ತೃಪ್ತಿ

ಮುಖಾರವಿಂದದ ಮಿನುಗು ಸಂತೃಪ್ತಿಯೇನು?
ಹುಲ್ಲನೆಸಳಿನ ಮೇಲೆ ಕಾಂತಿಯನು ಪ್ರತಿಫಲಿಸೊ
ಚಿಕ್ಕ ಹನಿಗಳವು ತೃಪ್ತಿಯ ಸಂಕೇತವೇನು?
ಶಿಖರ ಸಂಜಾತೆಯ ಒಡಲ ವಿಹರಿಸುವ ಪಯಣಿಗನ
ನಸುನಗುವು ತಣಿವಿನ ಸಾರ್ಥಕ್ಯವೇನು?
ಪರ್ವತಾರೋಹಿಯು ಗಿರಿಯ ಉತ್ತುಂಗದಲಿ
ಹಾರಿಸುವ ಬಾವುಟವು ಸಂತುಷ್ಟಿಯೇನು?
ಗುರಿಯ ನೆತ್ತಿಯ ಮೆಟ್ಟಿ ನಿಂತಾಗ ಅರಳುವ
ಮೊಗದ ಹಾಸದ ಮಿಂಚು ತೃಪ್ತಿಯೇನು?
ಸಾಧನೆಯದು ಗುರಿಯ ಬೆಂಬತ್ತಿ ಸಾಗುವದು
ಅದರ ಪರಾಕಾಷ್ಠೆಯು ಸಂತೃಪ್ತಿಯೇನು?
ವಿವಿಧ ಜೀವಿಗಳವು ವಿವಿಧ ಉದ್ದಿಶ್ಯಗಳು
ವೈವಿಧ್ಯ ತೃಪ್ತಿಯ ಕುರುಹಲ್ಲವೇನು?
ವಿವಿಧ ಕೋನಗಳು, ವಿವಿಧ ಪರಿಹಾರಗಳು
ತೃಪ್ತಿಯಾಂತರ್ಯವೊಂದೇ ಅಲ್ಲವೇನು?
ಹಲವು ಸಾಧನೆ ಹಲವು ಸಂತೃಪ್ತಿಗಳ ಮಧ್ಯ
ತೊಳಲಾಟ ಜೀವನವಲ್ಲವೇನು?
ಕ್ಷಣಿಕವದು ತೃಪ್ತಿ ದೀರ್ಘ ಸಾಧನ ಪಥವು
ಜೀವನದ ಸಂದೇಶವಲ್ಲವೇನು?












Click it and Unblock the Notifications