• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನವೀಯತೆಯ ಸಾಕಾರಮೂರ್ತಿ ಎಚ್‌ವೈಆರ್‌ ಇನ್ನಿಲ್ಲ

By Prasad
|

ಮಾನವೀಯತೆಯ ಜೊತೆ ಉತ್ತಮ ಬರವಣಿಗೆ, ಸಾಹಿತ್ಯ ಪೋಷಣೆ, ಸುಸಂಸ್ಕೃತ ವ್ಯಕ್ತಿತ್ವವನ್ನೂ ಮೈಗೂಡಿಸಿಕೊಂಡು, ಅಮೆರಿಕನ್ನಡಿಗರ ಹಿರಿಯಣ್ಣನಂತಿದ್ದ ಎಚ್ ವೈ ರಾಜಗೋಪಾಲ್ (82) ಅವರು ಅಪಾರ ಬಂಧುಗಳು, ಸ್ನೇಹಿತರನ್ನು ಬಿಟ್ಟು ಅಗಲಿದ್ದಾರೆ. ಕನ್ನಡ ಸಾಹಿತ್ಯ ರಂಗದ ಸ್ಥಾಪಕರಲ್ಲೊಬ್ಬರಾದ ಅವರಿಗೆ ಒನ್ಇಂಡಿಯಾ ಕನ್ನಡ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ.

ಮೂರು ವರ್ಷಗಳ ಹಿಂದೆ ಅವರಿಗೆ 80 ತುಂಬಿದ್ದಾಗ, ಹಲವಾರು ಕನ್ನಡಿಗರು ಅವರನ್ನು ಹೃದಯತುಂಬಿ ಹರಸಿದ್ದರು.

***

'ಕನ್ನಡ ಸಾಹಿತ್ಯ ರಂಗ'ದ ಸ್ಥಾಪಕ ಸದಸ್ಯರಲ್ಲೊಬ್ಬರಾದ ರಾಜಗೋಪಾಲ್ ಅವರು ವೈಯಕ್ತಿಕ ಕಾರಣಗಳಿಂದ ಇದೀಗ ಮೇ 30 ಮತ್ತು 31ರಂದು ಸೈಂಟ್ ಲೂಯಿಸಿನಲ್ಲಿ ನಡೆಯಲಿರುವ ವಸಂತೋತ್ಸವ ಸಾಹಿತ್ಯ ಸಮ್ಮೇಳನಕ್ಕೆ ಬರಲಾಗುತ್ತಿಲ್ಲ. ಆದರೇನು? ಸಾಹಿತ್ಯದ ನೆಪದಲ್ಲಿ ಹತ್ತಿರಾದ ಅವರ ಎಲ್ಲ ಸ್ನೇಹಿತರ ಮನಸ್ಸಿನಲ್ಲೂ ನೆಲೆಯೂರಿ ಅವರು ಪರೋಕ್ಷವಾಗಿಯಾದರೂ ಅಲ್ಲಿ ಇದ್ದೇ ಇರುತ್ತಾರೆ. ಅದೂ ಅಲ್ಲದೆ ಅವರಿಗೆ ಎಂಭತ್ತು ತುಂಬಿತೆಂಬ ಸಂಭ್ರಮ ಬೇರೆ! ಈ ಸಂದರ್ಭದಲ್ಲಿ ಅವರ ನೆಂಟರೆಲ್ಲ, ಅಂದರೆ ಹೃದಯ ಬಾಂಧವ್ಯ ಉಂಟು ಮಾಡಿದ ನಂಟರು ತಮ್ಮ ಅನಿಸಿಕೆಗಳನ್ನು ಇಲ್ಲಿ ತೋಡಿಕೊಂಡಿದ್ದಾರೆ, ಓದಿರಿ :

ಸಹಸ್ರ ಚಂದ್ರ ದರ್ಶನದ ಹಾರ್ದಿಕ ಶುಭಾಶಯಗಳು!

