ಸಿಂಗಪುರದಲ್ಲಿ ರಸದೌತಣ ಬಡಿಸಿದ ವೈಭವದ ಯಕ್ಷಸಿರಿ

By: ಸಾಧ್ವಿ ಸಂಧ್ಯಾ, ಸಿಂಗಪುರ
Subscribe to Oneindia Kannada

ಸಿಂಗಪುರದಲ್ಲಿ ಮೇ 21 ಮತ್ತು 22ರಂದು ಜರುಗಿದ ಯಕ್ಷಗಾನ ಕಾರ್ಯಕ್ರಮ ಕಲಾಸಕ್ತರಿಗೆ, ಯಕ್ಷಪ್ರೇಮಿಗಳಿಗೆ ರಸದೌತಣವನ್ನು ಉಣಬಡಿಸಿತು. ಮೇ 21ರಂದು ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಕೃಷ್ಣಸಂಧಾನ ಮತ್ತು ಗದಾಯುದ್ಧ ಪ್ರಸಂಗಗಳನ್ನು ವೀಕ್ಷಿಸಲು ಕಲಾಪ್ರೇಮಿಗಳು ಕಿಕ್ಕಿರಿದು ಸೇರಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಾರತದ ರಾಯಭಾರಿಯಾದ ಹರ್ ಎಕ್ಸೆಲೆನ್ಸಿ ವಿಜಯ್ ಠಾಕುರ್ ಸಿಂಗ್, ರಾಮಕೃಷ್ಣ ಮಿಶನ್ನಿನ ಅಧ್ಯಕ್ಷರಾದ ವಿಮೋಕ್ಷಾನಂದ ಸ್ವಾಮಿ, ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಮತ್ತು ಕಾರ್ಯಕ್ರಮದ ಸಂಚಾಲಕರಾದ ಚಂದ್ರಶೇಖರ ಕೆ.ಎಸ್ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.

'ಬಂದನೋ ದೇವರದೇವ' ಒಡ್ಡೋಲಗ ಪದ್ಯದೊಂದಿಗೆ ರಂಗಪ್ರವೇಶಿಸಿದ ಕೃಷ್ಣನ ಪಾತ್ರಧಾರಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಸ್ವಗತದಲ್ಲಿ "ಕ್ರಾಂತಿಗಿಂತ ಶಾಂತಿ ಮುಖ್ಯ ವಿಶ್ವಶಾಂತಿಗಾಗಿ, ಲೋಕ ಕಲ್ಯಾಣಕ್ಕಾಗಿ ಸಂಧಾನದ ಪ್ರಕ್ರಿಯೆಯನ್ನು ಮುಂದುವರೆಸುತ್ತೇನೆ" ಎಂದು 'ಕೃಷ್ಣ ಸಂಧಾನ' ಪ್ರಸಂಗಕ್ಕೆ ಪೀಠಿಕೆಯಿತ್ತರು. [ಸಿಂಗಪುರದ 'ಕಲಾವೈಭವ'ದಲ್ಲಿ ಮೆರೆದ 'ಸಿಂಗಾರ ವೈಭವ']

Mesmerizing Yakshasiri, Yakshagana performance in Singapore

ನಗೆಗಡಲಲ್ಲಿ ತೇಲಿಸಿದ ಶ್ರೀಕೃಷ್ಣ ಸಂಧಾನ

ತದನಂತರದ ಕೃಷ್ಣ ಮತ್ತು ವಿದುರನ (ಪಾತ್ರಧಾರಿ ಅಶೋಕ್ ಭಟ್) ತಿಳಿಹಾಸ್ಯ ತುಂಬಿದ ಸಂವಾದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. "ನೋಡಿದೆಯ ವಿದುರ ಕೌರವಮಾಡಿದ ಒಡ್ಡೋಲಗವ", "ಏನಯ್ಯ ಇಂತದೇನಯ್ಯ" ಪದ್ಯಕ್ಕೆ, ರಚನಾತ್ಮಕ ಕಲಾವಿದರಾದ ಕೊಂಡದಕುಳಿ ಅವರ ಲಯಬದ್ಧ ಕುಣಿತ, ಮನಮೋಹಕ ಭಾವಾಭಿನಯ ಅದ್ಭುತ ರಸವನ್ನು ಸೃಷ್ಟಿಸಿತು.

