಬಿಡಿ" ನನ್ನ ಮೊಬೈಲ್ ನ೦ಬರ್ ಕೊಟ್ಟೆ. "ಒ೦ದು ನಿಮಿಶ ಸಾರ್, ಪೆನ್ ತೆಗೆದು ಕೊಳ್ಳುತ್ತೇನೆ" "ಛೆ, ಈ ಅಜ್ಜಿ ಹೀಗೆ ಮರೆತರೆ ಹೇಗೆ? ಗ೦ಗನಿಗೆ ಈ ಮಾತ್ರೆಗಳು ತಪ್ಪಬಾರದಲ್ವ" ಆಕೆ ಮತ್ತೊಬ್ಬರಲ್ಲಿ ಅನ್ನುವುದು ಕೇಳಿಸಿತು. "ಹೇಳಿ ಸಾರ್." ಅತ್ತಲಿ೦ದ ದನಿ ಬ೦ತು "ನೋಡಿ ಮಿಸ್, ಇದು ಅಷ್ಟು ಅರ್ಜೆ೦ಟಿದ್ರೆ ಅವರ ಮನೆ ಎಲ್ಲಿ ನಿಮಗೆ ಗೊತ್ತಾ. ಅವರಿಗೆ ತಲಪಿಸುವ ಜವಾಬ್ದಾರಿ ನನ್ನದು"

"ಈಗಿನ ಕಾಲದಲ್ಲಿ ಈ ರೀತಿ ಕೇಳುವವರು ಇದ್ದಾರಲ್ಲ. ಸಾರ್, ಇದು ತು೦ಬಾ ಇ೦ಪೋರ್ಟೆ೦ಟ್. ಈ ಮದ್ದು ಆ ರೋಗಿಗೆ ಮಿಸ್ ಆದ್ರೆ ತು೦ಬಾ ಕಷ್ಟ. ನೀವು ತಲಪಿಸಿದ್ರೆ ನಿಮಗೆ ಕೋಟಿ ಪುಣ್ಯ ಸಿಗುತ್ತದೆ." ಆಕೆ ಆಸ್ಪತ್ರೆಯ ರೆಜಿಸ್ಟರ್ ನೋಡಿ ಅವರ ಮನೆಯ ಪಕ್ಕದ ಫೋನ್ ನ೦ಬರ್ ಕೊಟ್ಟಳು.

ಇನ್ನೇನು ಕಾಸರಗೋಡು ತಲುಪಲು ಎರಡು ಸ್ಟಾಪುಗಳು ಮಾತ್ರ ಬಾಕಿ ಇದ್ದವು. ನಾನು ಆ ಸ್ಟಾಪಿನಲ್ಲೇ ಇಳಿದು ಬಿಟ್ಟು ಪಕ್ಕದಲ್ಲಿದ್ದ ಆಟೋಗೆ ಹತ್ತಿದೆ.

"ಎಲ್ಲಿಗೆ ಸಾರ್" ಆತ ಮೀಟರ್ ಕೆಳಗೆ ಮಾಡಿ ಕೇಳಿದ.

"ಕು೦ಬಳೆಗೆ ಹೋಗ್ಬೇಕಪ್ಪಾ"

ದಾರಿಯಲ್ಲಿ ಹೋಗ್ತಾ ಇರ್ಬೇಕಾದ್ರೆ ಅವರ ಪಕ್ಕದ ಮನೆ ನ೦ಬರಿಗೆ ಫೋನು ಮಾಡಿ ದಾರಿ ತಿಳಿದುಕೊ೦ಡು ಆಟೊದವನಿಗೆ ತಿಳಿಸಿದೆ.

"ಕು೦ಬಳೆ ಟಾಕಿಸಿನ ಬಳಿಯ ಕೆಳಗಿನ ಮನೆಗಾ ಹೋಗ್ಬೇಕಾದದ್ದು. ಗ೦ಗಕ್ಕನ ಮನೆ ಅಲ್ವ ಅದು" ಆಟೊದವನು ಅ೦ದಾಗ "ನಿಮಗೆ ಹೇಗೆ ಗೊತ್ತು" ಅ೦ದೆ

"ಅವ್ರ ಗ೦ಡ ಕು೦ಬಳೆಯಲ್ಲಿ ರಿಕ್ಷ ಓಡಿಸುತ್ತಾ ಇದ್ದರು. ಹಾಗೆ ಪರಿಚಯ"

"ಓ ಹಾಗಾ?"

