ಕನವರಿಕೆ

ಇಂದ್ರ ಧನುಷ್ಯದ ಕಮಾನು ಕಟ್ಟುವ ಮನಸು
ಆಕಾಶಗಂಗೆಯ ತೃಣಮಾತ್ರ ಸ್ಥಳದಿಂದ
ನೀಹಾರಿಕೆಗಳಿಗೆ ಸೇತು ರಚಿಸುವ ಹುರುಪು
ಕನಸುಗಣ್ಣುಗಳಿಂದ ಕರ್ಮ ಲೋಕಕೆ ಹೋಗಿ
ಮರೀಚಿಕೆಯ ಜಲಧಾರೆ ಆಶಿಸುವ ಹೊಂಗನಸು
ಕ್ಷಿಪಣಿ ವೇಗದಿ ಸಾಗಿ ತನುಮನವ ದುಡಿಸಿ
ಕೀರ್ತಿ ಸಿರಿಯನ್ನೆಲ್ಲ ಬಾಚುವ ಹುಮ್ಮಸ್ಸು
ಉತ್ತುಂಗದಿಂದಿಳಿವಾಗ ಆಗೊಮ್ಮೆ ಈಗೊಮ್ಮೆ
ಅಂದಿನ ಮುಗ್ಧತೆಯ ಸರಳತೆಯ ನೆನಪು
ಅಹಮಿಕೆಯ ಸ್ಪರ್ಧೆಯ ಕ್ಷಣಗಳಲ್ಲೊಮ್ಮೆ
ಬಾಲ್ಯದಲಿ ಘ್ರಾಣಿಸಿದ ಹೂವುಗಳ ಹೊಳಹು
ಕೌಮಾರ್ಯದ ಮಧುರ ಅನುಭೂತಿ ಸ್ಫುರಿಸಿ
ತರಗೆಲೆಗಳಂತುದುರಿದ ವರ್ಷಗಳ ಲೆಕ್ಕ
ಮುಸ್ಸಂಜೆಯು ಮಸುಕು ಮುಸುಕನ್ನು ಧರಿಸಿ
ಮುಂದೆ ನಿಂತಿರುವದದು ಸ್ವಾಭಾವಿಕ
ಎಲ್ಲವನು ಗಳಿಸಿದರೂ ಎಲ್ಲವನು ಕಳೆದು
ಮಾಯವಾಗುವ ಕಾಲವದು ಮಾಯಾ ಮಿಕ!
ನಮ್ಮೆಲ್ಲರೊಳಗುಳಿವ ಅಭಿಲಾಷೆಯು
ನಶಿಸಿ ತಾ ಹೋಗದದು ಬಲು ಮಾರ್ಮಿಕ!
ಅದಾವ ಅಗೋಚರ ಚದುರಂಗದಾಟವಿದು
ಅರಿವಿಲ್ಲದೇ ಹೆಜ್ಜೆ ಇಡುವ ಗತಿಯು?
ಕಾಣದಿಹ ಸೂತ್ರಗಳ ಕೈಯಲ್ಲಿ ಹಿಡಿದು
ಅಡಗಿ ಆಡಿಸುತಿರುವ ಅಚಿಂತ್ಯವು!












Click it and Unblock the Notifications