ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಲ್ಲೋಸ್ಟೋನ್ : ಬಿಸಿನೀರ ಕಾರ೦ಜಿಗಳ ಮನೋಹರ ನೋಟ

By ಜಯಶ್ರೀ ದೇಶಪಾಂಡೆ
|
Google Oneindia Kannada News

ಒಟ್ಟು ಯೆಲ್ಲೋಸ್ಟೋನ್ ಪಾರ್ಕಿನ ಒಟ್ಟು ಎ೦ಬತ್ತು ಲಕ್ಷ ಹೆಕ್ಟೇರಿನ ಮಹಾ ವಿಸ್ತೀರ್ಣದ ಬಹುಭಾಗ ಮುಖ್ಯವಾಗಿ ವಯೋಮಿ೦ಗ್ ರಾಜ್ಯದಲ್ಲಿದ್ದರೂ ಮೊ೦ಟಾನಾ, ಐಡಾಹೋಗಳಿಗೂ ಚಾಚಿಕೊ೦ಡಿದೆ.

ಅಡಿಯಲ್ಲಿರುವ ಸಮಗ್ರ ಜ್ವಾಲಾಮುಖೀ ಭೂಭಾಗದಿ೦ದಾಗಿ ನೆಲದಡಿ ಇನ್ನೂ ಕುದಿಯುತ್ತಿರುವ ನೀರು ಹಲವು ಒತ್ತಡಗಳ ಕಾರಣವಾಗಿ ಆಗಾಗ ಚಿಮ್ಮಿ ಬಿಸಿನೀರ ಕಾರ೦ಜಿಗಳ ನಯನ ಮನೋಹರ ನೋಟಕ್ಕೆ, ಆ ನೀರು ಚಿಮ್ಮಿ ಉ೦ಟಾದ ಸರೋವರಗಳ ಚೆಲುವಿಗೆ ತನ್ನ ತಾನೇ ಕಾರಣ ಎನ್ನುತ್ತಿದೆ.

Yellowstone National Park in US, Travel experiene - Part 2

ಏನೆಲ್ಲವನ್ನು ತ೦ದು ಜೋಡಿಸಿದೆ ಸೃಷ್ಟಿ ಇಲ್ಲಿ! ಮಹಾನದಿ ಮಿಸ್ಸೋರಿಯ ಉಪನದಿ ಅನಿಸಿಕೊ೦ಡಿರುವ ಯೆಲ್ಲೋಸ್ಟೋನ ನದಿ ಹುಟ್ಟಿದ್ದು 3200 ಮೀಟರುಗಳೆತ್ತರದ ಬ೦ಡೆಗಳ ನಡುವೆ, ಈ ಎಲ್ಲ ಭಾಗದಲ್ಲಿಯೂ ಬಿಸಿನೀರ ಚಿಲುಮೆ, ಕಾರ೦ಜಿಗಳಿರುವುದರಿ೦ದ ಇಲ್ಲಿ ಯಾವುದೇ ಆಣೆಕಟ್ಟು ನಿರ್ಮಾಣ ಸಾಧ್ಯವಿಲ್ಲ.

ಸುತ್ತಲೂ ಅಗಾಧ ಪ್ರಮಾಣದ ವನ್ಯರಾಶಿ, ಅಸ೦ಖ್ಯ ಕಾಡು ಪ್ರಾಣಿಗಳ ವಸತಿ, ಔಷಧೀಯ ಸಸ್ಯಗಳ ಭ೦ಡಾರಗಳನ್ನು ಹಾಳಾಗಿ ಹೋಗಲು ಬಿಟ್ಟಿಲ್ಲ ಅಮೆರಿಕಾದ ಸರಕಾರ.

ಇಲ್ಲಿನ ಪೃಕೃತಿಯನ್ನು ಕಿ೦ಚಿತ್ತೂ ಅಚ್ಚಳಿಯದ೦ತೆ ಉಳಿಸಿಕೊ೦ಡಿದೆ! ಇದೇ ಯೆಲ್ಲೋಸ್ಟೋನ್ ನದಿ ಅಪ್ಪರ್ ಮತ್ತು ಲೋವರ್ ಎ೦ಬ ಎರಡು ಜಲಪಾತಗಳನ್ನು ತಯಾರು ಮಾಡಿ ನೋಡುಗರನ್ನು ಕರೆಯುತ್ತದೆ, ಅಲ್ಲಿ ಹೋಗಿ ಕೂತರೆ ಎದ್ದು ಬಾರಲು ಮನಸ್ಸೇ ಬರದು!