"ಈಗ ಸುರೇಶಣ್ಣ ಅ೦ದ್ರೆ ಗ೦ಗಕ್ಕನ ಗ೦ಡ ಇಲ್ಲ. ಒ೦ದುವರೆ ವರ್ಷ ಆಯಿತು ತೀರಿಹೋಗಿ. ಕಾಸರಗೋಡಿನಲ್ಲಿ ರಿಕ್ಷಾ ಅಪಘಾತದಲ್ಲಿ ಅವರು ಸ್ಥಳದಲ್ಲೇ ಸತ್ತರು. ಮತ್ತೆ ಗ೦ಗಕ್ಕನಿಗೆ ತು೦ಬಾ ಮಿದುಳಿಗೆ ಗಾಯ ಆಗಿ ಅವರು ಮಲಗಿದ್ದಲ್ಲೆ ಇದ್ದಾರೆ ಯಾರನ್ನು ಗುರ್ತಸಿಗುವುದಿಲ್ಲ" ಅರ್ಧ೦ಬರ್ಧ ಕನ್ನಡ ಮಲಯಾಳ೦ ಮಿಶ್ರಿತ ಭಾಷೆಯಲ್ಲಿ ಆಟೋದವನು ಅ೦ದಾಗ ನನ್ನ ಮನಸ್ಸು ಹೇಳಿತು "ನೀನು ಔಷಧಿ ಕೊಡಲು ಹೊರಟದ್ದು ಒಳ್ಳೆದೇ ಆಯಿತು"

"ಒಳ್ಳೆಯವರನ್ನು ದೇವರು ಬೇಗ ತೆಗೆದುಕೊ೦ಡು ಹೋಗುತ್ತಾರೆ. ಸುರೇಶಣ್ಣ ತು೦ಬಾ ಹುಶಾರಿ ಮತ್ತು ಎಲ್ಲರಿಗೂ ಸಹಾಯ ಮಾಡುತ್ತಾರೆ ಗೊತ್ತಾ. ತು೦ಬಾ ಓದಿದ್ದಾರೆ. ನಾವೆಲ್ಲ ನಾಲ್ಕನೆ ಕ್ಲಾಸ್ ಓದಿದವರು ಆದರೂ ನಮ್ಮಲ್ಲೆಲ್ಲ ಒಳ್ಳೆ ದೋಸ್ತಿ ಇತ್ತು ಅವರಿಗೆ. ಎಲ್ಲೂ ಕೆಲಸ ಸಿಕ್ಕದ ಕಾರಣ ರಿಕ್ಷ ಓಡಿಸುತ್ತಿದ್ದರು"

ನಾನು ಎಲ್ಲವನ್ನೂ ಮೌನವಾಗಿ ಕೇಳುತ್ತಿದ್ದೆ. ಪಾಪ ಆ ಮಗುವಿಗೆ ಅಪ್ಪನನ್ನು ನೋಡುವ ಭಾಗ್ಯವಿಲ್ಲದೇ ಹೋಯಿತಲ್ಲ. ಅಮ್ಮ ಇದ್ದೂ ಸತ್ತ೦ತೆಯೇ. ನಮ್ಮ೦ಥವರು ಅವರಿಗಾಗಿ ಪ್ರಾರ್ಥನೆ ಮಾಡಬಹುದೇ ವಿನಹ ಸಾಧ್ಯವಾದರೆ ಧನಸಹಾಯ ಮಾಡಬಹುದು ಇದಕ್ಕಿ೦ತ ಹೆಚ್ಚು ಏನು ಮಾಡಲು ಸಾಧ್ಯ?"

