ಬ್ಯಾಂಕಿನ ಮುಂದೆ ಉದ್ದುದ್ದ ಕ್ಯೂ ಮತ್ತು ಲೀ ಕ್ವಾನ್ ಯೂ!

By: ಜಯಶ್ರೀ ಭಟ್, ಸಿಂಗಪುರ
Subscribe to Oneindia Kannada

ಭಾರತದ ಮೂಲೆ ಮೂಲೆಯ ಹಳ್ಳಿ ಪಟ್ಟಣಗಳಲ್ಲಿ ನವೆಂಬರ್ ಹತ್ತರ ಬೆಳಗ್ಗಿನಿಂದ ಊದ್ದನೆ ಕ್ಯೂನಲ್ಲಿ ಹಳೆಯ ನೋಟುಗಳನ್ನು ಹಿಡಿದು ಬ್ಯಾಂಕುಗಳ ಮುಂದೆ ನಿಂತ ಜನರನ್ನು ನೋಡಿದಾಗ ನನಗೆ ಸಿಂಗಪುರದ ಮಾಜಿ ಅಧ್ಯಕ್ಷ ಲೀ ಕ್ವಾನ್ ಯೂ ನೆನಪಾಗುತ್ತಾರೆ.

2015ರ ಮಾರ್ಚ್ ತಿಂಗಳ ಉರಿಬಿಸಿಲಿನಲ್ಲಿ ಸಿಂಗಪುರದ ಬೀದಿ ಬೀದಿಗಳಲ್ಲಿ ಮಳೆಹುಳಗಳಂತೆ ಹೊರಬಿದ್ದ ಜನ ಹೀಗೇ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಅಂದು ಲೀ ಕ್ವಾನ್ ಯೂ ಚಿರನಿದ್ರೆಯಲ್ಲಿದ್ದರು. ವಿಚಿತ್ರವೆಂದರೆ ಜನರಿಗೆ ಯಾವ ಕಾನೂನೂ ಕಟ್ಟಿಹಾಕಿ ಹಾಗೆ ನಿಲ್ಲಿಸಿರಲಿಲ್ಲ. ಅಲ್ಲಿ ಬರೀ ಸಿಂಗಪುರದ ನಾಗರಿಕರಷ್ಟೇ ಅಲ್ಲದೆ ನನ್ನಂಥ ಹಲವಾರು ವಿದೇಶಿ ಪ್ರಜೆಗಳೂ ಇದ್ದರು. [ಆಕ್ರೋಶ್ ದಿವಸಕ್ಕೆ ಕೂಲಾಗಿ ಉತ್ತರಿಸಿದ ಬೆಂಗಳೂರಿಗರು]

Demonetisation, bank queues and Lee Kuan Yew

ಸಿಂಗಪುರದ ಸೀದುಹೋಗುವಂಥ ಉರಿಬಿಸಿಲು ಹಾಗೇ ಧೋ ಎಂದು ಸುರಿದ ಹುಚ್ಚುಮಳೆ ಯಾವುದೂ ಈ ಜನರನ್ನು ಕದಲಿಸಲು ಸಫಲವಾಗಲಿಲ್ಲ. ಯೂನಿಫಾರ್ಮ್ ನಲ್ಲಿದ್ದ ಪೋಲೀಸರೂ, ಸೆಕ್ಯೂರಿಟಿಯವರೂ ಕದಲದೆ ನಿಂತು ಮಳೆಗೆ ಎದೆಯೊಡ್ಡಿದ್ದರೆ ಈ ಸಾಮಾನ್ಯ ಜನರೂ ಅವರಿಗೆ ಸೆಡ್ಡು ಹೊಡೆವಂತೆ ಕಲ್ಲಿನಂತೆ ನಿಂತೇ ಇದ್ದರೂ. ಗಂಟೆಗಟ್ಟಲೆ ನಿಂತಿದ್ದು ಲೀಯವರನ್ನು ಕೊನೆ ಬಾರಿಗೆ ನೋಡಲು, ಅವರಿಗೆ 'ಗುಡ್ ಬಾಯ್' ಹೇಳಲು. ಅವರಿಗಿಂತ ಗುಡ್ ಬಾಯ್ ಒಂದು ದೇಶಕ್ಕೆ ದಕ್ಕುವುದು ಕಷ್ಟವೇ?