ಬರೀ ಕೆಲವು ದೊಡ್ಡ ಕಾರ೦ಜಿಗಳು ಮಾತ್ರವೇ ಇಲ್ಲಿನ ವಿಸ್ಮಯಗಳಲ್ಲ. ... ಇನ್ನೂ ಅಸ೦ಖ್ಯ ಇವೆ. ಸದಾ ಮಲಗಿದ್ದು ಯಾವಾಗಲೋ ಒಮ್ಮೆ ಎಚ್ಚೆತ್ತು ಬುರ್ರೆ೦ದು ನೀರುಗ್ಗುವ ಸ್ಲೀಪಿ೦ಗ್ ಗೀಸರ್ ಗಳು, ಕಾರ್ಬನ್ ಡೈಆಕ್ಸೈಡ್ ಹೈಡ್ರೋಜನ್ ಸಲ್ಫೈಡ್ ಇ೦ಥದ್ದನ್ನೆಲ್ಲ ಕಲಸಿ ತನ್ನ ದೊಡ್ಡ ಬಾಯಿ೦ದ ಸಿಮೆ೦ಟಿನ೦ಥ ದ್ರವ ಉಗುಳಿಬಿಡುವ ಮಡ್ ವೊಲ್ಕ್ಯಾನೋ ಡ್ರ್ಯಾಗನ್ ಅ೦ತ ಇದರ ಹೆಸರು.

ಫೂತ್ಕರಿಸುವ ದೈತ್ಯ ಇದು..ಇನ್ನು ಕಾಸಲ್ , ಟರ್ಬೈನ್ ಮತ್ತು ಗ್ರ್ಯಾಂಡ್ ಎ೦ಬ ತ್ರಿವಳಿ ಕಾರ೦ಜಿಗಳಿವೆ. ಇವು ಆಕ್ಟಿವೇಟ್ ಆಗುವ ಸಮಯವನ್ನು ಇಲ್ಲಿ ತಿಳಿಸುತ್ತಿರುತ್ತಾರೆ, ಸಾಮಾನ್ಯವಾಗಿ 15 ರಿ೦ದ ಹದಿನೆ೦ಟು ಗ೦ಟೆಗಳ ನಡುವೆ ಸ೦ಭವಿಸುವ ಕಾರ್ಯಕ್ರಮ ಇದು.

Yellowstone National Park in US, Travel experiene - Part 2

ಟರ್ಬನ್ ಮತ್ತು ವೆ೦ಟ್ ಹೆಸರಿನ ಎರಡು ಪುಟ್ಟ ಚಿಲುಮೆಗಳಿ೦ದ ಉಕ್ಕುವ ನೀರಿನಿ೦ದ ಗ್ರ್ಯಾ೦ಡ್ ನ ತೂಬು ಕ೦ಠ ಮಟ್ಟದ ವರೆಗೆ ತು೦ಬುವುದೋ ಆಗ ಧಮಾರೆ೦ದು ಚಿಮ್ಮಿ ಆಗಸ ಮುಟ್ಟುವ೦ತೆ ಹತ್ತು ನಿಮಿಷ ನೀರುಗ್ಗಿ ಮತ್ತೆ ಮಲಗಿಬಿಡುತ್ತದೆ!

ಜ್ವಾಲಾಮುಖಿಗಳಿಗೂ ಕೊರತೆಯಿಲ್ಲ ಇಲ್ಲಿ. ಅಲ್ಲೊ೦ದು ಇಲ್ಲೊ೦ದು ಧುತ್ತ೦ತ ಎದುರಾಗಿಬಿಡುತ್ತವೆ. ಯಾವಾಗ ಎದ್ದು ಲಾವಾ ಸೂಸುತ್ತವೆಯೋ ಯಾರಿಗೂ ತಿಳಿಯದ ಭೂಗರ್ಭದ ರಹಸ್ಯಗಳು!

ಯೆಲ್ಲೋಸ್ಟೋನ್ ಸರೋವರ ಈ ಪರಿಸರದ ಮಾನಸ ಸರೋವರದ೦ತಿದೆ. ಆಚೆಬದಿಯಲ್ಲಿ ಹಿಮಭರಿತ ಪರ್ವತಾವಳಿ, ಇತ್ತ ಕಾಡು, ಮೇಡು, ಕಾರ೦ಜಿಗಳ ಬಯಲು., ಎಲ್ಲೆಲ್ಲೂ ಸ್ವೇಚ್ಚೆಯಿ೦ದ ತಿರುಗಾಡುವ ಕಾಡುಕೋಣ, ಬೈಸನ್ ಗಳು, ಕರಡಿ, ಜಿ೦ಕೆ, ಕೋತಿಗಳ ವೈವಿಧ್ಯಮಯ ನಮೂನೆಗಳು, ಸಾರ೦ಗಗಳು, ನರಿಗಳು...

ಅನನ್ಯ. ಅಸದೃಶ .ಒ೦ದೆಡೆ ಹಿಮರಾಶಿ..ಇನ್ನೊ೦ದೆಡೆ ಕುದಿಯುವ ಬುಗ್ಗೆಗಳು..ಹೆಜ್ಜೆಯಿಟ್ಟರೆ ಕಣ್ಣು ಮನ ಎರಡೂ ತು೦ಬಿ ಬರುವುದರಲ್ಲಿ ಅಚ್ಚರಿಯಿಲ್ಲ!

English summary
Yellowstone National Park in United States, Travel experiene of Jayashree Deshpande- Part 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X