ಕೌರವನ (ದುರ್ಯೋಧನ) ಪಾತ್ರಧಾರಿಯಾದ ಬಡುಗುತಿಟ್ಟಿನ ಮೇರು ಕಲಾವಿದರಾದ ಕೃಷ್ಣಯಾಜಿ ಅವರ ವಾಕ್ಚಾತುರ್ಯ, ಗತ್ತುಗಾರಿಕೆ ಪ್ರೇಕ್ಷಕರನ್ನು ಸೆಳೆಯಿತು. ದತ್ತಾತ್ರೇಯ ಮತ್ತು ಸ್ಥಳೀಯ ಹವ್ಯಾಸಿ ಕಲಾವಿದರಾದ ಶಶಿಕಾಂತ್ ಅವರು ಕರ್ಣ, ದುಶ್ಯಾಸನನ ಪಾತ್ರದಲ್ಲಿ ಸಹಕರಿಸಿದರು. ಸ್ತ್ರೀ ವೇಷಧಾರಿಯಾದ ಸುಬ್ರಮಣ್ಯ ಯಲಗುಪ್ಪ ಅವರ ರಾಜನರ್ತಕಿ ನೃತ್ಯ, ಕೃಷ್ಣ ಸಂಧಾನಕ್ಕೆ ಬಂದಾಗ ಮರ್ಯಾದೆ ಕೊಡದ ಕೌರವ, ಕೃಷ್ಣನ ಚರಣಕ್ಕೆ ಬೀಳುವುದು, ವಿದುರನು ಕೌರವನ ರಕ್ಷಣಾರ್ಥವಾಗಿಟ್ಟಿದ್ದ ಬಿಲ್ಲನ್ನು ಮುರಿಯುವುದು, ಕೌರವನಲ್ಲಿ ಕೃಷ್ಣನ ಉಪದೇಶ, ವಿಫಲವಾಗುವ ಕೃಷ್ಣನ ಬಂಧನದ ಪ್ರಯತ್ನ, ಸೂಜಿಮೊನೆಯಷ್ಟೂ ಜಾಗ ಕೊಡುವುದಿಲ್ಲ ಎಂಬ ಕೌರವನ ಹಟ' ಈ ಎಲ್ಲ ಸನ್ನಿವೇಶಗಳನ್ನು ಪ್ರೇಕ್ಷಕರು ಆಸ್ವಾದಿಸಿದರು. ಪ್ರಸಂಗದ ಪದ್ಯಗಳು ಕೊಳಗಿ ಅವರ ಸುಮಧುರ ಕಂಠ ದಲ್ಲಿ ಸುಶ್ರಾವ್ಯವಾಗಿ ಮೂಡಿಬಂದವು. ಶಂಕರ ಭಾಗವತರ ಮದ್ದಲೆ ಮತ್ತು ಲಕ್ಷ್ಮೀನಾರಾಯಣ ಅವರ ಚಂಡೆ ಹಿಮ್ಮೇಳಕ್ಕೆ ಮೆರಗು ಕೊಟ್ಟಿತು.

ಮಧ್ಯಾಂತರದಲ್ಲಿ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಮತ್ತು ಉಪಾಧ್ಯಕ್ಷರಾದ ಸುರೇಶ್ ಭಟ್ಟ ಅವರು ಸಂಘದ ಪರವಾಗಿ ಎಲ್ಲ ಕಲಾವಿದರನ್ನು ಸನ್ಮಾನಿಸಿದರು. ಬಡುಗುತಿಟ್ಟಿನ ಮೇರು ಕಲಾವಿದರಾದ ಕೃಷ್ಣ ಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ ಮತ್ತು ಶಂಕರ್ ಭಾಗವತ್ ಅವರಿಗೆ ಕನ್ನಡ ಸಂಘ (ಸಿಂಗಪುರ)ದ ಪ್ರತಿಷ್ಠಿತ "ಸಿಂಗಾರ ಕಲಾರತ್ನ" ಪ್ರಶಸ್ತಿಯನ್ನಿಟ್ಟು ಗೌರವಿಸಿದಾಗ ಇಡೀ ಸಭಾಂಗಣ ಕರತಾಡನದಲ್ಲಿ ಮುಳುಗಿತ್ತು. [ಯಕ್ಷಗಾನದ 'ಕೃಷ್ಣ' ಕಣ್ಣಿಮನೆ ಗಣಪತಿ ಭಟ್ ಕಣ್ಮರೆ]