ರಾಜಗೋಪಾಲ್ ಮತ್ತು ವಿಮಲಾ ದಂಪತಿ ನನಗೆ ದೀರ್ಘಕಾಲದ ಸ್ನೇಹಿತರು. ಅಮೆರಿಕಕ್ಕೆ ವಿದ್ಯಾರ್ಥಿಯಾಗಿ ಬಂದ ಹೊಸದರಲ್ಲಿ ನಾನು ಪಿಟ್ಸ್‍ಬರ್ಗಿನಲ್ಲಿ ಪಿ.ಎಚ್.ಡಿ ಮಾಡಲು ಪ್ರಾರಂಭಿಸುವ ವೇಳೆಗೆ ಅವರು ಪೆನ್ ಸ್ಟೇಟ್ ನಲ್ಲಿ ಪಿ.ಎಚ್.ಡಿ ಮುಗಿಸುತ್ತಿದ್ದರು. ಅವರಿಬ್ಬರು ಮತ್ತು ಅವರ ಪುಟ್ಟ ಮಗಳು ಮಾಧವಿಯೊಂದಿಗೆ ನಾನು ಸ್ಟೇಟ್ ಕಾಲೇಜಿನಿಂದ ನ್ಯೂಯಾರ್ಕ್ ರಾಜ್ಯದ ಜೇಮ್ಸ್‍ಟೌನ್ ಎಂಬ ಊರಿಗೆ ಒಂದೇ ಕಾರಿನಲ್ಲಿ ಪಯಣಿಸಿದ ನೆನಪು ಇನ್ನೂ ಕಣ್ಣಿಗೆ ಕಟ್ಟಿದೆ! [ಗಾಂಧಾರಿ ಕುರಿತು ರಾಜಗೋಪಾಲ್ ಅವರ ಲೇಖನ]

ಹೊರಗೆ ಕೊರೆಯುವ ಚಳಿ ಮತ್ತು ಸುಮಾರು ಒಂದಡಿ ಹಿಮ ನೆಲದ ಮೇಲೆ, ಅನಂತಮೂರ್ತಿಯವರ ಆಗ ತಾನೇ ಪ್ರಕಟವಾಗಿದ್ದ 'ಸಂಸ್ಕಾರ' ಕಾದಂಬರಿಯ ಬಗ್ಗೆ ಚರ್ಚಿಸುತ್ತಾ ಪಯಣ ಸಾಗಿತ್ತು. ಆ ರೀತಿ ಪ್ರಾರಂಭವಾದ ಸುಮಾರು ನಲವತ್ತೈದು ವರ್ಷಗಳ ನಮ್ಮ ಸ್ನೇಹದಲ್ಲಿ ಸಿಂಹಪಾಲು ಕನ್ನಡ ಸಾಹಿತ್ಯಕ್ಕೆ ಸಂಬಧಪಟ್ಟದ್ದೇ ಆಗಿದೆ. ಕನ್ನಡ ಸಾಹಿತ್ಯ ರಂಗ ಪ್ರಾರಂಭವಾದಾಗಲಿಂದಲೂ ನನ್ನಲ್ಲಿ ಅತ್ಯಂತ ವಿಶ್ವಾಸವಿಟ್ಟು ನನಗೆ ನಾನಾರೀತಿಯ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ.

ಅವರಿಂದ ನಾನು ಕಲಿತದ್ದು ಸಾಕಷ್ಟಿದೆ. ಅವರ ಶಿಸ್ತು, ಸಂಯಮ, ಕೆಲಸದ ಅಚ್ಚುಕಟ್ಟು, ವ್ಯವಹಾರದಲ್ಲಿನ ಕಟ್ಟುನಿಟ್ಟುತನ, ವಿವರಗಳಿಗೆ ಅವರು ಕೊಡುವ ನಿಗ, ಹೀಗೆ, ಒಂದೇ ಎರಡೆ ಅವರಿಂದ ಕಲಿಯಬೇಕಾದ ಗುಣಗಳು? ಕನ್ನಡ ಗದ್ಯವನ್ನು ದುಡಿಸಿಕೊಳ್ಳುವ ಕಲೆ ಅವರಿಗೆ ದೈವದತ್ತವಾಗಿ ಬಂದಿದೆ, ಅವರಂತೆ ಬರೆಯುವವರು ಅಪರೂಪ. ಈಗ ಅವರ ಸಹಸ್ರ ಚಂದ್ರ ದರ್ಶನದ ಸಂದರ್ಭದಲ್ಲಿ ನಮ್ಮ ಪ್ರೀತಿ ಅಭಿಮಾನಗಳನ್ನು ವ್ಯಕ್ತಪಡಿಸಲು ನನಗೆ ಅತ್ಯಂತ ಹರ್ಷವಾಗುತ್ತಿದೆ. ಭಗವಂತನು ಅವರಿಗೆ ಆರೋಗ್ಯವನ್ನು ಕೋಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತ...