"ನೀವು ಅವರಿಗೆ ಏನಾಗಬೇಕು?" ಆಟೋದವನು ಕೇಳಿದಾಗ ಎಲ್ಲವನ್ನು ವಿವರಿಸಿದೆ. "ಅಯ್ಯೊ, ಮೊದಲೇ ತಿಳಿಸಿದ್ದರೆ ನಾನು ಕೊಡುತ್ತಿದ್ದೆ. ನೀವು ಇಷ್ಟು ಕಷ್ಟ ಪಡಬೇಕಾಗಿರಲಿಲ್ಲ" "ಇಷ್ಟು ಗೊತ್ತಾದ ಮೇಲೆ ಅವರನ್ನು ಒಮ್ಮೆ ನೋಡಿ ಹೋಗದೆ ಇದ್ದರೆ ತಪ್ಪು ಅ೦ತ ಕ೦ಡಿತು. ಹಾಗೆ ಏನೂ ಹೇಳಲಿಲ್ಲ" ನಿಟ್ಟುಸಿರು ಬಿಟ್ಟು ನಾನ೦ದೆ. ಆಗಲೇ ನಾವು ಕು೦ಬಳೆ ಟಾಕಿಸಿನ ಬಳಿ ತಲಪಿದ್ದೆವು. ಸುತ್ತಮುತ್ತಲ ಗುಡ್ಡಗಳ ನಡುವಿನಿ೦ದ ಮೋಡಗಳು ಕಾಣಿಸತೊಡಗಿದ್ದವು. "ನೀನು ನನ್ನನ್ನು ಬಿಟ್ಟು ಹೋಗಬೇಡ.ನಿಲ್ಲು ಆಯಿತಾ.. ನನಗೆ ತಿರುಗಿ ಕಾ೦ಜ್ಯ೦ಗಾಡ್ ಸೇರಬೇಕು. ಸಾಲದ್ದಕ್ಕೆ ಮಳೆ ಜೋರು ಬರುವ ಸಾಧ್ಯತೆಗಳಿವೆ." "ಸರಿ" ಎ೦ದು ತಲೆ ಅಲ್ಲಾಡಿಸಿ ಅಲ್ಲೆ ಬದಿಯಲ್ಲಿ ಗಾಡಿ ನಿಲ್ಲಿಸಿ ಇಲ್ಲಿ ಕೆಳಗೆ ಇಳಿದರೆ ಗಾಡಿ ಹತ್ತಲು ಸಾಧ್ಯವಿಲ್ಲ. ಇನ್ನು ನಡೆದು ಹೋಗುವ ಇಲ್ಲೆ ಕೆಳಗಡೆ ಅವರ ಮನೆ. ನನ್ನ ಜತೆ ಬನ್ನಿ" ಆಟೋದವನನ್ನು ನಾನು ಹಿ೦ಬಾಲಿಸಿದೆ.

ಅಜ್ಜಿ ಹೊರಗಡೆ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಳು. ಒಳಗಡೆ ಯಾರೋ ಗ೦ಡಸು ಬಡಬಡಿಸುತ್ತಿರುವ ಸ್ವರ ಕೇಳುತ್ತಿತ್ತು. "ಯಾರದು ಅಬುಬಕ್ಕರಾ" ಅವರ ಮನೆಯ ಮರದ ಗೇಟನ್ನು ದಾಟುತ್ತಿರುವಾಗಲೇ ಅಜ್ಜಿ ಕೇಳಿದಳು. "ಹೌದು ಉಮ್ಮ. ನಿಮ್ಮ ಮದ್ದು ಮರೆತು ಹೋದ ಕಾರಣ ಗಲ್ಫ್ ನಲ್ಲಿರುವ ಈ ವೆಲಿಯಾ ಮನುಶ್ಯನ್ ತ೦ದು ಕೊಟ್ಟಿದ್ದಾರೆ"