Mesmerizing Yakshasiri, Yakshagana performance in Singapore

ಮೋಡಿ ಮಾಡಿದ ಗಧಾಯುದ್ಧ ಪ್ರಸಂಗ

ಕಾರ್ಯಕ್ರಮದ ಉತ್ತರಾರ್ಧದಲ್ಲಿ ಮಹಾಭಾರತದ ಹದಿನೆಂಟನೇ ದಿನದಂದು ತನ್ನೆಲ್ಲ ಬಾಂಧವರ ಹೆಣದ ರಾಶಿಯನ್ನು ಕಂಡು ತತ್ತರಿಸಿ ಗೋಳಾಡುವ ದುರ್ಯೋಧನನ ಸನ್ನಿವೇಶದೊಂದಿಗೆ "ಗದಾಯುದ್ಧ" ಪ್ರಸಂಗ ಪ್ರಾರಂಭವಾಯಿತು. ಹತಾಶನಾದ ಕೌರವನ ದುಃಖ, ಛಲ ಬಿಡದ ಕೌರವನ ದರ್ಪ, ಹಟ, ರೊಚ್ಚು ಎಲ್ಲ ಸನ್ನಿವೇಶಗಳಲ್ಲೂ ಗಣಪತಿ ಹೆಗಡೆ ತೋಟಿಯವರ ಅವರ ಭಾವಾಭಿನಯ, ನಾಟ್ಯ ಪ್ರೇಕ್ಷಕರನ್ನು ಮೋಡಿಮಾಡಿತ್ತು. ಯುದ್ದ ಭೂಮಿಯಲ್ಲಿ ದುರ್ಯೋಧನನ್ನು ಹುಡುಕಿ ಕೂಗುತ್ತ ಘರ್ಜಿಸಿತ್ತ ಪರಾಕ್ರಮವನ್ನು ಬಿಂಬಿಸುತ್ತಾ ಭೀಮನ ಪಾತ್ರದಲ್ಲಿ ಸಂಜಯ್ ಬೆಳೆಯೂರು ಎಲ್ಲರ ಮನ ಸೆಳೆದರು.

ದುರ್ಯೋಧನ ದ್ವೈಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದಾನೆಂದು ಸುದ್ದಿ ಹೇಳಬಂದ ಬೇಟೆಗಾರ(ಪಾತ್ರಧಾರಿ ಚಪ್ಪರಮನೆ) ಮತ್ತು ಭೀಮನ ನಡುವಿನ ಸಂಭಾಷಣೆ ಎಲ್ಲರನ್ನೂ ಹಾಸ್ಯಲೋಕಕ್ಕೆ ಕರೆದೊಯ್ಯಿತು. ಹಾಸ್ಯಚಕ್ರವರ್ತಿ ಶ್ರೀಧರ ಹೆಗಡೆ ಚಪ್ಪರಮನೆ ಅವರ ವೈವಿಧ್ಯಮಯ ಅಂಗ ಚಲನೆ, ವಿಶಿಷ್ಟವಾದ ಹಾಸ್ಯ ಭಂಗಿಗಳು ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಂತೆ ನಗಿಸಿದವು.

Mesmerizing Yakshasiri, Yakshagana performance in Singapore

ನಂತರ ಭೀಮ ಕೌರವನ ನಡುವಿನ ಗದಾಯುದ್ಧದಲ್ಲಿ ಭೀಮ ಕೌರವನ ತೊಡೆಗೆ ಪ್ರಹರಿಸುತ್ತಾನೆ. ಕುಸಿದು ಬಿದ್ದ ಕೌರವನ ಅಂತ್ಯದೊಂದಿಗೆ ಪ್ರಸಂಗವು ಮುಗಿದಾಗ ಇಡೀ ಸಭಾಂಗಣದಲ್ಲಿ ಕರತಾಡನ ಮೊಳಗಿತ್ತು. ಕೃಷ್ಣಾನಂದ್ ಮತ್ತು ಭಾರ್ಗವಿ ಆನಂದ್ ಜೋಡಿ ಈ ಕಾರ್ಯಕ್ರಮದ ನಿರೂಪಣೆಯನ್ನು ಅಮೋಘವಾಗಿ ನಡೆಸಿಕೊಟ್ಟರು.