ಮೈ.ಶ್ರೀ. ನಟರಾಜ

***

ರಾಜಗೋಪಾಲ್ ಅವರಿಗೊಂದು ಆತ್ಮೀಯ ಅಭಿನಂದನೆ

1998ರಲ್ಲಿ ನಾನು 'ಕಾರಂತ ಚಿಂತನ-ಕಡಲಾಚೆಯ ಕನ್ನಡಿಗರಿಂದ' ಎಂಬ ಗ್ರಂಥವನ್ನು ಸಂಪಾದಿಸಲು ಯೋಚಿಸಿ ಅದಕಾಗಿ ಅಮೆರಿಕನ್ನಡ ಬರಹಗಾರರಿಂದ ಲೇಖನಗಳನ್ನು ಆಹ್ವಾನಿಸುತ್ತಿದ್ದೆ. ಆಗ ಹರಿಹರೇಶ್ವರ ಅವರು ರಾಜಗೋಪಾಲ್ ಅವರ ಹೆಸರನ್ನು ಸೂಚಿಸಿದರು. ಪರಿಣಾಮವಾಗಿ ಅವರು "ಕಾರಂತರ ಕಣ್ಣಲ್ಲಿ ಇತರರು" ಎಂಬ ಉತ್ತಮ ವಿಮರ್ಶಾತ್ಮಕ ಲೇಖನವನ್ನು ಬರೆದುಕೊಟ್ಟಿದ್ದರು. ಆ ಸಂದರ್ಭವೇ ನನ್ನ ಮತ್ತು ರಾಜಗೋಪಾಲ್ ಅವರ ಸ್ನೇಹಕ್ಕೆ ನಾಂದಿ ಮಾಡಿದ್ದು. ಅದು ಇದುವರೆಗೂ ಬೆಳೆಯುತ್ತಾ ಬಂದಿದೆ.

2002ರಲ್ಲಿ ನನ್ನ "ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ" ಎಂಬ ಅನುಭವ ಗ್ರಂಥಕ್ಕೆ ಒಂದು ವಿಮರ್ಶಾತ್ಮಕ ಲೇಖನ ಬರೆದಿದ್ದು ಆ ಬಗ್ಗೆ ಮೆಚ್ಚುಗೆಯ ಮಾತಾಡಿದ್ದರು. ನಾನು ಪ್ರಕಟಿಸಿದ "ಕಲಬೆರಕೆ" ಪ್ರಬಂಧ ಸಂಕಲನಕ್ಕೆ ಮುನ್ನುಡಿ ಬರೆಯಿರೆಂದು ಕೇಳಿಕೊಂಡಾಗ ತುಂಬು ಮನಸ್ಸಿನಿಂದ ಒಂದು ಸುಂದರ ಮುನ್ನುಡಿಯನ್ನು ಬರೆದುಕೊಟ್ಟಿದ್ದರು. ಮುಂದೆ ನಾನು ಸಂಪಾದಿಸಿ ಪ್ರಕಟಿಸಿದ ಎಲ್ಲ ಗ್ರಂಥಗಳಿಗೂ ಲೇಖನಗಳನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದ್ದರು. ನನಗಷ್ಟೇ ಅಲ್ಲದೆ ಎಲ್ಲ ಅಮೆರಿಕನ್ನಡ ಬರಹಗಾರರಿಗೂ ಅವರು ಉತ್ತೇಜನ ನೀಡುತ್ತಲೇ ಬಂದಿದ್ದಾರೆ.

ರಾಜಗೋಪಾಲ್ ಅವರು ಇದೀಗ ಎಂಭತ್ತು ವಸಂತಗಳನ್ನು ಕಂಡಿದ್ದಾರೆ. ವಸಂತ ಸಂತಸ ತರುವ ಋತು. ಅಂತೆಯೇ ಅವರ ಜೀವನದಲ್ಲೂ ಸಂತಸ ತುಂಬಿರಲಿ. ಎಂಭತ್ತು ತುಂಬಿದ ರಾಜಗೋಪಾಲ್ ಅವರಿಗೆ ನನ್ನ ಅಭಿಮಾನಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಹೆಮ್ಮೆಯಾಗುತ್ತಿದೆ.