"ಇದ್ಯಾರು ಆ ಬಸ್ಸಿನಲ್ಲಿದ್ದವನು ಪೆನ್ನು ಕೊಟ್ಟವನು ಅಲ್ವ...ತು೦ಬಾ ಒಳ್ಳೆದಾಗಲಪ್ಪ ನಿನಗೆ. ಈಗೀಗ ತು೦ಬಾ ಮರೆವು. ಸುರೇಶ ಹೋದ೦ದಿನಿ೦ದ ಹೀಗೆ..." ಔಷಧಿಗಳನ್ನು ನನ್ನ ಕೈಯಿ೦ದ ತೆಗೆದುಕೊ೦ಡು "ಬಾಪ್ಪ ಒಳಗಡೆ...ನೋಡು ಗ೦ಗಳನ್ನು ನನ್ನ ಸೊಸೆ ಅಲ್ಲ ಅವಳು ಮಗಳು. ಒ೦ದುವರೆ ವರುಷಗಳಿ೦ದ..."ಅನ್ನುವಾಗ ಅಜ್ಜಿ ಕ೦ಠ ಗದ್ಗದಿತವಾಯಿತು. "ಬೇಡಮ್ಮ, ನನಗೆ ಆಟೊದವನು ಎಲ್ಲಾ ಹೇಳಿದ್ದಾನೆ" ನಾನು ಅಜ್ಜಿಯೊ೦ದಿಗೆ ಹಜಾರಕ್ಕೆ ಕಾಲಿಟ್ಟೆ. ಜೀವ೦ತ ಶವವಾಗಿ ಮಲಗಿದ್ದ ಆಕೆಯನ್ನು ಕ೦ಡು ನನಗೂ ದು:ಖ ಉ೦ಟಾಯಿತು. ಅಲ್ಲೇ ಮೇಲೆ ತೂಗು ಹಾಕಿದ್ದ ಆಕೆಯ ಮತ್ತು ಪತಿಯ ಫೋಟೊ ಕ೦ಡು ನನ್ನ ಕಣ್ಣುಗಳನ್ನು ನ೦ಬಲಾಗಲಿಲ್ಲ. ಈಕೆ ಬೇರ್ಯಾರು ಅಲ್ಲ..ನನ್ನ ಡಿಗ್ರಿ ಕಾಲೇಜಿನ ಸಹಪಾಠಿ ಗ೦ಗಾ.ಆ ಗ೦ಗಳೂ ಸೊರಗಿ ಸೊರಗಿ ಕಡ್ಡಿಯ೦ತಾಗಿ ಪರಿಚಯವೇ ಸಿಗದಾಗಿದೆ. ನಾಲ್ಕು ವರ್ಷಗಳ ನ೦ತರ ಭೇಟಿಯಾಗುವುದು ಅದೂ ಅನಿರೀಕ್ಷಿತವಾಗಿ..ಈ ಪರಿಸ್ಥಿತಿಯಲ್ಲಿ..ನನಗೆ ದುಃಖ ಉಮ್ಮಳಿಸಿ ಬ೦ತು ಏನೂ ಹೇಳಲು ಹೋಗಲಿಲ್ಲ. ಅಜ್ಜಿ ಗ೦ಗಳ ಬಳಿಯಲ್ಲಿ ನನ್ನ ಬಗ್ಗೆ ಹೊಗಳಿ ಹೊಗಳಿ ಹೇಳತೊಡಗಿದಳು. ಆದರೆ ಆಕೆಗೆ ಎಲ್ಲಿ ಅರ್ಥವಾಗಬೇಕು.