ಹೀಗೆ ಒಬ್ಬ ರಾಜಕೀಯ ನಾಯಕ, ಪ್ರಧಾನಿ ಸತ್ತುಹೋದಾಗ ಜನರನ್ನು ಬಿಸಿಲು, ಮಳೆಯಲ್ಲಿ ನಿಲ್ಲಿಸಿದ್ದು(ಯಾರೂ ನಿಲ್ಲಿಸಿರದಿದ್ದರೂ) ತಪ್ಪಲ್ಲವೇ ಎಂದು ಗಂಟಲು ಬಿದ್ದು ಹೋಗುವಂತೆ ಟಿವಿಯಲ್ಲಿ ಡಿಬೇಟುಗಳು ನಡೆಯಲಿಲ್ಲ. ಯಾಕೆಂದರೆ ಇದು ಲೀ ಕ್ವಾನ್ ಯೂ ಕಟ್ಟಿ ಬೆಳೆಸಿದ ಸ್ವಾಭಿಮಾನಿ, ದೇಶಪ್ರೇಮಿ ಜನರ ನೋ ನಾನ್ ಸೆನ್ಸ್ ದೇಶ. ಇಂಥ ನಾಯಕನಿಗೆ ಇಲ್ಲಿನ ಸರ್ಕಾರ, ಜನರು ಕಟ್ಟಿ ಕೊಟ್ಟ ಒಂದೇ ಒಂದು ಸ್ಮಾರಕವೆಂದರೆ ಅವರ ಶವಯಾತ್ರೆಯಲ್ಲಿ ರಸ್ತೆ ಬದಿ ನಿಂತ ಜನರೆಲ್ಲ ಕೈ ಬೀಸುತ್ತಾ 'ವಿ ಲವ್ ಯೂ, ಲೀ ಕ್ವಾನ್ ಯೂ, ಕಮ್ ಅಗೈನ್' ಎಂದು ಕಣ್ಣೀರಾಗಿದ್ದು, ಅಷ್ಟೇ. [ಸಿಂಗಪುರದ ಮಾಜಿ ಪ್ರಧಾನಿ ಯೂ ಅವರನ್ನು ನೆನೆಯುತ್ತ]

Demonetisation, bank queues and Lee Kuan Yew

ತನ್ನಿಡೀ ರಾಜಕೀಯ ಜೀವನದಲ್ಲಿ, ಸಾವಿರಾರು ಮಿತ್ರರು, ಹಲವಾರು ಶತ್ರುಗಳು, ಅಭಿಮಾನಿಗಳು, ಪ್ರೀತಿಸುವ ಅಥವಾ ಭಕ್ತರು ಎಂದು ಬೇಕಾದರೆ ಕರೆದುಕೊಳ್ಳಿ ಜನರು ಎಲ್ಲವನ್ನೂ ಗಳಿಸಿದ್ದ ಲೀ ಒಮ್ಮೆಯಾದರೂ ಒಂದೇ ಒಂದು ಭ್ರಷ್ಟಾಚಾರದ ಆರೋಪವನ್ನು ಮಾತ್ರ ಹೊರಲಿಲ್ಲ! ಅವರ ನಡೆ ತಪ್ಪಾದರೂ ಆಗಬಹುದು ಆದರೆ ಅವರ ನಿಷ್ಠೆ ಪ್ರಶ್ನಾತೀತ ಎಂಬುದನ್ನು ಅವರ ಶತ್ರುಗಳೂ ಒಪ್ಪುತ್ತಿದ್ದರು.

ಸಿಂಗಪುರಕ್ಕಾಗಿ ಸಾರ್ವಜನಿಕ ಸಭೆಗಳಲ್ಲಿ ಕಣ್ಣೀರು ಹಾಕಿದ ಈ ಮನುಷ್ಯ ಉಳಿದಂತೆ ಉಕ್ಕಿನಷ್ಟೇ ಕಠಿಣ ಎಂದು ಹೆಸರಾಗಿದ್ದವರು. ತನ್ನನ್ನು ಹೊಗಳುವವರಿಗಿಂತಲೂ ಟೀಕಿಸುವವರನ್ನೇ ಹೆಚ್ಚು ಸಹಿಸುತ್ತಿದ್ದ ಲೀ ಸದಾ ತನ್ನನ್ನು ತಾನು ತಿದ್ದಿಕೊಳ್ಳುವುದು, ತನ್ನ ಯೋಜನೆಗಳಲ್ಲಿ ಬದಲಾವಣೆ ಬೇಕಿದ್ದಲ್ಲಿ ಪ್ರತಿಷ್ಠೆ ಬದಿಗಿಟ್ಟು ತರುವುದರಲ್ಲಿ ನಂಬಿಕೆ ಇಟ್ಟಿದ್ದರು. [ಸಿಂಗಪುರದ 'ಸಿಂಹ' ಲೀ ಕುಆನ್ ಯೂ, ನುಡಿನಮನ]