ನಾಗ ಐತಾಳ

***

ರಾಜನೂ ಹೌದು, ಗೋಪಾಲನೂ ಹೌದು

ರಾಜಗೋಪಾಲ್ ಎಂಬ ಹೆಸರೇ ಹೇಳುವಂತೆ ಅವರು ರಾಜನೂ ಹೌದು, ಗೋಪಾಲನೂ ಹೌದು! ರಾಜನಲ್ಲಿರಬೇಕಾದ ದಕ್ಷತೆ, ಮುಂದಾಳ್ತನ, ಎಲ್ಲರ ಹಿತಾಸಕ್ತಿಯ ಬಗ್ಗೆ ಕಾಳಜಿ, ಹಾಗೆಯೇ ಗೋಪಾಲನಲ್ಲಿರುವ ಸಹಜವಾದ ಸರಸ ಮನೋಭಾವ, ಲೀಲೆ, ವಿನೋದ, ಲಲಿತ ಕಲೆಗಳಲ್ಲಿ ಆಸಕ್ತಿ, ಪರಿಣತಿ. ನಿಜವಾಗಿಯೂ ಇದೇ ಹೆಸರಿಡಬೇಕು ಅಂತ ಪ್ರೇರಣೆಯನ್ನು ಇವರ ತಂದೆ ತಾಯಿಗೆ ಕೊಟ್ಟಿದ್ದು ದೇವರೇ ಇರಬೇಕು!

2000ದ ಇಸವಿಯಲ್ಲಿ ನಡೆದ 'ಅಕ್ಕ' ಸಮ್ಮೇಳನದಲ್ಲಿ ಅವರ ಮುಖ ಪರಿಚಯವಾಗಿದ್ದು ನನಗೆ. ಆದರೆ ಅವರ ಮನಸ್ಸು ಪರಿಚಯವಾಗಿದ್ದು ದಿನಗಳೆದಂತೆ ಬೆಳೆದ ಆ ಸ್ನೇಹದಲ್ಲಿ, ಸಾಹಿತ್ಯಾಸಕ್ತಿಯಲ್ಲಿ. ಅಕ್ಕ ಸಮ್ಮೇಳನದ ಮೊದಲ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಅವರ ಲೇಖನ "ಶ್ರೀನಿವಾಸನ ಭಾರತ ಪಯಣ" ನನ್ನ ಮನಸ್ಸನ್ನು ಮೀಟಿತ್ತು. ಅದರಲ್ಲೇ ಅವರ ಬರಹದ ಗಟ್ಟಿತನ, ಬಾಂಧವ್ಯದ ಗಟ್ಟಿತನದ ಪರಿಚಯವೂ ಆಗಿತ್ತು. ಅಗಲೇ ಎಂಭತ್ತು ತುಂಬಿತೆ ನಿಮಗೆ! ಇರಲಿ ಬಿಡಿ. ದೇವರಿಗೂ ಲೆಕ್ಕ ಮರೆತು ಹೋಗಿ ಇನ್ನು ಎಂಭತ್ತು ವರ್ಷ ಹೀಗೇ ಇರಿ.

ನಳಿನಿ ಮೈಯ

***

ಎಚ್ ವೈ ಆರ್ ಎಂದರೆ ಚಿಂತಕ, ಚಿಕಿತ್ಸಕ ಮತ್ತು ಅಕ್ಕರೆ ತುಂಬಿದ ಮನಸ್ಸು

ಎಚ್ ವೈ ಆರ್ ಎಂದರೆ ನನಗೆ ಒಂದು ವಿಚಾರಪೂರ್ಣ, ಚಿಂತಕ, ಚಿಕಿತ್ಸಕ ಮತ್ತು ಅಕ್ಕರೆ ತುಂಬಿದ ಮನಸ್ಸು. ಹಾಗೆಯೇ ಕನ್ನಡ ಲೋಕದಿಂದ ಬಹಳ ಹಿಂದೆಯೇ ದೂರವಾಗಿ ಅಮೆರಿಕಾದಲ್ಲಿ ನೆಲೆಸಬೇಕಾಗಿ ಬಂದರೂ ತಾವಿದ್ದಲ್ಲೇ ಒಂದು ಸಮೃದ್ಧ ಕನ್ನಡ ಲೋಕವನ್ನು ಕಟ್ಟಿ ಬೆಳೆಸಿದ, ಇದರಲ್ಲಿ ಆಸಕ್ತಿ ತೋರಿದವರನ್ನೆಲ್ಲ ಈ ಲೋಕದೊಳಗೆ ಪ್ರೀತಿಯಿಂದ ಬರಮಾಡಿಕೊಂಡು ಬೆಳೆಯಗೊಟ್ಟ ಸಾಹಸಿ ವ್ಯಕ್ತಿತ್ವ.