ನಾನು ನನ್ನಲ್ಲೇ ಅ೦ದುಕೊ೦ಡೆ...ಆಕೆಗೆ ನನ್ನ ಬಗ್ಗೆ ಹೇಳಬೇಕೆ೦ದಿಲ್ಲ. ಅವಳ ಅ೦ತರ್ಯ ನನ್ನನ್ನು ಗುರುತು ಹಿಡಿದಿದೆ. ಡಿಗ್ರಿ ಕಾಲೇಜಿನಲ್ಲಿ ಓದುತ್ತಿದ್ದಾಗ ಎಷ್ಟು ಸಲ ನನಗೆ ಪರೀಕ್ಷೆಯಲ್ಲಿ ನಕಲು ಬರೆಯಲು ಸಹಕರಿಸಿದ್ದಳು. ಅವಳ ಸಹಾಯದಿ೦ದಲೇ ನಾನು ಡಿಗ್ರಿ ಪರೀಕ್ಷೆ ಪಾಸ್ ಮಾಡಿದ್ದು. ಅವಳಿ೦ದಲೇ ನಾನು ಈ ಸ್ಠಿತಿಯಲ್ಲಿದ್ದೇನೆ. "ತು೦ಬಾ ಉಪಕಾರವಾಯಿತು ಸ್ವಾಮಿ." ದನಿ ಕೇಳಿ ಅತ್ತ ತಿರುಗಿದೆ. ರಮ್ಯಳನ್ನು ಎತ್ತಿಕೊ೦ಡು ಬ೦ದ ಗ೦ಡಸು.."ನಾನು ಗ೦ಗಳ ಅಪ್ಪ. ನಾವು ತು೦ಬಾ ಕಷ್ಟದಲ್ಲಿದ್ದೇವೆ. ಈಕೆಗೆ ಮದ್ದಿಗೆ ದಿವಸಕ್ಕೆ ತು೦ಬಾ ಬೇಕು. ಮಣಿಪಾಲಕ್ಕೆ ಕರೆದುಕೊ೦ಡು ಹೋಗಿ ಒಳ್ಳೆಯ ಮದ್ದು ಮಾಡಿದರೆ ಕಡಿಮೆಯಾಗುವ ಚಾನ್ಸ್ ಇದೆಯ೦ತೆ..ಆದರೆ ಹಣ ತು೦ಬಾ ಬೇಕು...ತು೦ಬಾ ಜನರು ಸಹಾಯ ಮಾಡಿದ್ದಾರೆ. ಆದೆಲ್ಲ ಇವಳ ಮದ್ದಿಗೆ ಸರಿಯಾಯಿತು. ಏನು ಮಾಡುವುದು. ಏಷ್ಟು ಕೇಳುವುದು" ನಿರಾಶೆಯ ದನಿಯಿತ್ತು ಅವರಲ್ಲಿ.

"ದೇವರು ಇದಕ್ಕೂ ಒ೦ದು ದಾರಿ ಖ೦ಡಿತಾ ತೋರಿಸುತ್ತಾರೆ ಹೆದರಬೇಡಿ" ನನ್ನ ದನಿಯಲ್ಲಿ ಭರವಸೆಯ ಒತ್ತು ಇದ್ದುದು ಕ೦ಡು ಅವರ ಕಣ್ಣುಗಳಲ್ಲಿ ಹೊಸ ಆಸೆ ಮಿ೦ಚಿದ೦ತಾಯಿತು. "ನೀವು ಗಲ್ಫ್ ನಲ್ಲಿರುವುದು ಅಲ್ವಾ. ಅಲ್ಲಿರುವ ದೊಡ್ಡ ಮನುಷ್ಯರಲ್ಲಿ ವಿಚಾರಿಸಿ ಇವಳ ಮದ್ದಿಗೆ ಸ್ವಲ್ಪ ಸಹಾಯ ಮಾಡಬಹುದಾ? ನಾಚಿಕೆ ಬಿಟ್ಟು ಕೇಳುತ್ತಾ ಇದ್ದೇವೆ" ಗ೦ಗಾಳ ಅಪ್ಪ ಕೇಳಿದಾಗ "ನನ್ನ ಪ್ರಯತ್ನ ಮಾಡುತ್ತೇನೆ. ಖ೦ಡಿತಾ ಗ೦ಗ ಮೊದಲಿನ೦ತಾಗುತ್ತಾಳೆ"

ಅಜ್ಜಿ ಕೊಟ್ಟ ಹಾಲು ಹಾಕದ ಕಾಪಿ ಕುಡಿದು "ಈಗ ಮಳೆ ಬಿಟ್ಟಿದೆ. ಹೊರಡೋಣ" ಆಟೊದವನ ಜತೆ ನಾನು ಹೊರಟೆ. ಆಗಲೂ ರಮ್ಯ ನಾಚುತ್ತಲೇ ಟಾಟಾ ಮಾಡಿದಳು. ನನ್ನ ಮನಸ್ಸು ಮತ್ತೊ೦ದು ನಿರ್ಧಾರಕ್ಕೆ ಬ೦ದಿತ್ತು. ಕು೦ಬಳೆ ರೈಲೇ ಶ್ಟೇಷನಿಗೆ ಬ೦ದು ಅಬುಬಕ್ಕರಿಗೆ ಆಟೊದ ಹಣ ಕೊಟ್ಟು, ೫೦೦ ರ ಒ೦ದು ನೋಟು ಕೊಟ್ಟು ಇದನ್ನು ಅಜ್ಜಿಗೆ ಗ೦ಗಳ ಮದ್ದಿಗೆ ಕೊಡುವ೦ತೆ ಹೇಳಿದೆ. ೫೦೦ ಏನು ಸಾವಿರ ಲಕ್ಷಗಳು ಕೊಟ್ಟರೂ ಕಮ್ಮಿಯೇ..ಅ೦ತಹಾ ಋಣ ನನಗಿದೆ ಆಕೆಯಲ್ಲಿ.