ಸಂಘದ ಉಪಾಧ್ಯಕ್ಷರಾದ ಸುರೇಶ ಭಟ್ ಅವರು ವಂದನಾರ್ಪಣೆಯಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸಹಾಯಗೈದ ಎಲ್ಲರಿಗೂ ವಂದಿಸಿದರು. ಈ ಕಾರ್ಯಕ್ರಮದ ಪ್ರಾಯೋಜಕರಾದ Kelly Chia(Prudential - Singapore), Radha ಮತ್ತು Dinesh (Radical SolutionZ India), All India Supermart (Singapore), Kailash Parbat (Singapore), Jet Airways, ಹಾಗೂ Darren Koh ಅವರಿಗೆ ಆಭಾರ ವ್ಯಕ್ತಪಡಿಸಿದರು. [ಸಿಂಗಪುರದಲ್ಲಿ 'ಕನ್ನಡ ಕಲಿ'ಯುತ್ತಿರುವ ಮಕ್ಕಳಿಗೆ ಅಭಿನಂದನೆ]

Mesmerizing Yakshasiri, Yakshagana performance in Singapore

ವೇಷಭೂಷಣದ ಕಾರ್ಯಗಾರ

ಎರಡನೇ ದಿನದಂದು ಅಂದರೆ ಮೇ 22ರಂದು ಕನ್ನಡ ಸಂಘ (ಸಿಂಗಪುರ) ಮತ್ತು Buona Vista CC IAEC ಜಂಟಿ ಆಯೋಗದಲ್ಲಿ, Sangamam 2016 ಹೊಸ ವರ್ಷದ ಸಂಭ್ರಮದಾಚರಣೆಯಲ್ಲಿ "ಜಾಂಬವತಿ ಕಲ್ಯಾಣ"ದ ಪ್ರಸಂಗ ಮೂಡಿಬಂದಿತು. ಈ ದಿನದ ಇನ್ನೊಂದು ವಿಶೇಷ ಆಕರ್ಷಣೆ ಅಂದರೆ ಮುಖವರ್ಣಿಕೆ ಮತ್ತು ವೇಷಭೂಷಣದ ಕಾರ್ಯಾಗಾರ.

ಇಡೀ ಚೌಕಿಯೇ ಸಭೆಯಲ್ಲಿ ಇತ್ತು. ಚೌಕಿಯೊಳಗೆ ನಡೆಯುವ ಶ್ರದ್ಧೆ, ತಾಳ್ಮೆ, ಕೈಚಳಕದ ಸೊಬಗು ಪ್ರೇಕ್ಷಕರ ಮುಂದೆ ಅನಾವರಣಗೊಂಡಿತು. ಕಿರೀಟವೇಷ, ಪಗಡೆವೇಷ, ಸ್ತ್ರೀವೇಷ, ಜಾಂಬವಂತ, ಹಾಸ್ಯಗಾರ, ರಾಕ್ಷಸವೇಷ ಎಲ್ಲ ಪಾತ್ರಗಳ ಮುಖವರ್ಣಿಕೆ ಮತ್ತು ವೇಷ ಕಟ್ಟುವುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಆಸಕ್ತರು ಬೆರಗಾದರು. ಅದಲ್ಲದೇ ಚಂಡೆ, ಮದ್ದಲೆ ವಾದಕರು ಮತ್ತು ಭಾಗವತರು ಯಕ್ಷಗಾನ ತಾಳ ರಾಗಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ Mr. Kock Tiam Song Peter, BBM (Chairman Buona Vista CCC), ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಮತ್ತು Mr. Ajay Bhattacharya (Chairman, Buona Vista CC IAEC) ಕಲಾವಿದರನ್ನು ಸನ್ಮಾನಿಸಿದರು. [ಸಿಂಗಪುರದಲ್ಲಿ ಮೇಳೈಸಿದ 'ಲಯತರಂಗ'ದ ನಾದವೈಭವ]