Demonetisation, bank queues and Lee Kuan Yew

ತೊಂಭತ್ತೊಂದರ ಇಳಿವಯಸ್ಸಿನಲ್ಲೂ ಚೀನೀ ಭಾಷೆಯಲ್ಲಿ ತನಗಿನ್ನೂ ಹಿಡಿತ ಸಾಲದು ಎಂದು ದಿನಾ ಪಾಠ ಹೇಳಿಸಿಕೊಳ್ಳುತ್ತಿದ್ದಂತ ಅಸಾಮಿ ಅವರು. ಅವರ ಎಲ್ಲ ನಡೆಯಲ್ಲೂ ದೇಶಕ್ಕೆ ಏನಾದರೂ ಒಂದು ಕೊಡುಗೆ ಇದ್ದೇ ಇರುತ್ತಿತ್ತು. ಅವರಿಗೆ ದೇಶದ ಹಿತ ಎಲ್ಲಕ್ಕಿಂತ ಮುಖ್ಯವಾಗಿತ್ತು.

ಇಂಥಾ ಲೀಯವರ ಅರ್ಧ ಮುಖವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಆಕ್ರಮಿಸಿದ್ದರು ಆ ನವೆಂಬರ್ ಹತ್ತರ ದಿನ ಇಲ್ಲಿನ ಪ್ರತಿಷ್ಠಿತ ಸ್ಟ್ರೈಟ್ ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ. ನಮ್ಮ ಲೀ ಭಾರತದಲ್ಲಿ ಮೋದಿಯಾಗಿ ಹುಟ್ಟಿದ್ದಾರೆ ಎಂಬ ಹೆಡಿಂಗ್ ಬೇರೆ ಇತ್ತು. ನಾನೇ ಮೋದಿಯಾಗಿದ್ದರೆ ನನಗೆ ಇದಕ್ಕಿಂತಾ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಎಂದುಕೊಳ್ಳುತ್ತಿದ್ದೆ. [ಮೋದಿ 'ಮನದ ಮಾತು' ನಿಜ ಮಾಡಲಿದೆ ಈ ರಾಜ್ಯ!]

Demonetisation, bank queues and Lee Kuan Yew

ಪ್ರಪಂಚದ ಅನೇಕಾನೇಕ ರಾಜಕೀಯ ನಾಯಕರುಗಳ ನಕ್ಷತ್ರ ಪುಂಜದಲ್ಲಿ ಲೀ ಹೊಳೆಯುವ ಸೂರ್ಯನಂತಿದ್ದಾರೆ. ನಮ್ಮ ಪ್ರಧಾನಿ ಮೋದಿ ಹೇಗೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಅಲ್ಲವೇ? ಬದಲಾವಣೆಯ ಬೀಸುಗಾಳಿ ಜೋರಾಗಿಯೇ ಬೀಸುತ್ತಿದೆ. ಜನರೂ ಜಾಗೃತರಾಗುತ್ತಿದ್ದಾರೆ. ಇವರ ನಡೆ ತಪ್ಪಿದ್ದರೂ ನಿಷ್ಠೆ ಪ್ರಶ್ನಾತೀತ ಎಂಬ ಭಾವನೆ ಬ್ಯಾಂಕಿನ ಕ್ಯೂನಲ್ಲಿ ನಿಂತ ಜನಸಾಮನ್ಯರ ಬಾಯಲ್ಲಿ ಕೇಳಿಬಂದಾಗೆಲ್ಲ ನನಗೆ ಲೀ ಕ್ವಾನ್ ಯೂ ಮತ್ತೆ ಮತ್ತೆ ನೆನಪಾಗುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What has long queues before the banks in India to do with queues when former president of Singapore Lee Kuan Yew died? Jayashree Bhat from Singapore recalls the death of Lee Kuan Yew and how people used to stand in long queues.
Please Wait while comments are loading...