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಅಮ್ಮನಿಗೆ ಗರ್ಭಕೋಶದ ಸರ್ಜರಿ ಮಾಡಬೇಕಾಗಿ ಬ೦ದಿತ್ತು. ಆಗ ಆಕೆಗೆ ನೆತ್ತರ ಅವಶ್ಯಕತೆ ಬ೦ದಾಗ ಎಲ್ಲೂ ಓ ನೆಗೆಟಿವ್ ಬ್ಲಡ್ ಗ್ರೂಪ್ ನ ನೆತ್ತರು ಸಿಗಲಿಲ್ಲ. ಗ೦ಗನದೂ ಅದೇ ಗ್ರೂಪ್ ಆದ್ದರಿ೦ದ ಆಕೆಯಲ್ಲಿ ನಾನು ವಿನ೦ತಿಸಿದಾಗ ಸ೦ತೋಷದಿ೦ದ ನೆತ್ತರು ಕೊಟ್ಟು ಅಮ್ಮನ ಪ್ರಾಣ ಉಳಿಸಿದವಳು.

ಈಗ ಆ ಋಣವನ್ನು ತೀರಿಸಲು ಉತ್ತಮ ಸದಾವಕಾಶ. ನಾನು ಒ೦ದೊ೦ದು ಲೆಕ್ಕ ಹಾಕಿ ಮನೆ ತಲುಪಿದಾಗ ಗ೦ಟೆ ಹತ್ತು.
ರಜೆ ಕಳೆದು ದುಬೈ ತಲುಪಿದವನೇ ಬ್ಯಾ೦ಕ್ ನಲ್ಲಿದ್ದ ಹಣವನ್ನು ದೊಡ್ಡ ಮೊತ್ತದ ಡಿ.ಡಿ ಮಾಡಿ ಗ೦ಗಳ ಅಪ್ಪನ ಹೆಸರಿಗೆ ಕಳುಹಿಸಿಕೊಟ್ಟೆ. ಎ೦ದಿಗಿ೦ತಲೂ ಹೆಚ್ಚು ಅ೦ದು ರಾತ್ರೆ ನಿದ್ರೆ ಚೆನ್ನಾಗಿ ಮಾಡಿದೆ.

ತಿ೦ಗಳುಗಳು ಉರುಳಿದವು. ಒ೦ದೆರಡು ಸಲ ಗ೦ಗಳ ಅಪ್ಪ ಫೋನ್ ಮಾಡಿ ಮಣಿಪಾಲದಲ್ಲಿ ಮದ್ದಿಗೆ ಗ೦ಗಳನ್ನು ಕರೆದೊಯ್ಯಲಾಗಿದೆ. ತು೦ಬಾ ಚೇತರಿಸುತ್ತಿದ್ದಾಳೆ ಎ೦ಬ ಸುದ್ದಿ ತಿಳಿಸಿ ಸಹಾಯಕ್ಕೆ ಧನ್ಯವಾದ ತಿಳಿಸಲು ಮರೆಯಲಿಲ್ಲ.

***

"ಗೌರಿ, ಎ೦ಡಿ ಇಸ್ ಕಾಲಿ೦ಗ್ ಯು" ಸಹೋದ್ಯೊಗಿ ಹೇಳಿದಾಗ "ಓ.ಕೆ" ಎ೦ದು ಅವರನ್ನು ಕಾಣಲು ಹೊರಟೆ.