Mesmerizing Yakshasiri, Yakshagana performance in Singapore

ಕಣ್ಮನ ತಣಿಸಿದ ಜಾಂಬವತಿ ಕಲ್ಯಾಣ ಪ್ರಸಂಗ

ತದನಂತರದಲ್ಲಿ ಪ್ರಾರಂಭವಾದ "ಜಾಂಬವತಿ ಕಲ್ಯಾಣ" ದ ಪ್ರಸಂಗ ಎಲ್ಲರ ಕಣ್ಮನ ತಣಿಸಿತು. ಗತ್ತಿನ ಬಲರಾಮನಾಗಿ ಯಾಜಿ, ಲಯ ಚಕ್ರವರ್ತಿ ತೋಟಿಯವರ ಕೃಷ್ಣ ಹಾಗೂ ರಾಮಭಕ್ತ, ವೀರ ಜಾಂಬವಂತನಾಗಿ ಕೊಂಡದಕುಳಿ, ಸಂಜಯ ಅವರ ರಾಕ್ಷಸ ವೇಷ ಛಾಯಾಗ್ರಾಹಕರನ್ನು ಆಕರ್ಷಿಸಿತು. "ಶರದ ಋತು ಪೂರ್ಣಿಮೆಯ, ಕಿರುಬೆಟ್ಟಿನಲಿ ನಾನು, ಶರಧಿಗೆ ಸೇತುವನು" ಪದ್ಯಗಳಲ್ಲಿ ತೋಟಿ ಮತ್ತು ಕೊಂಡದಕುಳಿ ಅವರ ನೃತ್ಯಾಭಿನಯ ರಸವತ್ತಾಗಿತ್ತು. ಅವರ ಹುಮ್ಮಸ್ಸು, ಹೆಜ್ಜೆಗಾರಿಕೆ, ಲಾಲಿತ್ಯ, ಪ್ರಬುದ್ಧ ಮಾತಿನ ಶೈಲಿಗೆ ಪ್ರೇಕ್ಷಕರು ಮಂತ್ರಮುಗ್ಧರಾದರು.

ಈರ್ವರ ಈ ಜೋಡಿ ಪ್ರವೇಶದಿಂದ ನಿರ್ಗಮನದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು ಎಂದರೆ ಅತಿಶಯೋಕ್ತಿಯಾಗಲಾರದು. ಚಪ್ಪರಮನೆ ಮತ್ತು ಅಶೋಕ್ ಭಟ್ ಅವರ ಹಾಸ್ಯ ಕನ್ನಡೇತರರನ್ನೂ ನಗಿಸಿತು. ಜಯಶ್ರೀ ಭಟ್ ಮತ್ತು ಕವಿತಾ ರಾಘವೇಂದ್ರ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕನ್ನಡ ಸಂಘ (ಸಿಂಗಪುರ)ದ ಉಪಾಧ್ಯಕ್ಷರಾದ ಸುರೇಶ ಭಟ್ ಮತ್ತು ಚಂದ್ರಶೇಖರ ಕೆ.ಎಸ್ ಹಾಗೂ Buona Vista CC IAECಯ ಶ್ರೀಲಕ್ಷ್ಮಿ ಎಮ್.ಎಸ್, ಮಿಯಾವ್ ಕ್ಸಿಯಾನ್ ಮತ್ತು ಏಡ್ರಿಯನ್ ಅವರು ಕಾರ್ಯಕ್ರಮದ ಜವಾಬ್ಧಾರಿ ಹೊತ್ತಿದ್ದರು.

ಈ ಎರಡುದಿನಗಳ ಯಕ್ಷಗಾನ ವೈಭವಕ್ಕೆ ಬೆನ್ನೆಲುಬಾಗಿ ನಿಂತು, ಕರ್ನಾಟಕದ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಈ ಶ್ರೀಮಂತ ಕಲೆಯನ್ನು ಸಿಂಗನ್ನಡಿಗರಿಗೆ ಹಾಗೂ ಕನ್ನಡೇತರರಿಗೂ ಪರಿಚಯಿಸುವ ಧ್ಯೇಯಹೊತ್ತ ಚಂದ್ರಶೇಖರ ಕೆ.ಎಸ್, ಜಯಪ್ರಕಾಶ್, ಮತ್ತು ಚಂದ್ರಹಾಸ್ ಭಟ್ ಅವರ ಶ್ರಮ ಶ್ಲಾಘನೀಯ. ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸರ್ವದಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಕನ್ನಡ ಸಂಘ (ಸಿಂಗಪುರ)ಕ್ಕೆ ಈ "ಯಕ್ಷಸಿರಿ" ಕಾರ್ಯಕ್ರಮ ಮತ್ತೊಂದು ಮೈಲಿಗಲ್ಲು.

ವರದಿ: ಸಾಧ್ವಿ ಸಂಧ್ಯಾ (ಸಿಂಗಪುರ)
ಛಾಯಾಚಿತ್ರಗಳು: ಗಿರೀಶ್ ಜಮದಗ್ನಿ ಮತ್ತು ಸಮಂತ್ ಯಾದವ್ (ಸಿಂಗಪುರ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Krishna Sandhana and Gadha Yuddha were performed by Yakshanagana artists from Karnataka as part of Yakshasiri organized by Kannada Sangha Singapore on May 21 and 22, 2016.
Please Wait while comments are loading...