ಕುವೈತಿನಲ್ಲಿ ಸೆಳೆದ ಪೆನ್ಸಿಲ್-ಸ್ಕೆಚ್ ಕಲಾಸೊಬಗು

ಈ ಮಾದರಿಯ ಪ್ರದರ್ಶನ ಕುವೈತ್‌ನಲ್ಲಿ ಮೊಟ್ಟಮೊದಲ ಬಾರಿಗೆ - ಕರ್ನಾಟಕದಾಚೆಗೆ ನಡೆಸಿದ ಹೆಗ್ಗಳಿಕೆ ವಿವೇಕ್ ಶೆಟ್ಟಿ ಬೆಳ್ಮಣ್ ಅವರದ್ದಾಗಿದೆ. ಇವರು ತಮ್ಮ ಕಲಾ-ಪ್ರಬುದ್ದತೆಯನ್ನು ತಮ್ಮ ಚಿತ್ರ-ವೈಚಿತ್ರ್ಯತೆಯಲ್ಲಿ ತೋರಿಸಿಕೊಟ್ಟಿದ್ದಾರೆ.
ಬೆಳಿಗ್ಗೆ 10.30 ಗಂಟೆಗೆ ಪೃಥ್ವಿ ವಿ. ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಮುಖ್ಯ ಅತಿಥಿಗಳಾದ ಎಚ್.ಕೆ.ಮೋಹನ್-ಇಂಡಿಯನ್ ಎಂಬಸಿ-ಕುವೈತ್ ಹಾಗೂ ಬಿ. ನಾಗರಾಜ್ ಶೆಟ್ಟಿ(ಮಾಜಿ ಮಂತ್ರಿ-ಕರ್ನಾಟಕ ಸರಕಾರ)ಯವರ ಉಪಸ್ಥಿತಿಯಲ್ಲಿ, ದೀಪ ಬೆಳಗಿಸಿ, ಮುಖ್ಯ-ಚಿತ್ರವಾದ 'ಹನುಮಾನ್' ಚಿತ್ರವನ್ನು ಅನಾವರಣ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ಕೊಡಲಾಯಿತು
ವಿ'ಬೆಳ್ಮಣ್ ಕ್ರಿಯೇಶನ್ಸ್-ವಿಶೇಷ್"ನ ಕರ್ತೃ ಹಾಗೂ ಪ್ರಾಯೋಜಕರಾದ ವಿವೇಕ ಶೆಟ್ಟಿ ಬೆಳ್ಮಣ್ ನವರು ಈ ದಿನದ ಮಹತ್ವ, ಹಾಗೂ ಯಾವುದೇ ರೀತಿಯ ಪ್ರಾರಂಭಿಕ ಅಧ್ಯಯನ ಅಥವಾ ತರಬೇತಿಗಳನ್ನೂ ಪಡೆದುಕೊಳ್ಳದೆ ತಮ್ಮಲ್ಲಿ ಈ ಕಲೆಯನ್ನೊಳವಡಿಸಿಕೊಂಡ ವಿಚಾರವನ್ನು ವಿವರಿಸಿ ಸಭಿಕರನ್ನು ಅಚ್ಚರಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವೈಶಿಷ್ಟ್ಯಮಯ ಕಲಾಕೃತಿಗಳ ವೀಕ್ಷಣೆಯು ಈ ದಿನದ ಮುಖ್ಯ ಕಾರ್ಯಕ್ರಮವಾಗಿತ್ತು. ವಿ'ಬೆಳ್ಮಣ್ ನ ಕಲಾ-ಚಾತುರ್ಯತೆ ಈ ಕಲಾಕೃತಿಗಳಲ್ಲಿ ಮಿಂಚುತಿತ್ತು. ಅತಿಥಿಗಳನ್ನೊಳಗೊಂಡು ವೀಕ್ಷಕರೆಲ್ಲಾ ಕಲಾಕಾರನ ಕೈಚಳಕ ಮೆಚ್ಚಿಕೊಂಡು ಮುಂದೆಯೂ ಇಂತಹ ಪ್ರದರ್ಶನಗಳನ್ನು ನಡೆಸಿಕೊಡುವಂತೆಯೂ ಕೇಳಿಕೊಂಡರು.
ವಯಸ್ಸಿಗನುಗುಣವಾಗಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಚಿತ್ರಕಲಾ ಸ್ಪರ್ಧೆಗಳನ್ನೂ ಹಾಗೂ ವಿಜೇತರಿಗೆ ಬಹುಮಾನಗಳನ್ನಿತ್ತು ಸನ್ಮಾನಿಸಲಾಯಿತು. ಈ ದಿನದ ಕಲಾಸೊಬಗನ್ನು ಬಿತ್ತರಿಸುವ ಸ್ಮರಣ ಸಂಚಿಕೆಯನ್ನೂ ಇಲ್ಲಿ ಬಿಡುಗಡೆಗೊಳಿಸಲಾಯಿತು.
ಶಾಲಿನಿ ವಿಜಯ ಶೆಟ್ಟಿಯವರು ಈ ದಿನದ ಕಾರ್ಯಕ್ರಮವನ್ನು ತುಂಬಾ ಸೊಗಸಾಗಿ ನಡೆಸಿಕೊಟ್ಟಿದ್ದರು. ಕಾರ್ಯಕ್ರಮದ ಕೊನೆಯದಾಗಿ ಸೇರಿದ ಎಲ್ಲಾ ಜನರಿಗೂ ಹಾಗೂ ಕಾರ್ಯಕರ್ತರಿಗೂ ವಿ'ಬೆಳ್ಮಣ್ ತಮ್ಮ ಮನದಾಳದಿಂದ ಕೃತಜ್ನತೆಯನ್ನು ಸಲ್ಲಿಸಿದರು.












Click it and Unblock the Notifications