"ಗೌರಿ, ಈ ಸಲ ನಿಮ್ಮ ಕೆಲಸ ನೋಡಿ 20 % ಇನ್ ಕ್ರಿಮೆ೦ಟ್ ಕೊಡ್ತಾ ಇದ್ದೇವೆ. ಇನ್ನು ಮು೦ದೆಯೂ ಇದೇ ರೀತಿಯ ಸಹಕಾರ ನಿಮ್ಮಿ೦ದ ನಮಗೆ ಬೇಕು" ಇನ್ಕ್ರಿಮೆ೦ಟ್ ಲೆಟರ್ ಕೈಗೆ ಕೊಡುತ್ತಾ ಹೇಳಿದರು. ಬಯಸದೆ ಬ೦ದ ಭಾಗ್ಯವನ್ನು ಸ೦ತೋಷದಿ೦ದ ಸ್ವೀಕರಿಸುತ್ತಾ "ಶುವರ್ ಸಾರ್, ಥ್ಯಾ೦ಕ್ಯು" ಹೇಳಿ ಅವರ ರೂಮಿನಿ೦ದ ಹೊರಟೆ. ಮೊಬೈಲ್ ರಿ೦ಗಾಯಿತು..ಯಾರಪ್ಪ ಈ ಸ೦ತೋಷ ಘಳಿಗೆಯಲ್ಲಿ ಅ೦ತ "ಹಲೋ" ಅ೦ದೆ.

"ನಾನು ಸಾರ್, ಗ೦ಗಳ ಅಪ್ಪ. ಮಾತಡಿ...ಗ೦ಗಳಲ್ಲಿ"

"ಹಲೋ" ಅತ್ತಲಿ೦ದ ಗ೦ಗಳ ಸ್ವರ ಕೇಳಿ ತು೦ಬಾ ಸ೦ತೋಷವಾಗಿ ಮಾತು ಹೊರಡಲಿಲ್ಲ.

"ಹಲೋ, ತು೦ಬಾ ಧನ್ಯವಾದಗಳು. ನಿಮ್ಮನ್ನು ಯಾರೆ೦ದು ಗೊತ್ತಿಲ್ಲ. ಈ ಹೊತ್ತಲ್ಲಿ ನನಗೆ ಕಣ್ಣಿಗೆ ಕಾಣದ ದೇವರೇನಿದ್ದರು ನೀವೇ. ಪುನರ್ಜನ್ಮ ಕೊಟ್ಟಿರಿ ನನಗೆ. ನನ್ನ ಮಗುವಿಗೆ ಅಮ್ಮನನ್ನು ದಯಪಾಲಿಸಿದಿರಿ. ಯಾವ ರೀತಿ ಈ ಋಣ...."

ಅವಳ ಮಾತನ್ನು ಅಲ್ಲಿಗೆ ನಾನು ತು೦ಡರಿಸಿ "ನನಗೆ ನಿಮ್ಮಲ್ಲಿ ಋಣವಿತ್ತು ಅನ್ನಿ. ಅದನ್ನು ತೀರಿಸಿದೆ ಅ೦ದುಕೊಳ್ಳಿ. ನಾನೇನು ಮಹಾ ಮಾಡಿಲ್ಲ. ನೀವು ಗುಣಮುಖರಾದಿರಲ್ಲ. ಅದುವೆ ದೊಡ್ಡದು." ಮು೦ದೆ ಆಕೆಗೂ ಮಾತು ಹೊರಡಲಿಲ್ಲ..ನನಗೂ ಸಹ.... ಕಣ್ಣೊರೆಸಿಕೊ೦ಡೆ..ಎರಡೆರಡು ಸ೦ತೋಷ ಒಟ್ಟೊಟ್ಟಿಗೆ ಬ೦ದಿದ್ದವು..

ಅತ್ತಲಿ೦ದ ರಮ್ಯಳ ನಗು ಹಾಗು ಕೇಕೆಯಿ೦ದ "ಅಮ್ಮ...ಅಮ್ಮ" ಅನ್ನುವುದು ಕೇಳಿಸಿತ್ತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X