ಎಚ್ ವೈ ಆರ್ ಎಂದರೆ ನನಗೆ 'ಪ್ರಸ್ತಾಪ', 'ಕನ್ನಡ ಸಾಹಿತ್ಯ ರಂಗ'. ಕಂಡ ಒಡನೆಯೇ 'ಏನಮ್ಮಾ?' ಎಂದು ನನ್ನನ್ನು ತಬ್ಬಿ ಮುದ್ದಿಟ್ಟು 'ಹೇಗಿದ್ದೀ? ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ?' ಎಂದು ಅಕ್ಕರೆ ತೋರುವ ಪ್ರೀತಿಯ ಹಿರಿಯ ಬಂಧು. 'ಓದಬೇಕು, ಬರೆಯಬೇಕು, ಅನಿಸಿದ್ದನ್ನು ಹಂಚಿಕೊಳ್ಳಬೇಕು' ಎಂದು ಎಲ್ಲರಲ್ಲಿ ಕಾಳಜಿ ತೋರುತ್ತಲೇ 'ಕನ್ನಡ ಸಾಹಿತ್ಯವನ್ನು ನಾನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವನಲ್ಲ' ಎಂದು ನಮ್ರವಾಗಿ ನುಡಿಯುತ್ತಾ ಎಷ್ಟೆಲ್ಲಾ ಬರೆಯುವ ಸಾಧ್ಯತೆ ಇದ್ದರೂ ಅತಿ ಕಡಿಮೆಯೇ ಎನ್ನುವಷ್ಟು ಬರೆದಿರುವ ಕನ್ನಡದ ಒಬ್ಬ ವಿಚಾರವಂತ ಲೇಖಕ.

ಮಾತಿನಂತೆಯೇ ಇವರ ಬರಹಗಳಲ್ಲೂ ನನಗೆ ಕಾಣಿಸುವುದು 'ಒಳಿತು' ಎಂಬ ವಿಷಯದಲ್ಲಿ ಇವರಿಟ್ಟ ನಂಬಿಕೆ. ಅಂಥದ್ದೊಂದು ದೊಡ್ಡ ನಂಬಿಕೆಯನ್ನು ಮನದಲ್ಲಿಟುಕೊಂಡು ಲೋಕವನ್ನು ನೋಡುತ್ತಾ ತಾನು ಕಂಡ ಅಪರೂಪದ ಹೊಳಹುಗಳನ್ನು ಹಂಚಿಕೊಳ್ಳುವ ಆಪ್ತ. ಪ್ರೀತಿಯ ಅಂಕಲ್, ನಿಮಗೆ ಎಂಭತ್ತು ತುಂಬಿದ ಈ ಸಂದರ್ಭದಲ್ಲಿ ನಿಮಗೆ ಎಲ್ಲ ಒಳಿತನ್ನೂ, ಪ್ರೀತಿಯನ್ನೂ ಹಾರೈಸುತ್ತಾ,

ನಿಮ್ಮ ಮೀರಾ

***

ಸಜ್ಜನ, ಜಂಟಲ್ಮನ್ ಎಚ್ ವೈ ಆರ್ ಅವರದ್ದು ಅಪ್ಪಟ ಕನ್ನಡ ಮನಸ್ಸು

ಎಚ್ ವೈ ರಾಜಗೋಪಾಲ್- ಈ ವ್ಯಕ್ತಿಯನ್ನು ನೆನೆಸಿದ ತಕ್ಷಣ ನನ್ನ ಮನಸ್ಸಿಗೆ ಬರುವ ಮೊದಲ ಪದ ಸಜ್ಜನ, ಜಂಟಲ್ಮನ್. ಇವರದ್ದು ಅಪ್ಪಟ ಕನ್ನಡ ಮನಸ್ಸು. ಬಂದು ನೆಲೆಸಿದ ನಾಡಿನಲ್ಲಿ ಸಮಾನ ಕನಡಾಸಕ್ತರನ್ನು ಹುಡುಕಿ, ಎಂದೋ ಬತ್ತಿಹೋಗಬಹುದಾಗಿದ್ದ ಸಾಹಿತ್ಯಾಸಕ್ತಿಯನ್ನು ಮತ್ತೆ ಚಿಗುರಿಸಲು ಇವರು ಕಟ್ಟಿ ಬೆಳೆಸಿದ ಸಂಸ್ಥೆ ಕನ್ನಡ ಸಾಹಿತ್ಯ ರಂಗ. ಮೆದು ಮಾತಿನಲ್ಲಿಯೇ ಎಲ್ಲರ ಅಭಿಪ್ರಾಯಗಳನ್ನು, ಒಪ್ಪುತ್ತಾ, ಒಪ್ಪಿಗೆಯಾಗದಿದ್ದಾಗ ಗೌರವಿಸುತ್ತಾ ಮೂಲ ಉದ್ದೇಶಕ್ಕೆ ಎಂದೂ ಧಕ್ಕೆಯಾದಂತೆ ಒಂದು ಸಂಸ್ಥೆಯನ್ನು ಬೆಳೆಸಿದಾತ.

