ಬಸವೇಶ್ವರ ಪ್ರತಿಮೆಗೆ ಪಾಕಿಸ್ತಾನಿಗಳ ಬೆಂಬಲ

ಭಯೋತ್ಪಾದನೆಯ ಬೇಗುದಿಯಲ್ಲಿ ಬೇಯುತ್ತಿರುವ ಈ ಪರಿಸ್ಥಿತಿಯಲ್ಲಿ, ಎರಡೂ ದೇಶಗಳ ಸಂಬಂಧ ವೃದ್ಧಿಯಾಗುವ ಕುರುಹು ಅನ್ಯ ದೇಶದಲ್ಲಿ ಮೊಳಕೆಯೊಡೆದಿದೆ. ಇಬ್ಬರ ಬಾಂಧವ್ಯವನ್ನು ಬೆಸೆದಿರುವುದು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರ.
ಲಂಡನ್ ನ ಹೌಸ್ ಆಫ್ ಪಾರ್ಲಿಮೆಂಟ್ ಎದುರಿಗೆ ಸ್ಥಾಪಿಸಲಾಗುತ್ತಿರುವ ಬಸವಣ್ಣನ ಪುತ್ಥಳಿಗೆ ಲಂಡನ್ ನಲ್ಲಿರುವ ಪಾಕಿಸ್ತಾನಿಗಳ ಸಮೂಹ ತುಂಬು ಹೃದಯದ ಬೆಂಬಲ ನೀಡಿದೆ. ಇದರಿಂದಾಗಿ ಕನ್ನಡಿಗರ ಮತ್ತು ಭಾರತೀಯರ ಹೃದಯ ತುಂಬಿಬಂದಂತಾಗಿದೆ.
ತೋಹಾ ಕುರೇಶಿ ಅವರ ನೇತೃತ್ವದಲ್ಲಿ ಲ್ಯಾಂಬೆತ್ ನ ಮೇಯರ್ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರನ್ನು ಭೇಟಿ ಮಾಡಿದ ಪಾಕಿಸ್ತಾನಿ ನಾಗರಿಕರು ತಮ್ಮ ಬೆಂಬಲ ಪತ್ರವನ್ನು ಸರ್ವರ ಸಮ್ಮುಖದಲ್ಲಿ ನೀಡಿ ಅಚ್ಚರಿ ನೀಡಿದರು. ಪುತ್ಥಳಿಯನ್ನು ವಾಕ್ಸ್ ಹಾಲ್ ಸ್ಪ್ರಿಂಗ್ ಗಾರ್ಡನ್ ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕುರೇಶಿ ಅವರು, "ಪಾಕಿಸ್ತಾನ ಮತ್ತು ಭಾರತಕ್ಕೆ ಬಸವೇಶ್ವರ ಎಂದಿಗೂ ಪ್ರಸ್ತುತ. 1948ಕ್ಕೂ ಹಿಂದೆ ಎರಡೂ ರಾಷ್ಟ್ರಗಳು ಒಂದಾಗಿದ್ದಾಗ, ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಶ್ರಮಿಸಿದ ನಿಸ್ವಾರ್ಥ ವ್ಯಕ್ತಿಯ ಪ್ರತಿಮೆ ಸ್ಥಾಪನೆಯಾಗುತ್ತಿರುವುದು ಬಹಳ ಮಹತ್ವದ್ದು. ಪ್ರತಿಮೆ ಸ್ಥಾಪನೆಗೆ ಬೆಂಬಲ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ" ಎಂದರು.
ಭಯೋತ್ಪಾದನೆ ವಿರುದ್ಧ ನಡೆಸಿದ ಚಳವಳಿ ಮತ್ತು ಸೇವೆಗಾಗಿ ಕುರೇಶಿ ಅವರು 2010ರ ಜನವರಿಯಲ್ಲಿ ರಾಣಿ ಎಲಿಜಬೆತ್ ರಿಂದ ಗೌರವಕ್ಕೆ ಪಾತ್ರರಾಗಿದ್ದರು. ಪ್ರಸ್ತುತ, ಲ್ಯಾಂಬೆತ್ ಕೌನ್ಸಿಲ್ ನಿಂದ ಅನುಮತಿಗಾಗಿ ಬಸವಣ್ಣನ ಪ್ರತಿಮೆ ಕಾದಿದೆ.












Click it and Unblock the Notifications