'ಒಂದು ಕೆಲಸ ಮಾಡುವಾಗ, ಈ ಕೆಲಸ ಮಾಡಿ ನಾವು ಏನು ಸಾಧಿಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳದೇ, ಕೆಲಸ ಮಾಡುವಾಗ ಸಿಗುವ ಸಂತೋಷವನ್ನು ಅನುಭವಿಸುವುದೇ ಮುಖ್ಯ. ಗುರಿಗಿಂತಾ ಪಯಣವೇ ಮುಖ್ಯ ಎಂದು ನಂಬಿರುವಾತ. ಅತ್ಯುತ್ತಮ ಸಂಘಟಕ. ಯಾವತ್ತೂ ಕೋಪವೇ ಬರುವುದಿಲ್ಲವೇನೋ ಎನ್ನಿಸುವಷ್ಟು ಮೃದುಭಾಷಿ. ಆದರೆ ಅಷ್ಟೇ ದೃಢವಾದ ಮತ್ತು ಸ್ಪಷ್ಟವಾದ ನಿಲುವು. ಸ್ನೇಹಮಯಿ.

ವಯಸ್ಸಿನಲ್ಲಿ ನನಗಿಂತ ಹಿರಿಯರಾದ ರಾಜಗೋಪಾಲರ ಜತೆಗಿನ ನನ್ನ ಮಾತುಕತೆಗಳನ್ನು ನಾನು ಬಹುಕಾಲ ನೆನೆಯುತ್ತಿರುತ್ತೇನೆ. ಇವರ ಬರವಣಿಗೆಯೂ ಇವರಷ್ಟೇ ಆಪ್ತ, ಪ್ರಾಮಾಣಿಕ. ಶಿವರಾಮ ಕಾರಂತರ ಬಗ್ಗೆ ಬರೆದ ಲೇಖನ ನಾನು ಓದಿದ ಒಂದು ಅತ್ಯುತ್ತಮ ವ್ಯಕ್ತಿ ಚಿತ್ರಣ. ಇವರ ಇತ್ತೀಚಿನ ಪುಸ್ತಕ ಸೃಷ್ಟಿ- ನಾಲ್ಕು ಜಗತ್ತು, ನಾನು ಓದಿದ ಕನ್ನಡ ಪುಸ್ತಕಗಳಲ್ಲೊಂದು.

ತಮ್ಮ ನಿವೃತ್ತ ಜೀವನದ ಪ್ರತಿಯೊಂದು ಗಳಿಗೆಯನ್ನು ಇವರಂತೆ ಸಾರ್ಥಕ ಪಡಿಸಿಕೊಳ್ಳಲು ಎಲ್ಲರಿಗೂ ಆದರೆ ಅದೆಂತ ಅದೃಷ್ಟ. ರಾಜಗೋಪಾಲ್ ಅವರಿಗೆ ಎಂಬತ್ತನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು.

ಗುರುಪ್ರಸಾದ

***

Dr H Y Rajagopal is a Gandhian in the purest sense

To me, HYR is a person of erudite scholarship, who carries his knowledge very lightly, and with a great sense of humor. His interests are very wide-ranging: literature, music, drama, movies, painting, history, and all this for a professional man of science. He is politically a Gandhian in the purest sense of the word, and he has not let any bigotry or hate enter his mind. The image that comes to mind is one of an open, airy library with all sorts of books, with a cool summer breeze blowing through wide-open doors and windows, and a pleasant and wonderful view just outside its doors

He has been a very good friend of my family for many years, and our connections go back to my early days in India when my father, M Shankar and H Y Sharadaprasad (and his wife, Kamalamma) were very good friends, a friendship that endured the years. They are all no more...

HYR's turning 80 is indeed a milestone for us all to celebrate, and I am looking forward to many more years with him.

Gundu Shankar

English summary
Kannada writer Dr. H.Y. Rajagopal, who is residing in Philadelphia, turns 80 on 22nd May, 2015. On this occasion fellow writers, friends pay tribute to the true gentleman. HYR is one of the founders of Kannada Sahitya Ranga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X